ಸಹ ನೌ ಯಶಃ| ಸಹ ನೌ ಬ್ರಹ್ಮವರ್ಚಸಾಮ್|…… ಇದು ತೈತ್ತೀರಿಯ ಉಪನಿಷತ್ತಿನ ಮೂರನೇ ಅನುವಾಕದ ಪ್ರಾರಂಭದ ಮಾತುಗಳು.

ತೈತ್ತೀರಿಯ ಉಪನಿಷತ್ತಿನ ಬಗೆಗಿನ ಕತೆಯೇ ಬಹಳ ಸ್ವಾರಸ್ಯವಾಗಿದೆ. ಕೃಷ್ಣಯಜುರ್ವೇದದಲ್ಲಿ ಬರುವ ಈ ಉಪನಿಷತ್ತನ್ನು ವ್ಯಾಸರು ವೈಶಂಪಾಯನರಿಗೆ ಹೇಳಿದ್ದು. ನಂತರ ವೈಶಂಪಾಯನರು ಇದನ್ನು ಯಾಜ್ಞವಲ್ಕ್ಯರಿಗೆ ಹೇಳಿದರಂತೆ. ಯಾವುದೋ ಒಂದು ವೈಮನಸ್ಸು ಬಂದಾಗ, ವೈಶಂಪಾಯನರು ನಾನು ಕಲಿಸಿದ ಈ ಉಪನಿಷತ್ತನ್ನು ವಾಪಸ್ಸು ಕೊಡು ಎಂದು ಕೇಳಿದಾಗ ಯಾಜ್ಞವಲ್ಕ್ಯರು ಕಲಿತದ್ದನ್ನು ವಾಂತಿ ಮಾಡಿದರಂತೆ. ಈ ಹೊರಬಂದ ಭಾಗಗಳನ್ನು ಉಳಿದ ಶಿಷ್ಯರು “ತಿತ್ತಿರಿ” ಪಕ್ಷಿಗಳಂತೆ ತಿಂದುಬಿಟ್ಟರಂತೆ. ಅದರಿಂದ ಇದಕ್ಕೆ ತೈತ್ತೀರಿಯ ಎನ್ನುವ ಹೆಸರು ಬಂತು. ಆಮೇಲೆ ಸೂರ್ಯದೇವನೇ ಬಂದು ವೈಶಂಪಾಯನರಿಗೆ ಸಾಂಗವಾಗಿ ಹೇಳಿದ.

ಇಡೀ ಉಪನಿಷತ್ತು ಗುರು ಶಿಷ್ಯರ ಸಂಬಂಧದ ಮೇಲೆ, ಯಾವುದನ್ನು ಮಾಡಬಹುದು – ಮಾಡಬಾರದು ಎಂಬುದರ ಮೇಲೆ ಇದೆ.

ಈ ಮೇಲೆ ಹೇಳಿದ ವಿಷಯ ಬಹಳ ಸೂಕ್ತವಾದದ್ದು ಮತ್ತು ಈಗಿನ ಕಾಲಕ್ಕೆ ನಾವು ಗ್ರಹಿಸಬೇಕಾದದ್ದು. ಇಲ್ಲಿ ಶಿಷ್ಯನು ತನಗೆ ಮತ್ತು ತನ್ನಿಂದಲಾಗಿ ಗುರುವಿಗೂ ಯಶಸ್ಸು ಉಂಟಾಗಲಿ ಎಂದು ಪ್ರಾರ್ಥನೆ ಮಾಡುತ್ತಾನೆ. ಗುರುವು ತಾನು ಈಗಲೇ ಎಲ್ಲವನ್ನೂ ಅರಿತಿದ್ದಾನೆ. ನನಗೆ ಕೊಡುವಂತಹ ಜ್ಞಾನದಿಂದ ನಾನು ಇನ್ನೂ ಹೆಚ್ಚಿನದನ್ನು ಸಾಧಿಸಿದರೆ ಗುರುವಿಗೂ ಆ ಯಶಸ್ಸು ಸಿಗಲಿ ಎಂಬುದು.

“ಆಚಾರ್ಯಃ ಪೂರ್ವರೂಪಮ್| ಅಂತೇವಾಸ್ಯುತ್ತರ ರೂಪಮ್| ವಿದ್ಯಾ ಸಂಧಿಃ| ಪ್ರವಚನಗ್ಂ ಸಂಧಾನಂ| ಇತ್ಯಧಿವಿದ್ಯಮ್| .. ಇಲ್ಲಿ ಆಚಾರ್ಯ/ಗುರು ಪೂರ್ವರೂಪ, ಶಿಷ್ಯ ಆ ಜ್ಞಾನವನ್ನು ಮುಂದುವರೆಸಿಕೊಂಡು ಹೋಗುವ ಉತ್ತರರೂಪ. ಇವರಿಬ್ಬರನ್ನು ಸಂಧಿಸಿರುವಂತಹ ವಿಷಯವೇ ವಿದ್ಯೆ. ಈಗ ಗುರು ಶಿಷ್ಯರನ್ನು ಒಂದುಗೂಡಿಸುವುದು ಯಾವುದೋ?

ಒಂದೊಮ್ಮೆ ಈ ಉಪನಿಷತ್ತುಗಳನ್ನು ತಿರುವಿ ಹಾಕಿದರೆ, ಈಗಿನ ಕಾಲಕ್ಕೆ ಬೇಕಾದ್ದು ದೊರಕಬಹುದು.

Leave a Reply

This site uses Akismet to reduce spam. Learn how your comment data is processed.