ಒಂದನೇ ದಿಂಬು :ಯಾಕೆ ಇವ್ಳು ಅರ್ಥ ಮಾಡ್ಕೊಳ್ಳಲ್ಲ
-ಮೊನ್ನೆ ತಾನೇ ಹೋಗ್ಬಂದಿದ್ದೀಯಲ್ಲೇ? ಮತ್ತೆ ಯಾಕ್ ಹೋಗ್ತಾ ಇದೀಯಾ?
ಅಯ್ಯೋ, ನಿಮ್ಗೊತ್ತಾಗಲ್ಲ. ಹೋಗ್ಲೇ ಬೇಕು. ಸ್ವಲ್ಪ ಅರ್ಜೆಂಟ್ ಕೆಲ್ಸ ಇದೆ ಊರಲ್ಲಿ.
-ಅಲ್ಲಾ, ನಂಗೆ ಇಲ್ಯಾರಿದ್ದಾರೆ?
ಅಯ್ಯೋ.. ಹತ್ವರ್ಷ ಒಬ್ರೇ ಇದ್ರಿ, ಈಗೇನ್ ಒಂದ್ ದಿನಕ್ಕೆ ಹೀಗೆಲ್ಲಾ ಹೇಳೋದು?
-ಅದಲ್ವೇ, ನೀನು ಇಲ್ದಿದ್ರೆ ಏನಾಗಲ್ಲ. ಊಟಕ್ಕೆ ಸಾಂಬಾರು, ಸಾರು ಏನಾದ್ರು ಮಾಡೋದಕ್ಕೆ.. ಹೇಳ್ದೆ.
ಅದ್ಕೇನು, ಹೇಳ್ಕೊಡ್ತೀನಿ.
-ಹ್ಮ್ಂ, ಹೇಳು.
ಒಂದೂವರೆ ಚಮಚ ಉದ್ದಿನಬೇಳೆ, ನಾಲ್ಕು ಮೆಣಸು, ಸ್ವಲ್ಪ ಜೀರಿಗೆ…
-ಅದು ಗೊತ್ತು ಬಿಡೆ, ಅದೆಲ್ಲಾ ಗೊತ್ತು.
ಓಹ್ ಉಪ್ಪು, ಹುಳಿ, ಬೆಲ್ಲ ಹಾಕೋದಾ.. ಇಷ್ಟೇ ಇಷ್ಟು ಹುಳಿ,
-ಬೇಡ, ಬೇಡ.. ನಾನು ಅಡುಗೇನೇ ಮಾಡ್ಕೊಳ್ಳಲ್ಲ. ಹೋಟೆಲ್ಲಲ್ಲಿ ತಿಂತೀನಿ. ನೀನ್ಯಾವಾಗ ವಾಪಸ್ಸು?
ಹೋಟೆಲ್ಲಾ? ಯಾಕೆ? ನಿಮ್ಗೇನ್ ಮಾಡ್ಕೊಂಡ್ ತಿಂದ್ರೆ? ನೂರ್ ರುಪಾಯಿನಾದ್ರೂ ಉಳಿಯತ್ತೆ.
-ಅದೇ ನೀನ್ಯಾಕೆ ಊರಿಗೆ? ಒಂದ್ ಸಾವ್ರ ಉಳಿಯಲ್ವಾ?
ನಾನು ಊರಿಗೆ ಹೋಗ್ಬೇಕಾದ್ರೆ ಮಾತ್ರ ಹೀಗೆ ಹೇಳ್ತೀರ, ನೀವೆಲ್ಲ ಆಫೀಸ್ ಟೂರ್ ಅಂತ ನಾಲ್ಕ್ ದಿನ ಹೋಗ್ತೀರ.
-ಹ್ಮ್ಂ, ಅದಿರ್ಲಿ, ನೀನ್ಯಾವಾಗ ವಾಪಸ್ಸು?
ಇವತ್ ಸೋಮವಾರ, ಗುರುವಾರ ವಾಪಸ್ ಬರ್ತೀನಿ. ಆದ್ರೆ ಸ್ಲೀಪರ್ ಬಸ್ಸು ಬುಕ್ ಮಾಡಿ.
-ಬಸ್ ಬುಕ್ ಮಾಡ್ಬೇಕಾ? ಒಬ್ಳಿಗೆ ಬರೋಕೆ ಇಡೀ ಬಸ್ ಯಾಕೆ ಬುಕ್ ಮಾಡ್ಲಿ?
ಇದೇ ಆಯ್ತು.. ನಾನು ಹೋಗಲ್ಲ. ಬರೀ ತಮಾಷೆ ಮಾಡಿ.
-ಹಹ.. ಆಯ್ತು ಕಣೆ, ನಾನು ಬರೋಕೆ ಮಾತ್ರ ಬುಕ್ ಮಾಡ್ತೀನಿ. ಹೋಗೋಕಲ್ಲ.


ಎರಡನೇ ದಿಂಬು: ಯಾಕೆ ಇವ್ರು ಅರ್ಥ ಮಾಡ್ಕೊಳ್ಳಲ್ಲ
ಯಾಕೋ ಹೋಗೋಕೇ ಮನ್ಸಿಲ್ಲ ರೀ,
ಯಾಕೆ? ಬುಕ್ ಮಾಡಿದ್ದು ವೇಷ್ಟಾಗುತ್ತೆ. ಹೋಗ್ಬಾ.. ಅಲ್ಲೇನೋ ಅರ್ಜೆಂಟ್ ಕೆಲ್ಸ ಇತ್ತಲ್ಲ.
ಅದು ಬಿಡ್ರೀ, ಯಾರಾದ್ರೂ ಮಾಡ್ತಾರೆ, ನಾನು ಹೋಗ್ದಿದ್ರೂ ನಡೆಯುತ್ತೆ.
ಅದ್ಯಾಕೆ ಸಡನ್ ಆಗಿ ಚೇಂಜ್ ಮಾಡಿದ್ದು? ಈಗ ಬುಕ್ ಮಾಡಾಯ್ತಲ್ಲ?
ಏನೋ, ನೀವು ನಿಜ್ವಾಗ್ಲೂ ಅಡುಗೆ ಮಾಡಿ ಊಟ ಮಾಡ್ತೀರಾ?
ಅದೇನ್ ಬಿಡೆ ಮಹಾ, ಒಂದೂವರೆ ಚಮ್ಚ ಕೊತ್ತಂಬರಿ, ಒಂದ್ ಚಮಚ ಜೀರಿಗೆ..
ಅದೆಲ್ಲಾ ಗೊತ್ತು ಬಿಡ್ರೀ, ನೀವು ಚೆನ್ನಾಗೇ ಮಾಡ್ತೀರ ಅಡುಗೇನ.. ಆದ್ರೂ
ಏನು?
ಊಟ ಮಾಡುವಾಗ ಒಂದೆರಡು ತುತ್ತು ಕಟ್ಟಿ ಕೊಡ್ತೀರಲ್ಲಾ, ಅದನ್ನ ಬಿಟ್ಟು ಹೆಂಗೆ ಹೋಗೋದು?
ಅಯ್ಯೋ ಮಹರಾಣಿ, ಬ್ಯಾಗ್ ಎಲ್ಲಾ ತುಂಬ್ಸಿ ಆಯ್ತಾ? ಬಸ್ಸಿಗೆ ಇನ್ನು ಹತ್ತೇ ನಿಮಿಷ ಇರೋದು.


By: Ishwara Bhat K
 

Leave a Reply

This site uses Akismet to reduce spam. Learn how your comment data is processed.