ಯೋಚನೆ ಮಾಡಿದಾಗ ಮಂದಹಾಸ ತರುವಂತಹಾ ಸಣ್ಣ ಸಣ್ಣ ವಿಷಯಗಳು ಬಹಳ ಇರುತ್ತವೆ. ಆದರೆ ಇವು ನಮ್ಮ ದೈನಂದಿನ ಬದುಕಿನಲ್ಲಿ ಏನೂ ಅರಿವಿರದಂತೆ ನಡೆಯುವ ಘಟನೆಗಳು.
ಕೆಲವೊಂದನ್ನು ಹೇಳ್ತೇನೆ, ನಿಮ್ಮಲ್ಲಿಯೂ ಇಂತಹ ಅನುಭವಗಳಿದ್ದರೆ ಹಂಚಿಕೊಳ್ಳಿ.
೧. ಒಳ್ಳೇ ಇಷ್ಟದ ಉಪ್ಪಿನಕಾಯಿಯನ್ನು ಚಮಚದಿಂದ ತಟ್ಟೆಗೆ ಹಾಕಿಕೊಂಡು, ಆ ಚಮಚದಲ್ಲಿ ಉಳಿದಿರುವ ರಸವನ್ನು ಮೆಲ್ಲಗೆ ಕೈಯ್ಯಿಂದ ಒರೆಸಿ, ನಂತರ ಚಮಚವನ್ನೂ ಕೈಯ್ಯನ್ನೂ ನೆಕ್ಕದಿದ್ದರೆ ಅದೊಂದು ಸಂಪೂರ್ಣವಾದ ಕೆಲಸವಲ್ಲ.
೨. ಊಟವಾದ ಮೇಲೆ, ನೆಲವನ್ನು ಒರೆಸುವಾಗ ಒಂಚೂರು ನೀರನ್ನು ಸಿಂಪಡಿಸುತ್ತೇವಲ್ಲ. ಒರೆಸಿಯಾದ ಮೇಲೆ ಎಲ್ಲೋ ಒಂದೆರಡು ಹನಿ ನೀರು ಕಾಣುತ್ತದೆ. ಅದನ್ನು ಕಾಲಿನ ಹೆಬ್ಬೆರಳಿನಿಂದ ಒರೆಸದೇ ಇದ್ದರೆ ಅದೇನು ಖುಷಿ?
೩. ಒಂದಿಪ್ಪತ್ತು ಹುರಿದ ನೆಲಗಡಲೆ ತೆಗೆದುಕೊಂಡಿರುತ್ತೇವೆ. ಮೊದಲಿನ ಬಾರಿ ತಿನ್ನುವಾಗ ಒಂದೋ ಎರಡೋ ನೆಲಕ್ಕೆ ಬಿದ್ದು ಉರುಳಿಕೊಂಡು ಮೇಜಿನ ಅಡಿಗೋ, ದಿವಾನಾದ ಅಡಿಗೋ ಸೇರುತ್ತದೆ. ಕೈಯ್ಯಲ್ಲಿದ್ದ ಕಡಲೆ ಮುಗಿದರೆ, ಆಮೇಲೆ ಮೇಜಿನ ಅಡಿಯಿಂದ ಸಾಹಸಪಟ್ಟು ಕಡಲೆಯನ್ನು ತೆಗೆದು, ಹೈಜಿನಿಕ್ ಆದರೆ ಅದರ ಸಿಪ್ಪೆಯನ್ನು ತೆಗೆದು ತಿನ್ನದಿದ್ರೆ ಕೇಳಿ!
೪. ಬಾಣಲೆಯಲ್ಲಿ ಏನನ್ನೋ ತುಪ್ಪದಲ್ಲಿ ಹುರಿಯಬೇಕು. ಅರಳುಮರಳಾದ ತುಪ್ಪ, ಚಮಚದಿಂದ ಪೂರ್ತಿ ಬೀಳುವುದಿಲ್ಲ. ಸ್ವಲ್ಪ ಬಿಸಿಗೆ ಹಿಡಿದು, ಸ್ವಲ್ಪ ಬಿದ್ದಂತಾಗಿ ಮತ್ತೆ ಕಯ್ಯಿಂದ ಒರೆಸಿ ಹಾಕುತ್ತೇವೆ. ಇದಲ್ಲ ಸಮಾಚಾರ. ಬಾಣಲೆಯ ಬದಿಯಿಂದ ಕೈಯ್ಯಲ್ಲಿರುವ ತುಪ್ಪವನ್ನು ಜಾರಿಸುವುದಿದೆಯಲ್ಲ, ಅದು!
೫. ಎಷ್ಟೋ ಕಷ್ಟಪಟ್ಟು ಹಾಲಿನ ಪಾತ್ರೆಯನ್ನು ತೊಳೆದಾಯ್ತು. ಹಾಲು ಚೆನ್ನಾಗಿ ಕುದ್ದರೆ, ಪಾತ್ರೆಯ ಒಳಗೆ ಮಾಲು ಕಟ್ಟುತ್ತದೆ. ಎರಡು ಮೂರು ಸಲ ತೊಳೆದ ಮೇಲೆ , ಸ್ವಚ್ಛವಾಗಿದೆ ಎಂದು ಅನಿಸಿ, ನೀರಿನಲ್ಲಿ ತೊಳೆದಾಗ ಒಂದು ಕಡೆ ಹಾಲಿನ ಗುರುತು ಕಾಣುತ್ತದೆ. ಇನ್ನೇನು ಸಾಬೂನು ಎಂದು ಕೈಯ್ಯ ಉಗುರಿಂದ ಅದನ್ನು ಕೆರೆದು ಚಂದ ಮಾಡುವುದಿದೆಯಲ್ಲಾ, ಅದು!
೬. ಗಾಳಿಯೋ, ಸೊಳ್ಳೆಯೋ ಎಂದು ಕಿಟಕಿ ಬಾಗಿಲನ್ನು ಎಳೆವಾಗ ಕೆಲವು ಸಲ ಕೈಗೆ ಏಟಾಗಿರುತ್ತದೆ. ಆದರೆ ಕೆಲವೊಂದು ಸಲ ಅದ್ಯಾವುದೋ ಚಾಕಚಕ್ಯತೆಯಲ್ಲಿ ಕೈಗೆ ಏಟಾಗುವುದು ತಪ್ಪಿ ಹೋದಾಗ ಆಗುವ ನಾಯಕ/ನಾಯಕಿ ಫೀಲಿಂಗ್ ಇದೆಯಲ್ಲ..
೭. ಮೂರ್ನಾಲ್ಕು ದಿನ ನಿಲ್ಲಿಸಿದ ಗಾಡಿ ಸ್ಟಾರ್ಟ್ ಆಗುವುದಿಲ್ಲ ಎಂದು ತಲೆಯಲ್ಲಿ ಯೋಚನೆ ಆಗಿರುತ್ತದೆ. ಇನ್ನೆಷ್ಟು ತುಳಿಯಬೇಕೋ. ಆದರೆ ಅದ್ಯಾವುದೋ ಯೋಚನೆಯಲ್ಲಿ ಮೊದಲ ಕಿಕ್ ಗೇ ಶುರುವಾಗಿ ಬಿಡುತ್ತದೆ. ಶ್ರಮದ ಕಲ್ಪನೆಯಲ್ಲಿದ್ದವನಿಗೆ ಗುರಿಯೇ ಕಾಲಿನಬುಡಕ್ಕೆ ಬಂದಂತೆ.
೮. ದೊಡ್ಡ ಪುಸ್ತಕದ ಓದಿನ ನಡುವೆ ಯಾವುದೋ ಬೇರೆ ಕೆಲಸದ ಯೋಚನೆಯಾಗುತ್ತದೆ. ಮುಕ್ಕಾಲು ಭಾಗ ಮುಗಿಸಿದ್ದ ಪುಸ್ತಕದಲ್ಲಿ ಗುರುತು ಮರೆತುಹೋಗಿ, ಒಂದಿಪ್ಪತ್ತು ಪುಟಗಳ ಮೊದಲಿನ ಓದನ್ನು ಪ್ರಾರಂಭಿಸುವಾಗ ಓದಿದ ನೆನಪೇ ಆಗುವುದಿಲ್ಲ. ಮುಂದೆ ಹೋದಾಗ ಇದೆಲ್ಲ ಓದಿದರೂ ನೆನಪಾಗಿಲ್ಲ, ಮುಗಿಸಿದರೆ ಸಾಕು ಎನ್ನುವ ಯೋಚನೆಯೂ ಸೊಗಸು.
ಇನ್ನೂ ಬೇಕಾದಷ್ಟಿದೆ. ಸಧ್ಯಕ್ಕೆ ಮನೆಯೊಳಗೆ ಪಡುವಂತ ಖುಷಿಗಳು. ಇಷ್ಟೆ.