ಐದು ಸಾವಿರ ಕೊರೋನಾ ಪೀಡಿತರು ಜಾಸ್ತಿಯಾಗಿದ್ದಾರೆ. ಬಹಳ ಕಸಿವಿಸಿ ಆಯ್ತು. ಮೊನ್ನೆ ನೂರು ಇನ್ನೂರು ದಿನಕ್ಕೆ ಜಾಸ್ತಿ ಆಗುತ್ತಿದ್ದರೆ ಈಗ ಹಠಾತ್ ಆಗಿ ಐದಾರು ಸಾವಿರದಷ್ಟು. ಅಬ್ಬ, ಇದಕ್ಕೆ ಕೊನೆಯೇ ಇಲ್ಲವೇ?

ಪಕ್ಕದ ಮನೆಯ ಗುಂಡೂರಾಯರಿಗೂ ಕೊರೋನಾವಂತೆ! ದಿನವೂ ಕೆಲಸಕ್ಕೆ ಬರೋ ಸಾಕಮ್ಮ ಹೇಳಿದ ಮಾತು. ಈ ಸಾಕಮ್ಮ ಅವರ ಮನೆಗೂ ಕೆಲ್ಸಕ್ಕೆ ಹೋಗ್ತಾರೆ. ಹಾಗಾಗಿ ಕೊರೊನ ನನಗೂ ಬರಬಹುದೇನೋ.. ನಾಳೆಯಿಂದ ಬರೋದು ಬೇಡ ಅನ್ನಬೇಕು.

ನಿಂಬೆಹಣ್ಣಿದೆ, ಕಿತ್ತಳೆಯಿದೆ, ಬೇವಿನ ಸೊಪ್ಪು ಇದೆ.. ಹಾ ಮತ್ತೆ ತುಳಸಿ.. ಕೃಷ್ಣತುಳಸಿಯೇ ಆಗಬೇಕು. ಇದನ್ನೆಲ್ಲ ಬಳಸಿ ಒಂದು ಮದ್ದು ಕಂಡು ಹಿಡಿಯಬಹುದೇ? ಹೌದು ಯಾವುದನ್ನು ಮೊದಲು ಜಜ್ಜಬೇಕು. ಏನಾದರೂ ಯೂಟ್ಯೂಬ್ ವೀಡಿಯೋ ನೋಡಿದರೆ ಸಮಾಧಾನ ಸಿಗಬಹುದು.

ಹದಿನೈದು ಬೇವಿನ ಎಲೆಗಳನ್ನು ಜಜ್ಜಿ, ಅದಕ್ಕೆ ಹತ್ತು ತುಳಸಿಯ ಎಲೆಯನ್ನು ಸೇರಿಸಿ ಜಜ್ಜಿ, ನಿಂಬೆಯ ರಸವನ್ನು ಸೇರಿಸಿದೆ. ಮತ್ತೆ ನೀರು ಸೇರಿಸಿ ಕುದಿಸಿ, ಅದರ ಜೊತೆಗೆ ಕಿತ್ತಳೆ ಸಿಪ್ಪೆಯನ್ನು ಹಾಕಿದೆ. ಒಂದೆರಡು ಪಾರಿಜಾತದ ಎಲೆಯನ್ನೂ ತಂದು ಕಷಾಯದ ರೀತಿ ಮಾಡಿದೆ. ಇನ್ನೇನು ಪ್ರಯೋಗ ಮಾತ್ರ ಮಾಡಬೇಕು.

ಗುಂಡೂರಾಯರ ಮನೆಗೆ ಹೇಗೆ ಹೋಗೋದು. ಕಿಟಕಿಯಿಂದ ನೋಡಿದ್ರೆ ಅವರ ವಿಶಾಲ ಹೊಟ್ಟೆಯೂ, ಹೆಗಲಮೇಲಿದ್ದ ಟವೆಲ್ಲೂ ಕಂಡಿತು.. ಬಾಯಲ್ಲಿ ಬಿಳಿಯಾದ ನೊರೆ.. ಇದು ಕಂಡಿತ ಕೊರೊನಾ ಅಲ್ಲ, ಬ್ರಶ್ ಮಾಡುತ್ತಿರಬೇಕು ಅಷ್ಟೆ.

ಯಾವತ್ತೂ ನಕ್ಕು ಮಾತಾಡಿಸದ ಗುಂಡೂರಾಯರ ಮೇಲೆ ನನಗೇನೂ ಅಷ್ಟು ಪ್ರೀತಿ ಇಲ್ಲ. ಆದರೆ ಅವರಿಂದ ಜಗತ್ತಿಗೆ ಕೊರೋನಾ ಹರಡುವ ಭೀತಿಯಿರುವುದರಿಂದ, ನಾನು ಮನೆಗೆ ಹೋಗುವುದಕ್ಕೆ ನಿಶ್ಚಯ ಮಾಡಿದೆ. ಅವರ ಮನೆಯಲ್ಲಿ ಯಾವ ತಿಂಡಿಯನ್ನೂ ತಿನ್ನುವುದಿಲ್ಲ, ಬಿಸಿ ಬಿಸಿ ಚಹಾ ಸೇವನೆ ಮಾಡುವುದಿಲ್ಲ. ಯಾವ ವಸ್ತುಗಳನ್ನೂ ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿಯೇ ಹೊರಟೆ.

ಮೊದಲು ನಮಸ್ಕಾರ, ಒಂದೆರಡು ವಿಷಯಗಳ ಬಗೆಗೆ ಹೇಳಿದ ಮೇಲೆ, ಅವರು ಒಂದು ಮೀಟರ್ ದೂರದಿಂದಲೇ ಲೋಕಾವಸಾನವಾದ ನಗೆ ಬೀರಿ, ಏನು ಬಂದ್ರಿ ಅಂದ್ರು. ಬಹಳವಾಗಿ ಸೋತಂತಿತ್ತು ಮುಖಭಾವ. ಕೊರೊನ ಕಾಡಿದೆ ಅನ್ನಿಸಿತ್ತು. ನೇರವಾಗಿ ವಿಷಯಕ್ಕೆ ಬಂದೆ.

ಸ್ವಾಮೀ, ಕೊರೋನಾ ಬಂದಿದೆಯಂತೆ ನಿಮಗೆ, ಹೌದೇ?

ಹೌದು. ಬಂದಿದೆ, ಏನ್ಮಾಡಕ್ಕಾಗತ್ತೆ ಬಿಡಿ.

ಅಯ್ಯೋ, ಏನೂ ಹೆದರಬೇಡಿ.. ನಾನು ನಿನ್ನೆಯೇ ರೀಸರ್ಚ್ ಮಾಡಿ, ಇವತ್ತು ಒಂದು ಕಷಾಯ ಸಿದ್ಧಪಡಿಸಿದ್ದೇನೆ. ಇದನ್ನು ಒಂದು ಗ್ಲಾಸ್ ಕುಡಿಯಿರಿ. ಒಂದು ನಿಮಿಷದ ಒಳಗೆ ಕೊರೋನಾ ಮಾಯವಾಗುತ್ತೆ ನೋಡಿ.

ಹೌದೇ, ಎಲ್ಲಿ ಕೊಡಿ ಕೊಡಿ.

ಬಹಳ ಸಂತೋಷವಾಯ್ತು. ಜಗತ್ತಿನ ಕರೋನಾ ಪೀಡೆಗೆ ನನ್ನಿಂದ ಒಂದು ದೊಡ್ಡ ಕೊಡುಗೆ.. ಇದರಿಂದ ಲೋಕವೆಲ್ಲಾ ಖುಷಿಯಾಗುತ್ತದೆ. ಅಪ್ರಯೋಜಕ ಎಂದು ಬಯ್ಯುವ ಕುಟುಂಬದವರು ನನ್ನನ್ನು ಎತ್ತಿ ಮೆರೆಯುತ್ತಾರೆ.. ಅಹಹ. ಇದಕ್ಕೇನು ಹೆಸರಿಡೋದು? ಕೊರೋನಾ ಪೇಯ? ಕೊರೋನಾನಿರೋಧಕ ?.. ಹುಂ, ಒಳ್ಳೇ ಹೆಸರು ಕೊಡಬೇಕು.

ತಗೊಳ್ಳಿ ಸಾರ್, ಒಂದು ಗ್ಲಾಸ್ ಎಂದು ಕೊಟ್ಟೆ. ಗುಂಡೂರಾಯರು ಬಾಯಿಗೆ ಹಾಕಿದ್ದೇ, ಒಂದು ಸ್ವಲ್ಪವೂ ಕುಡಿಯದೇ ಉಗಿದರು.. ಅಯ್ಯೋ ಉಗಿದದ್ದು ನನ್ನ ಮೇಲೇಯೆ ಬಿತ್ತು.. ಅಯ್ಯೋ, ಕೊರೋನಾ ನಂಗೂ ಬಂತು..

ದಢಕ್ಕನೇ ಎದ್ದು ಕೂತೆ, ಏನು, ಗಂಟೆ ಇನ್ನೂ ಐದೂವರೆಯಾ? ಕನಸೇ ಇದು? ಎಲ್ಲಿ ಕೊರೋನಾ….

google photo

One thought on “ಒಂದು ಕೊರೋನಾ ಪ್ರಹಸನ.”

Leave a Reply

This site uses Akismet to reduce spam. Learn how your comment data is processed.