ಸೂರ್ಯನ ಬೆಳಕು ಇನ್ನೂ ಬಂದಿಲ್ಲ. ಎಲ್ಲಿಂದಲೋ ಎದ್ದು ಬಂದ ಒಬ್ಬ ದಢೂತಿ ಮನುಷ್ಯ ನನ್ನನ್ನು ಅನಾಮತ್ತಾಗಿ ಎತ್ತಿಕೊಂಡು ನಡೆದ. ಮೊದಲ ಟ್ರಿಪ್ಪಿನ ಖುಷಿಯಲ್ಲಿದ್ದ ಬಸ್ಸು ರಸ್ತೆಯ ಖುಷಿಯನ್ನು ಹಾರಿ ಹಾರಿ ಅನುಭವಿಸುತ್ತಿತ್ತು. ಸಿಡುಕು ಮೋರೆಯ ಕಂಡಕ್ಟರ್ ಟಿಕೇಟ್ ಕೇಳಿದಾಗ ನನ್ನನ್ನೊಮ್ಮೆ ತಡವಿದಂತಾಯ್ತು.
ನಿನ್ನೆಯ ಹಳಸಲು ಘಮದ ನಡುವೆ ಇಂದಿನ ಹೊಸಾ ಹೂಗಳ ಪರಿಮಳ, ತರಕಾರಿ ಸೊಪ್ಪುಗಳ ತಾಜಾತನದ ಗಂಧ ಘಮಿಸುವಾಗಲೇ ಮಾರುಕಟ್ಟೆ ತಲುಪಿದ್ದು ತಿಳಿಯಿತು. ದಡೂತಿ ಮನುಷ್ಯ ನನ್ನನ್ನು ತರಕಾರಿ ಮಾರುವ ಮಿದುನಗೆಯ ಆಂಟಿಗೆ ಹಸ್ತಾಂತರಿಸಿ ಮುಂದುವರೆದನು. ಸ್ವಲ್ಪ ಸಮಯ ಅಲ್ಲೇ ಇದ್ದೆ.
ಸೂರ್ಯ ಫಳ ಫಳ ಹೊಳೆಯುವ ಹೊತ್ತಿಗೆ ಅದೆಲ್ಲಿಂದಲೋ ಓಡಿಕೊಂಡು ಬಂದ ಚೂಡಿದಾರದ ಲಲನೆ ನನ್ನನ್ನು ಎತ್ತಿಕೊಂಡು ಹೊರಟಳು. ತರಕಾರಿ ಆಂಟಿಯ ಮಗಳಿರಬೇಕು. ಇರಲಿ, ಆಟೋದಲ್ಲಿ ಹೋಗುವ ಸ್ವರ. ಸುಮಾರು ದೂರ ಹೋದಮೇಲೆ ಅವಳೂ ನನ್ನನ್ನು ಆಟೋದವನ ಜೊತೆ ಬಿಟ್ಟು ಹೊರಟು ಹೋದಳು. ಸಂಜೆಯ ತನಕ ಬೆಂಗಳೂರಿನ ಹಲವಾರು ಊರುಗಳನ್ನು ಆಟೋದವನ ಜೊತೆ ತಿರುಗಾಡಿದೆ.
ಸಂಜೆಯಾಯಿತು. ಇನ್ನೇನಾಗಲಿದೆಯೋ ಎನ್ನುವ ಕಾತರದಲ್ಲಿದ್ದೆ. ವೈನ್ ಶಾಪ್! ಇಂತಹ ಶಾಪುಗಳನ್ನು ಮೊದಲೂ ನೋಡಿದ್ದೇನೆ, ಆದರೆ ಇವತ್ತು ಇಲ್ಲಿಗೆ ಹೋಗುವುದಕ್ಕೆ ಖಂಡಿತಾ ಮನಸ್ಸಿಲ್ಲ. ಅಯ್ಯೋ, ಏನನ್ನಿಸಿತೋ ಆಟೋದವನಿಗೆ. ಕುಡಿಯುವುದು ಬೇಡವೆಂದು ತೀರ್ಮಾನಿಸಿದನೇ? ಪುನಃ ಆಟೋ ಏರಿ ಮನೆಗೆ ಬಂದಾಯ್ತು.
ರೀ..
ಏನು?
ನಾಳೆ ಮಗನ ಬರ್ಥಡೇ ಇದೆ, ಏನಾದ್ರು ಕೊಡಿಸ್ಬೇಕು.
ತಗೋ ಐನೂರು ರುಪಾಯಿ ಎಂದು ನನ್ನನ್ನು ಕೊಟ್ಟ. ಅವನ ಮಡದಿಯ ಮುಷ್ಟಿಯಲ್ಲಿ ಬಿಗಿಯಾಗಿ ಒತ್ತಲ್ಪಟ್ಟರೂ ಮೊಗದಲ್ಲಿ ನಗೆಯನ್ನು ನೋಡಿದೆ.