ಒಂದೇ ರೀತಿಯ ಎರಡು ಹೂಗಳು
ಬಳ್ಳಿಯಲಿತ್ತು, ಅರಳಿತ್ತು!
ಒಂದನು ಕೊಯ್ದಳು ಮಲ್ಲಿಗೆ ಮಗಳು
ಇನ್ನೊಂದಲ್ಲಿಯೆ ಉಳಿದಿತ್ತು.
ಕೊಯ್ದಿಹ ಹೂವಿಗೆ ದಾರವು ಸೇರಿ
ಹೂವಿನ ಮಾಲೆ! ಹೆಸರಾಯ್ತು
ಬಳ್ಳಿಯೊಳುಳಿದ ಘಮಿಸುವ ಹೂವು
ಸಂಜೆಯವರೆಗೂ ನಗುತಿತ್ತು.
ದೇವರಿಗಿಟ್ಟಳು, ಮುಡಿಯೊಳಗಿಟ್ಟಳು
ಹೂವಿನ ಮನಸಿನ ನಗೆಯವಳು!
ರಾತ್ರಿಯ ಇಬ್ಬನಿ ಬಳ್ಳಿಯ ಹೂವಿನ
ಮೆಲ್ಲನೆ ಹೀರುತ ಕೊಳೆಸಿದಳು.
ಒಂದೇ ಭಾವದ ಜನರು ಬೆರೆತರೂ
ಹೊಂದಿಕೆಯಾಗದೆ ಬದುಕಿದರು!
ಜತೆಗೆ ಸೇರಿದರೂ, ಜೊತೆಗೆ ಬಾಳಿದರೂ
ತೆರಳುವ ದಿನದಲಿ ಅಗಲಿದರು.
By : Ishwara Bhat K
Photo : Google.