ದೂರದ ಬೆಟ್ಟವು ಕಣ್ಣಿಗೆ ನುಣ್ಣಗೆ ಎನ್ನುವ ಗಾದೆ ಪ್ರಪಂಚದ ಎಲ್ಲ ಭಾಷೆಗಳಲ್ಲಿಯೂ ಕಾಣುವ ಗಾದೆ. ಅನುಭವ ಜನ್ಯವಾದ್ದರಿಂದ ಇಂತಹ ಗಾದೆಗಳಿಗೆ ಭಾಷೆಯ, ಊರಿನ ಹಂಗಿಲ್ಲ. ಬೆಟ್ಟಗಳನ್ನೇ ಕಾಣದ ಈಗಿನವರಿಗೆ ಈ ಮಾತುಗಳನ್ನು ಗಾದೆಯನ್ನು ಬಳಸಿಕೊಳ್ಳಬಹುದು.
ಹೆಚ್ಚಾಗಿ ನಾವು ಬೇರೆಯವರ ಸುಖವನ್ನು ಅಂದಾಜಿಸಿಯೇ ಕರುಬುತ್ತೇವೆ. ಪಕ್ಕದ ಮನೆಯವರ ಸಾರಿನ ಘಮ ನಮ್ಮ ಅಡುಗೆಗಿಂತಲೂ ಚೆನ್ನಾಗಿರುತ್ತದೆ. ಕಂಪೌಂಡಿನ ಆಚೆಯ ಮನೆಗೆ ಯಾವುದೋ ಹಬ್ಬದ ಊಟಕ್ಕೆ ಹೋದಾಗ ಮಾಡಿದ ಸಾರು/ಸಾಂಬಾರಿನ ರುಚಿ ನಮ್ಮ ಮನೆಯದಕ್ಕೆ ಬರುವುದಿಲ್ಲ.
ಆ ಮನೆಯಲ್ಲಿ ಮೂರು ಜನ ಕೂತ್ಕೊಳ್ಳುವ ಕುರ್ಚಿ ಉಂಟಲ್ಲಾ, ಅದು ನಮ್ಮ ಮನೆಯದ್ದಕ್ಕಿಂತ ಚೆನ್ನಾಗಿರುತ್ತದೆ. ಹಾಗೇ ಶುಚಿಯಾಗಿರುತ್ತದೆ. ಫ್ರಿಡ್ಜು ಇದ್ಯಲ್ಲಾ, ಅದಕ್ಕೆ ಅವ್ರು ಕಡ್ಮೆ ರೇಟ್ ಕೊಟ್ರೂ ತುಂಬಾ ಚೆನ್ನಾಗಿದೆ. ಅವರ ಮನೆಯಲ್ಲೊಂದು ಬುಕ್ ಕಲೆಕ್ಷನ್ ಇದೆ, ಏನೂ ಅಂತೀರಾ.. ನಾವೂ ಒಂದು ಮಾಡ್ಬೇಕು ಅಂತಹದ್ದು.
ಅವರ ಮನೆಯ ಕಾರಿಗೆ ಇರುವ ಮೈಲೇಜ್ ನಮ್ಮ ಮನೆಯದ್ದಕ್ಕಿರುವುದಿಲ್ಲ. ಅವರು ಹೋಗುವಂತಹ ಜಾಗಗಳು ನಾವು ಇನ್ನೂ ಕಂಡಿಲ್ಲ. ಪಕ್ಕದ ಮನೆಯಲ್ಲಿ ಹುಟ್ಟಿದ ಗಿಡದಲ್ಲಿ ಮುನ್ನೂರ ಅರುವತ್ತೈದು ದಿನವೂ ಹೂವು ಅರಳುತ್ತದೆ. ನಮ್ಮ ತೋಟದ ಗಿಡದ ಹೂವಿಗಿಂತ ಆಚೆಯ ಮನೆಯ ಹೂವಿನ ಬಣ್ಣ, ಗಂಧವೇ ಚಂದ.
ಇನ್ನು, ಪಕ್ಕದ ಮನೆಯವರ ಮಗ/ಮಗಳು ಓದುತ್ತಿರುವ ಶಾಲೆ, ಕಾಲೇಜು ಬಹಳ ದೊಡ್ಡದು. ಒಳ್ಳೇ ಕಲಿಸ್ತಾರಂತೆ. ಅಯ್ಯೋ ಅವ್ರ ಮಗಳು ಭರತನಾಟ್ಯ ಕಲೀತಾಳಂತೆ, ಹೇಗ್ ಟೈಮ್ ಸಿಗುತ್ತಪ್ಪಾ.
ಅವರ ಮನೆಯ ಪೂಜೆ ನೋಡ್ಬೇಕಿತ್ತು.. ಎಷ್ಟು ಚಂದ ಅಲಂಕಾರ. ಅವ್ರ ಮನೆಗೆ ಬಂದ ಪುರೋಹಿತ್ರನ್ನೇ ನಮ್ಮ ಮನೆಗೆ ಕರೆಸ್ಬೇಕು. ಆಚೆ ಮನೆಯವರ ಮಗನ ಮದುವೆಯ ಆರತಕ್ಷತೆ.. ಅಬ್ಬಬ್ಬ, ನಮ್ಮದ್ದು ಅಷ್ಟು ಚೆನ್ನಾಗಾಗ್ಲಿಲ್ಲ.
ನಮ್ಮ ಮನೆಯ ಸುಖವನ್ನು ಪಕ್ಕದ ಕಂಪೌಂಡಿನಾಚೆ ಹುಡುಕುವುದರಿಂದ ನಮ್ಮ ಸುಖಕ್ಕೆ ಕೊರವಾಗುತ್ತದೆ. ಇದನ್ನು ಅರಿತೂ ಪಕ್ಕದ ಕಂಪೌಂಡಿನಾಚೆ ಹುಡುಕುವುದರಿಂದ ಲಾಭವೇನೂ ಆಗುವುದಿಲ್ಲ. ಇದು ತಪ್ಪೆಂದಲ್ಲ, ಏಕೆಂದರೆ ಇಂತಹ ಯೋಚನೆಗಳು ನಮ್ಮಲ್ಲಿ ಇನ್ನೂ ಉತ್ತಮವಾದುದನ್ನು ಪಡೆಯುವುದಕ್ಕೆ ಪ್ರೇರೇಪಿಸುತ್ತದೆ. ಆದರೆ ಬರೀ ಕೊರಗಿನಿಂದ ಏನೂ ಲಾಭವಿಲ್ಲ.
ಈ ವಿಚಾರವನ್ನು ಪಕ್ಕದ ಕಂಪೌಂಡಿನವರೆಗೂ ಕಳಿಸಿದರೆ ಅವರಿಗೂ ಚಿಂತೆಯಾಗಬಹುದು.