ಸುತ್ತಮುತ್ತಲ ಮೂರು ನಾಲ್ಕು ಹಳ್ಳಿಗಳ ಮಧ್ಯೆ ಅದೊಂದು ಪುಟ್ಟ ಊರು. ಎಲ್ಲಾ ಹಳ್ಳಿಗಳ ಹೃದಯವದು. ಬರೀ ೩೦ ಮನೆಗಳು ಸ್ವಲ್ಪವೇ ಜಮೀನು ಹೊಂದಿರುವ ಜನರು ಒಬ್ಬರಿಗೊಬ್ಬರು ಬೆರೆತು ರಾಮಪುರವಾಗಿತ್ತು ಹಳ್ಳಿ. ಸಣ್ಣ ದೇವರ ಗುಡಿಯೊಂದು, ಎದುರೇ ಸಣ್ಣ ಕೆರೆ ಹಿಂದಿನಿಂದ ಬೆಟ್ಟದೊಂದಿಗೆ ಕಾಡು. ಆಲೋಚಿಸಿದರೆ ಸಣ್ಣಮಕ್ಕಳು ಚಿತ್ರ ಬಿಡಿಸಿದಂತೆ ತೋರುತ್ತಿತ್ತು.


ಪೇಟೆಯಲ್ಲಿ ಕೋಳಿಅಂಗಡಿ ಇಟ್ಟ ತಿಮ್ಮನ ಮನೆ ಮೊದಲ್ಗೊಂಡು ರಾಮಣ್ಣನ ಮನೆ ದಾಟಿದರೆ ಟೈಲರಣ್ಣನ ಮನೆ. ನಂತರ ಒಂದೆಕರೆಯಷ್ಟು ಮಳೆನೀರಾವರಿ ಜಮೀನು. ಅದಾಗಿ ಪುನಃ ಮನೆಗಳು. ತಿಮ್ಮನೂ ರಾಮಣ್ಣನೂ ಟೈಲರಣ್ಣನೂ ನಮಗೆ ಪ್ರಧಾನವಾದ್ದರಿಂದ ಉಳಿದವರ ಹೆಸರು ಬೇಡವೆನಿಸುತ್ತದೆ. ಅಂದಹಾಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುವ ಕೃಷ್ಣಪ್ಪನ ಮನೆಯೂ ತಿಮ್ಮನ ಮನೆಯಿಂದ ಒಂದೈದು ಫರ್ಲಾಂಗ್ ದೂರದಲ್ಲಿದೆ. ಹರಟೆಹೊಡೆಯುವುದರಲ್ಲೇ ನಿಸ್ಸೀಮನೆನಿಸಿದ ತಿಮ್ಮ ಮತ್ತೆ ಟೈಲರಣ್ಣರನ್ನು ದಿನವೂ ಭೇಟಿಯಾಗುತ್ತಾನೆ ರಾಮಣ್ಣ. ಅದೇನಕ್ಕೋ ಹಾಗಿರುವ ಸೆಳೆತ ಅವರ ಮಧ್ಯೆ ಇದೆ.

ಪಕ್ಕದ ಹಳ್ಳಿಯ ವಿಜೃಂಭಣೆಯ ಜಾತ್ರೆಯ ಬಗ್ಗೆ ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಜಾತ್ರೆಗಿಂತಲೂ ಪ್ರಧಾನವಾಗಿ ಆಕರ್ಷಿಸಿದ್ದು ಅಲ್ಲಿನ ಸಂತೆ ಮತ್ತೆ ಕಾರ್ಯಕ್ರಮಗಳು. ಊರದೇವಿಯ ಜಾತ್ರೆ ಅದೂ ಎರಡುವರ್ಷಕ್ಕೊಮ್ಮೆ ನಡೆಯುವುದು. ಇತ್ತೀಚೆಗೆ ಸರ್ಕಾರದ ಸರ್ಪಕಾವಲಿನಲ್ಲಿ ಕುರಿ ಕೋಣಗಳನ್ನು ಬಲಿ ಕೊಡದಿದ್ದರೂ ಉಳಿದೆಲ್ಲಾ ಆಧುನಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿ ಕಳೆದುಕೊಂಡವರು ಅಷ್ಟನ್ನೂ ಕಳೆದುಕೊಂಡರೆ ಗಳಿಸಿದವರು ಮುಂದಿನ ಎರಡು ವರ್ಷಕ್ಕೆ ಜೀವನ ಸಾಗಿಸಬಹುದು.
ನೆಮ್ಮದಿಯಿಂದ ನಿಟ್ಟುಸಿರು ಬಿಡುವ ಕಾಲಕ್ಕೇ ಜಾತ್ರೆಯಾಗಿದ್ದು ಎಲ್ಲಾ ಹಳ್ಳಿಯ ಗ್ರಾಮಸ್ಥರನ್ನು ಖುಷಿಗೊಳಿಸಿತ್ತು. ಹರಕೆಯನ್ನು ತೀರಿಸಲೆಂದು ತೆಗೆದಿಸಿದ ಅಷ್ಟೂ ಹಣವನ್ನು ಉಪಯೋಗಿಸಿ ಮೆರೆದಾಡಿದರು ಜಾತ್ರೆಯಲ್ಲಿ. ಪೇಟೆಯಲ್ಲಿರುವವರೂ ಹಳ್ಳಿಗೆ ಬಂದು ಒಂದೈದಾರು ದಿನ ವ್ಯಯಿಸಿ ಪುನಃ ಪೇಟೆಗೆ ನಡೆದರು. ಯಾವುದೋ ಸಂಭ್ರಮದ ಕನಸು ಸೂರ್ಯನ ಬೆಳಕಿನ ಕಿರಣಗಳಿಗೆ ಎಚ್ಚರವಾದ ಹಾಗೆ ಪುನಃ ಮೌನಕ್ಕೆ ಜಾರಿತು.
ಇದೆಲ್ಲಾ ಜಾತ್ರೆಯ ವ್ಯವಹಾರಗಳು ರಾಮಣ್ಣನ ತಲೆಯ ಮೂಲೆಯಲ್ಲಿ ಇದ್ದರೂ ಪ್ರಧಾನವಾಗಿ ಕುಣಿಯತೊಡಗಿದ್ದು ಆ ಯಕ್ಷಗಾನ. ಎಂತಹ ಆಟವದು? ಆ ಭೀಮ ಆ ಧುರ್ಯೋಧನ ಆ ಭಾಗವತರ ಹಾಡು ಆ ಚೆಂಡೆಯ ಅಬ್ಬರ. ಇದರ ಬಗ್ಗೆ ಪೇಪರಿನ ಮೂಲೆಯಲ್ಲೂ ಪ್ರಕಟವಾಗಿ ಮತ್ತಷ್ಟು ತುಪ್ಪ ಸುರುವಿದಂತಾಗಿತ್ತು. ಹಳ್ಳಿಯಲ್ಲಿ ಎಂತಹ ಕಲೆಯ ಬೀಜ ಅಡಗಿದೆ? ಎಂತಹ ಅಧ್ಬುತ ಪ್ರತಿಭೆಗಳಿದ್ದಾವೆ ಎಂದೆಲ್ಲಾ ಚಿತ್ರಸಮೇತ ಪತ್ರಿಕೆಯವರು ಪ್ರಕಟಿಸಿದ್ದರು. ಈ ಚರ್ಚೆ ಸುಮಾರು ದಿನದ ವರೆಗೆ ಮಿತ್ರರಲ್ಲೂ ಸಾಗಿ ಬಂದಿತ್ತು.

ರ್ಯ ಮುಳುಗಿದನೋ, ಕರುಗಳಿಗೆ ಮೇವಾಯಿತೋ ಗೊತ್ತಿಲ್ಲ. ರಾಮಣ್ಣಾದಿ ಮಿತ್ರರು ಹರಟಲು ಕಟ್ಟೆಗೆ ಹಾಜರು. ಯಾವುದೇ ವಿಷಯವಿದ್ದರೂ ಇಂದೇ ಚರ್ಚೆಯಾಗಿ ಮುಕ್ತಾಯವಾಗುವವರೆಗೂ ಒಂದು ಕಟ್ಟು ಬೀಡಿ, ಒಂದಷ್ಟು ಎಲೆ ಅಡಕೆ ಬಿಟ್ಟರೆ ಬೇರೆ ವಿಷಯವಿಲ್ಲ. ಇಂದಿನ ಮುಖ್ಯವಾದ ವಿಚಾರ ರಾಮಪುರದ ಜಾತ್ರೆಯಾಗಿತ್ತು. ಜಾತ್ರೆ ಹೇಗಾದರೂ ಆಗಲಿ, ಸಂತೆ ಎಷ್ಟಾದರೂ ಬರಲಿ, ಪಕ್ಕದ ಹಳ್ಳಿಯ ವೈಭವದ ಯಕ್ಷಗಾನ ಮರೆಸುವ ಆಟವೊಂದು ಇಲ್ಲಿ ಆಗಲೇ ಬೇಕು ಎನ್ನುವ ಸರ್ವಾನುಮತದ ಅಭಿಪ್ರಾಯ.
ಹೌದು. ತೀರ್ಮಾನವೇನೋ ಆಯಿತು. ಯಾವ ಪ್ರಸಂಗ ಯಾರು ಪಾತ್ರಧಾರಿಗಳು?
ಹೆಸರೂ ರಾಮಣ್ಣ, ಊರು ರಾಮಪುರವಾದ್ದರಿಂದ ರಾಮಾಯಣದ ಯಕ್ಷಗಾನವನ್ನೇ ಮಾಡುವುದು ಎಂದು ರಾಮಣ್ಣನ ಅಂಬೋಣ. ಉಳಿದ ಮಿತ್ರರು ಸಮ್ಮತಿ ಸೂಚಿಸಿದರು. ಅಂತೂ ರಾಮಾಯಣದ ಯಾವ ಭಾಗವೆನ್ನುವುದು ಸುಲಭವಾಗಿ ನಿರ್ಣಯವಾಗದೇ ಹಾಗೇ ಉಳಿದಿತ್ತು. ತೀರ್ಮಾನಿಸುವ ವಿಚಾರವನ್ನೂ ರಾಮಣ್ಣನಿಗೇ ಬಿಟ್ಟಿ ಕೈತೊಳೆದುಕೊಂಡರು.

ತಲೆಯೊಳಗೆ ಹುಳವೊಂದು ಕೊರೆದಂತೆ ರಾಮಣ್ಣನಿಗೆ ದಿನವೂ ರಾಮಾಯಣ ಕಾಡತೊಡಗಿತು. ರಾಮ ಕಾಡಿಗೆ ಹೋದ,ವಾಲಿಯನ್ನು ಕೊಂದ, ಸೇತುವೆ ಕಟ್ಟಿದ, ರಾವಣನನ್ನೂ ಕೊಂದ ಪುನಃ ಅಯೋಧ್ಯೆಗೆ ಬಂದು ರಾಜ್ಯವಾಳಿದ ಎಂಬಷ್ಟು ವಿಷಯ ಸಂಪತ್ತಿನ ಹೊರತು ಜಾಸ್ತಿ ವಿಶ್ಲೇಷಣೆ ರಾಮಣ್ಣನಿಗೂ ಉಳಿದವರಿಗೂ ಇರಲಿಲ್ಲ. ಜೊತೆಗೆ ಈ ಯಕ್ಷಗಾನದಲ್ಲಿ ಏನಾದರೂ ಜಾಸ್ತಿ ಹೆಸರು ಮಾಡಬೇಕಿದ್ದರೆ ಸ್ವಲ್ಪ ಜಾಸ್ತಿ ಮಾತನಾಡಬೇಕು. ರಾಮಾಯಣವನ್ನು ಓದಲೇಬೇಕು ಎನಿಸತೊಡಗಿತು.
ಇದು ಎರಡನೇ ಸಲ ರಾಮಣ್ಣ, ಶಾಸ್ತ್ರಿಗಳ ಮನೆಗೆ ಹೋಗುತ್ತಿರುವುದು. ಮೊದಲ ಬಾರಿ, ಹೆಂಡತಿ ಮತ್ತೆ ಇವನ ನಡುವಿನ ಸಮಸ್ಯೆಯ ಬಗೆಗೊಂದು ತೀರ್ಮಾನ ಕೊಟ್ಟವರು ಇದೇ ಶಾಸ್ತ್ರಿಗಳು. ಈಗ ರಾಮಾಯಣದ ಪುಸ್ತಕವೋ ಅಲ್ಲ ಅದಕ್ಕಿಂತ ಹೆಚ್ಚಿನ ಮಾಹಿತಿಯನ್ನು ತಿಳಿಯುವುದಕ್ಕೆ ರಾಮಣ್ಣ ಬಂದಿದ್ದು. ಹಾಗೇ ಒಂದು ಪುಸ್ತಕವನ್ನೂ ತೆಗೆದುಕೊಂಡು ವಾಪಸ್ಸಾದ ರಾಮಣ್ಣ. ಆ ದಿನದಿಂದ ಶುರುವಾಗಿ ಮೂರ್ನಾಲ್ಕು ದಿನ ರಾಮಣ್ಣನ ಮನೆಯಲ್ಲಿ ರಾತ್ರಿ ಎರಡು ಘಂಟೆಯವರೆಗೂ ಬೆಳಕು ಇರುತ್ತಿತ್ತು.
ಅದೀಗ ಇಪ್ಪತ್ತಮೂರು ತುಂಬುತ್ತಿತ್ತು. ಸ್ವಲ್ಪ ಓದು ಶಾಲೆಯ ಮೆಟ್ಟಿಲಿನ ಲೆಕ್ಕವನ್ನು ಕಲಿಸಿತ್ತು ಅವನಿಗೆ, ಕಾಲೇಜಿನ ಮೆಟ್ಟಿಲು ಲೆಕ್ಕಕ್ಕೇ ಸಿಗಲಿಲ್ಲ. ಎರಡು ಎಕರೆ ಮಳೆಗಾಲದ ಜಮೀನಿನ ಜೊತೆಗೆ ಮನೆಯಲ್ಲಿ ತಕ್ಕಮಟ್ಟಿಗೆ ಚೆನ್ನಾಗಿದ್ದ ಹೈನುಗಾರಿಕೆ ಅವನ ಓದನ್ನು ಮೊಟಕುಗೊಳಿಸಿ ತಿರುಗಾಟಕ್ಕೆ ಉತ್ತೇಜಕವಾಗಿತ್ತು. ಬೆಂಗಳೂರಿಗೆ ಹೋಗಬೇಕು ಎನ್ನುವ ಅಚಲವಾದ ಆಸೆ ಮೊಳಕೆಯೊಡೆದು ಬೇರೂರಿ ರಾಮಣ್ಣ ಬೆಂಗಳೂರಿಗೆ ಹೊರಟ.
ಬೆಂಗಳೂರಿನ ಟ್ರೈನು ಇಳಿದದ್ದೇ ಜನರ ಮುಖ ಪರೀಕ್ಷೆಗೆ ತೊಡಗುತ್ತಿದ್ದನವನು.ಇವನು ಹೊಸಬನೆಂದು ಬೆಂಗಳೂರಿಗೆ ಹೇಗೆ ಅರಿವಾಗಬೇಕು? ತನ್ನ ಹಸಿವೆ, ತನ್ನ ಭೀಕರತೆ ಎಲ್ಲವನ್ನೂ ಮೊದಲ ದಿನವೇ ತೋರಿಸಿತ್ತು. ಎಂತವರನ್ನೂ ಮರುಳುಗೊಳಿಸುವ ಬೆಂಗಳೂರಿನ ಸೆಳೆತಕ್ಕೆ ಯಾರಾದರೇನು? ಬೆಳಗ್ಗಿನ ಚಳಿಯನ್ನು ತಾಳಲಾರದೇ ಕಾಫಿ ಕುಡಿದು, ಒಂದು ಸಿಗರೇಟನ್ನು ಗಮ್ಮೆನ್ನಿಸುತ್ತಿದ್ದಾಗ ತನ್ನನ್ನು ಯಾರೂ ಗಮನಿಸುವುದಿಲ್ಲ ಎಂದು ಬೇಗನೇ ಅರ್ಥಮಾಡಿಕೊಂಡ. ಒಂದೆರಡು ತಿಂಗಳಾಗುವಷ್ಟರಲ್ಲಿ ಹೇಗೋ ಬೆಂಗಳೂರು ಇವನಿಗೆ ಹೊಂದಿಕೊಂಡು ಬಿಟ್ಟಿತು.

ಸುಮಾರು ಐದು ತಿಂಗಳಾದಮೇಲೆ ಮನೆಗೆ ಬರುತ್ತಿರುವನನ್ನು ಮೊದಲಿನ ಉತ್ಸಾಹದಲ್ಲಿ ಹಳ್ಳಿ ಸ್ವೀಕರಿಸಲಿಲ್ಲ. ಅದೇನೋ ದೂರದ ನೆಂಟಸ್ಥಿಕೆಯವರೇನೋ ಹಳ್ಳಿಗೆ ಬಂದಂತೆ ಎನಿಸಿತು. ಅಮ್ಮನ ಪೇಲವ ಮುಖ, ಅಪ್ಪನ ಕೆಮ್ಮು ಎರಡನ್ನೂ ಬೆಂಗಳೂರಿನ ಅಮಲಿನಲ್ಲಿ ಅಲ್ಲಗಳೆದ. ಹಾಲು ಕುಡಿಯದೇ ಮಾರಿದ್ದೇ ಅಮ್ಮನ ಕೃಶ ಶರೀರಕ್ಕೆ ಕಾರಣ, ಹೆಚ್ಚು ತಿರುಗಿದ್ದೇ ಅಪ್ಪನ ಕೆಮ್ಮಿಗೆ ಕಾರಣ ಎಂದು ತನ್ನ ಸೂತ್ರಗಳನ್ನೂ ಪ್ರಯೋಗಿಸಿದ. ಹಾಗೇ ಸಮಯ ಸುಮ್ಮನಿರಲಿಲ್ಲ, ಬಂದ ಎರಡೇ ತಿಂಗಳಿನಲ್ಲಿ ಅಪ್ಪನನ್ನು ಯಾವುದೋ ಕಾಯಿಲೆಯ ರಸೀದಿ ನೀಡಿ ಇವನ ದುಡಿದ ಹಣವನ್ನು ಬೊಜ್ಜಕ್ಕೆ ಖರ್ಚು ಮಾಡಿಸಿತು.
ಸ್ವಲ್ಪ ಅನಾಥನಾದ ರಾಮಣ್ಣನಿಗೆ ಬೇರೇನೂ ತೋಚದೇ ಇದ್ದುದಕ್ಕೇ ಮದುವೆಯಾದ. ಅಮ್ಮನ ಒತ್ತಾಯಕ್ಕೆಂದು ಊರವರ ಬಳಿ ಹೇಳಿಕೊಂಡ. ಹೀಗೇ ಬಂದವಳು ಗೌರಿ. ಮೂರನೇ ಕ್ಲಾಸು ಓದಿದರೂ ದನಕರುಗಳ ಆರೈಕೆ, ಸಣ್ಣ ಪುಟ್ಟ ಕಾಯಿಲೆಗಳಿಗೆ ಸ್ವಯಂ ವೆಟರ್ನರಿ ಡಾಕ್ಟರು. ಕೆಲವೇ ತಿಂಗಳುಗಳಲ್ಲಿ ಹಳ್ಳಿಗೆ ಗೌರಕ್ಕ ಅಥವಾ ಗೌರಮ್ಮನಾಗಿ ಪ್ರಸಿದ್ಧಳೂ ಆದಳು. ಇವನ ತಿರುಗಾಟದ ಜ್ವರಕ್ಕೆ ತಕ್ಕಮಟ್ಟಿನ ಮದ್ದು ಕೊಡಬಲ್ಲಳೂ ಆದ್ದರಿಂದ ಒಂದೆರಡುವರ್ಷ ಸುಖವಾಗಿದ್ದರು ಎಂಬಲ್ಲಿಗೆ ಕತೆಯ ಪ್ರಾರಂಭ.
ಇದ್ದಕಿದ್ದಂತೇ ರಾಮಣ್ಣ ಬದಲಾಗುತ್ತಾ ಬಂದ. ಮದುವೆಗೂ ಮೊದಲು ಅವನ ವ್ಯಕ್ತಿತ್ವ ಹೀಗೇ ಎಂದು ಸಾಕ್ಷಾತ್ ಅಮ್ಮನಿಗೂ ಊಹಿಸುವುದಕ್ಕಾಗಿರಲಿಲ್ಲ. ಖಂಡಿತ ಕುಡುಕನಾಗುವ ಗುಣಲಕ್ಷಣ ಇರಲಿಲ್ಲ. ಒಮ್ಮೊಮ್ಮೆ ಯಾವುದೋ ಹಬ್ಬಕ್ಕೆ ಮದುವೆಗೆ ಸ್ವಲ್ಪ ಕುಡಿಯುತ್ತಿದ್ದುದು ನೀರು ಕುಡಿದಷ್ಟೇ ಸಣ್ಣ ವಿಷಯ. ಆದರೆ ದಿನಾ ಕುಡಿಯುವುದನ್ನ ಯಾಕೆ ಎಂದು ಪತ್ತೆ ಹಚ್ಚುವುದು ಸಾಧ್ಯವಾಗಲಿಲ್ಲ. ಇದು ಪ್ರಕೋಪಕ್ಕೆ ತಿರುಗತೊಡಗಿದ್ದು ಸ್ಪಷ್ಟವಾದಂತೆ ಗೌರಿ ಕಾರಣಗಳನ್ನ ಹುಡುಕತೊಡಗಿದಳು. ಮದುವೆಯಾಗಿ ಮೂರುವರ್ಷ ಸಮೀಪಿಸಿದರೂ ತಾನು ತಾಯಿಯಾಗದೇ ಇರುವ ಬಗೆಯನ್ನು ರಾಮಣ್ಣನ ಮೇಲೆ ಆರೋಪಿಸಿದ್ದಳು. ಇದು ರಾಮಣ್ಣನಿಗೆ ಅಷ್ಟು ಸುಲಭವಾಗಿ ಒಗ್ಗದೇ ಹೋಯಿತು. ರಾಮಣ್ಣನ ಅಮ್ಮ ಮೂಕ ಪ್ರೇಕ್ಷಕಿಯಾದಳು.
ಮುಂದಿನ ದಿನಗಳನ್ನ ಮನೆಯ ಮಾಡೂ ನಿರೀಕ್ಷಿಸಿರಲಿಲ್ಲ. ಎಲ್ಲವೂ ಜಟಿಲವಾಗುತ್ತಾ ಬಂತು. ಹೇಗೋ ರಾಮಣ್ಣ ಕುಡಿದು ಕುಪ್ಪಳಿಸಿ ಹನ್ನೆರಡು ಘಂಟೆಗೆ ಮನೆಯ ಅಂದಾಜಿನ ಮೇಲೆ ಬರುತ್ತಿದ್ದ. ನಂತರ ಮನೆಯಲ್ಲಿ ಮಹಾಯುದ್ಧವು ಪ್ರಾರಂಭವಾಗಿ ಬೈಗುಳ ಸಣ್ಣಪುಟ್ಟ ಹೊಡೆತದೊಂದಿಗೆ ಮುಕ್ತಾಯವಾಗುತ್ತಿತ್ತು. ದಿನವೂ ಇದನ್ನ ಸಹಿಸಿಕೊಂಡು ಅದು ಹೇಗೋ ಗೌರಮ್ಮ ಸುಮ್ಮನಿದ್ದಳು.ಒಂದು ದಿನ ಮಾತ್ರ ತುಂಬಾ ರೋಸಿಹೋಗಿ, ಅದೇನು ನಿಮ್ಮ ತಾಕತ್ತು ಕುಡಿದ ಮೇಲೆ? ಮಕ್ಕಳನ್ನು ಕೊಡುವ ತಾಕತ್ತಿಲ್ಲದವರು ಬದುಕಿದರೆಷ್ಟು ಸತ್ತರೆಷ್ಟು? ಎಂದಳು.

ಏನಾದರೂ ಸಹಿಸಿಕೊಳ್ಳಬಲ್ಲ ರಾಮಣ್ಣ ತನ್ನ ಕುಡಿತದ ಅತ್ಯಂತ ಹೆಚ್ಚಿನ ಅಮಲಿನಲ್ಲೂ ಈ ಮಾತುಗಳಿಂದ ತುಂಬಾ ಘಾಸಿಗೊಂಡನು. ಇದೇ ಮಾತುಗಳ ಪ್ರಭಾವವೋ ಏನೋ ಮತ್ತೆ ಕೆಲವು ತಿಂಗಳು ರಾಮಣ್ಣನಿಲ್ಲದ ರಾಮಣ್ಣನ ಮನೆ ಬಿಕೋ ಎನ್ನುತ್ತಿತ್ತು.
ಚೆನ್ನಾಗಿದ್ದ ರಾಮಣ್ಣ ಮಂಕಾಗುತ್ತಾ ಹೋದ. ಮಂಕಾಗುತ್ತಿದ್ದವ ಪುನಃ ಪ್ರಕಾಶಮಾನವಾಗತೊಡಗಿದ. ಸುಮಾರು ದೂರದಲ್ಲಿರುವ ಹಳ್ಳಿಯ ವಾಸ್ತವ್ಯವನ್ನು ಗೆಳೆಯರ ಬಳಿ ಹೇಳಿಕೊಂಡ, ಹೇಗೋ ಕೆಲಸ ಮಾಡಿ ಬದುಕಿದ್ದ ರಾಮಣ್ಣ ಪುರುಷಾರ್ಥದ ಸಾಧನೆಗಾಗಿ ಯಾವುದೋ ಎರಡನೇ ಮದುವೆಯನ್ನೂ ಆದ. ಹೊಸಾ ಹೆಂಡತಿ ಗೌರಮ್ಮನಷ್ಟು ಒಳ್ಳೆಯವಳಲ್ಲದಿದ್ದರೂ ತನ್ನ ಪುರುಷಾಭಿಮಾನಕ್ಕೆ ಕಳಶವನ್ನಿಟ್ಟಳು. ತಾನು ಗರ್ಭವತಿ ಎಂದು ಮದುವೆಯಾಗಿ ಮೂರು ತಿಂಗಳಲ್ಲೇ ಸಾರಿದಳು. ಸುಮಾರು ಏಳೆಂಟು ತಿಂಗಳಾಗುವಂತೆಯೇ ಮನೆಯ ನೆನಪಾಗಿ ಪುನಃ ಹಳ್ಳಿಗೆ ಬಂದು ಬಿಕೋ ಎನ್ನುತ್ತಿದ್ದ ಮನೆಯನ್ನು ರಾತ್ರಿ ಹನ್ನೆರಡರವರೆಗೂ ಎಚ್ಚರಿಸಿದ.
ತಾನು ಹೇಗೆ ಗಂಡಸು ಎಂಬುದಕ್ಕೆ ಗೌರಮ್ಮನಿಗೆ ಪುರಾವೆಯಾಗಿ ಇನ್ನೊಂದು ಮದುವೆಯ ಕಥೆಯನ್ನೂ ಹೇಳಿದ. ಇದರಿಂದ ಮನೆಯ ಜಗಳ ಇನ್ನೂ ಹೆಚ್ಚಾಗಿ ಊರಿಗೆಲ್ಲಾ ದೊಡ್ಡ ವಿಷಯವಾಯಿತು. ಜಾಸ್ತಿಯಾದಂತೆ ಊರಿನವರೇ ಸೇರಿ ರಾಮಣ್ಣ, ತಾಯಿ ಮತ್ತೆ ಗೌರಮ್ಮನನ್ನು ಊರಿನ ಶಾಸ್ತ್ರಿಗಳ ಮನೆಗೆ ಕರೆದುಕೊಂಡುಹೋಗಿ, ಎಲ್ಲಾ ವಿಚಾರಗಳನ್ನು ನಿರ್ಣಯಿಸಿ ತೀರ್ಪು ಕೊಡಲಾಯಿತು. ಯಾವುದೇ ಕಾರಣಕ್ಕೂ ರಾಮಣ್ಣ ಹಳ್ಳಿಯನ್ನು ಬಿಟ್ಟು ಹೋಗದಂತೆ, ಯಾವುದೇ ಜಗಳ ಮಾಡದಂತೆ ರಾಮಣ್ಣನನ್ನು ಶಾಸ್ತ್ರಿಗಳೇ ಎಚ್ಚರಿಸಿ ಕಳುಹಿಸಿದ್ದರು. ಒಂದುವೇಳೆ ನಿನ್ನನ್ನು ಹುಡುಕಿ ಯಾರಾದರೂ ಬಂದಲ್ಲಿ ಪುನಃ ಮಾತನಾಡೋಣ ಎಂದು ಕೂಡಾ ಹೇಳಿದ್ದರು.

ಇದೇ ಬರುವ ಶನಿವಾರ ಯಕ್ಷಗಾನ. ಹಳ್ಳಿಯ ಮರ್ಯಾದೆಯನ್ನು ಜಾಸ್ತಿ ಮಾಡುವಂತಹ ವಿಷಯ ಎಂದು ಎಲ್ಲರೂ ಶಕ್ತಿಮೀರಿ ದುಡಿಯತೊಡಗಿದರು. ತಮ್ಮ ತಮ್ಮ ಪಾತ್ರಗಳಿಗೆ ಬೇಕಾದ ವಸ್ತು,ವಿಷಯಗಳ ಸಂಗ್ರಹಣೆಯಲ್ಲಿ. ರಾಮಣ್ಣನಂತೂ ತನ್ನ ದೇಹದ ಚಿಂತೆಯನ್ನೂ ಮರೆತು ಓದುತ್ತಾ ಇದ್ದ ರಾಮಾಯಣವನ್ನು. ನಾಳೆಯ ಪಾತ್ರಕ್ಕಾಗಿ ಕೊನೆಯ ಬಾರಿ ಕಣ್ತುಂಬ ರಾಮಾಯಣದ ರಾಮನನ್ನು ಕಾಣತೊಡಗಿದ ರಾಮಣ್ಣ.
ರಾಮಾಯಣ ಏನಕ್ಕೆ ರಾಮಣ್ಣನನ್ನು ಘಾಸಿಗೊಳಿಸುತ್ತಾ ಸಾಗಿತೋ? ರಾಮನ ಆದರ್ಶಗಳೇನು? ತನ್ನ ಪಾತ್ರವೇನು? ಬರಿಯ ಯಕ್ಷಗಾನದ ಪಾತ್ರಕ್ಕಾಗಿ ರಾಮನ ಮುಖವಾಡವೇ? ಅಲ್ಲ ರಾಮನಂತಹ ಒಂದು ಆದರ್ಶ ಬೇಕೇ? ಈ ಗೌರಮ್ಮ ಇನ್ನೂ ನನ್ನನ್ನು ಕ್ಷಮಿಸುತ್ತಾ ನನ್ನ ಜೊತೆ ಇರುವುದಕ್ಕೆ ಕಾರಣವೇನು? ಎರಡನೇ ಹೆಂಡತಿಯ ಮಗು ನನ್ನ ಹಾಗೇ ಇರಬಹುದೇ? ಇರಬಹುದಾದರೆ ನನ್ನನ್ನು ಹುಡುಕುವ ಪ್ರಯತ್ನ ಅವರು ಮಾಡಿರಬಹುದೇ? ಇದೆಲ್ಲಾ ರಾಮಣ್ಣನ ತಲೆಯಲ್ಲಿ ತುಂಬುತ್ತಾ ಹೋಯಿತು.
ಶನಿವಾರ ಗೌರಮ್ಮ ತನ್ನ ಬೆಳಗ್ಗಿನ ಕೆಲಸಗಳನ್ನೆಲ್ಲಾ ಮುಗಿಸಿ ಕಸಗುಡಿಸುತ್ತಾ ರಾಮಣ್ಣನ ಕೋಣೆಯನ್ನು ಹೊಕ್ಕಿದ್ದೇ ದೊಡ್ಡದಾಗಿ ಕಿರುಚಾಡಿದಳು. ರಾಮಣ್ಣ ಏನಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ವಿಷಯ ಶಾಸ್ತ್ರಿಗಳೂ ಊಹಿಸದೇ ಹೋದರು.
—-0—–
@2012

Leave a Reply

This site uses Akismet to reduce spam. Learn how your comment data is processed.