ಒಂದಾನೊಂದು ಊರಿನಲ್ಲಿ ಸಣ್ಣ ಹಳ್ಳಕ್ಕೆ (ತೋಡು) ಅಡ್ಡಲಾಗಿ ಈಚಲುಮರದ ಸಂಕವೊಂದು(ಸೇತುವೆ) ಇತ್ತು. ಸಂಕದ ಎರಡೂ ಬದಿಗೆ ಮರದ ಗೇಟುಗಳು (ತಡಮ್ಮೆ) ಬಹಳ ಚೆನ್ನಾಗಿ ಹೊಂದಿಕೊಂಡು, ಸಂಕದಲ್ಲಿ ನಡೆಯುವವರು ಮನುಷ್ಯಪ್ರಾಣಿಗಳಾಗಿರಬೇಕು ಎನ್ನುವುದನ್ನು ಸಾರಿ ಹೇಳುತ್ತಿದ್ದವು. ಬರೀ ನಾಲ್ಕೈದು ತಿಂಗಳ ಉಪಯೋಗಕ್ಕಾಗಿ ಬಳಸುವ ಈ ಸಂಕ, ಪ್ರತೀ ವರ್ಷವೂ ಬೇರೆ ಬೇರೆ ಮರಗಳಿಂದ ಅಲಂಕೃತವಾಗುತ್ತಿತ್ತು. ಪೂರ್ವಜನ್ಮದ ಸುಕೃತದ ಫಲವಾಗಿ ಕೆಲವೊಂದು ವರ್ಷ ಒಳ್ಳೇ ಮರಗಳೂ, ಪಾಪದ ಪ್ರಾಯಶ್ಚಿತ್ತಕ್ಕಾಗಿ ಟೊಳ್ಳು ಮರಗಳೂ ಸಂಕವಾಗಿ ಜನರ ಕಾಲಡಿಗೆ ಬೀಳುತ್ತಿತ್ತು
ಆಗಿನ್ನೂ ಮಕ್ಕಳಿಗೆ ಈಜು ಬರುವ ಕಾಲ. ಹಾಗೆಯೇ ನಡೆದಾಡುವಷ್ಟು ಬಲವಾದ ಕಾಲುಗಳಿತ್ತು ಜನರಿಗೆ. ಈಗಿನಂತೆ ಮನೆಯವರೆಗೆ ಬಸ್ಸುಗಳೂ, ಬೈಕುಗಳೂ ಇರದೇ ಇದ್ದುದರಿಂದ, ಶಾಲೆಗೆ ಪೇಟೆಗೆ ನಡೆದುಕೊಂಡು ಹೋಗುವ ಜನರು ಮಳೆಗಾಲದ ಸಮಯದಲ್ಲಿ ಸಣ್ಣ ಹಳ್ಳ, ತೋಡು ದಾಟುವುದಕ್ಕಾಗಿ ಮಾಡಿಕೊಂಡ ಏರ್ಪಾಡು. ಯಾವುದೋ ವಿಷಮಕಾಲದಲ್ಲಿ ಗಡಸುದನವೊಂದು ಕಾಲ್ಸಂಕವೇರಿ ಆಯತಪ್ಪಿ ಬಿದ್ದಮೇಲೆ ಈ ಸಂಕಕ್ಕೆ ಗೇಟೂ ಬಂತು. ವಾರ್ಷಿಕವಾಗಿ ಊರಿನ ಹತ್ತು ಸಮಸ್ತರ ತಂಡ ಸಂಕದ ಮರಗಳನ್ನು ಪರಿಶೀಲಿಸಿ, ಸ್ವಸ್ಥವಲ್ಲದ ಮರಗಳನ್ನು ತೆಗೆದು ಹೊಸದನ್ನು ಸೇರಿಸಿ ಗಟ್ಟಿಗೊಳಿಸುತ್ತಿದ್ದರು.
ಮೇಲಿನಿಂದ ಬೀಳುವ ಮಳೆ ಭಟ್ರ ಹಿತ್ತಲಿಗೂ, ಶೆಟ್ರ ಗದ್ದೆಗೂ, ಸಮಾನವಾಗಿಯೇ ಇರುವುದರಿಂದ, ಊರಿನ ಜನರೆಲ್ಲ ಅನ್ಯೋನ್ಯವಾಗಿಯೇ ಇದ್ದರು. ಕಾಲ್ಸಂಕದ ಉಪಯೋಗ ಮಳೆಗಾಲದಲ್ಲಿ ಮಾತ್ರವೇ ಎಂದಲ್ಲ, ಅನಿವಾರ್ಯವಾಗಿತ್ತು,.
ಚಪ್ಪಲಿಯ ಕತೆ ಕೇಳೋಣ. ಒಂದಾನೊಂದು ಕಾಲಕ್ಕೂ ಈಗಿನ ಕಾಲಕ್ಕೂ ನಡುವಿನ ಅಂತರದಲ್ಲಿ ಈ ಊರಿನಲ್ಲಿ ಒಂದು ಭೀಕರ ಮಳೆಗಾಲವಾಯ್ತು. ಮಳೆಗಾಲದ ವೈಭವ ವರ್ಣಿಸುವುದಕ್ಕೆ ಒಂದು ಘಟನೆ ಸಾಕು. ಆ ದಿನ ಊರಿನ ಹತ್ತು ಸಮಸ್ತರು ಎಂದೆನಿಸಿಕೊಳ್ಳುವ ಜನರೆಲ್ಲ ಸೇರಿ ಕಾರ್ತವೀರ್ಯಾರ್ಜುನ ಯಕ್ಷಗಾನ ಆಯೋಜನೆ ಮಾಡಿದ್ದರು. ಊರಿನ ಮತ್ತು ಅತಿಥಿ ಕಲಾವಿದರಿಂದ ಮೊದಲ್ಗೊಂಡು ಕಿರಿ ಕಲಾವಿದರು, ಕಿರಿಕಿರಿ ಕಲಾವಿದರ ಜೊತೆಗೆ ಆಟ ಶುರುವಾಗಿತ್ತು. ಇನ್ನೇನು ಜಲಕ್ರೀಡೆಯ ಸನ್ನಿವೇಶ ಬರಬೇಕು, ಭಾಗವತರು ಇಪ್ಪತ್ತು ನಿಮಿಷದ ಪದ್ಯವನ್ನು ಆಲಾಪಿಸತೊಡಗಿದರು. ವರುಣನ ಕಿವಿಯೂ ತಂಪಾಗಿ, ಕೆಂಪಾಗಿ ಕುಣಿಯಲಾರಂಬಿಸಿದ ಆಗಸದಿಂದ. ಕಲಾವಿದರು ರಂಗಸ್ಥಳದ ಮೇಲೆಯೇ ಪ್ರಾಮಾಣಿಕವಾಗಿ ಜಲಕ್ರೀಡೆಯಾಡುವಷ್ಟು ನೀರು ತುಂಬಿತ್ತು. ಮಳೆ ಎನ್ನುವುದು ನಮ್ಮ ಭಾರತೀಯತೆಯಂತೆ. ಎಲ್ಲರಿಗೂ ಸಮಾನ ಅವಕಾಶವನ್ನು ಕೊಡುತ್ತದೆ. ಅದಕ್ಕೆ ಜಾತಿಗಳಿಲ್ಲ, ಪ್ರೀತಿಗಳಿಲ್ಲ, ರೀತಿಗಳಿಲ್ಲ. ಸ್ವಯಂ ಸಿದ್ಧವಾದ ರಸಪಾಕವದು. ಸಂಗೀತದಂತೆ, ನೃತ್ಯದಂತೆ, ಹಾಸ್ಯದಂತೆ, ಭಯದಂತೆ ಸರ್ವರನ್ನೂ ಸ್ಪರ್ಷಿಸಿ ಹೋಗುತ್ತದೆ.
ಯಕ್ಷಗಾನಕ್ಕೆ ಅತಿಥಿ ಕಲಾವಿದರನ್ನು ಕರೆತಂದ ವಾಹನ ಮಳೆಯ ನಡುವೆ ಗದ್ದೆಯಲ್ಲಿ ನಿಂತಿತ್ತು. ಡ್ರೈವರ್ ಬೆಳಗ್ಗೆ ಹೊರಡಬೇಕಾದ್ದುದರಿಂದ ಒಳ್ಳೆಯ ಊಟವನ್ನು ಮಾಡಿಸಿ, ಹತ್ತು ಸಮಸ್ತರಲಿ ಒಬ್ಬರ ಮನೆಯಲ್ಲಿ ರಾತ್ರಿಕಳೆಯುವ ವ್ಯವಸ್ಥೆಯಾಗಿತ್ತು. ಯಕ್ಷಗಾನವೆಂದರೇನು? ಭಾಷೆಯೇನು? ಎಂದು ತಿಳಿಯದ ಡ್ರೈವರಿನ ಅಜ್ಞಾನಕ್ಕೆ ನಿದ್ದೆ ಸಾತ್ ನೀಡಿದ್ದರಿಂದ ಗಡದ್ದಾಗಿ ನಿದ್ದೆ ಮಾಡಿದ್ದನಾತ. ಈ ಮರಾಠಿ ಮೂಲದ ಡ್ರೈವರ್ ಜೊತೆಗಿದ್ದ ವಿಶೇಷವೆಂದರೆ ಚರ್ಮದ ಕೊಲ್ಹಾಪುರೀ ಚಪ್ಪಲಿ. ಚರ್ಮದ ಚಪ್ಪಲಿಗೆ ನೀರು ಬೀಳಬಾರದೆಂಬ ಅರಿವು ಇದ್ದರೂ , ಮಳೆಯ ಸುಳಿವಿಲ್ಲದೇ ಇದ್ದುದರಿಂದ ಹೊರಗೆ ಬಿಟ್ಟಿದ್ದ.
ಆ ರಾತ್ರಿಯಿಡೀ ಮಳೆ. ದೂರದ ಹೊಳೆಯಲ್ಲಿ ನೀರು ಹೆಚ್ಚಾಗಿ ಸಣ್ಣ ನದಿಗಳಲ್ಲಿ ಹಿಮ್ಮುಖವಾಗಿ ನೀರು ಬರಲಾರಂಬಿಸಿತು. ಕಿರುಕುಳದ ಕಿರಿಹಳ್ಳಗಳು, ತೋಡುಗಳು ದೊಡ್ಡ ನದಿಗಳನ್ನು ಎದುರಿಸಲಾಗದೇ ಅಸಹಾಯಕತೆಯಿಂದ ನದಿಗಳ ಕಾಲುಗಳಿಗೆ ಬಿದ್ದು ತಿರುಗಿ ಬರುತ್ತಿದ್ದವು. ಮನೆಗಳಿಂದ, ತೋಟಗಳಿಂದ ನೀರು ಬಂದು ಊರೇ ನೀರಾಯಿತು. ಕ್ರಮೇಣ ದೊಡ್ಡ ನದಿಯ ನೀರು ಕಡಿಮೆಯಾದಂತೇ ರಭಸವಾಗಿ ಸಣ್ಣ ತೊರೆಗಳು ಹರಿದು ಊರಿನ ಸಂಕದ ಸಮೇತವಾಗಿ ನದಿಗೆ ಸೇರ್ಪಡೆಯಾಯಿತು.
ಬೆಳಗ್ಗೆ ಎಂದಿನಂತೆ ಜನರೆದ್ದು ಏನೇನು ಹಾನಿಯಾಗಿದೆ ಎಂದು ನೋಡುವುದಕ್ಕೆ ಮುಂದಾದಾಗ ಸಂಕದ ಸುಳಿವೇ ಸಿಗದಂತಾಯ್ತು. ತೋಡಿನ ಎರಡೂ ಬದಿಗೆ ಕೆಸರು. ದಾರಿ ಕಾಣದೇ ಕಂಗಾಲಾದರು ಊರಿನ ಜನರು. ಇಷ್ಟೆಲ್ಲಾ ಪ್ರವಾಹದಲ್ಲಿಯೂ ಸಂಕಕ್ಕೆ ಕಟ್ಟಿದ್ದ ಗೇಟುಗಳು ಸುಸ್ಥಿರವಾಗಿ ನಿಂತಿದ್ದನ್ನು ಕಂಡು ಸಂಕವಿದ್ದ ಜಾಗವು ಗೋಚರವಾಯಿತು. ಜೊತೆಗೇ ಪೂರ್ಣವಾಗಿ ಮಣ್ಣಿನ ಬಣ್ಣದಲ್ಲೇ ಇರುವ ಪಾದರಕ್ಷೆಯೊಂದು ಗೇಟಿನ ಗೂಟಕ್ಕೆ ಬಿಗಿಯಾಗಿ ಸಿಕ್ಕಿಕೊಂಡಿತ್ತು. ಒಂದು ದಿನಕ್ಕೇ ಸ್ವಲ್ಪ ಕೂಳೆತಂತೆ ಇದ್ದರೂ, ಕೊಲ್ಹಾಪುರಿ ಚರ್ಮದ ಚಪ್ಪಲಿ ಎಂದು ಜನರಿಗೆಲ್ಲ ಅರಿವಾಯ್ತು.
ಈಗ ಅದೇ ಜಾಗದಲ್ಲಿ ಮಳೆಗೆ ಬಿದ್ದ, ಮುರಿದ ಕರೆಂಟು ಕಂಬದ ಕಾಲ್ಸೇತುವೆ ಇದೆ. ಇದಕ್ಕೆ ಊರಿನವರು ಅಭಿಮಾನದಿಂದ ಕೊಲ್ಹಾಪುರಿ ಸೇತುವೆ ಎಂದೇ ಕರೆಯುವುದು, ಜನ್ಮದಲ್ಲಿ ಕೊಲ್ಹಾಪುರ ನೋಡದವರ ಭಾಗ್ಯ.
By : Ishwara Bhat K