ಕೌರವ -ಪಾಂಡವರ ವೈರವು ಹೆಚ್ಚಾಯ್ತು. ಆಯುಷ್ಯವಿದ್ದರೆ, ದೇವರು ಕೂಡಾ ಸಂಹಾರ ಮಾಡಲು ಸಾಧ್ಯವಿಲ್ಲ. ಸುಮ್ಮನೆ ಈ ಲೋಕದಜನ ಕೊಲ್ಲಲು ಕಷ್ಟಪಡುವುದು. ಅಂತಹದ್ದರಲ್ಲಿ ದುರ್ಯೋಧನ, ಭೀಮನನ್ನು ಕೊಲ್ಲಿಸಲು ಆಹಾರದ ದಾರಿಯನ್ನು ಹಿಡಿದ. ಆಹಾರದ ಮೂಲಕ ಕೊಲ್ಲುವುದು ಮಹಾಪಾತಕಗಳಲ್ಲಿ ಒಂದು. ಈ ವಿಷಗಳ ಹೆಸರೂ ಕುಮಾರವ್ಯಾಸನದ್ದೇ ಇರಬೇಕು.

ಕಾಳಿಕೂಟ ಹಾಲಹಲವ ಕಾ
ರ್ಕೊಲ ದಾರದ ವತ್ಸನಾಭಿ ಕ
ರಾಳ ಸೌರಾಷ್ಟ್ರಿಕಾವ ಶೌಕ್ಲಿಕ ಸುಪ್ರದೀಪಕವ
ಹೇಳಲರಿದೆನಿಪೆಂಟು ವಿಷವನು
ಮೇಳವಿಸಿ ಬಳಿಕುಳಿದ ಮಧುರ ವಿ
ಶಾಲವಸ್ತುಗಳಿಂದ ಕಜ್ಜಾಯಗಳ ಮಾಡಿಸಿದ

ಕಾಳಿಕೂಟ, ಹಾಲಹಲ, ಕಾರ್ಕೊಲ, ದಾರದ, ವತ್ಸನಾಭಿ, ಕರಾಳ, ಸೌರಾಷ್ಟ್ರಿಕಾವ, ಶೌಕ್ಲಿಕ, ಸುಪ್ರದೀಪಕ ಎನ್ನುವ ಹೇಳಲೂ ಸಾಧ್ಯವಿಲ್ಲದ ಎಂಟು ವಿಷಗಳಿಂದ ಮಧುರವಾದ ಕಜ್ಜಾಯಗಳನ್ನು ದುರ್ಯೋಧನ ಮಾಡಿಸಿದ.

ದಿಟ್ಟಿಸಿದರೆವೆ ಸೀವುದಂಗೈ
ಮುಟ್ಟಿದರೆ ಹುಗುಳಹುದು ಬಳಿಕವ
ನಟ್ಟ ಕೈಕರಣದ ಸುವಾರದ ವಿದ್ಯವೇನರಿದೊ
ಕೊಟ್ಟರೀತಂಗೆಲ್ಲವನು ಜಗ
ಜಟ್ಟಿ ಹಾಯಿಕಿ ಕೊಂಡು ನುಣ್ಣನೆ
ಚಿಟ್ಟು ಮುರಿಯಾಟದಲಿ ಸದೆದನು ಮತ್ತೆ ಕೌರವರ

ಆ ವಿಷವನ್ನು ದಿಟ್ಟಿಸಿದರೆ ಕಣ್ಣಿನ ರೆಪ್ಪೆಯು ಸುಡುವಂತಹದ್ದು, ಮುಟ್ಟಿದರೆ ಅಂಗೈ ಗುಳ್ಳೆ ಬರುವುದು, ಬಳಿಕ ಅವನ್ನು ಬೇಯಿಸಿದ ಕೈಚಳಕ, ವಿದ್ಯೆ ಎಷ್ಟು ಜಾಣತನದ್ದಾಗಿರಬೇಕು. ಅವೆಲ್ಲವನ್ನೂ ಭೀಮನಿಗೆ ಕೊಟ್ಟರು. ಜಗಜಟ್ಟಿ ಭೀಮ ಅದೆಲ್ಲವನ್ನೂ ತಿಂದು, ಚಿಟ್ಟು ಮುರಿಯಾಟದಲ್ಲಿ ಮತ್ತೆ ಕೌರವರನ್ನು ಚೆನ್ನಾಗಿ ಸದೆಬಡಿದನು.

ಮಕ್ಕಳಿಗೆ ಶಸ್ತ್ರಾಭ್ಯಾಸವನ್ನು ಕಲಿಸವುದಕ್ಕೋಸ್ಕರ ಭೀಷ್ಮ ಒಳ್ಳೆಯ ಗುರುವನ್ನು ಅರಸುತ್ತಿದ್ದ. ಆಗ ದ್ರೋಣನೂ ( ದ್ರೋಣ ಎಂಬ ಕಲಶದಿಂದ ಹುಟ್ಟಿದುದರಿಂದ ಆ ಹೆಸರಾಯಿತು. ಮುನಿ ಭರದ್ವಾಜ ಮತ್ತು ಘೃತಾಜಿ (ದೇವಕನ್ಯೆ)ಗೆ ಹುಟ್ಟಿದವನು. ಭರದ್ವಾಜನ ದೇಹದಿಂದ ಹೊರಬಿದ್ದ ವೀರ್ಯವನ್ನು ಕಲಶದಲ್ಲಿಟ್ಟು, ಅದರಿಂದ ಹುಟ್ಟಿದವನು ದ್ರೋಣ)

ಎಲ್ಲಾ ವಿದ್ಯೆಗಳನ್ನು ಮಗನಾದ ದ್ರೋಣನಿಗೆ ಧಾರೆಯೆರೆದು, ನಂತರ ಕೃಪಾಚಾರ್ಯನ ತಂಗಿಯನ್ನು ತಂದು ಮದುವೆಯನ್ನು ಮಾಡಿದನು. ಆಶ್ರಮದಲ್ಲಿ ಸಹಪಾಠಿಯಾಗಿ ದ್ರುಪದನೂ ದ್ರೋಣನ ಜೊತೆಗಿದ್ದನು.

ಮುಂದೆ, ಭರದ್ವಾಜನ ಕಾಲಾನಂತರ, ಆರ್ಥಿಕ ಪರಿಸ್ಥಿತಿಯು ವಿಷಮವಾದ್ದರಿಂದ ದ್ರೋಣನು ದ್ರುಪದ ರಾಜನ ಬಳಿಗೆ ಯಾಚನೆಗೆ ಹೋದನು. ಆದರೆ ದ್ರುಪದನು ಕಸಕ್ಕಿಂತ ಕೀಳಾಗಿ ದ್ರೋಣನನ್ನು ಕಾಣಲು, ದ್ರೋಣ ಸಿಡಿದೆದ್ದು ಎಲಾ, ನಿನ್ನ ಆಸ್ಥಾನ ಸಹಿತವಾಗಿ ಈ ನಗರವನ್ನು ಸುಡಬಲ್ಲೆ; ನಿನ್ನನ್ನು ಸಿಗಿದು ಭೂತಗಣಕ್ಕೆ ಬಲಿಯ ಕೊಡಬಲ್ಲೆ, ನೀನು ನನಗೆ ಧನುರ್ವಿದ್ಯೆಯಲ್ಲಿ ಸರಿಸಾಟಿಯಲ್ಲ. ಧನುರ್ವಿದ್ಯೆಯನ್ನು ಕಲಿತ ಧನುರ್ಧರ ಮಕ್ಕಳನ್ನು ಇಲ್ಲಿಗೆ ಕಳುಹಿಸಿ ನಿನ್ನನ್ನು ಕಟ್ಟಿಹಾಕಿಸಿ ಎಡಗಾಲಿನಿಂದ ನಿನ್ನ ತಲೆಯನ್ನು ಒದೆಯುತ್ತೇನೆ. ನೀನು ಈ ಶಪಥವನ್ನು ಮರೆಯಬೇಡ ಎಂದನು.

ಮರಳಿ ಹಸ್ತಿನಾವತಿಗೆ ಬರುತ್ತಿರುವಾಗ ಕೌರವ ಪಾಂಡವರು ಬಿಲ್ಲು ಬಾಣಗಳನ್ನು ಹಿಡಿದು ಆಟವಾಡುವುದನ್ನು ನೋಡಿ ಸಂತಸಪಟ್ಟನು. ಹಾಗೇ ಗುಂಪನ್ನು ನೋಡುವಾಗ

ಬೆರಸಿದನು ನೆರವಿಯನು ನೋಡು
ತ್ತಿರೆ ಯುಧಿಷ್ಠಿರನೃಪನ ಹರಳುಂ
ಗುರ ವಿಘಾತಿಯೊಳುಗಿದು ಬಿದ್ದುದಗಾಧ ಕೂಪದಲಿ
ನೆರೆದು ತಡಿಯಲಿ ನಿಂದು ನೂರರು
ವರು ನಿರೀಕ್ಷಿಸಿ ಸಾಧ್ಯವಲ್ಲೆನು
ತಿರೆ ಮಗಂಗೆ ಮುನೀಂದ್ರನೆಂದನು ಬೇಗ ತೆಗೆಯೆಂದು

ಯುಧಿಷ್ಠಿರ ರಾಜಕುಮಾರನ ಹರಳು ಉಂಗುರವು ಹೊಡೆತದಲ್ಲಿ ಬೆರಳಿಂದ ಕಳಚಿ, ಆಳವಾದ ಬಾವಿಯಲ್ಲಿ ಬಿದ್ದಿತು. ಎಲ್ಲರೂ ನೂರು ಮತ್ತು ಅವರು ಐವರು,ಒಟ್ಟಾಗಿ ಬಾವಿಯ ದಡದಲ್ಲಿ ನಿಂತು ನೋಡಿ, ಅದನ್ನು ತೆಗೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿರುವಾಗ,ದ್ರೋಣನು ಮಗನಿಗೆ ಬೇಗ ತೆಗೆ ಎಂದನು. ಮಗ ಅಶ್ವತ್ಥಾಮನು ಬಿಲ್ಲಿನಲ್ಲಿ ಬಾಣವನ್ನು ಹೂಡಿ, ವಜ್ರದ ಮಣಿಯನ್ನು ಜೋಡಿಸಿದ ಉಂಗುರಕ್ಕೆ ಬಾಣದಿಂದ ಹೊಡೆದು, ನಂತರ ಬಾಣದ ಹಿಡಿಕೆಯ ತುದಿಗೆ ಬಾಣವು ಒಂದಕ್ಕೊಂದು ಸೇರವಂತೆ, ಬಾಣದ ಹಿಡಿಕೆಯ ಸಂಧಿಯಲ್ಲಿ ನಿಮಿಷ ನಿಮಿಷದಲ್ಲಿ ಹಾವಿನ ಹೆಡೆಮಣಿಯನ್ನು ಒಂದನ್ನೊಂದು ಕಾಪಾಡಲು ಕಚ್ಚಿದಂತೆ ಇರುವಂತೆ ಇರಲು ಆ ರತ್ನದ ಮುದ್ರಿಕೆಯನ್ನು ಬಾಣದ ಜೋಡಣೆಯ ಮೂಲಕ ಎಳೆದು ತೆಗೆದು ಮಕ್ಕಳಿಗೆ ಕೊಟ್ಟನು.

ಈ ಕತೆಯನ್ನು ಕೇಳಿದ ಭೀಷ್ಮ, ಮಕ್ಕಳಿಗೆ ಗುರುವನ್ನಾಗಿ ದ್ರೋಣನನ್ನು ಆಯ್ದುಕೊಂಡ.

ಕುಂತಿಯ ಮೊದಲ ಮಗ ಕರ್ಣನು ಗಂಗೆಯಲ್ಲಿ ಸಾಗಿ, ರಾಧೇಯನ ಕೈಗೆ ಸಿಕ್ಕು ತದನಂತರ ಕೌರವರ ಬಳಗವನ್ನು ಸೇರಿಕೊಂಡ. ಇಲ್ಲಿಯೂ ಕರ್ಣ ದುರ್ಯೋಧನನ ಜೊತೆಗೇ. ಇದನ್ನು ಕುಮಾರವ್ಯಾಸ ಬಹಳ ಚೆನ್ನಾಗಿ ಬರೆದಿದ್ದಾನೆ.

ಬೇಟೆ ಕರ್ಣನ ಕೂಡೆ ಹಗಲಿರು
ಳಾಟ ಕರ್ಣನ ಕೂಡೆ ಷಡು ರಸ
ದೂಟ ಕರ್ಣನ ಕೂಡೆ ಶಾಸ್ತ್ರಾಭ್ಯಾಸವವ ಕೂಡೆ
ತೋಟಿ ಮನದಲಿ ನಗೆಯ ಮಧುರದ
ನೋಟ ಕಣ್ಣಿನೊಳುಳಿದವರ ಕೂ
ಡಾಟಗಳು ತಾವಿಬ್ಬರೊಂದೆನಿಸಿದರು ಜಗವರಿಯೆ

ದುರ್ಯೋದನ ಮತ್ತು ಕರ್ಣನ ಸ್ನೇಹ ಹೇಗಿತ್ತೆಂದರೆ- ಬೇಟೆ ಕರ್ಣನ ಕೂಡೆ, ಹಗಲಿರುಳು ಆಟ ಕರ್ಣನ ಕೂಡೆ, ಷಡ್ರಸದ ಊಟ ಕರ್ಣನ ಕೂಡೆ, ಶಾಸ್ತ್ರಾಭ್ಯಾಸವೂ ಅವನ ಕೂಡೆ, ಕಣ್ಣಿನಲ್ಲಿ ಪರಸ್ಪರ ನಗೆಯ ಮಧುರದ ನೋಟ, ಉಳಿದವರ ಕೂಡೆ ಆಟಗಳಲ್ಲಿ ತಾವಿಬ್ಬರೂ ಒಂದೆನಿಸಿ ಆಡಿದರು.

ಕುಮಾರವ್ಯಾಸನು ಕೆಲವು ಯುದ್ಧದ ಆಯುಧಗಳ ಪಟ್ಟಿಯನ್ನು ಈ ಸಂಧಿಯಲ್ಲೇ ಕೊಟ್ಟಿದ್ದಾನೆ.

ಸುರಗಿ ಸಬಳ ಕಠಾರಿಯುಬ್ಬಣ
ಹರಿಗೆ ಹಿರಿಯುಬ್ಬಣವಡಾಯುಧ
ಪರಿಘ ಚಕ್ರ ಮುಸುಂಡಿ ತೋಮರ ಭಿಂಡಿವಾಳ ಚಯ
ಪರಶು ಕಕ್ಕಡೆ ಮುಸಲ ಹಲ ಮು
ದ್ಗರ ಧನುರ್ದಂಡಾದಿ ಶಾಸ್ತ್ರೋ
ತ್ಕರದಲನಿಬರು ಕುಶಲರಾದರು ಮುನಿಯ ಗರುಡಿಯಲಿ

(ಸುರಗಿ, ಸಬಳ, ಕಠಾರಿಯುಬ್ಬಣ, ಹರಿಗೆ= ಗುರಾಣಿ, ಹಿರಿಯುಬ್ಬಣ, ಅಡಾಯುಧ, ಪರಿಘ, ಚಕ್ರ, ಮುಸುಂಡಿ, ತೋಮರ, ಭಿಂಡಿವಾಳ, ಚಯ, ಪರಶು, ಕಕ್ಕಡೆ, ಮುಸಲ, ಹಲ, ಮುದ್ಗರ, ಧನುರ್ದಂಡ ಇತ್ಯಾದಿ ಶಸ್ತ್ರಗಳಲ್ಲಿ)

ಭೀಮ – ದುರ್ಯೋಧನರು ಗದಾಯುದ್ಧದಲ್ಲಿಯೂ, ಅರ್ಜುನ-ಕರ್ಣರು ಬಿಲ್ವಿದ್ಯೆಯಲ್ಲಿರೂ ಪ್ರವೀಣರಾದರು. ಅದರಲ್ಲೂ ದ್ರೋಣನ ಮನಕೆ ಹತ್ತಿರನಾದವನು ಅರ್ಜುನ.

Leave a Reply

This site uses Akismet to reduce spam. Learn how your comment data is processed.