ಕನ್ನಡದ, ಅಷ್ಟೇಕೆ ಜಗತ್ತಿನ ಮಹಾಕವಿಯಾದ ಕುಮಾರವ್ಯಾಸನ ಬಗೆಗೆ ಕನ್ನಡನಾಡಿನವರಿಗೆ ಹೆಮ್ಮೆ ಸಹಜವಾಗಿಯೇ ಇರಬೇಕು. ಮಹಾಕವಿ ನಮ್ಮವನು, ಅವನ ಕಾವ್ಯವನ್ನು ಈಗಲೂ ಚಪ್ಪರಿಸಿ ಓದುವ ಸೌಭಾಗ್ಯ ನಮಗಿದೆ ಎನ್ನುವುದು ನಮ್ಮ ಬಹಳ ದೊಡ್ಡ ಅಹಂಕಾರ ಕೂಡಾ ಹೌದು.

ಎಂದಿಗೂ ಬಳಕೆಯಾಗುವಂತಹ ನುಡಿಗಟ್ಟುಗಳು, ಉದಾಹರಣೆಗಳು, ಸಂಭಾಷಣೆಗಳು ಕುಮಾರವ್ಯಾಸನಿಂದ ಬಂದವುಗಳು. ಇಡೀ ಕಾವ್ಯದಲ್ಲಿ ಸಾವಿರಾರು ಗುರುತಿಸಲ್ಪಡುವ ಸಾಲುಗಳು ಇದ್ದು, ಅವಷ್ಟೂ ಕಾವ್ಯದಲ್ಲೇ ಕಾವ್ಯವಾಗಿ ಇರುವಂತಹದ್ದು ವಿಶೇಷ.

ಕುಮಾರವ್ಯಾಸನ ನುಡಿ/ಕಾವ್ಯ/ವಿಮರ್ಷೆ/ಕೀರ್ತಿ/ಅಲಂಕಾರಗಳು ಇತ್ಯಾದಿ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಬಹಳಷ್ಟು ಬಂದಿದೆ. ಈ ಬರಹಗಳಲ್ಲಿ ನಾನು ನನ್ನ ಓದಿಗೆ ದಕ್ಕಿದ ಕೆಲವೊಂದು ಮಾತುಗಳನ್ನು, ಕಥಾಭಾಗಗಳನ್ನು ಪೋಣಿಸುತ್ತೇನೆ.

ಹಳೆಗನ್ನಡದಷ್ಟು ಕ್ಲಿಷ್ಟವಲ್ಲದ, ಹೊಸಗನ್ನಡದಷ್ಟು ಭ್ರಷ್ಟವಲ್ಲದ ಕುಮಾರವ್ಯಾಸನ ಕನ್ನಡ ಒಂದು ಓದಿಗೆ ತಿಳಿಯಾಗುವಂತಹದ್ದು. ಅದರಲ್ಲೂ ದೊಡ್ಡದಾಗಿ ಓದಿದಲ್ಲಿ ಭಾಮಿನಿಯ ಓಘ ಸಿದ್ದಿಸಿದರೆ ಕಂಡಿತವಾಗಿ ಕುಮಾರವ್ಯಾಸ ಸುಲಭಸಾಧ್ಯ. ಕೆಲವೊಂದು ತಾರ್ಕಿಕವಾದ / ಪುರಾಣಕ್ಕೆ ಸಂಬಂಧಿಸಿದ ಶಬ್ಧಗಳು ಅರ್ಥವಾಗದೇ ಹೋದರೂ ಪೂರ್ಣವಾದ ಆನಂದ ಸಿಕ್ಕೇ ಸಿಗುತ್ತದೆ. ಪಾಯಸದಲ್ಲಿ ಏಲಕ್ಕಿ ಸಿಕ್ಕರೇನು ಮಾಡೋಣ ಹೇಳಿ!

ಬರೆಯುವ ಕಥಾಭಾಗ / ಸನ್ನಿವೇಷಗಳು ಅನುಕ್ರಮವಾಗಿರುವುದಿಲ್ಲ.
—-
(ಆದಿಪರ್ವ – ಆರನೆಯ ಸಂಧಿ)
ಈ ಸಂಧಿಯಲ್ಲಿ ಭೀಮ-ದುರ್ಯೋಧನರ ವೈರತ್ವ ಹೆಚ್ಚಿದ ಬಗೆಗೆ ವಿವರಣೆಯಿದೆ. ಈ ಭಾಗವನ್ನು ಬಹಳ ರಮ್ಯವಾಗಿ ನಿರ್ವಾಹ ಮಾಡಿದ್ದಾನೆ ಕುಮಾರವ್ಯಾಸ. ತನ್ನ ಕಾಲದ ಪ್ರಚಲಿತ ಮಕ್ಕಳಾಟಗಳ ಪಟ್ಟಿಯನ್ನೇ ಇಲ್ಲಿ ಕೊಟ್ಟಿದ್ದಾನೆ.

ಕೇಳು ಜನಮೇಜಯ ಮಹೀಪತಿ
ಬಾಲಕರು ನೂರಾರು ಮೆರೆದರು
ಬಾಲಕೇಳೀವ್ಯಸನಿಗಳು ಹೊರ ವಳಯದಲಿ ಪುರದ
ಆಳಿನೇರಿಕೆ ಹಿಡಿಗವಡೆ ಗುರಿ
ಯಾಳು ಚೆಂಡಿನ ಹೊಣಕೆ ಚಿಣಿ ಕೋ
ಲಾಳು ಗೊತ್ತಿನ ದಂಡೆಯನೆ ನಾನಾ ವಿನೋದದಲಿ


ಗುಡುಗು ಗುತ್ತಿನಚೆಂಡು ಗುಮ್ಮನ
ಬಡಿವ ಕತ್ತಲೆ ಗುದ್ದುಗಂಬದ
ಗಡಣಿ ಕಣ್ಮುಚ್ಚಸಗವರಿ ಹರಿಹಲಗೆ ನಿಡುಗವಣಿ
ಕೆಡಹು ಕುಟ್ಟಿಗ
ನಾದಿಯಾದವ
ಗಡ ವಿನೋದದಲಾಡಿದರು ಪಂ
ಗಡದಲೈವರು ನೂರ್ವರಿವರಿತ್ತಂಡವೊಂದಾಗಿ

ಆಳಿನೇರಿಕೆ (ಉಪ್ಪುಮೂಟೆ? ಪಿರಮಿಡ್ಡ್?), ಹಿಡಿಗವಡೆ, ಗುರಿಯಾಳು ಚೆಂಡಿನ ಹೊಡೆತ, ಚಿಣಿ ಕೋಲಾಳು, ಗೊತ್ತಿನ ದಂಡೆ, ಗುಡುಗು ಗುತ್ತಿನ ಚೆಂಡು, ಗುಮ್ಮನ ಬಡಿವ ಕತ್ತಲೆ ಗುದ್ದು, ಕಂಬದ ಗಡಣೆ (ಕಂಬದಾಟ?), ಹರಿಹಲಗೆ, ನಿಡುಗವಣೆ ಹೀಗೆ ನಾನಾ ಕ್ರೀಡೆಗಳನ್ನು ಹೆಸರಿಸುತ್ತಾನೆ ಕುಮಾರವ್ಯಾಸ. ಹೆಚ್ಚಿನ ಆಟಗಳು ಈಗ ಪ್ರಚಲಿತದಲ್ಲಿಲ್ಲ, ಬಹುಷಃ ಕುಮಾರವ್ಯಾಸನ ಕಾಲದಲ್ಲಿತ್ತೇನೋ!

ಮುಖ್ಯವಾಗಿ, ಇಲ್ಲಿ ವಿನೋದದಲ್ಲಾದರೂ “ಪಂಗಡದಲ್ಲಿ ಐವರು ಒಂದು ತಂಡವಾಗಿ, ನೂರ್ವರು ಇನ್ನೊಂದು ತಂಡವಾಗಿ” ಆಡುತ್ತಿದ್ದರು ಎನ್ನುವಾಗ ಪಾಂಡವ ಕೌರವರ ಮಧ್ಯದ ಬಿರುಕು ಗೋಚರಿಸುತ್ತದೆ.

ಈ ಸಂಧಿಯಲ್ಲಿ ಭೀಮನ ಚಿತ್ರಣ ಸೊಗಸಾಗಿ ಬರುತ್ತದೆ. ಭೀಮನು ಅನಿಬರ ಸದೆವ, ತಾ ಸೋತರೆ ವಿಭಾಡಿಸಿ ಕೆದರುವನು, ಗೆದ್ದೋಡಿದರೆ ಬೆಂಬತ್ತಿ ಹಿಡಿದೆಳೆದು ಬಡಿಯುತ್ತಿದ್ದನಂತೆ.

ಆಟದಲ್ಲಿ/ ಜಗಳದಲ್ಲಿ ಅಪ್ಪಾ, ಭೀಮ ನಮ್ಮ ಹಲ್ಲು ಮುರಿದ, ಕಾಲು ಮುರಿದ ಎಂದು ಎಂದು ದುರ್ಯೋಧನಾದಿಗಳು ಧೃತರಾಷ್ಟ್ರನಿಗೆ ದೂರುವ ಮೊದಲು, ಭೀಮನು ಮುಳ್ಳಿನಲ್ಲಿ ಗೀರಿಕೊಂಡು, ಧೂಳಿನಲ್ಲಿ ಹೊರಳಿಕೊಂಡು ಬಂದು ಅಳುತ್ತಾ ನಿಂತಿರುವ.

ಇಂತಹಾ ಸಂದರ್ಭಗಳಲ್ಲಿ ಅವರೆಲ್ಲ ಬೇರೆ, ನೀವು ಬೇರೆ ಎಂದು ವಿಂಗಡಿಸಿದರಾದರೂ ಮರುದಿನಗಳಲ್ಲಿ ಮತ್ತೆ ಆಟಕೂಟಗಳಲ್ಲಿ ಒಂದಾಗಿ ತೊಡಗಿಸಿಕೊಳ್ಳುತ್ತಿದ್ದರು.

ಒಂದು ದಿನ ನೂರಾರು ಮಾನಿಸ
ರೊಂದು ಗೆಳೆಯಲಿ ಪುರದ ಹೊರಗಿಹು
ದೊಂದು ಠಾವು ಪ್ರಮಾಣ ವೃಕ್ಷವ ಕಂಡು ನಡೆತರಲು
ಬಂದು ನಿಂದರು ಕೋಲ ಬಿಸುಟೀ
ವೃಂದ ಹತ್ತಿತ್ತು ಮರನನಿವನೈ
ತಂದು ತಂದೆಡೆಯಾಡಿ ಬಳಲಿದು ನೋಡಿದನು ಭೀಮ

ಮರನ ಹಿಡಿದಲುಗಿದರೆ ಬಿದ್ದರು
ಭರತಕುಲಪಾಲಕರು ನೂರೈ
ವರು ಮಹಾವಾತದಲಿ ತರುಫಲನಿಕರ ಬೀಳ್ವಂತೆ
ಶಿರವೊಡೆದು ಬೆನ್ನೊಡೆದು ಮೊಳಕಾ
ಲ್ಜರಿದು ಕೈಗಳು ಮುರಿದು ನೆತ್ತರು
ಸುರಿದು ಧೃತರಾಷ್ಟ್ರಂಗೆ ದೂರಿದರನಿಬರೀ ಹದನ

ದುರುಳನವನೊಡನಾಡ ಬೇಡೆಂ
ದರಸನನಿಬರ ಸಂತವಿಟ್ಟನು
ಹರಿದು ಹೆಚ್ಚಿತು ಭೀಮ ದುರ್ಯೋಧನರಿಗತಿ ವೈರ.

ಒಂದು ದಿನ ಊರ ಹೊರಗಿನ ಮರದ ಬಳಿ ಬಂದು ಬಾಲಕರೆಲ್ಲ ತಮ್ಮ ಆಟಿಕೆಗಳನ್ನು (ಕೋಲುಗಳನ್ನು) ಬಿಸುಟು ಮರವನ್ನೇರಿ ಆಟವಾಡುತ್ತಿದ್ದರೆ, ಭೀಮನು ಇವರನ್ನು ಹುಡುಕಿ ಸುಸ್ತಾಗಿ ಮರದ ಬಳಿ ಬಂದ. ನೋಡಿದಾಗ ಎಲ್ಲರೂ ಮರದ ಮೇಲಿದ್ದಾರೆ.

ಮರವನ್ನು ಹಿಡಿದು ಆಡಿಸಿಯೇ ಬಿಟ್ಟ ಭೀಮ. ಬಿರುಗಾಳಿಗೆ ಮರದಿಂದ ಹಣ್ಣಿನ ರಾಶಿಯೇ ಬಿದ್ದಂತೆ ಭರತಕುಲಪಾಲಕರು ಉದುರಿದರು ಮೇಲಿಂದ. ಗಾಯಗಳಿಂದ ನೋವಿನಲ್ಲಿ ಹೋಗಿ ಧೃತರಾಷ್ಟ್ರನಲ್ಲಿ ದೂರಿಟ್ಟರು ಈ ಬಗೆಗೆ.

ಆತ (ಭೀಮ) ದುರುಳನು, ಆತನೊಡನೆ ಸೇರಬೇಡಿ ಎಂದನು!. ಇವುಗಳೆಲ್ಲದರಿಂದ ಭೀಮ-ದುರ್ಯೋಧನರ ನಡುವೆ ಹೆಚ್ಚಿತು ವೈರ.

Photo – Google

Leave a Reply

This site uses Akismet to reduce spam. Learn how your comment data is processed.