ಸುಮಾರು ಒಂದು ಇಪ್ಪತ್ತರಿಂದ ಇಪ್ಪತ್ತೈದು ವರ್ಷಗಳ ಹಿಂದಕ್ಕೆ ತಿರುಗಿ ನೋಡಿದರೆ, ಜನಸಾಮಾನ್ಯರಾದ ನಾವು ಹಾಗೂ ನಮ್ಮ ಜೀವನ ಏನೋ ಒಂಥರ ನಿರಮ್ಮಳವಾಗಿತ್ತು. ಎಲ್ಲವೂ ಸಲೀಸು, ಆರಾಮ, ನಿರಾಯಾಸ, ಆರೋಗ್ಯಕರ, ಭದ್ರತೆ ,ವಿಶಾಲ ಮನೋಭಾವ… ಹೀಗೆ ಅದನ್ನ ವರ್ಣಿಸೋ ಪದಗಳೇ ಎಷ್ಟು ಹಿತವಾಗಿವೆ ನೋಡಿ !
ಬಂದಿದ್ದೆಲ್ಲವನ್ನೂ ಸಮಾನತೆಯಿಂದ ಆಲಂಗಿಸುವ ಪ್ರಬುದ್ಧತೆ ಆ ದಿನಗಳಲ್ಲಿ ಜನರಿಗೆ ತುಸು ಹೆಚ್ಚೇ ಇತ್ತು.


ಆಗೆಲ್ಲ ಹಣಬಲಕಿಂತಲೂ ಜನಬಲ ಹೆಚ್ಚಿತ್ತು. ಆದ ಕಾರಣ ಜನರ ಮನೋಬಲಕ್ಕೇನು ಕೊರತೆ ಇರಲಿಲ್ಲ. ಒಂದು ಅವಿಭಕ್ತ ಕುಟುಂಬದಲ್ಲಿ ಗಳಿಸುವವರು ಒಬ್ಬರೋ ಇಬ್ಬರೋ ಇದ್ದರೂ ಎಲ್ಲರ ಬೇಡಿಕೆಗಳೂ ಪೂರೈಕೆಗೊಳ್ಳುತ್ತಿದ್ದವು. ಹೊರ ದುಡಿದು ಗಳಿಸುವವರಿಂದ ಹಿಡಿದು ಮನೆಯಲ್ಲಿದ್ದ ಅಷ್ಟೂ ಜನರಿಗೆ ಹೊತ್ತು ಹೊತ್ತಿಗೆ ತರಹೇವಾರು ಅಡುಗೆ ತಿಂಡಿ ತಿನಿಸು ಇತ್ಯಾದಿಗಳನ್ನು ಮಾಡಿ ಬಡಿಸಿ, ಖುಷಿಯಿಂದ ಎಲ್ಲರೂ ತಿಂದು ತೇಗಿದಾಗ, ಅಂತಹ ಮನೆಗಳಲ್ಲಿನ ಹೆಣ್ಣುಮಕ್ಕಳ ಮನಸ್ಸಿನ್ನಲ್ಲಾಗುವ ಸಮಾಧಾನ ಹಾಗೂ ಸಾರ್ಥಕತೆಯ ಭಾವವೂ ನಮ್ಮ ಹಿಂದಿನ ಜನರ ಹೃದಯವಂತಿಕೆಗೆ ಕೈಗನ್ನಡಿ ಎನ್ನಬಹುದು.


ಅವಿಭಕ್ತ ಕುಟುಂಬದಲ್ಲಿ ಮಕ್ಕಳನ್ನು ಬೆಳೆಸುವುದು ಕೇವಲ ಹಡೆದ ತಂದೆ ತಾಯಿಗೆ ಮಾತ್ರವೇ ಸೀಮಿತವಾದ ಜವಾಬ್ದಾರಿ ಆಗಿರಲಿಲ್ಲ. ಮನೆಯ ಹಿರಿ ತಲೆಯಿಂದ ಹಿಡಿದು ಎಲ್ಲರೂ ಅವರವರ ಪಾಲಿನ ಕೆಲಸ ಕಾರ್ಯಗಳನ್ನು ತಮ್ಮ ಪರಮ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ಭಾವಿಸಿ ಪ್ರೀತಿ ಪೂರ್ವಕವಾಗಿ ನಿಭಾಯಿಸುತ್ತಿದ್ದರು.
ಕೂಡು ಕುಟುಂಬದ ವಾತಾವರಣದಲ್ಲಿ ಬೆಳೆದ ಮಕ್ಕಳಲ್ಲಿಯೂ ಸಹ ಒಂದು ವಿಶೇಷ ತರನಾದ ಆತ್ಮಸ್ಥೈರ್ಯ, ತಾಕತ್ತು ಇರುತ್ತಿತ್ತು ಹಾಗೂ ಸಂದರ್ಭಿಕವಾಗಿ ಎದುರಾಗುವ ವಯೋಸಹಜ ಸವಾಲುಗಳನ್ನು ಎದುರಿಸಲು ಸಫಲರಾಗುತ್ತಿದ್ದರು. ಗುರು ಹಿರಿಯರನ್ನು ಗೌರವ ಹಾಗೂ ಕಾಳಜಿಯಿಂದ ಕಾಣುತ್ತಿದ್ದರು. ಹಿರಿಯರು ಹಾಕಿಕೊಟ್ಟ ಪಂಕ್ತಿಯಲ್ಲಿ ಬೆಳೆಯುತ್ತಿದ್ದರು.

ಆದರೆ ಪ್ರಸ್ತುತ ಸಮಯದಲ್ಲಿ ಅವಿಭಕ್ತ ಕುಟುಂಬದ ಚಿತ್ರಣವು ವಾಸ್ತವಿಕತೆಯಿಂದ ದೂರ ಎನ್ನುವ ಭಾವನೆ ಮೂಡುವುದು ಸಹಜವೇ ನಿಜ. ಆಗಿದ್ದ ಭದ್ರತೆಯ ಭಾವ ಈಗಿಲ್ಲ. ಅರಿವಿಲ್ಲದೇ ನಿಧಾನವಾಗಿ ಬೇರೂರಿದ ಸಂಕುಚಿತ ಮನೋಭಾವ. ಹಣಕಾಸಿನಿಂದ ಸಬಲರಾಗುತ್ತ ಹೋದಹಾಗೇ ಸಂಬಂಧಗಳನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಸಮಯ ಹಾಗೂ ಶ್ರಮ ಎರಡನ್ನೂ ನೀಡುವಲ್ಲಿ ಮರೆತೆವು. ಬೆಳವಣಿಗೆ ಹಾಗೂ ಗಳಿಕೆಯ ಬೆನ್ನು ಹತ್ತಿ ಹೊರಟಿರುವ ನಾವುಗಳು ನಮ್ಮ ಮುಂದಿನ ಪೀಳಿಗೆಗೆ ಕೌಟುಂಬಿಕ ಮೌಲ್ಯಗಳನ್ನು ತಿಳಿಯಪಡಿಸಲು ನಾವೇ ಸ್ವತಃ ಅದನ್ನು ಮರುಜೀವಿಸಬೇಕಾಗಿದೆ.

ಎಲ್ಲ ಜಂಜಾಟಗಳ ಮಧ್ಯೆಯೂ, ಯೋಚಿಸಲೂ ಈಗಲೂ ಸಮಯವಿದೆ. ವಿಭಕ್ತ ಕುಟುಂಬಗಳೆಲ್ಲವೂ ಒಮ್ಮತದಿಂದ ಉತ್ಸುಕತೆಯಿಂದ ಎಲ್ಲ ಹಬ್ಬಗಳನ್ನು ಸಡಗರ ಸಂಭ್ರಮದಿಂದ ಕೂಡಿ ಒಂದೆಡೆ ಆಚರಿಸಬಹುದು. ಹಾಗೆಯೇ ನಮ್ಮ ಧಾವಂತದ ಬದುಕನ್ನು ಸ್ವಲ್ಪ ಬದಿಗಿರಿಸಿ ಗೆಟ್-ಟುಗೆದರ್ ಎನ್ನುವ ನೆಪದಲ್ಲಿ ಆಗಾಗ್ಗೆ ಔತಣಕೂಟಗಳನ್ನು ಏರ್ಪಾಡು ಮಾಡಿ ಕುಟುಂಬಗಳನ್ನ ಹತ್ತಿರ ತರುವ ಪ್ರಯತ್ನ ಮಾಡಬಹುದು. ಪಣತೊಟ್ಟರೆ ಸಡಿಲಗೊಂಡ ಅದೆಷ್ಟೋ ಸಂಬಂಧಗಳ ಕೊಂಡಿ ಇನ್ನಷ್ಟು ಘನವಾಗಿಸಬಹುದು. ಈಗ ಇಂತಹ ವಾತಾವರಣ ಇರದೇ ಇರುವ ಕಾರಣ ತಕ್ಕಮಟ್ಟಿಗೆ ಇದನ್ನೆಲ್ಲಾ ಒಂದು ಹಂತದಲ್ಲಿ ಮರು ಸೃಷ್ಟಿಸಲು ಪ್ರಯತ್ನಪಟ್ಟರೆ ಮಕ್ಕಳಿಗೆ ಮೌಲ್ಯಗಳು, ಜವಾಬ್ದಾರಿ, ಪರಸ್ಪರ ಸೌಹಾರ್ದತೆ, ಬಾಂಧವ್ಯ, ತಾಳ್ಮೆ ಇತ್ಯಾದಿ ಗುಣಗಳನ್ನು ಹೆಚ್ಚಿನ ಶ್ರಮವಿಲ್ಲದೇ ತಿಳಿಸಿಕೊಡಬಹುದು ಹಾಗೆಯೇ ಅವರ ಸರ್ವತೋಮುಖ ಬೆಳವಣಿಗೆಗೂ ಪೂರಕ.

ಅದಲ್ಲದೇ ಮನೆಯಲ್ಲಿಹ ಹಿರಿಜೀವಗಳ ಮುಖದಲ್ಲಿ ಮತ್ತೆ ಸಂತೋಷ ಸಮಾಧಾನದ ಮಂದಹಾಸವನ್ನು ಮೂಡಿಸಬಹುದು ಎನ್ನುವುದು ನನ್ನ ಬಲವಾದ ಅಭಿಪ್ರಾಯ.
ಈ ಲೇಖನದಲ್ಲೇನಿದೆ ವಿಶೇಷ? ಎಂದಿರಾ…
ಹೌದು ಇದು ಎಲ್ಲರಿಗೂ ತಿಳಿದಿರುವ ವಿಷಯವೇ ಸರಿ.
ನಿನ್ನೆ ಸಂಜೆ ನನ್ನ ಮಗಳಿಗೆ ಮಗ್ಗಿ ಹೇಳಿ ಕೊಡುವ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ತುಂಬಾ ಯೋಚಿಸ್ತಾ ಇದ್ದೆ. ಆದರೂ ನನ್ನ ಮಗಳನ್ನು ಈಗ ನಾನು ಬೆಳೆಸುವ ರೀತಿಗೂ ನನ್ನನ್ನು ನನ್ನ ಕುಟುಂಬದಲ್ಲಿ ಎಲ್ಲರೂ ಸೇರಿ ಬೆಳೆಸಿದ್ದಕ್ಕೂ ಅಜಗಜಾಂತರ ವ್ಯತ್ಯಾಸವಂತೂ ಇದೆ.

ಹಸಿದಾಗ ತಾಯಷ್ಟೇ ಮಮತೆಯಿಂದ ಉಣಿಸಿದ ದೊಡ್ಡಮ್ಮ ಚಿಕ್ಕಮ್ಮ, ತಂದೆಯಷ್ಟೇ ಪ್ರೀತಿ ಕೊಟ್ಟ ದೊಡ್ಡಪ್ಪ ಚಿಕ್ಕಪ್ಪಂದಿರು, ಎಡವದಂತೆ ಎಚ್ಚರವಹಿಸುತ್ತಿದ್ದ ಅವರೆಲ್ಲರ ಮಕ್ಕಳು (ಕನಿನ್ಸ್) , ಅಂತಃಕರಣದ ಮೇರು ಪರ್ವತದಂತಿದ್ದ ಅಜ್ಜ ಅಜ್ಜಿ… ಹೀಗೇ ಎಲ್ಲರ ಮಧ್ಯೆ ಮುದ್ದಿನ ಕೂಸು ನಾನಾಗಿದ್ದೆ.

ನನ್ನ ತಂದೆಯವರು ಕೆಲಸದ ನಿಮಿತ್ತ ಬೇರೆ ಊರುಗಳಿಗೆ ಹೋಗುವ ಅನಿವಾರ್ಯತೆ ಇದ್ದ ಕಾರಣಕ್ಕೆ ನಮಗೆ ಪೂರ್ತಿಯಾಗಿ ಕೂಡಿ ಇರಲು ಸಾಧ್ಯವಾಗಲಿಲ್ಲ ಹಾಗೂ ಪ್ರತಿ ಹಬ್ಬಗಳಿಗೂ ತಪ್ಪದೇ ನಮ್ಮನ್ನು ಕರೆದುಕೊಂಡು ಊರಿಗೆ ಹೋಗುವುದು ನಮ್ಮ ತಾಯಿಯ ಪರಿಪಾಠ. ಅಂತಹ ಕೂಡು ಕುಟುಂಬದಲ್ಲಿ ನನ್ನ ಬಾಲ್ಯದ ಹೆಚ್ಚಿನ ಸಮಯವನ್ನು ಕಳೆಯುವಂತೆ ಮಾಡಿದ ನನ್ನ ತಂದೆ ತಾಯಿಗೂ ಈ ಮೂಲಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಕೂಡು ಕುಟುಂಬದ ಖುಷಿಯೂ ಕಲಿಕೆಯೂ ಬಾಲ್ಯದ ಜೀವನಕ್ಕೆ ಬಹಳ ಮುಖ್ಯ. ದೊಡ್ಡವರಾಗುತ್ತಾ ನಮ್ಮಲ್ಲಿ ಬರುವ ಅಭಿಪ್ರಾಯದ ಬದಲಾವಣೆಗಳು ನಮ್ಮದು ಎನ್ನುವ ವಿಶಾಲ ಭಾವದಿಂದ ನನ್ನದು ಎನ್ನುವ ಸಂಕುಚಿತ ಭಾವಕ್ಕೆ ಕೊಂಡೊಯ್ಯುತ್ತದೆ. ನಮ್ಮ ಪಾಡಿಗೆ ನಾವಿರೋಣ ಎನ್ನುವ ಭಾವನೆ ಕೆಟ್ಟದ್ದಲ್ಲ, ಆದರೆ ಒಟ್ಟುಗೂಡುವಿಕೆಯ ಅನುಭವದಿಂದ ವಂಚಿತರನ್ನಾಗಿಸುತ್ತದೆ.

~ ಕೃತಿ ಶಿರೋಳ್


Leave a Reply

This site uses Akismet to reduce spam. Learn how your comment data is processed.