ಕೇದಗೆ ಎಂಬ ಹೂವುಗಳನ್ನು ನೋಡದವರು ಇದ್ದರೂ ಅದರ ಗಂಧವನ್ನು ಅರಿಯದವರು ಯಾರು? ಮಾದಕದ ಗಂಧವನ್ನು ಹರಡುವ ಈ ಹೂವುಗಳನ್ನು ಮಡಚಿ ಮುಡಿಯುವ ಸುಖವನ್ನು ಅನುಭವಿಸಿದವರು ಸ್ವಲ್ಪ ಹಿಂದಿನವರು.

ಇಂತಹಾ ಕೇದಿಗೆಯ ಹೂವುಗಳು ಮುಳ್ಳಾದ ಪೊದೆಯಲ್ಲಿ ಅಡಗಿಕೊಂಡಿರುತ್ತವೆ. ಇವುಗಳನ್ನು ಕೊಯ್ಯುವುದೇ ಒಂದು ಸವಾಲು. ಆದರೆ ಇದರ ಇರವನ್ನು ಬಹುಬೇಗ ಕಂಡುಹಿಡಿಯಬಹುದು.. ಅಷ್ಟು ಗಾಢವಾದ ಗಂಧವಿದೆ. ಹೂಗಳು ಒಣಗಿದ್ದಾಗಲೂ ಬಹಳ ಸೊಗಸಾದ ಗಂಧ.

“ಕೇತಕಿಯ ಬನಗಳಲಿ ಸಂಚರಿಸದಿರು ಚೆಲುವೆ, ಸರ್ಪಮಂದಿರವಂತೆ ತಂಪಿನೊಡಲು ” ಎಂದು ಗೀತವನ್ನು ಕೆ.ಎಸ್.ನರಸಿಂಹಸ್ವಾಮಿಯವರು ಬರೆದಿದ್ದಾರೆ. ಕೇತಕಿ, ಕೇದಗೆ, ಸುರಹೊನ್ನೆ ಎಂದೆಲ್ಲಾ ಕರೆಯುವ ಈ ಹೂವಿನ ಬಗೆಗೆ ಒಂದು ಕಥೆಯೂ ಇದೆ.

ಬಗೆವೊಡಿವು ಮುನ್ನಮಾಡಿರ್ದ ದೈವದ್ರೋಹ
ದಘದಿಂದೆ ಬನದ ಪೊರವಳಯದೊಳ್ ಬಹುಕಂಟ
ಕಿಗಳಾಗಿ ಬಂದು ಸಂಭವಿಸಿರಲ್ ತಳಿತ ಹೊಂಗೇದಗೆಗಳವರೊಳಾಡಿ
ಮಿಗೆ ಮಲಿನವಾಯ್ತು ಸರ್ವಾಂಗಮುಂ ಭ್ರಮರಾವ
ಳಿಗೆ ತಮಗದರ ಸಂಗಮೇಕೆಂದು ಪೂತ ಸಂ
ಪಗೆಗಳತಿಶುಚಿಗಳಂತೆಸೆಯುತಿವೆ ನೋಡು ನಂದನ ಪುರದ ನಂದನದೊಳು

ಜೈಮಿನಿ ಭಾರತದಲ್ಲಿ ಬರುವಂತಹ ಈ ಪದ್ಯದ ಅರ್ಥ : ಬಗೆವೊಡೆ, ಇವು (ದುಂಬಿಗಳು) ಮುನ್ನ ಮಾಡಿರ್ದ ದೈವದ್ರೋಹದಿಂದಾಗಿ ಬನದ ಹೊರವಲಯದಲ್ಲಿ, ಬಹು ಮುಳ್ಳಿನಿಂದ ಕೂಡಿರುವ ಗಿಡವಾಗಿ ಬಂದು, ಒಳ್ಳೆಯ ಹೊಂಬಣ್ಣದ ಕೇದಿಗೆಯ ಹೂಗಳನ್ನು ಮುತ್ತಿ ಮಲಿನಗೊಂಡು ( ಕೇದಿಗೆಯ ಹೂಗಳಲ್ಲಿ ಮಕರಂದವಿಲ್ಲ- ಮುಳ್ಳಿನ ಘಾಸಿ) ಸಂಪಿಗೆಯ ಬಳಿಗೆ ಹೋದರೆ, ಈ ದುಂಬಿಗಳ ಗೊಡವೆ ನಮಗೇಕೆಂದು ಸಂಪಿಗೆಯು ಅತಿಶುಚಿಯಂತೆ ಕಾಣುತ್ತಿದೆ ನೋಡು, ಈ ನಂದನ ಪುರದ ನಂದನದೊಳಗೆ.

ದುಂಬಿಗಳು ಕೇದಗೆಯ ಹೂಗಳನ್ನು ಕಂಡು ಆಕರ್ಷಿತವಾಗಿ ಅಲ್ಲಿ ಹೋದರೆ ಅಲ್ಲಿ ಮಕರಂದವಿಲ್ಲ. ಅಲ್ಲಿಂದ ಎದ್ದು ಹೊರಬಂದು ಸಂಪಿಗೆಯ ಮರದತ್ತ ಹೋದರೆ ಸಂಪಿಗೆಯು ಹತ್ತಿರ ಸೇರಿಸುವುದಿಲ್ಲ ಎಂಬುದು ಅರ್ಥ. ( ಸಂಪಿಗೆಯ ಹೂಗಳು ದುಂಬಿಗಳಿಗಾಗದು ಎನ್ನುವುದು ಕವಿಸಮಯ)

ಮುನ್ನ ಮಾಡಿರ್ದ ದೈವದ್ರೋಹ? – ಇದೇ ಕಥೆ. ಒಂದೊಮ್ಮೆ ಅತಿವಿಸ್ತಾರವಾಗಿ, ಆದ್ಯಂತರಹಿತವಾಗಿದ್ದ ಶಿವಲಿಂಗವನ್ನು ವಿಷ್ಣುವೂ ಬ್ರಹ್ಮನೂ ಅಳೆದರಂತೆ. ವಿಷ್ಣುವು ಕೆಳಗಿನ ತುದಿಯನ್ನು ಹುಡುಕುವುದಕ್ಕೂ, ಬ್ರಹ್ಮನು ಶಿವಲಿಂಗದ ಮೇಲಿನ ತುದಿಯನ್ನೂ ಕಾಣುವುದಕ್ಕೆ ಚಲಿಸಿದರು.

ಬ್ರಹ್ಮನು ಮೇಲೆ ಸಾಗುತ್ತಿರುವಾಗ ಒಂದು ಕೇದಗೆಯ ದಳವು ಹಾರಿ ಬಿತ್ತು. ಆಗ ಬ್ರಹ್ಮನು ಕೇದಗೆಯೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಕೇದಗೆಯ ಹೂವು ಲಿಂಗದ ಮೇಲೆ ಇದ್ದಿತ್ತು, ಅದನ್ನು ಬ್ರಹ್ಮ ತೆಗೆದುಕೊಂಡು ಬಂದನು. ಬ್ರಹ್ಮನು ಶಿವಲಿಂಗದ ತುದಿಯನ್ನು ಕಂಡನೆಂದು ಸಾಕ್ಷಿಗಾಗಿ ಕೇದಗೆಯನ್ನು ಕೇಳಿಕೊಂಡ. ಅದಕ್ಕೆ ಉಪಕಾರವಾಗಿ ಸೊಗಸಾದ ಗಂಧವನ್ನೂ ರಕ್ಷಣೆಗೆ ಮುಳ್ಳುಗಳನ್ನೂ ಕರುಣಿಸಿದ ಬ್ರಹ್ಮ.

ಆದರೆ ಇದನ್ನು ಅರಿತ ಶಿವನು ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿದ. ಹಾಗೇ ಕೇದಗೆಯನ್ನು ಊರ ಹೊರಗಿರುವಂತೆ ಮತ್ತು ಶಿವಪೂಜೆಗೆ ಯೋಗ್ಯವಲ್ಲದ್ದು ಎಂದು ಶಪಿಸಿದನಂತೆ. ಇದರಿಂದ ಕೇದಗೆಯು ಶಿವಪೂಜೆಗೆ ಯೋಗ್ಯವಲ್ಲದ್ದು, ಮತ್ತು ಮುಳ್ಳು ಪೊದೆಯಾಗಿ ಊರ ಹೊರಗೇ ನಿಲ್ಲುವಂತಾಗಿದೆ.

ಬ್ರಹ್ಮನ ವರದಂತೆ ಘಮವು ಜಗತ್ತಿನಲ್ಲಿ ಎಂದೂ ಹುಸಿಯಾಗದೇ ಇದೆ.

ಗೂಗಲ್ ಚಿತ್ರ – ಕೇದಗೆ.

Leave a Reply

This site uses Akismet to reduce spam. Learn how your comment data is processed.