ಒಂದಷ್ಟು ಕಪ್ಪಡರಿ, ಮೀಸೆ ಬಂದಂತೆನಿಸಿ
ನಯದ ಕೆನ್ನೆಗೆ ಒರಟು ಬರುವ ಸುದ್ಧಿ
ಜಗದ ಹೊರೆಯನ್ನೆಲ್ಲ ನೀನು ಹೊರಬೇಕಿನ್ನು
ಕಳಿಸುವರು ಗಂಡೆಂಬ ಮುದ್ರೆ ಗುದ್ದಿ!
ತೊಗಲಿಗೇರದ ಹಳೆಯ ಅಂಗಿಗಳ ರಕ್ಷಿಸಿತು
ತೋಳು ತೋರುವ ಹಿತದ ಬಟ್ಟೆ ಬಂದು;
ಹೇಗಾದರೂ ಬೆಳಗು ರಕ್ತಕ್ರಾಂತಿಯ ನೆನೆದು
ರಾತ್ರಿಯೊಳು ಮಲಗುವುದು ಗಂಜಿ ತಿಂದು!
ಮುಂಗುರುಳು ಹಾರಿದರೆ ಜಗವೆ ನೆಗೆದಂತಾಗಿ
ದಾರಿಯಲಿ ಗೋರಿಯಲಿ ಬಹಳ ನೆನಪು;
ಅವಳಿಲ್ಲದಿರೆ ಇವಳು, ಇವಳಲ್ಲ ಅವಳಿಹಳು
ಕೊನೆಯ ಸೇರದ ನಡೆಗೆ ಬೇಲಿ ಹೂವು.
ಮೀಸೆ ತೆಗೆವಂತಾಗಿ ಗಡ್ಡ ತುರಿಕೆಯು ಬರಲು
ಕ್ರಾಂತಿ ಪ್ರೀತಿಗಳೆಲ್ಲ ಮರೆತು ಹೋಗಿ;
ಸಂಜೆವರೆಗೂ ದುಡಿದು ಹೆತ್ತವರ ಕೆಮ್ಮಿನಲಿ
ಶ್ರುತಿ ಸೇರಿ ಕೆಮ್ಮುವುದು ಇವನ ಪಾಳಿ.
ಹೀಗೊಬ್ಬನಿದ್ದನಹ! ಬಲದಲ್ಲಿ ಬುದ್ಧಿಯಲಿ
ಇವನಂತೆ ಊರೊಳಗೆ ಯಾರು ಇಲ್ಲ!
ಎನುವ ಮಾತನ್ನೆಲ್ಲ ನೆನೆಸಿ ಮರುಗುವ ಸಂಜೆ
ಊರಿನಲಿ ಜನರಿಗೂ ಕೊರತೆಯಿಲ್ಲ.
ಅಳುವುದು ಸರಿಯಲ್ಲ, ನಕ್ಕಾಗ ಜೊತೆಯಿಲ್ಲ
ಶಾಂತಿಯಲಿ ಮಲಗುವುದು ಜಗಕೆ ಸಲ್ಲ!
ಎಲ್ಲವೂ ಜೊತೆಸೇರಿ ಮತ್ತೇನೊ ಹುಡುಕುವುದು
ತಪ್ಪಿದರೆ ನೀನೋ! – ಗಂಡಸಲ್ಲ.
By : Ishwara Bhat K