ಹೌದು ನೀ ನನಗೆ ಎನಾಗಬೇಕು..
ಇಬ್ಬರಲ್ಲು ಉತ್ತರವಿಲ್ಲ, ಈ ಪ್ರಶ್ನೆಯು ,ಪ್ರಶ್ನೆಯಾಗಿಯೇ ಉಳಿಯುತ್ತದೆ ಬದುಕಿನ ಕೊನೆಯವರೆಗೆ ಎನ್ನುವ ಆತಂಕ. ಕೆಲವೊಂದಕ್ಕೆ ಉತ್ತರಗಳೇ ಇಲ್ಲವೇನೋ ,ಇಲ್ಲ ತೀರ ಕೆದಕಬಾರದು ಬಿಡು..
ಹೌದು ನೀ ಸಿಕ್ಕ ಈ ಬದುಕು ಅದೆಷ್ಟು ಖುಷಿಯಾಗಿತ್ತು ನೋಡು, ನಿನ್ನ ನೆನೆದಾಗಲೆಲ್ಲ ತುಟಿ ಅಂಚಲಿ ಮಂದಹಾಸ ನನ್ನ ಅರಿವಿಗೆ ಬಾರದೆ ಮಿಂಚುತಿತ್ತು, ಕನಸುಗಳು ಬಿದ್ದರೆ ಅದು ನಿನ್ನದೇ ಆಗಿರುತಿತ್ತು, ಪ್ರತಿ ಮುಂಜಾವಿನಲ್ಲು ಪ್ರೀತಿಯಿಂದ ಕಿತ್ತ ಒಂದೊಂದೆ ಹೂ ದಾರಕ್ಕೆ ಬೆಸೆದು ಕಟ್ಟುವಾಗಲಂತೂ ನಿನ್ನ ನನ್ನ ಪ್ರೇಮದ ಗುರುತು ಕಾಣಿಸುತಿತ್ತು, ಹಾಲು ಕಾಯಲು ಇಟ್ಟು ನಿನ್ನ ಜಪದಲ್ಲಿದ್ದ ನನ್ನನ್ನೂ ಉಕ್ಕಿ ಹೋದ ಹಾಲನ್ನೂ ಕಂಡು ಅಮ್ಮ ಬಂದು ಬೈದು ಎಚ್ಚರಿಸಿ ಬಿಟ್ಟಾಗಲೇ ವಾಸ್ತವಕ್ಕೆ ಬರುತ್ತಿದ್ದೆ..
ಅದೆಷ್ಟು ದಿನಗಳು ಜಾರಿ ಹೋದವು ನಾವು ಭೇಟಿಯಾಗದೇ ಆದರೂ ನೆನಪಿನಂಗಳದಲ್ಲಿ ಸದಾ ಮುಖಾ ಮುಖಿ ಆಗುತ್ತೇವಲ್ಲ, ಭೇಟಿಯ ಚಿಂತೆಯಿಲ್ಲ ಬಿಡು.
ರಾತ್ರಿಯ ಹೊತ್ತಲ್ಲಿ ಅಂಗಳದಲ್ಲಿ ಕುಳಿತು ಹುಣ್ಣಿಮೆಯ ಚಂದಿರನಿಗೆ ನಿನ್ನ ಬಗ್ಗೆ ಎಲ್ಲಾ ಹೇಳಿ ಹರವಿ ಕುಳಿತು ಬಿಡುತ್ತೇನೆ, ನೀ ಮೊದಲು ಸಿಕ್ಕ ಆ ತಿರುವು ,ಕಣ್ಣು ಕಲೆತ ಮುಸ್ಸಂಜೆ, ಮಾತಿಗಾಗಿ ತಡವರಿಸುವಾಗ ಬಂದ ಮಳೆರಾಯನ ಅನಿರೀಕ್ಷಿತ ಭೇಟಿ ಮಾತನಾಡದೇ( ಮೌನವಾಗಿ) ಬಲೂದೂರದವರೆಗೆ ಜೊತೆಸಾಗಿದ ಹುಣ್ಣಿಮೆಯ ಬೆಳದಿಂಗಳ ರಾತ್ರಿ.
ಹುಣ್ಣಿಮೆಯ ರಾತ್ರಿ ಮುಗಿಯಿತು ಹೌದು ನೀ ಬರಬೇಕಿತ್ತು ನಿನ್ನೆಯೇ ಬರುತ್ತೆನೆ ಅಂದಿದ್ದೆ ಮನೆಯವರನ್ನು ಒಪ್ಪಿಸಿ , ಹೌದು ಅಂಗಳದಲ್ಲಿ ಸದ್ದಾಯಿತು ನಾಯಿಗಳು ಬೊಗಳುತಿವೆ, ಕನ್ನಡಿಯನೊಮ್ಮೆ ಕಂಡು ಹಣೆಯ ಬಿಂದಿಯನ್ನು ಸರಿ ಪಡಿಸಿಕೊಂಡೆ. ಅಗೋ ಬಂದೇ ಬಿಟ್ಟರು.

Leave a Reply

This site uses Akismet to reduce spam. Learn how your comment data is processed.