ಚಿತ್ರವ ಬಿಡಿಸುವ ಚಂದಿರ ಬಾನೊಳು
ಸೂರ್ಯನ ಕಿರಣದಿ ಕುಂಚವ ಮಾಡಿ
ಆಗಸ ಬಿಳಿಯೆನೆ ಕರಿಯನು ಒಡ್ಡುತ
ಕರಿಯಾಯ್ತೆನುತಿರೆ ಬಿಳಿಯೆಳೆಯ
ಕೆಂಪು ನೀಲಿಗಳ ಬಣ್ಣಗಳೆಲ್ಲಿದೆ?
ದೂರುವ ವಿಕೃತಿಯ ಮಾಡುವ ತಿಳಿಯ!
ಬಳಿಯೊಳು ತೇಲುವ ಕಪ್ಫಿನ ಅಂಗಿಯ
ಮೋಡದ ಕೊಳೆಯನು ಹೊರಗೆಸೆದು
ನೆಲವದು ಕರಿಯೆನೆ ಭ್ರಾಂತಿಯ ಬರಿಸುವ
ಮೋಡವೆ ಮನಸೆನೆ, ಆಗಿದೆ ಹೊಳೆದು.
ಗೆಳೆಯನ ಖಾರವ ಎದೆಯೊಳಗಾಡಿಸಿ
ಶಾಂತಿಯ ಮಾತುಗಳಾಡುವೊಲು!
ಸೂರ್ಯನ ಬಿಸಿಯನು ನಮ್ಮೆದೆಗಿಳಿಸುವ
ಚಂದಿರ ಚಿತ್ರಕ, ನಮಗಿಂ ಮಿಗಿಲು.
By : Ishwara Bhat K