ಭೂಲೋಕವೆಲ್ಲ ಈಗ ಒಂದು ದೇಶವಾಗುತ್ತಿದೆ. ಒಂದು ರಾಜ್ಯಕ್ಕಾದ ಆಪತ್ತು, ಒಂದು ಸಮಾಜಕ್ಕಾದ ಕ್ಷೋಭೆ, ಎಲ್ಲ ರಾಜ್ಯಗಳಿಗೂ ಎಲ್ಲ ಸಮಾಜಗಳಿಗೂ ವ್ಯಾಪಿಸುತ್ತಿದೆ. ಈಗ ಕ್ಷೇಮವೆಂದರೆ ಏಕವ್ಯಕ್ತಿ ಕ್ಷೇಮವಲ್ಲ, ಏಕ ರಾಜ್ಯ ಕ್ಷೇಮವಲ್ಲ; ಹಾಗೆಯೇ ಶಾಂತಿಯೆಂದರೆ ಏಕವ್ಯಕ್ತಿ ಶಾಂತಿಯಲ್ಲ, ಏಕಸಮಾಜ ಶಾಂತಿಯಲ್ಲ. ಈ ಹೊತ್ತು ಶಾಂತಿಯೂ ಕ್ಷೇಮವೂ ಭೂಪ್ರದೇಶಗಳ ಗಡಿಮೇರೆಗಳನ್ನು ಮೀರಿ ಸಮಸ್ತ ದೇಶಗಳಿಗೂ ಒಂದೇ ಆಗಿದೆ. ….

ರಾಷ್ಟ್ರವಿರಾಷ್ಟ್ರಗಳ ಸಂಬಂಧವು ಈ ಕಾಲದಲ್ಲಿ ಹೀಗೆ ಎಲ್ಲರ ಕ್ಷೇಮಸಮಾಧಾನಗಳಿಗೂ ಕ್ಷಣೇ ಕ್ಷಣೇ ಅತ್ಯಂತ ಸಮೀಪದ ಸಂಬಂಧವುಳ್ಳದ್ದಾಗಿರುತ್ತದೆ. ಹೀಗೆ ನಮ್ಮ ಜೀವನವು ಈಗ ಸ್ವರಾಷ್ಟ್ರವ್ಯಾಪ್ತಮಾತ್ರವಲ್ಲ, ವಿರಾಷ್ಟ್ರವ್ಯಾಪ್ತವೂ ಆಗಿದೆ.


ರಾಜ್ಯನಿರ್ವಾಹ ಕಾರ್ಯವು, ರಾಜಕೀಯವು ಜೀವನವಿದ್ದಂತೆ. ಒಂದು ಕಡೆಯಲ್ಲಿ ಆಹಾರ, ಇನ್ನೊಂದು ಕಡೆಯಲ್ಲಿ ಮಲ. ಎಷ್ಟೆಷ್ಟು ಪರಿಷ್ಕಾರಗಳನ್ನು ಮಾಡಿದರೂ ಇನ್ನೊಂದು ಕಡೆಯಲ್ಲಿ ಒಂದಷ್ಟು ಕೊಳಕು ಉಳಿದೇ ಉಳಿಯುತ್ತದೆ. ರಾಮನ ಆದರ್ಶರಾಜ್ಯವು ಭಾವನಾವಿಚಾರವಾಗಿ ಉಳಿಯುತ್ತದೆ.

ಆದರೂ ರಾಜ್ಯನಿರ್ವಾಹವೆಂಬುದು ಪ್ರತಿನಿತ್ಯವೂ ನವನವೀನವಾಗಿರಬೇಕು. ಆಗಾಗ್ಗೆ ಪರಿಷ್ಕರಣೆಗಳು ಆಗುತ್ತಿರಬೇಕು. ದಿನವೂ ಹೊಸರೋಗ ಬಂದಂತೆ ಹೊಸಸ್ನಾನಗಳು ಆಗುತ್ತಿರಬೇಕು. ಇಲ್ಲಿಗೆ ನಮ್ಮ ಪ್ರಯತ್ನ ಮುಗಿಯಿತು ಎಂದು ತೆಪ್ಪಗಾಗುತ್ತಾನೋ ಅಂದಿಗೆ ಪೌರುಷದ ಅಂತ್ಯ, , ಸಮಾಜದ ಪತನ. ಇನ್ನು ಶೋಧನೆ ಅವಶ್ಯವಿಲ್ಲ ಎಂದು ಯಾವ ದಿವಸ ರಾಷ್ಟ್ರಕನು ನಿರುದ್ಯಮನಾಗುತ್ತಾನೋ ಅಂದಿನಿಂದ ಅವನ ರಾಜ್ಯ ಅಧೋಮುಖವಾಗುತ್ತದೆ.

— ಡಿವಿಜಿಯವರ ರಾಜ್ಯಶಾಸ್ತ್ರ ಪುಸ್ತಕದಿಂದ ಉದ್ಧರಿಸಿದ ಸಾಲುಗಳು ಇವು.
ಡಿವಿಜಿಯವರು ಈ ಪುಸ್ತಕವನ್ನು ಬರೆದದ್ದು ೧೯೫೨ರಲ್ಲಿ. ಆಗ FDI ವಿಚಾರವಾಗಿ ಏನೂ ಗಲಾಟೆಗಳಿರಲಿಲ್ಲ. ಬಂಡವಾಳ ಹೂಡಿಗೆ, ಜಾಗತೀಕರಣಗಳು ಅಷ್ಟೊಂದಾಗಿ ಮಾತುಕತೆಯಲ್ಲಿರಲಿಲ್ಲ. ಆದರೂ ಅವರೇ ಹೇಳಿದಂತೆ ಸೌತ್ ಕೊರಿಯಾದ ಯುದ್ಧವು ತಿರುವಾಂಕೂರಿನ ಮರಳು ಸಾಗಾಣಿಕೆಗೆ ಸಮಸ್ಯೆ ಮಾಡುತ್ತದೆ ಎನ್ನುವ ಹಾಗೆ, ಇಡೀ ಪ್ರಪಂಚವೇ ಬೆಸುಗೆ ಬಿದ್ದಾಗಿದೆ.

ರಾಮಣೀಯಕಮೆಂದು ಬಿಸುಸುಯ್ಯಲದು ಕವಿತೆ
ಭೂಮಿಗದನೆಟುಕಿಸುವೆನೆಂಬೆಸಕ ರಾಜ್ಯಕತೆ
ಆಮೂಲಮದರಿರವನ್ ಅರಸಲ್ ಅದು ವಿಜ್ಞಾನ
ಸಾಮಗ್ರ್ಯದಿದಂ ಕಾಣಲ್ ಅದುವೆ ದಿವ್ಯಜ್ಞಾನ.


#ಡಿವಿಜಿ_ರಾಜ್ಯಶಾಸ್ತ್ರ_೧

Leave a Reply

This site uses Akismet to reduce spam. Learn how your comment data is processed.