ಹೆಚ್ಚಾಗಿ ಮದರ್ಸ್ ಡೇ ಎನ್ನುವ ಆಚರಣೆಯಲ್ಲಿ ತಾಯಿಯ ಕಷ್ಟನಷ್ಟಗಳನ್ನ, ಪ್ರೀತಿಯನ್ನ ಕೊಂಡಾಡುವುದೇ ಜಾಸ್ತಿ. ತಪ್ಪೇನಲ್ಲ, ತಾಯಿಯು ಮಗುವನ್ನು ಬೆಳೆಸುವ ಪ್ರಯತ್ನಗಳು, ಕೆಲಸಗಳು ಎಲ್ಲವೂ ಕಷ್ಟವೇ, ಆಕೆಗೆ ನಷ್ಟವೇ. ಅದನ್ನು ಒಂದು ಸುಕುಮಾರಭಾವದಿಂದ ತಾಯಿ ನಿರ್ವಹಿಸುತ್ತಾಳೆ.
ಆದರೆ, ತಾಯಿಯ ಸೌಭಾಗ್ಯ ಎಂತಹದ್ದು? ಆಕೆಗೆ ಸಿಗುವಂತಹಾ ದೊಡ್ಡ ದೊಡ್ಡ ಆನಂದದ ಭಾಗ್ಯಗಳು ತಂದೆಗೂ, ಪುರುಷರಿಗೂ, ತಾಯಿಯಲ್ಲದವರಿಗೂ ಸಿಗುವುದಿಲ್ಲ. ತಾಯಿ ಆಗುವುದಕ್ಕೆ ಗರ್ಭಧಾರಣೆ ಮಾಡಿ ಮಗುವನ್ನು ಹೆರಬೇಕೆಂದಿಲ್ಲ, ಬರೀ ಹೆಣ್ಣಿನ ಮನಸ್ಸಿದ್ದರೆ ಸಾಕು ಎನ್ನುವ ಮಾತುಗಳು ಅತಿಶಯೋಕ್ತಿಯದ್ದು. ಅದು ನಮ್ಮ ಭಾವದ ಆವೇಶ. ಅನುಭವದ ಮಾತಲ್ಲ.
ಗರ್ಭದಲ್ಲಿ ಮಗುವಿದ್ದಾಗ ಇರುವ ಸುಖ; ಅಮ್ಮ, ಅತ್ತೆ, ಗೆಳತಿಯರ ಮುಂದೆ ಹೇಳಿಕೊಳ್ಳುವ ಸುಖ ಬೇರಾರಿಗುಂಟು?. ಮಗುವಿನ ಇರವಿನಲ್ಲಿ ಪುರುಷನ ಪೌರುಷ ಕಡಿಮೆಯಾಗಿ ಆತ ಹೇಳಿದಂತೆ ಕೇಳುವ, ಪ್ರೀತಿಸುವ ಸೊಬಗು. ಮುಂದೆ ಆರೇಳು ತಿಂಗಳುಗಳಾದಂತೆ ಎಲ್ಲರೂ ತೋರುವ ಪ್ರೀತಿ, ಕಾಳಜಿ ಗೌರವ. ಇದೆಲ್ಲಾ ತಾಯಿಯಾಗುವವಳ ಸೌಭಾಗ್ಯ.
ಮಗುವನ್ನು ಹೆತ್ತು ಉಂಟಾಗುವ ಸಾರ್ಥಕ್ಯಭಾವ. ಎಷ್ಟೋ ನೋವುಗಳನ್ನು ಅನುಭವಿಸಿದ ಹೆಂಗಸಿಗೂ, ಈ ಮಗುವನ್ನು ಹೆತ್ತು ಆದಮೇಲೆ ಉಂಟಾಗುವ ಖುಷಿ ಅಸಾಮಾನ್ಯವಾದ್ದು. ನಂತರ ಹಾಲೂಡುವ, ಮಗುವನ್ನಾಡಿಸುವ, ಸ್ನಾನ ಮಾಡಿಸುವ, ತೊದಲು ಮಾತುಗಳನ್ನ ಕೇಳುವ ಭಾಗ್ಯ. ಇದೆಲ್ಲಾ ತಾಯಿಯಾದವಳಿಗೆ ಕಂಡಿತಾ ದೊರೆಯುವಂತಹದ್ದು. ಸಿರಿವಂತೆ, ಬಡವೆ ಎಂಬೆಲ್ಲಾ ಬಗೆಗಳಿಲ್ಲ ಇದಕ್ಕೆ.
ತಾಯಿ ಎಲ್ಲಾ ಮಕ್ಕಳಿಗೂ ಪ್ರಿಯಳಾಗಿರುತ್ತಾಳೆ. ಅಷ್ಟು ಸ್ನೇಹ, ಪ್ರೀತಿ ಯಾರೂ ಕೊಡಲಾರಳು. ತಾಯಿಯಾಗುವ ಭಾಗ್ಯವೂ ಅಂತಹದ್ದೇ. ಹಾಗಾಗಿ ತಾಯಂದಿರ ದಿನವು ಸೌಭಾಗ್ಯದ ದಿನ.