ದೇಗುಲದ ಬಾಗಿಲನು ದಾಟಿದರೆ ತೋರುವುದು
ಆಳೆತ್ತರಕೆ ನಿಂತ ಗಂಟೆಯೊಂದು
ತೋಳನ್ನು ಮೇಲೆತ್ತಿ ದೇವರನು ನೋಡುತಲಿ
ಗಂಟೆ ಬಾರಿಸುವಾಸೆ ಜನರಿಗಿಂದು!

ಹದಿನಾರು ಕಳೆದಿರುವ ತರುಣಿ ಸಾಲಿನೊಳಿಹಳು
ಫಲ ಪುಷ್ಪ ತಾಂಬೂಲ ಹಿಡಿದುಕೊಂಡು
ಕಡೆಗಣ್ಣ ನೋಟವು ಚಿಗುರು ಮೀಸೆಯೊಳಿರಲು
ಬಡಿಯೆ ಎಚ್ಚರವಾಯ್ತು ಗಂಟೆಯೊಂದು!

ಹೊರಗಿರುವ ಗಿಡದಲ್ಲಿ ಬೀಳಲೆಣಿಸುವ ಹೂವು
ಸದ್ದಿನಲಿ ಬಿದ್ದಿತೇ ಸತ್ವವಡಗಿ?
ಹಸಿದ ಹಾವಿನ ಬಾಯ್ಗೆ ಕೂಳಾಯ್ತು ಎನ್ನುವೆಡೆ
ಇಲಿಯು ತಾನೋಡಿತದೋ ಗಂಟೆ ಮೊಳಗಿ!

ಸಿಡುಕಿನಲಿ ಕೆಲಸದವ ಬಲೆಯ ತೆಗೆಯುತ ಬರಲು
ಕೋಲು ತಾಗಿದ ಕ್ಷಣಕೆ ಗಂಟೆ ಬಡಿದು;
ದೇವನೆದ್ದಾನೇನೋ! ಎನುತ ನಮಿಸುವ ನಗುತ
ಅರಿವಿಲ್ಲದೆಯೆ ಭಾವ, ಭಕ್ತಿ ಹಿರಿದು.

ರಾತ್ರಿಪೂಜೆಯು ಕಳೆದು, ದೇವರನು ಮುಚ್ಚಿಟ್ಟು
ನಂದಿಸಿದ ದೀಪಗಳ ತೊಳೆದು ಹೊಳೆಸಿ,
ಕೊನೆಗೊಮ್ಮೆ ನಾದವನು ಕಂಚಿನಲಿ ಕೇಳಿದರೆ
ದೇವನೂ ಮಲಗುವನು ನಮ್ಮ ಹರಸಿ.

©Ishwara Bhat K

Leave a Reply

This site uses Akismet to reduce spam. Learn how your comment data is processed.