ಈ ಸಾಲುಗಳನ್ನು ಓದುತ್ತಿರುವ ನಿಮಗೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಥಾಂಕ್ ಯು ಫಾರ್ ರೀಡಿಂಗು.. ಥಾಂಕ್ ಯು ಫಾರ್ ಕಮಿಂಗು… ಹೀಗೆ ಕೃತಜ್ಞತೆ ಅರ್ಥಾತ್ ಥ್ಯಾಂಕ್ಸು! ಬಹಳ ಸುಲಭವಾಗಿ ಕೊಟ್ಟುಬಿಡಬಹುದಾದಂತಹ ವಸ್ತು.

ಇನ್ನೂ ಮುಂದೆ ಹೋಗಿ, ಹೃದಯಾಂತರಾಳದ, ಮನಸ್ಸಿನಿಂದ ಮುಂತಾದ ದೊಡ್ಡ ಶಬ್ಧಗಳನ್ನು ಕೃತಜ್ಞತೆಯ ಹಿಂದೆ ಸೇರಿಸಿ ಹೇಳುವುದಾಗುತ್ತದೆ. ಎಲ್ಲಾ ಕಾರ್ಯಕ್ಕೂ ಧನ್ಯವಾದಗಳು, ಕೃತಜ್ಞತೆಗಳು ಹೇಳದೇ ಇದ್ದರೆ ಅದೊಂದು ಸಂಪೂರ್ಣವಾದ ಭಾವವೇ ಬರುವುದಿಲ್ಲ.

ಧನ್ಯವಾದಗಳ ಬಹಳವಾದ ಉಪಯೋಗದಿಂದ ಈಗೀಗ ಅದನ್ನು ಬಯಸುವವರೇ ಇಲ್ಲದವರಾಗಿದ್ದಾರೆ. ಒಂದು ಉಪಕಾರವನ್ನು ಮಾಡಿದಮೇಲೆ ಆ ವ್ಯಕ್ತಿಯಿಂದ ಧನ್ಯವಾದಗಳನ್ನು ಬಯಸದೇ ಮುಖ ತಿರುಗಿಸುವವರೂ ಹೆಚ್ಚಾಗಿದ್ದಾರೆ.

ಯಾರಿಗಾದರೂ ಉಪಕಾರ ಮಾಡುವುದಾದರೆ ಪ್ರತಿಯಾಗಿ ಅವರಿಂದ ಸಣ್ಣ ಧನ್ಯವಾದವನ್ನು ಪಡೆಯುವ ಅಧಿಕಾರ ಇಲ್ಲವೇ? ಇದೆ ಇದೆ. ಬಾಯಿಮಾತಿನಿಂದ, ಕಣ್ಣಿನ ನೋಟದಿಂದ, ಕೈಯ್ಯೆತ್ತಿ ಪ್ರತಿಕ್ರಿಯೆಯಿಂದ ಧನ್ಯವಾದಗಳನ್ನು ಹೇಳಬಹುದು, ಪಡೆಯಬಹುದು. ಉಪಕಾರಕ್ಕೆ ಪ್ರತ್ಯುಪಕಾರವನ್ನು ಬೇಡುವುದೇ ಆದರೆ ಅದು ವಾಣಿಜ್ಯವಾಗುತ್ತದೆ. ನೀವು ನಮ್ಮನ್ನು ಉಪಯೋಗಿಸಿದ್ದಕ್ಕೆ ಧನ್ಯವಾದಗಳು ಎಂದಾಗುವುದಿಲ್ಲವೇ?

ಒಂದು ಸೌಜನ್ಯದ ಮಾತನ್ನಾದರೂ ಹೇಳಬಹುದಿತ್ತು ಎಂದುಕೊಳ್ಳುವುದಿಲ್ಲವೇ? ಅಯ್ಯೋ, ನಾವು ಇಷ್ಟೆಲ್ಲಾ ಸಹಾಯ ಮಾಡಿದ್ರೂ ಒಂದ್ ಸೌಜನ್ಯದ ಮಾತಿಲ್ಲ, ಧನ್ಯವಾದದ ಹಂಗಿಲ್ಲ ಎಂದಾದಾಗ ಮುಂದಿನ ಅಂತಹದೇ ಉಪಕಾರ ಪ್ರಕ್ರಿಯೆಗೆ ಮೂಲಭೂತವಾದ ಉತ್ಸಾಹದ ಪೂರೈಕೆ ಆಗುವುದಿಲ್ಲ.

ಈಗೀಗ ರಿಟರ್ನ್ ಗಿಫ್ಟ್ ಅನ್ನುವ ಸಂಪ್ರದಾಯ ಒಂದಿದೆ. ನೀವು ಮನೆಗೆ ಬಂದಿದ್ದು ಬಹಳ ಒಳ್ಳೆಯದಾಯಿತು. ಹೋಗುವಾಗ ಇದನ್ನು ಬಂದ ನೆನಪಿಗೆ ಹೊತ್ತುಕೊಂಡು ಹೋಗಿ. ಈ ಕಾರ್ಯಕ್ರಮಕ್ಕೆ ಬಂದುದು ಸಂತೋಷವಾಯಿತು, ಈ ಸ್ಮರಣಿಕೆಯನ್ನು ಹಿಡಿದುಕೊಳ್ಳಿ ಎಂದೆಲ್ಲಾ ಗಿಫ್ಟುಗಳನ್ನು, ಧನ್ಯವಾದಗಳನ್ನು ಕೊಡೋಣವಾಗುತ್ತದೆ.

ಮೆಟ್ರೋದಲ್ಲಿ /ಬಸ್ಸಿನಲ್ಲಿ ಒಂದು ಸೀಟ್ ಬಿಟ್ಟು ಕೊಟ್ಟಾಗ ಸೀಟ್ ಪಡಕೊಂಡ ವ್ಯಕ್ತಿಯು ಹಾಯೆಂದು ನಿಟ್ಟುಸಿರು ಬಿಟ್ಟು ನಮ್ಮನ್ನು ನೋಡಿದರೆ ಧನ್ಯವಾದ ಬಂತೆಂದೇ. ಅದೇ ವ್ಯಕ್ತಿಯು ಇಳಿಯುವುದಕ್ಕೆ ಮುನ್ನ ನಮ್ಮನ್ನು ಹುಡುಕಿ ಸೀಟ್ ನಮಗೆ ಕೊಟ್ಟರೆ ಅದೇ ರಿಟರ್ನ್ ಗಿಫ್ಟ್ ಎಂದುಕೊಳ್ಳುವುದು.

Leave a Reply

This site uses Akismet to reduce spam. Learn how your comment data is processed.