ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ
ನಂಬಿಯುಂ ನಂಬದಿರುವಿಬ್ಬಂದಿ ನೀನು
ಕಂಬದಿನೋ ಬಿಂಬದಿನೋ ಮೋಕ್ಷವವರಿಂಗಾಯ್ತು
ಸಿಂಬಳದಿ ನೊಣ ನೀನು – ಮಂಕುತಿಮ್ಮ

Faith ಮತ್ತು Determination ಎನ್ನುವ ಪದವನ್ನು ಆಗಾಗ ಬಳಸುತ್ತೇನೆ. Determination ಮತ್ತು Faith ನಡುವೆ ಸಾಮ್ಯ ಮತ್ತು ಸಂಬಂಧವಿದೆ. ನಮ್ಮ ನಿರ್ಧಾರಗಳು ನಮ್ಮ ನಂಬಿಕೆಯನ್ನು ಅವಲಂಬಿಸಿ ಇರುತ್ತವೆ; ಅಥವಾ ನಮ್ಮ ನಂಬಿಕೆಗಳೇ ಕೆಲವೊಂದು ನಿರ್ಧಾರಗಳನ್ನು ಮಾಡಿಸುತ್ತವೆ.

ನಮ್ಮ ನಿರ್ಧಾರಗಳು ನಿರ್ಣಯಗಳು ಕೆಲವೊಂದು ದೀರ್ಘ ಆಯುಷ್ಯವನ್ನೂ ಮತ್ತೆ ಕೆಲವೊಂದು ಒಂದೆರಡು ದಿನಗಳಲ್ಲಿ ಅವಸಾನವನ್ನೂ ಹೊಂದುತ್ತದೆ. ನಿರ್ಧಾರಗಳಲ್ಲಿ ಬದಲಾವಣೆಗೆ ಸಣ್ಣ ಕಾರಣಗಳು ಸಾಕು. ಆದರೆ ನಂಬಿಕೆಗಳು ಹಾಗಲ್ಲ. ನಂಬಿಕೆಗಳು ಬದಲಾಗಲು ದೊಡ್ಡ ಘಟನೆಗಳು ಆಗಬೇಕು. ಘಟನೆಗಳ ಅನುಭವದ ಮೇಲೆ ನಂಬಿಕೆಗಳು ಬದಲಾಗುತ್ತವೆ.

ಬಹಳಷ್ಟು ಉದಾಹರಣೆಗಳು ನಂಬಿಕೆ ಮತ್ತು ನಿರ್ಧಾರಗಳಿಗೆ ಕೊಡಬಹುದು. ಎಲ್ಲೋ ಕೇಳಿದ ಒಂದು ಕತೆಯಿದೆ. ಒಬ್ಬ ಸನ್ಯಾಸಿ ಸುಮಾರು ವರ್ಷಗಳಿಂದ ದೈವಸಾಕ್ಷಾತ್ಕಾರಕ್ಕಾಗಿ ತಪಸ್ಸು ,ಯಾಗ ಮಾಡುತ್ತಿದ್ದ. ಯಾಗಕ್ಕೆ ಪ್ರತಿದಿನವೂ ಒಂದೊಂದು ಬಲಿಯನ್ನು ನೀಡುತ್ತಿದ್ದ. ಎಷ್ಟು ಬಲಿಕೊಟ್ಟರೂ ದೇವರು ಪ್ರತ್ಯಕ್ಷವಾಗಿರಲಿಲ್ಲ. ಒಂದು ದಿನ ರಾಜನು ಸನ್ಯಾಸಿಯ ಯಾಗಶಾಲೆಗೆ ಬಂದು ಯಾಗದ ಬಗೆಗೆ ಕೇಳಿದ. ಇವತ್ತಿನ ಯಾಗದಲ್ಲಿ ನಾನು ಬಲಿ ಕೊಡುತ್ತೇನೆ ಎಂದು ಸನ್ಯಾಸಿಯೊಡನೆ ಹೇಳಿ ಆವತ್ತಿನ ಬಲಿಯನ್ನು ಕೊಟ್ಟ.

ಅಂದು ದೇವಿ ಪ್ರತ್ಯಕ್ಷಳಾದಳು. ಸನ್ಯಾಸಿಗೆ ಆಶ್ಚರ್ಯವೂ, ಕೋಪವೂ ಬಂತು. ದೇವಿಯೊಡನೆ ಕೇಳಿದ. ನಾನು ಸುಮಾರು ವರ್ಷಗಳಿಂದ ಯಾಗವನ್ನು ಮಾಡುತ್ತಿದ್ದೇನೆ, ಬಲಿಯನ್ನೂ ನೀಡುತ್ತಿದ್ದೇನೆ. ನನಗೆ ಪ್ರತ್ಯಕ್ಷವಾಗದ ನೀನು, ಈ ರಾಜನ ಒಂದು ಬಲಿಗೆ ಯಾಕೆ ಪ್ರತ್ಯಕ್ಷಳಾದೆ ?

ನೋಡಪ್ಪಾ, ನೀನಾದರೂ ಬಲಿಯನ್ನು ನೀಡುವಾಗ ಇದಕ್ಕೆ ಪ್ರತ್ಯಕ್ಷವಾಗದೇ ಇದ್ದರೆ ಇನ್ನೊಂದು ಬಲಿ ಎಂದು ನಿರ್ಧರಿಸಿ ಕೊಡುತ್ತಿದ್ದೆ. ಆದರೆ ರಾಜನು ಈ ಬಲಿಯಲ್ಲಿ ನೀನು ಪ್ರತ್ಯಕ್ಷಳಾಗದೇ ಇದ್ದರೆ ನಾನೇ ಸಾಯುತ್ತೇನೆ ಎಂದು ನಿರ್ಧಾರ ಮಾಡಿ ಬಲಿ ಕೊಟ್ಟ. ಆ ನಿರ್ಧಾರದ ತೀಕ್ಷ್ಣತೆ ಹೆಚ್ಚು ಎಂದಳು ದೇವಿ.

ನಮ್ಮ ನಿರ್ಧಾರಗಳೂ ಹೀಗೆಯೇ ತಾನೆ?. ಆದರೆ ಆಗಲಿ ಎನ್ನುವ ನಂಬಿಕೆಯೊಂದಿಗೆ ಮಾಡುವಂತಹ ನಿರ್ಧಾರಗಳು ಕೊನೆ ಮುಟ್ಟದೇ ನಿರಾಸೆಯನ್ನು ಹೊಂದುತ್ತವೆ. ಅಚಲವಾದ ನಿರ್ಧಾರವು ಒಳ್ಳೆಯ ಗುರಿಸಾಧನೆಗೆ ಬಹಳ ಮುಖ್ಯ ಮತ್ತು ತೀಕ್ಷ್ಣ ನಿರ್ಧಾರಗಳು ಕಂಡಿತವಾಗಿ ಗುರಿಯನ್ನು ಸಿದ್ಧಿಸುತ್ತದೆ.

Leave a Reply

This site uses Akismet to reduce spam. Learn how your comment data is processed.