ಶುಭಾ ಗಿರಣಿಮನೆ

ಒಂದು ಸಮಾರಂಭಕ್ಕೋ, ಅಥವಾ ಸ್ನೇಹಿತರ ಜೊತೆಗೋ ಇದ್ದಾಗ ಇದೊಂದು ಮಾತು ಆಗಾಗ ಕೇಳುತ್ತೇವೆ. ಆ ದೇವರು ಒಳ್ಳೆಯವರಿಗೆ ಜಾಸ್ತಿ ಕಷ್ಟ ಕೊಡ್ತಾನೆ ಅಂತ. ಇನ್ನೊಂದು ನಾವು ಎಷ್ಟು ಒಳ್ಳೆತನದಲ್ಲಿ ಇದ್ದರೂ ನಮಗೆ ಯಾಕೆ ಈ ಜನ ಕೆಟ್ಟವನನ್ನಾಗಿ ಬಿಂಬಸ್ತಾರೋ ಅಂತ. ಇದು ಎಲ್ಲರ ಪ್ರಶ್ನೆ. ನಾವು ದೇವರ ಪೂಜೆ ಮಾಡ್ತೇವೆ. ದಾನ ಧರ್ಮಾದಿಗಳನ್ನು ಮಾಡ್ತೇವೆ. ನಮ್ಮ ಹಿರಿಯರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ. ಹಿರಿಯರು ಮಾಡಿಟ್ಟ ಸಂಪತ್ತಿಗಿಂತ ಈಗ ದುಪ್ಪಟ್ಟು ಮಾಡಿದ್ದೇವೆ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದೇವೆ ಆದರೂ ಸಮಾಜ ನನ್ನನ್ನು ಕಡೆಗಾಣಿಸುತ್ತದೆ. ಹಾಗೆ ನನಗಿಂತ ಮತ್ತೊಬ್ಬನು ಚೆನ್ನಾಗಿದ್ದಾನೆ ಎಂದು ತಿಳಿದುಕೊಳ್ಳುತ್ತಾನೆ ಮನುಷ್ಯ.

ಈ ಮನುಷ್ಯನಲ್ಲಿ ಇರುವ ಎರಡು ತಪ್ಪುಗಳು ಅಂತ ಹೇಳಿದೆನಲ್ಲ ಅದರಲ್ಲಿ ಒಂದು ಬೇರೆಯವರೆಲ್ಲ ಚೆನ್ನಾಗಿ ಸುಖವಾಗಿದ್ದಾನೆ ಎಂದುಕೊಳ್ಳುವುದು ಇನ್ನೊಂದು ನಾನು ಒಳ್ಳೆಯವನು ಎಂದುಕೊಳ್ಳುವುದು. ನಿಜವಾಗಿ ಇದೆರಡು ತಪ್ಪೆ. ಯಾಕೆಂದರೆ ಪ್ರತೀ ಮನುಷ್ಯನಿಗೂ ಕಷ್ಟ ಎನ್ನುವದು ಇದ್ದೆ ಇರುತ್ತದೆ. ಆ ಕಷ್ಟಗಳ ಪ್ರಮಾಣ, ಸಮಯ ಬದಲಾಗಿರಬಹುದು ಅಷ್ಟೆ.

ಶ್ರೀಮಂತ ಯಾವುದಕ್ಕೂ ಕೊರತೆ ಇಲ್ಲ. ಆಳು ಕಾಳು ಕಾರು ಬಂಗಲೆ ಬಿಜನೆಸ್ಸು ಹೆಸರು ಎಲ್ಲ ಎಲ್ಲವೂ ಇದೆ ಅಂತ ಇವತ್ತು ನಾವು ಭಾವಿಸುತ್ತೆವೆ. ಆದರೆ ಅದೆಷ್ಟೋ ಶ್ರೀಮಂತಿಕೆ ಇರುವವರು ಎಂದುಕೊಂಡಿರುತ್ತೇವಲ್ಲ ಮತ್ತೆ ನಾಲ್ಕೇ ದಿನದಲ್ಲಿ ಅವರ ಪರಿಸ್ಥಿತಿ ಹೇಳಲಾಗದಷ್ಟು ಕಳಚಿ ಬಿದ್ದಿರುತ್ತದೆ. ಇದನ್ನು ನಾವು ಕಂಡಿದ್ದೇವೆ. ಅಷ್ಟು ಹೀನಾಯ ಪರಿಸ್ಥಿತಿಗೆ ಹೇಗೆ ಬಿದ್ದ ಆ ವ್ಯಕ್ತಿ?

ಅಯ್ಯೋ ಅದೆಷ್ಟು ಒಳ್ಳೆಯ ಮನುಷ್ಯನಾಗಿದ್ದ. ಬಡವರು ಕೈ ತೋರಿಸಿದರೆ ಎಲ್ಲ ಸಹಾಯ ಮಾಡುತ್ತಿದ್ದ. ಅಂಥವನಿಗೆ ಹಾಗಾಗಬಾರದಿತ್ತು. ಇಲ್ಲಿ ಎರಡು ವಿಷಯ. ಒಂದು ಆತ ಒಳ್ಳೆಯವನು ಎನ್ನುವುದು, ಇನ್ನೊಂದು ಆತನೇ ಸರಿ ಎಂದು ನಿರ್ಧರಿಸಿಬಿಡುವುದು. ಮನುಷ್ಯನ ಲೋಪಗಳು ಕೆಲವು ಕಾಣಿಸುವುದೇ ಇಲ್ಲ.

ದೇವರಿಗೆ ಶುದ್ಧವಾದದ್ದನ್ನು ಅರ್ಪಿಸಬೇಕು. ಅದು ಎಸಳು ಹೂವಾದರೂ ಸರಿ ಶುದ್ಧ ಮನಸ್ಸಿಂದ ಶುದ್ದ ಎಸಳಿಂದ ಪೂಜಿಸಿದರೆ ಆತ ತೃಪ್ತಿಯಾಗುತ್ತಾನೆ ಎನ್ನುವುದು ಭಕ್ತರ ನಂಬಿಕೆ. ಹಾಗಿರುವಾಗ ವರವನ್ನು ಕರುಣಿಸುವ, ಎಲ್ಲವನ್ನು ಒಳಿತು ಮಾಡುವ ದೇವರಿಗೆ ಅಲಂಕಾರ ಮಾಡದಿದ್ದರೆ ಎಷ್ಟು ಚೆನ್ನ ಅನ್ನಿಸುವುದು ಮನುಷ್ಯನಿಗೆ. ಆಗ ಹಣ ನೀಡಿ ಚರಂಡಿಯ ಪಕ್ಕದಲ್ಲಿ ಇಟ್ಟ ಹೂವನ್ನು, ಹೂವಿನ ಹಾರವನ್ನು ತಂದು ದೇವರ ಮುಡಿಗೆ ಏರಿಸುತ್ತೇವೆ. ಶುದ್ಧವಾದದ್ದು ಅರ್ಪಿಸಿದರೆ ಆತ ವರ ನೀಡುವನು. ಆದರೆ ಈ ರೀತಿಯ ಹೂವನ್ನು ಹಾಕಿದಾಗ ಆ ದೇವರ ಎದೆಗೆ ಗದೆಯಿಂದ ಹೊಡೆದ ಹಾಗಂತೆ. ಆಗ ಆ ದೇವರು ಏನು ಮಾಡಬೇಕು, ಸುಖ ಕೊಡುವುದೋ, ಕಷ್ಟ ಕೊಡುವುದೋ.

ನಿಜವಾಗಿ ದೇವರ ಸೇವೆ ಅಂತ ಕಂತೆ ಕಂತೆ ಹಣ ಕೊಟ್ಟು ಆ ಕೊಳಚೆಯ ಪಕ್ಕದಲ್ಲಿದ್ದ ಹೂವು ತಂದು ಜನರಲ್ಲಿ ಎಂಥಹ ಒಳ್ಳೆಯ ಮನುಷ್ಯ ಎನ್ನಿಸಿಕೊಂಡಿದ್ದ. ಆದರೆ ಅವನ ಪಾಪದ ಫಲವೊಂದು ಅಲ್ಲಿ ಕಾದಿತ್ತು. ಹಾಗೆ ಬಡವನೆಂದು ಮನೆಯ ಹಿತ್ತಲ ಬಳ್ಳಿಯಲ್ಲಿ ಅರಳಿದ ಮಲ್ಲಿಗೆಯನ್ನು ಮಾಲೆ ಮಾಡಿ ತಂದಿದ್ದ ಆತನ ಸಿರಿತನ ಹೆಚ್ಚಿತ್ತು ಅಂತಾದರೆ ನಾವು ಯಾರನ್ನು ಒಳ್ಳೆಯವರು ಯಾರನ್ನು ಕೆಟ್ಟವರು ಎಂದು ಹೇಳಬೇಕು. ನಮ್ಮ ಕಣ್ಣಿಗೆ ಹಣ ಕೊಟ್ಟು ಹೂವನ್ನು ತಂದವನೇ ಶ್ರೇಷ್ಟನಾಗುತ್ತಾನೆ ಅಲ್ಲವೆ.

ಕಷ್ಟ ನನಗೆ ಮಾತ್ರ, ನಾನು ಒಳ್ಳೆಯವನು ಎನ್ನು ಈ ತಪ್ಪು ಕಲಪನೆಯೇ ನಮ್ಮಲ್ಲಿ ಮತ್ತಷ್ಟು ತಪ್ಪನ್ನು ಮಾಡಿಸುತ್ತದೆ. ಕೆಲಸದ ಆಳುಗಳಿಗೆ ಊರಲ್ಲಿ ಕೊಡುವ ಸಂಬಳಕ್ಕಿಂತ ಒಂದು ರೂಪಾಯಿ ನಾನು ಹೆಚ್ಚಿಗೆ ಕೊಡುತ್ತೇನೆ. ಹಾಗಾಗಿ ಹತ್ತು ನಿಮಿಷ ಹೆಚ್ಚಿಗೆ ಕೆಲಸ ಮಾಡಬೇಕು ಎಂದು ಹೇಳುವುದು ಹಕ್ಕು. ಒಂದು ವೇಳೆ ಅನಿವಾರ್ಯತೆಯಲ್ಲಿ ಆ ಹತ್ತು ನಿಮಿಷ ಮೊದಲೇ ಕೆಲಸ ಬಿಟ್ಟಾಗ ಮಾರನೇ ದಿನ ಅದರ ಲೆಕ್ಕ ಚುಕ್ತ ಮಾಡಬೇಕು ಎನ್ನುವ ಕರಾರು ಇದ್ದಾಗ ಮೇಲ್ನೋಟಕ್ಕೆ ಹೆಚ್ಚಿಗೆ ಸಂಬಳ ಕೊಟ್ಟಿರುವುದು ಮಾತ್ರ ಸಮಾಜಕ್ಕೆ ಕಾಣುತ್ತದೆ. ಅದರ ಹಿಂದಿನ ಸೂಕ್ಷ್ಮತೆ ಅರಿವಿಗೆ ಬರುವುದೇ ಇಲ್ಲ. ಆಗ ದುಡಿಸಿಕೊಂಡ ವ್ಯಕ್ತಿ ಅದ್ಹೇಗೆ ಒಳ್ಳೆಯವನಾಗಿರುತ್ತಾನೆ. ಒಳ್ಳೆಯವರಲ್ಲ ಎಂದ ನಂತರ ಅದಕ್ಕೆ ತಕ್ಕನಾದ ಒಂದಿಷ್ಟು ಕಷ್ಟವೂ ಬರಲೇ ಬೇಕಲ್ಲವೆ.

ಮೊದಲು ನಾನು ಒಳ್ಳೆಯವನು ಎಂದು ತಿಳಿಕೊಳ್ಳುವುದು ಬಿಡಬೇಕು. ನನಗೆ ಈ ಕಷ್ಟ ಬರಲು ಕಾರಣ ಏನು, ನಾನು ಎಲ್ಲಿ ತಪ್ಪಿದ್ದೇನೆ ಎಂದು ಯೋಚಿಸಬೇಕು. ಎಂಥಹ ಸಾಮಾನ್ಯನೇ ಇರಲಿ, ಅನಕ್ಷರಸ್ಥನೇ ಇರಲಿ ತನ್ನ ಕೆಲಸ ನಡೆ ನುಡಿಯನ್ನು ಆತ್ಮವಿಮರ್ಶೆಗೆ ಒಡ್ಡಿಕೊಂಡಾಗ ತಾನೆಷ್ಟು ಒಳ್ಳೆಯವನು ಎನ್ನುವುದು ಅರ್ಥವಾಗುತ್ತದೆ. ಆಗ ಬಂದ ಕಷ್ಟ ಏನು ಹಾಗೂ ಅದನ್ನು ಹೇಗೆ ನಿವಾರಿಸುವುದು, ಹೇಗೆ ಎದುರಿಸುವುದು ಎಂದೆಲ್ಲ ತಿಳಿಯುತ್ತ ಸಾಗುತ್ತದೆ.

ನಾನು ಒಳ್ಳೆಯವನು, ಅವನು ಸುಃಖವಾಗಿದ್ದಾನೆ ಎನ್ನುವ ಎರಡು ವಾಕ್ಯಗಳು ದೊಡ್ಡ ಭ್ರಮೆ. ಎಲ್ಲರಲ್ಲೂ ನೆಗೆಟಿವ್ ಎನ್ನುವ ಒಂದು ಗುಣ ಇದ್ದೆ ಇರುತ್ತದೆ. ಕೆಲವರಲ್ಲಿ ಜಾಸ್ತಿ ಕೆಲವರಲ್ಲಿ ಕಡಿಮೆ ಪ್ರಮಾಣವಷ್ಟೆ. ಹಾಗೆ ಎಲ್ಲರಿಗೂ ಸುಖಮಾತ್ರ ಇರಲು ಸಾಧ್ಯವೇ ಇಲ್ಲ. ಕಷ್ಟ ಇದ್ದೇ ಇರುತ್ತದೆ. ಕಷ್ಟವಿಲ್ಲದ ಮನುಷ್ಯನ ಬಾಳು ಜನ್ಮವೇ ಅಲ್ಲವಂತೆ. ಹಾಗಾಗಿ ಈ ಎರಡು ಮಾತಿನ ಭ್ರಮೆಯನ್ನು ನಾವೇ ಕಳಚಿಕೊಂಡು ಹೊರಬಂದಾಗ ನಾನೂ ಕೆಲವು ತಪ್ಪು ಮಾಡಿದ್ದೇನೆ ಎನ್ನುವದು ತಿಳಿಯುತ್ತದೆ. ಹಾಗೂ ಅವನಿಗಿಂತ ನಾನು ಸುಖಿ ಎನ್ನುವದು ಅರ್ಥವಾಗುತ್ತದೆ.

Leave a Reply

This site uses Akismet to reduce spam. Learn how your comment data is processed.