ಮಗನೊಡನೆ ಪಂದ್ಯದಲಿ ಸೋತಾಯ್ತು ಸುಮ್ಮನೆ
ಗೆದ್ದವನಿಗೊಂದು ಕತೆ ಹೇಳಬೇಕಂತೆ;
ನನ್ನದೇ ಕತೆಯನ್ನು ಹೇಳುವೆನು ಅವನಿಗೆ
ಹಳೆಯ ನೆನಪಲಿ ಮಿಂದು ಮಣಿಯುವಂತೆ

ಹಂಸಗಳ ದೌತ್ಯದಲಿ ಮದುವೆಯಾಯಿತು ನನಗೆ
ದಮಯಂತಿ ಎಂಬವಳು ನನ್ನ ಮಡದಿ;
ದೇವತೆಗಳೈವರನು ತಳ್ಳಿ ಹಾಕಿದಳವಳು
ದೂಡಿ ಬಂದಳು ನಾಕ ಸಮ್ಮೋಹದಿ!

ಕಲಿಗೆ ಏನಾಯಿತೋ ಪುಷ್ಕರನ ಕಾಡಿಸಿದ
ಅವನಿಂದ ಪಗಡೆಯಲಿ ಸೋಲಾಯಿತು.
ರಾಜ್ಯ ಹೋಗಲಿ ಮತ್ತೆ ವೈಭೋಗವೂ ನಡೆಯೆ
ಹೆಂಡತಿಯೆ ಪಣವೆನ್ನೆ ಕೋಪ ಬಂತು.

ಉಟ್ಟಿರುವ ಬಟ್ಟೆಯಲೆ ದಮಯಂತಿ ಕೈ ಹಿಡಿದು
ಕಾನನದ ದಾರಿಯಲಿ ನಡೆಯುತಿದ್ದೆ;
ಹಂಸಗಳು ವಸ್ತ್ರವನು ಎಳೆದು ನಭಕೇರಿದವು
ಮಾನಿನಿಯ ಸೆರಗೆಳೆದು ಮಾನ ಹೊದ್ದೆ!

ನನ್ನ ಕಷ್ಟಗಳಲ್ಲಿ ಅವಳ ಪಾಲೇನಿಹುದು
ಎನುವ ಯೋಚನೆಯಲ್ಲಿ ಬಿಟ್ಟು ಹೋದೆ;
ಭೀಮಕನ ಮನೆಯಲ್ಲಿ ಹೇಗಾದರೂ ಇರಲಿ
ಎನುವ ಆಸೆಯ ಹೊತ್ತು ಮುಂದೆ ನಡೆದೆ.

ವಿಷದ ಕಾರ್ಕೋಟಕನ ಅಗ್ನಿಯಿಂ ಬಿಡಿಸಿದೆನು
ಹಾವು ಬುದ್ಧಿಯಲೊಮ್ಮೆ ಕಚ್ಚಿಬಿಟ್ಟ
ಒಳಗಿರುವ ಕಲಿಗಿಹುದು ಕಷ್ಟ ಎಂದೆನೆ ನುಡಿದು
ದೇವತ್ವದಲಿ ಆತ ವರವ ಕೊಟ್ಟ.

ಮುಂದೇನು ಎನ್ನುವೆಡೆ ಋತುಪರ್ಣ ಸಿಕ್ಕಿದನು
ಅವನ ಚಾಕರಿಯಾಯ್ತು ದಿನಗಳೆಲ್ಲ
ಅಶ್ವಪಾಲಕನಾದೆ, ಮತ್ತೆ ಸಾರಥಿಯಾದೆ
ಬೇಟೆಗಳು ಕೂಟಗಳು ಮುಗಿಯಲಿಲ್ಲ;

ಒಂದೊಮ್ಮೆ ದಮಯಂತಿ ನೆನಪಾಗಿ ಕಣ್ಣಂಚು
ಜಾರುವುದು ಹನಿಯಾಗಿ ಕೆನ್ನೆಯೊಳಗೆ;
ಅವಳದೇ ಕತೆಯನ್ನು ನಾಟಕವನಾಡಿದರು
ಬಯಲಾಟವೆಂದವರು ಊರಿನೊಳಗೆ.

ಮತ್ತೊಂದು ದಿನ ಹೀಗೆ ಅವಳದೇ ವಾರ್ತೆಯದು
ಎರಡನೇ ಮದುವೆಯನು ರಚಿಸಿದಂತೆ;
ಋತುಪರ್ಣನೂ ಕೂಡ ಆಸೆಯಲಿ ಮೈಮರೆದ
ಅಷ್ಟು ದೂರಕೆ ಹೋಪ ದೊಡ್ಡ ಚಿಂತೆ.

ನನ್ನ ದಮಯಂತಿಯದು ಎರಡನೇ ಮದುವೆಗೆ
ನಾನೆ ಸಾರಥಿಯಂತೆ ಮದುಮಗನಿಗೆ!
ಏನಾದರಾಗಲಿ ಎಂದು ಮನಸಿನ ದೃಢದಿ
ಹಾರಿಸಿದೆ ರಥವನು ವಿದರ್ಭದೆಡೆಗೆ.

ಇದು ಅರಿತ ದಮಯಂತಿ ಅನುಮಾನದಲಿ ಹೀಗೆ
ನೀರು ಬೆಂಕಿಯು ಇರದೆ ಅಡುಗೆಗೆಂದು
ಸಮವಿಲ್ಲದಾ ನೆಲವ ನಿದಿರೆಗೆಂದೇ ಬಿಟ್ಟು
ಕಂಡು ಪ್ರಮಾಣದಲಿ ನಳನು ನಾನೆಂದು.

ಮೊದಲಿನಾ ರೂಪದಲಿ , ಮತ್ತೆ ವೈಭೋಗದಲಿ
ಮತ್ತವಳ ವರಿಸಿದೆನು ಸೊಗಸಿನಲ್ಲಿ
ಕಾಲವೂ ಬದಲಾಗಿ ರಾಜ್ಯಕೋಶವ ಪಡೆದೆ
ಮೊದಲಿಗಿಂತಲು ಹೊಳಪು ಬಂದಿತಲ್ಲಿ!

ಇಂತ ಪುಣ್ಯದ ಸತಿಯ ಪಡೆದ ನಾನೇ ಧನ್ಯ
ಲೋಕಪಾವನಿಯಾಕೆ ನನ್ನ ಮಡದಿ;
ಇತಿಹಾಸದೊಳಗಿಲ್ಲ, ಮುಂದೆ ಬಲ್ಲವರಾರು
ದಮಯಂತಿಯೇ ಉಪಮೆ ಸತಿಗೆ ಜಗದಿ.

Photo- Google
Photo : Google

Leave a Reply

This site uses Akismet to reduce spam. Learn how your comment data is processed.