ತಿಂಗಳಾಯಿತು ಮುಂದು, ಅನುಮಾನದಲಿ ಸೊಗಸು
ಕಳವಳವು ದಿನವುರುಳೆ, ಹಗಲೆ ಇರುಳು;
ಇನ್ನೇನು ಇರುವಿಕೆಯ ಒಪ್ಪಿರುವ ಗಳಿಗೆಯಲಿ
ಒಂದು ತಿಂಗಳು ಎಂದು ಹೇಳಿದವಳು!

ಏನು ತಿನ್ನುವುದಿನ್ನು? ತಿನ್ನಬಾರದು ಏನು?
ಹೇಗೆ ನಡೆದರೆ ಚೆನ್ನ ಎನುತ ಭಯದಿ;
ಎರಡು ತಿಂಗಳಿನಲ್ಲಿ ಬದಲಾದಳೋ ಹುಡುಗಿ
ಅಂಜಿಕೆಯ ಭರವಸೆಯ ಉಳಿಸಿ ಮನದಿ!

ಮೂರು ತಿಂಗಳು ತುಂಬಿ ಜಗವೆಲ್ಲ ತಿಳಿ ಮಂಜು
ಊಟ ಕರಗದು, ಹುಳಿಯ ತೇಗು ಗೋಜು;
ಇದಕೆ ಉಪ್ಪಿಲ್ಲವೋ, ಇದು ಹುಳಿಯ ಹಿಡಿದಿಲ್ಲ
ಎಂದೆನುವ ಮಾತುಗಳು ಬಹಳ ತೇಜು

ನಾಲ್ಕರಲಿ ಬಹಳಿಲ್ಲ, ಯಾವ ನಿಶ್ಚಯವಿಲ್ಲ
ಎಲ್ಲವೂ ಸೋಜಿಗವು ಕಣ್ಣ ಹೊಳಪು
ಚಿತ್ರದಲಿ ಬಂದಂತೆ ಕನಸಿನಲಿ ಕಂಡಂತೆ
ಹೋದ ಕಡೆಯೆಲ್ಲವೂ ತಂಪು, ಬೆಳಕು.

ಐದು ಕಳೆಯಿತು ಹೀಗೆ ಜಗವು ನೋಡುವ ರೀತಿ
ಜನರು ಕೇಳುವ ಪ್ರಶ್ನೆ ಗಂಡೊ ಹೆಣ್ಣೊ
“ನಿನ್ನಾಸೆಯಂತಾಗಿ ಹೆರು ನೀನು ಸುಖದಲ್ಲಿ
ಆದರೂ ಗಂಡುಮಗು ಆಗಲಿನ್ನು”!

ಆಯಾಸ ಬಳಲಿಕೆಯು ಕಂಡು ಕಾಣುವ ಹೊತ್ತು
ನಿದ್ದೆ ಬರುವುದು ಹಗಲು, ರಾತ್ರಿಯಿಲ್ಲ
ಆರರಲಿ ಬೆಳವಣಿಗೆ ಗುರುತಿಸುತ ಸಾಗುವುದು
“ಇನ್ನೆಷ್ಟು ತಿಂಗಳಿದೆ? ಹೇಳು ನಲ್ಲ”!

ಹೊಸ ದಿರಿಸು ಬೇಕಿನ್ನು, ಸಡಿಲಾಗಿ ಉಡಬೇಕು
ಮಗು ಕಷ್ಟ ಪಡಬಹುದು ಹೊಟ್ಟೆಯೊಳಗೆ
ಎನುವ ಚಿಂತೆಗಳೆಲ್ಲ ಏಳರಿಂದಲೆ ಶುರುವು
ಹೇಗೆ ಮಲಗಲಿ ಎನುವ ಪ್ರಶ್ನೆಯೊಳಗೆ.

ನೋಡಿಲ್ಲಿ ಚುಚ್ಚುವುದು, ಇಲ್ಲಿ ಓಡಾಡುವುದು
ಎನುವ ವಿಸ್ಮಯ ತಾನೆ ಎಂಟರೊಳಗೆ?
ಪತಿಯ ಕೆನ್ನೆಯ ತನ್ನ ಹೊಟ್ಟೆಮೇಲಿರಿಸುತಲಿ
ಸ್ಪರ್ಷವನು ಅನುಭವಿಸುವೊಂದು ಘಳಿಗೆ.

ಒಂಭತ್ತು ತುಂಬಿತು, ಇನ್ನೆಷ್ಟು ದಿನವಿಹುದು?
ಸುಖದಲ್ಲಿ ಹೆತ್ತು ನಾ ಮಲಗಬೇಕು;
ಎನುವಲ್ಲಿ ಅವರಿವರ ಮಾತುಗಳ ಮನವಿರಿಸಿ
ಕಾಣದಿಹ ದೇವರಿಗೆ ಹರಕೆ ಸಾಕು.

ಹತ್ತನೆಯ ತಿಂಗಳಲಿ ಹೆತ್ತು ಮಲಗಿದಳಾಕೆ
ಹೆರಿಗೆ ನೋವನು ಮರೆತು ಕಣ್ಣಂಚಲಿ;
ಕಂದನಳುವುದ ಕೇಳಿ ಹಾಲಾಯ್ತು ಮನವೆಲ್ಲ
ಬಿಡಿಸಿದಳು ಸಾರ್ಥಕದ ರಂಗವಲ್ಲಿ.

One thought on “ನವಮಾಸ ಹೊತ್ತವಳು ಹೆತ್ತಾಗ!”

Leave a Reply

This site uses Akismet to reduce spam. Learn how your comment data is processed.