ಮನುಷ್ಯನ ಪ್ರಭಾವಿ ಅಂಗಗಳಲ್ಲಿ ನಾಲಿಗೆ ಬಹಳ ಮುಖ್ಯವಾದದ್ದು. ಜಗತ್ತಿನ ಬೇರೆ ಪ್ರಾಣಿಗಳಿಗಿಂತಲೂ ಮನುಷ್ಯನ ನಾಲಿಗೆ ಬಳಕೆಯಾಗುವುದು ಬೇರೆ ಕಾರಣಕ್ಕೆ. ಎಲ್ಲಾ ಪ್ರಾಣಿಗಳು ನಾಲಿಗೆಯನ್ನು ಆಹಾರದ ಪಚನಕ್ಕೆ, ರುಚಿಗೆ ಬಳಸಿದರೆ ಮನುಷ್ಯ ಅದನ್ನೂ ಮೀರಿ ಮಾತಿಗೆ ಬಳಸುತ್ತಾನೆ.

ಆತನ ನಾಲಿಗೆ ಸರಿ ಇಲ್ಲ! ಎಂದು ಯಾರಾದರೂ ಅಂದರೆ ಆತನ ರುಚಿಯ ಬಗೆಗೆ ಹೇಳಿದ್ದಲ್ಲ, ಹೊರತಾಗಿ ಮಾತಿನ ಶುಚಿಗೆ ಸಂಬಂಧಿಸಿದ್ದು ಎಂದೇ ಅರ್ಥ. ಓ ಅವಳ ನಾಲಿಗೆ ಎಷ್ಟು ಉದ್ದ ಎಂದು ಹೇಳಿದರೆ ನಾಲಿಗೆಯನ್ನು ಅಳತೆ ಮಾಡಿದ್ದೇ? ಆಕೆಯ ವಾಚಾಳಿತನವನ್ನು ಹೇಳಿದ್ದು. ಇನ್ನೂ ಜಾಸ್ತಿ ಹಾರಾಡಿದ್ರೆ ನಾಲಿಗೆ ಕಟ್ ಮಾಡ್ತೀನಿ ಅನ್ನೋ ಬೆದರಿಕೆಯನ್ನೂ ಕೇಳಿರಬಹುದು.

ಜಗತ್ತಿನಲ್ಲಿ ಎಷ್ಟೋ ನಾಲಿಗೆಗಳು ಯುದ್ಧಗಳನ್ನು ಮಾಡಿರಬಹುದು. ಈಗಲೂ ನಾಲಿಗೆಯ ಕಾರಣದಿಂದ ಯುದ್ಧಗಳು ನಡೆಯುತ್ತಿರಬಹುದು. ರಾಜಕಾರಣಿಗಳಿಗೆ ನಾಲಿಗೆಗಿಂತ ಹರಿತವಾದ, ಪರಿಣಾಮಕಾರಿಯಾದ ಬೇರೆ ಹತ್ಯಾರು ಇಹುದೆ?

ಸ್ವಾಮೀಜಿಗಳು, ಯೋಗಿಗಳು ಮೌನವಾಗಿ ತಮ್ಮ ನಾಲಿಗೆಯನ್ನು ಹರಿತ ಮಾಡಿಕೊಂಡು ಮುಂದೆ ಜನಮಾನಸದ ಮೇಲೆ ಪ್ರಯೋಗಿಸಿ ತನು,ಧನ ಪೋಷಣೆಗೈಯ್ಯುತ್ತಾರೆ. ಅಮ್ಮನ, ಅಪ್ಪನ, ಹೆಂಡತಿ/ಗಂಡನ ನಾಲಿಗೆಯ ತೀಕ್ಷ್ಣತೆಗೆ ಹೆದರಿ ಎಷ್ಟೋ ದಾಂಪತ್ಯಗಳು, ಸಂಬಂಧಗಳು ಉಳಿಯುತ್ತವೆ.

ನಾಲಿಗೆಯು ಬೇಕಾದಲ್ಲಿ ಹೊರಳದೆ, ಬೇಡವಾದಲ್ಲಿ ಹೆಚ್ಚು ಹೊರಳಿ ಜಗತ್ತಿನ ಎಷ್ಟೋ ಅನಿರ್ಧಿಷ್ಟ ಘಟನೆಗಳಿಗೆ ಪೂರಕವಾಗುತ್ತದೆ. ಪಿಸುಮಾತುಗಳಿಗೆ, ಕಿವಿಮಾತುಗಳಿಗೆ, ಚುಚ್ಚುಮಾತುಗಳಿಗೆ, ಬೈಗುಳಕ್ಕೆ … ಹೀಗೆ ಎಷ್ಟೊಂದೆಲ್ಲಾ ರೀತಿಯ ಮಾತುಗಳಿಗೆ ರುಚಿಕಟ್ಟಿಸಬೇಕು ಈ ನಾಲಿಗೆ!

ಒಡಲೆಂಬ ಹುತ್ತಕ್ಕೆ ನುಡಿವ ನಾಲಿಗೆ ಸರ್ಪ
ಕಡುರೋಷವೆಂಬ ವಿಷವೇರಿ ಸಮತೆ ಗಾರುಡಿಗನಂತಕ್ಕು ಸರ್ವಜ್ಞ !

ಈ ಸರ್ವಜ್ಞನ ವಚನ ಬಹಳ ಪ್ರಸಿದ್ಧವಾದದ್ದು. ಒಡಲು ಎಂಬ ಹುತ್ತಕ್ಕೆ ನಾಲಿಗೆಯೇ ಸರ್ಪ. ಪ್ರೀತಿಯಿಲ್ಲದ, ಕಡುರೋಷದ ವಿಷವು ಏರಿ ಸಮತೆ/ ಸಮಾಧಾನವು ಮಾಯವಾಗಬಹುದು ಎಂದು ಸರ್ವಜ್ಞನ ಎಚ್ಚರಿಕೆ.

ಆಚಾರವಿಲ್ಲದ ನಾಲಿಗೆ ಎಂದು ದಾಸರು ಹೇಳಿದ ನಾಲಿಗೆಯೂ ಇದೇ. ನಾಲಿಗೆ ಕುಲವನ್ನು ಹೇಳಿತು , ನಾಲಿಗೆ ಒಳ್ಳೆಯದಾದರೆ ಜಗತ್ತೆಲ್ಲ ಒಳ್ಳೆಯದು ಎಂಬೆಲ್ಲ ಗಾದೆಗಳೂ ಇವೆ. ಹೀಗಾಗಿ ಬಹಳಕಾಲಗಳಿಂದ ಜಗತ್ತನ್ನು ಒಂದು ರೀತಿ ಆಳುವಂತಹ ಶಕ್ತಿಯನ್ನು ನಾಲಿಗೆ ಪಡೆದಿದೆ.

ಕೆಲವಾರು ಸಂದರ್ಭಗಳಲ್ಲಿ “ಅಯ್ಯೋ, ಹಾಗೆ ಹೇಳಬಾರದಿತ್ತು,” ಓಹ್ ಇದನ್ನು ಹೀಗೂ ಹೇಳಬಹುದಿತ್ತು” ಛೇ, ಇದನ್ನೊಂದು ಹೇಳಬಹುದಿತ್ತಲ್ಲ” ಎಂದು ನಾವೆಲ್ಲರೂ ನಾಲಿಗೆ ಕಚ್ಚಿಕೊಂಡಿರುತ್ತೇವೆ. ಹಾಗೆಯೇ ಕೆಲವೊಂದು ಸಲ, ಯಾಕಾದರೂ ನಾಲಿಗೆಯನ್ನು ಭಗವಂತ ಕೊಟ್ಟನೋ ಎಂದು ತಲೆಚಚ್ಚಿಕೊಂಡಿರುತ್ತೇವೆ.

ಇಂತಹ ಪರಿಣಾಮಕಾರಿಯಾದ ಆಯುಧವನ್ನು ಬಹಳ ಕ್ಷೇಮದಿಂದ, ಪ್ರೀತಿಯಿಂದ ಬಳಸುವುದಕ್ಕೆ ಪಣ ತೊಡೋಣ. ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ  ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ ಎನ್ನುವ ಮಾತಿನಂತೆ ಒಳ್ಳೆಯ ಪ್ರಿಯವಾದ ಮಾತುಗಳನ್ನು ಆಡಿ, ನಾಲಿಗೆಯನ್ನು ಒಳ್ಳೆಯ ರೀತಿಯಿಂದ ನೋಡಿಕೊಂಡರೆ ಮನಕ್ಕೂ, ಜನಕ್ಕೂ ನೆಮ್ಮದಿ.

Leave a Reply

This site uses Akismet to reduce spam. Learn how your comment data is processed.