ನಿನ್ನ ಇರುವಿಕೆಯೆನುವ ಸೊಗಸಾದ ಭಾವದಲಿ
ನಿನ್ನ ಮೇಲೊಂದಿಷ್ಟು ಮುನಿಸು ತೋರಿ
ಅಲ್ಲಿಗೋ ಎಲ್ಲಿಗೋ ನೀನು ತೆರಳುವ ಸಮಯ
ಮುನಿಸಿಗೂ ಹೂವಹುದು ಒಲವು ಹೀರಿ!
ಒಮ್ಮೆ ಸಿಡಿಮಿಡಿಯಾಗಿ ಮತ್ತೊಮ್ಮೆ ಮಗುವಾಗಿ
ಹಾಗೊಮ್ಮೆ ಹೀಗೊಮ್ಮೆ ಕಟುಮಾತು ಬೈದು
ನಾ ನಿನಗೆ ಹೇಳಿದೆನೋ ನನ್ನೊಳಗೆ ಒದರಿದೆನೊ
ಎನುತ ಮಲಗಿತು ಮಾತು, ಮೌನ ಹೊದ್ದು.
ನಮ್ಮಿಬ್ಬರಲಿ ಕೂಡ ಮಾತು ಸಾಯುವುದಿಲ್ಲ
ಮೌನ ಬದುಕುವುದಿಲ್ಲ ದೀರ್ಘವಾಗಿ
ಒಂದೆರಡು ಹನಿಕಟ್ಟಿ ಕಣ್ಣೀರು ಜಾರುವುದು
ಹನಿಮಳೆಗೆ ಅಣೆಕಟ್ಟು ಭಾರವೇನೇ?
ಸೋಲುವುದು ಹಿತವಹುದು ಗೆಲ್ಲುವುದು ಸೋಲಲ್ತೆ?
ನಾವು ಸೋಲುವುದಿಲ್ಲ ಜಗದ ಮುಂದೆ;
ಗೆದ್ದರಾಯಿತು ಪ್ರೇಮ ನಮ್ಮಿಬ್ಬರೊಳಗಿಂತು
ಹೂವರಳಿ ಬೆಳಗುವುದು ಕಳೆದು ನಿಂದೆ.