ನಿಷ್ಠೆ ಎನ್ನುವ ಶಬ್ಧ ಯಾವತ್ತೂ ಕಿವಿಗೆ ಬೀಳುತ್ತಿರುತ್ತದೆ. ಉದ್ಯೋಗದಲ್ಲಿ, ಸಂಸಾರದಲ್ಲಿ, ಸಖ್ಯದಲ್ಲಿ, ಸಂಬಂಧಗಳಲ್ಲಿ ಹೆಚ್ಚೇಕೆ ಪ್ರಾಣಿಗಳ ಬಗೆಗೂ ಈ ಮಾತು ಕೇಳಿ ಬರುತ್ತದೆ. Loyal ಆಗಿರಬೇಕು ಅಥವಾ loyal ಆಗಿಲ್ಲವೆಂದೇ ಹೆಚ್ಚಿನ ಮನಸ್ಥಾಪಗಳ ಹುಟ್ಟು.

ನಿಷ್ಠೆ ಎನ್ನುವುದು ಬಹಳ ಅಗತ್ಯವಾದ ಒಂದು ಭಾವ. ಇದಿಲ್ಲದೇ ಯಾವ ಧೈರ್ಯವೂ ಇರುವುದಿಲ್ಲ. ಇದು ಸಂಬಂಧಗಳನ್ನು ಜೀವಂತವಾಗಿರಿಸುತ್ತದೆ, ವೃದ್ಧಿಸುತ್ತದೆ. ಬಹಳಷ್ಟು ಕಂಪೆನಿಗಳ ನಿಷ್ಠಾವಂತ ಗ್ರಾಹಕರಿಂದಾಗಿ ಕಂಪೆನಿಗಳ ವ್ಯವಹಾರವೂ ಬದುಕುತ್ತದೆ. ದೇಶ/ ಭಾಷೆ ಎನ್ನುವ ನಿಷ್ಠೆಗಳು ತಾನೇ ಅವುಗಳನ್ನು ಉಳಿಸುವುದು.

ನಿಷ್ಠೆ ಎನ್ನುವುದು ಮನುಷ್ಯನಿಗೆ ಕಲಿಸಿಕೊಟ್ಟು ಬರುವುದಕ್ಕಿಂತ ಹೆಚ್ಚಾಗಿ ಭಯದಿಂದ ಅಥವಾ ಸ್ವಯಂಪ್ರಕಾಶವಾದ ಭಾವದಿಂದ ಬರುವಂತಹದ್ದು. ನಾನು ಯಾವ ಕಾರಣಕ್ಕಾಗಿ ಪ್ರಾಮಾಣಿಕನಾಗಿದ್ದೇನೆ ಎನ್ನುವುದು ಕಳೆದುಕೊಳ್ಳುವ ಭಯದಿಂದಲೇ ಹೆಚ್ಚಾಗಿ ಪ್ರೇರಿತವಾಗಿರುವಂತಹದ್ದು.

ಉದಾಹರಣೆಗೆ – ಯಾವುದೋ ಉದ್ಯೋಗದಲ್ಲಿರುವಾತ ತನ್ನ ಉದ್ಯೋಗ ನಷ್ಟವಾಗಬಹುದು, ಅಥವಾ ಹಿನ್ನಡೆಯಾಗಬಹುದು ಎನ್ನುವ ಕಾರಣಕ್ಕಾಗಿ ಪ್ರಾಮಾಣಿಕನಾಗಿರುತ್ತಾನೆ. ಭಯದಿಂದ ನಿಷ್ಠೆಯನ್ನು ಹೊಂದಿದವನು/ಳು, ಆ ಭಯ ಇಲ್ಲವಾದಾಗ ನಿಷ್ಠೆಯನ್ನು ತೊರೆಯುತ್ತಾನೆ/ಳೆ.

ಚಾಣಕ್ಯನ ಬಗೆಗಿರುವ ನಾಟಕವಾದ ಮುದ್ರಾರಾಕ್ಷಸದಲ್ಲಿ ರಾಕ್ಷಸ ಅಮಾತ್ಯನು ನವನಂದರಿಗೆ ನಿಷ್ಠೆಯಿಂದ ಇದ್ದಂತಹ ವ್ಯಕ್ತಿ. ನಂದರ ಅಳಿವಾದ ಮೇಲೆಯೂ ಈತನು ಚಂದ್ರಗುಪ್ತ ಮತ್ತು ಚಾಣಕ್ಯನ ವಿರುದ್ಧವಾಗಿಯೇ ಇರುತ್ತಾನೆ. ಈ ಸೇಡಿಗೆ ಆತನಲ್ಲಿದ್ದ ನಂದರ ಬಗೆಗಿನ ನಿಷ್ಠೆಯೇ ಕಾರಣ. ಕೊನೆಗೆ ತನ್ನ ಸಾವನ್ನೂ ಸಹಿಸಿ, ನಿಷ್ಠೆಯನ್ನು ಬಿಡದಂತ ರಾಕ್ಷಸಾಮಾತ್ಯನ ಮೂಲಕ ನಾಟಕಕಾರ ವಿಶಾಖದತ್ತ ಅತ್ಯುತ್ತಮವಾಗಿ ಪ್ರಕಟೀಕರಿಸಿದ್ದಾನೆ. ನಾಟಕದ ಕೊನೆಯಲ್ಲಿ ಚಾಣಕ್ಯನು ರಾಕ್ಷಸಾಮಾತ್ಯನ ನಿಷ್ಠೆಯನ್ನು ಚಂದ್ರಗುಪ್ತನ ಕಡೆಗೆ ತಿರುಗಿಸಿ, ಆತನನ್ನು ರಾಜ್ಯದ ಮಂತ್ರಿಯನ್ನಾಗಿಸುತ್ತಾನೆ.

ಆಚರಣೆಗಳಿಂದ, ಹವ್ಯಾಸಗಳಿಂದ, ಅನುಭವಗಳಿಂದ ಬರುವಂತ ನಿಷ್ಠೆಯು ಉಳಿಯುವಂತಹದ್ದು. ಹೊರಗಿನ ಯಾವ ವಿಷಯವೂ ಈ ನಿಷ್ಠೆಯನ್ನು ಭಂಗಪಡಿಸದು. ಮೌಲ್ಯದಿಂದ ಒಳಗೊಂಡಂತಹ ನಿಷ್ಠೆಗಳು ಹೆಚ್ಚಾಗಿ ಹೊರಗಿನ ಸಂಗತಿಗಳಿಂದ ಕೆಡಿಸಲ್ಪಡುವುದಿಲ್ಲ. ಉದಾಹರಣೆಗೆ ಭಕ್ತಿ, ಪ್ರೀತಿಯ ಭಾವಗಳ ಮೇಲಿರುವಂತಹ ಆಚರಣೆಗಳು, ಸಂಬಂಧಗಳು.

ನಿಷ್ಠೆಯೆನ್ನುವುದು ಒಂದು ಒಳ್ಳೆಯ ಮೌಲ್ಯ. ಒಳ್ಳೆಯ ಅಭ್ಯಾಸಗಳು ನಿಷ್ಠೆಯಾಗಬಹುದು, ಇನ್ನೊಬ್ಬರ ಸಹವಾಸ, ಅನುಮೋದನೆಗಳು ನಮ್ಮ ನಿಷ್ಠೆಯಾಗಬಹುದು. ಕಾನೂನು, ಭಯ ನಮ್ಮಲ್ಲಿ ನಿಷ್ಠೆಯನ್ನು ಇರಿಸಬಹುದು.

Leave a Reply

This site uses Akismet to reduce spam. Learn how your comment data is processed.