ಶುಭಾ ಗಿರಣಿಮನೆ
ಒಂದು ಚೆಂದದ ಮನೆ. ಗೇಟಿನ ಪಕ್ಕದಲ್ಲಿ ನಿಂತು ನೋಡಲು ಮನಸ್ಸು ಸಹಜವಾಗಿ ಅರಳಿ ನಿಂತುಬಿಡುತ್ತದೆ. ಆ ಮನೆಯ ಒಳಗಡೆ ಹಾಗೆ ಹೆಜ್ಜೆ ಹಾಕಿದರೆ ಅಲ್ಲೊಂದು ಸಾವಿನ ಮನೆಯಂತೆ ಸೃಷ್ಟಿಸಿಕೊಳ್ಳುತ್ತದೆ. ಅರೇ ಇದೇನಿದು ಹಾರರ ಕಥೆಯಂತೆ ಹೇಳ್ತಿದ್ದಾರಲ್ಲ ಅಂದುಕೊಳ್ಳಬೇಡಿ. ನಮ್ಮ ಮನಸ್ಸಿನಿಂದ ನಾವು ಬದುಕುವ ರೀತಿ ಇದೆಯಲ್ಲ ಅದೇ ಆ ಮನೆಯ ಒಳಗಡೆಯ ವಾತಾವರಣವು ಇರುತ್ತದೆ.
ಸಾಮಾನ್ಯ ಎಲ್ಲರಿಗೂ ನೆಗೆಟಿವ್ ಥಿಂಗ್ ಮಾಡುವುದು ಅಂದರೆ ಅದೇನು ಇಷ್ಟವೋ ಗೊತ್ತಿಲ್ಲ. ದಿನಕ್ಕೆ ಒಮ್ಮೆಯಾದರೂ ಪ್ರಯೋಜನಕ್ಕೆ ಬಾರದ, ಸುಮ್ಮನೆ ಆತಂಕಕ್ಕೆ ನಮ್ಮನ್ನು ದೂಡಿಕೊಳ್ಳೂವ ದಾರಿಯಾಗಿ ಈ ಋಣಾತ್ಮಕ ಚಿಂತೆಯನ್ನು ಮಾಡುತ್ತೇವೆ. ಅಯ್ಯೋ ಮಗಳು ಶಾಲೆಗೆ ಹೋಗಿದ್ದಾಳೆ. ಆಡುವಾಗ ಬಿದ್ದುಬಿಟ್ಟರೆ. ಇವತ್ತು ಆಫೀಸಿನಲ್ಲಿ ಬಾಸ್ ಬೈದುಬಿಟ್ಟರೆ. ಗಂಡ ಬರುವ ಹೊತ್ತಿಗೆ ಅಡುಗೆಯಾಗಿಲ್ಲವೆಂದರೆ ಬೈದುಬಿಟ್ಟರೆ ಹೀಗೆ ಸಾವಿರಾರು ಈ ರೀತಿಯ ಕಾರಣಗಳು ಒಂದುಕಡೆಯಾದರೆ ನಮ್ಮನ್ನೇ ನಾವು ಹೀನ ಸ್ಥಿತಿಗೆ ತಂದುಕೊಳ್ಳುವ ಮತ್ತೊಂದು ಕಾರಣವೂ ಇದೆ. ಅಯ್ಯೋ ನನ್ನ ಬಗ್ಗೆ ಹೀಗೆ ಮಾತಾಡಿದರಲ್ಲ. ಅವರು ನನ್ನನ್ನು ಅನುಮಾನಿಸಿದರಲ್ಲ. ಅತ್ತೆ ನನ್ನ ಸುದ್ದಿ ಎಲ್ಲ ಕಡೆ ಹೇಳಿಕೊಂಡು ಬರುತ್ತಾಳಲ್ಲ. ಅಳಿಯ ಮಗಳಿಗೆ ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲವಲ್ಲ ಹೀಗೆ ಕೊರಗುತ್ತಾರೆ. ಆದರೆ ಇದೆಲ್ಲದಕ್ಕೂ ಅವರಲ್ಲಿ ಪರಿಹಾರವಂತು ಇಲ್ಲ.
ಈ ರೀತಿಯ ಯೋಚನೆಯಿಂದ ಕೇವಲ ಮಾನಸಿಕ ಅಸ್ವಸ್ಥರೊಂದೆ ಅಲ್ಲ ದೈಹಿಕವಾಗಿಯೂ ಸೋಲುತ್ತಾ ಹೋಗುತ್ತಾರೆ. ಮನಸ್ಸು ಕುಗ್ಗಿದಾಗ ದೇಹವು ಜಡತ್ವಕ್ಕೆ ಸಾಗುತ್ತದೆ. ಯಾವುದೇ ಕ್ರೀಯಾಶೀಲ ಚಟುವಟಿಕೆ ಇರುವುದೇ ಇಲ್ಲ. ಮನಸ್ಸು ದುಃಖಿಸುತ್ತಿರುತ್ತದೆ. ಇತ್ತ ಅಡುಗೆ ಮನೆಯಲ್ಲಿ ಸಾಂಬಾರು ಮಾಡುತ್ತಿರುತ್ತಾಳೆ. ಆ ಸಾಂಬಾರಿನ ರುಚಿ ಕೂಡ ಅವಳ ಮನಸ್ಸಿನ ಭಾವನೆಯನ್ನೇ ತುಂಬಿಕೊಂಡು ರುಚಿಯಾಗುವುದೇ ಇಲ್ಲ.
ಮತ್ತೆ ಆ ಮನೆಯ ಕಥೆಗೆ ಬರೋಣ. ಅಲ್ಲಿ ಒಂದು ದಂಪತಿಗಳು ವಾಸವಾಗಿದ್ದರು. ಇಳಿಸಂಜೆಯ ವಯಸ್ಸು ಇಬ್ಬರದ್ದು. ಆ ದಂಪತಿಗಳಿಗೆ ಮೂರು ಮಕ್ಕಳು. ಮೂವರೂ ಹೊರದೇಶದಲ್ಲಿದ್ದಾರೆ. ಈ ಮನೆಯಲ್ಲಿ ಕೈಕಾಲಿಗೊಂದೊಂದು ಕೆಲಸದ ಆಳುಗಳು. ಯಾವುದಕ್ಕೂ ಕೊರತೆ ಇಲ್ಲ. ಎರಡು ಮೂರು ವರ್ಷಕ್ಕೊಮ್ಮೆ ಮಕ್ಕಳಿದ್ದಲ್ಲಿಗೆ ತಾವೇ ಹೋಗಿ ಬರುತ್ತಾರೆ. ಇವರು ಹೋಗದ ವರ್ಷ ಮಕ್ಕಳು ಇಲ್ಲಿಗೆ ಬರುತ್ತಾರೆ. ಇಷ್ಟು ಸುಂದರ ಸಂಸಾರದಲ್ಲಿ ಸ್ಮಶಾನ ವಾತಾವರಣ ಯಾಕೆ ಎನ್ನುವ ಪ್ರಶ್ನೆ ಅಲ್ಲವೆ.
ಆ ದಂಪತಿಗಳಿಗೆ, ಮಕ್ಕಳು ಇಷ್ಟೋತ್ತಿನಲ್ಲಿ ಏನು ಮಾಡುತ್ತಿದ್ದಾರೋ ಏನೋ. ದೊಡ್ಡ ಮಗನಿಗೆ ಹಸಿವು ಹೆಚ್ಚು ಅವನ ಹೆಂಡತಿ ಅಡುಗೆ ಮಾಡಿ ಬಡಿಸಿದಳೋ ಅಥವಾ ತಾನು ಮ್ಯೂಸಿಕ್ ಕ್ಲಾಸಿದೆ ಅಂತ ನಡೆದುಬಿಟ್ಟಳೋ, ಎರಡನೇಯ ಮಗಳಿಗೆ ಅಮೇರಿಕಾ ಹೇಗೆ ಹೊಂದಿಕೆಯಾಯಿತೋ. ಅವಳಿಗೆ ಈ ಚಳಿ ಕಂಡರೆ ಆಗದು. ಅಯ್ಯೋ ನಾನು ಅಲ್ಲಿಯೇ ಇರಬೇಕಾಗಿತ್ತು. ಚಿಕ್ಕವನಿಗೆ ಇನ್ನು ಮದುವೆಯಾಗಿಲ್ಲ. ಅಲ್ಲಿಯ ಹುಡುಗಿಯನ್ನೇ ಮದುವೆಯಾದರೆ ಗತಿ ಏನು. ಹೀಗೆ ಅವರಲ್ಲಿ ಬೇಡವಾದ ಚಿಂತೆಗಳು ದಾಳಿ ಮಾಡುತ್ತಿದ್ದವು. ಗಂಡ ಹೆಂಡತಿ ಬೆಳಗ್ಗೆ ಎದ್ದಾಗಿನಿಂದ ರಾತ್ರಿಯತನಕವೂ ಮಾತು ಅಂತ ಆಡಿದರೆ ದೂರದಲ್ಲಿರುವ ಮಕ್ಕಳ ವಿಚಾರವೇ ಆಗಿತ್ತು. ಕೊನೆ ಪಕ್ಷ ಯಾವುದೋ ವಾರ್ತೆಯೋ, ಸಿನೆಮಾ, ಧಾರವಾಹಿಯ ಸುದ್ದಿಯನ್ನು ಮಾತಾಡುತ್ತಿರಲಿಲ್ಲ. ಮನೆಗೆ ನೆಂಟರು, ಸ್ನೇಹಿತರು ಯಾರೇ ಬರಲಿ ಮಕ್ಕಳ ಮಾತು ತೆಗೆದುಬಿಡುತ್ತಿದ್ದರು. ಹಾಗೆ ಕೊರಗುತ್ತಿದ್ದರು. ಅವರಿಗೆ ಏನಾಗುವುದೋ ಎಂದು ಹಲುಬುತ್ತಿದ್ದರು.
ಇದರಿಂದ ಅವರಿಗೆ ಮನಸ್ಸು ಭಾರವಾಯ್ತು. ಮೊದಲು ಇಬ್ಬರಿಗೂ ಎ.ಸಿ.ಡಿ.ಟಿ ಶುರುವಾಯ್ತು, ನಂತರ ಶುಗರ್, ಹಾಗೆ ಕಣ್ಣುಗಳ ಉರಿತ. ಎಲ್ಲಿಗೂ ಹೋಗಲು ಮನಸ್ಸಿಲ್ಲ ಹೀಗೆ ಮನಸ್ಸಿನ ನೆಗೆಟಿವ್ ಥಿಂಕಿಂಗ್ ಎನ್ನುವುದು ದೇಹದ ಮೇಲೆ ದುಷ್ಪರಿಣಾಮ ಬೀರಿತು. ಗಂಡ ಹೆಂಡತಿ ರೋಗಿಷ್ಟರಂತಾದರು. ಹಾಗಾಗಿ ಮನೆ ಚೆಂದವಿದ್ದರೂ ಮನೆಯೊಳಗಿನ ಮನಸ್ಸುಗಳು ಸೋತು ಹೋಗಿದ್ದವು.
ಏನೋ ಆಗಿ ಬಿಡುವುದೇನೋ, ಕೆಟ್ಟದ್ದು ನಮ್ಮ ಪಾಲಿಗಿದೆಯೇನೋ ಎಂದು ಯೋಚಿಸುವುದನ್ನು ರೂಢಿಸಿಕೊಳ್ಳುವ ಒಂದು ಚಟವಷ್ಟೆ. ಕಷ್ಟ ಬಂದಾಗ ಭಯಪಡುವುದು ಬೇರೆ. ಆದರೆ ಕಷ್ಟವಿಲ್ಲದೇ ಮುಂದೆ ಕಷ್ಟಗಳು ಬಂದುಬಿಡುತ್ತವೆಯೇನೋ, ನೋವಾಗುವ ಸಂದರ್ಭ ಇರುತ್ತದೆಯೇನೋ ಎನ್ನುತ್ತ ಕೊರಗಿದರೆ ಆ ಕೊರಗು ನಮ್ಮನ್ನು ಹಿಂಸಿಸುತ್ತದೆ. ಇದರಿಂದ ಹೊರಗೆ ಬಂದು ಒಮ್ಮೆ ನೋಡಿ ಮನಸ್ಸಿನ ನಿರಾಳತೆಯ ಭಾವದ ಅಲೆಗಳನ್ನು.
ಋಣಾತ್ಮಕ ಯೋಚನೆಗಳು ಬಂದಾಗ ಆ ವಿಷಯವನ್ನು ನಾವು ದೂರ ಮಾಡಬೇಕು ಎಂದರೆ ಅಲ್ಲಿಂದ ಬೇರೆ ವಿಷಯದ ಚಿಂತನೆ ಮಾಡಬೇಕು. ಮಗ ಹೊರಗಡೆ ಬೈಕ್ ತೆಗೆದುಕೊಂಡು ಹೋಗಿದ್ದಾನೆ ಎಂದಾಗ ಮಗನಿಗೆ ಎಕ್ಸಿಡೆಂಟ್ ಆಗಿಬಿಡುವುದೋ ಎಂದು ಆತಂಕದಿಂದ ಕೆಟ್ಟ ಯೋಚನೆ ಸುತ್ತ ತಿರುಗುವುದಕ್ಕಿಂತ ಹಾಗೆ ಮನಸ್ಸಲ್ಲಿ ಬಂದೇ ಬಿಟ್ಟಿತು ಎಂದರೆ ನಮ್ಮ ನೆಚ್ಚಿನ ಹ್ಯಾಸದಲ್ಲಿ ತೊಡಗಿಕೊಳ್ಳುವುದು. ಅಥವಾ ನಗೆಹನಿಗಳನ್ನು ಓದುವುದು. ಟಿವಿ ನೋಡುವುದು. ಇಲ್ಲವೇ ನಮ್ಮ ಆಪ್ತರಲ್ಲಿ ಪೋನು ಮಾಡಿ ಕೆಲವು ಕ್ಷಣ ಮಾತಾಡುವುದು. ಇದ್ಯಾವುದು ಸರಿ ಹೋಗಲಿಲ್ಲವಾದರೆ ದೇವರ ಮನೆ ಸೇರಿ ಒಂದು ಪುಟ್ಟ ದೀಪ ಹಚ್ಚಿ ಆ ದೀಪವನ್ನು ಏಕತಾನದಲ್ಲಿ ನೋಡುವುದು.
ನೆಗೆಟಿವ್ ಯೋಚನೆ ಬಂದಾಗ ಒಂದು ದೀಪವನ್ನು ಹಚ್ಚಿಕೊಂಡು ಅದರ ಉರಿಯುವಿಕೆಯ ರೀತಿಯನ್ನು ನೋಡುತ್ತಿರಿ. ಆಗ ಮನಸ್ಸಿನಲ್ಲಿ ಆ ಜ್ವಾಲೆಯ ತಿರುವುಗಳು, ಅಲುಗಾಟ, ಅದರ ಬಣ್ಣ, ಎಂದೋ ತಿಳಿದುಕೊಂಡ ಕೆಲವಷ್ಟು ಆತ್ಮೀಯವಾದ ಮಾತುಗಳು, ಕೆಲವು ಉತ್ತಮ ಸಂದೇಶದ ಜ್ಞಾನ ಹೀಗೆ ಅನೇಕ ರೀತಿಯ ಯೋಚನೆಗಳು ಮನಸ್ಸಿನಾಳದಲ್ಲಿ ಮೂಡುತ್ತದೆ. ಆಗ ನಮಗೆ ಮೊದಲಿಗೆ ಇದ್ದ ಋಣಾತ್ಮಕ ಯೋಚನೆ ತೊಲಗಿ ನಮಗೆ ಗೊತ್ತಿಲ್ಲದಂತೆ ಚೈತನ್ಯ ಮೂಡುತ್ತದೆ. ಕೆಟ್ಟ ಯೋಚನೆಗಳು ಸುಟ್ಟು ಧನಾತ್ಮಕವಾದ ಶಕ್ತಿಯೊಂದು ನಮ್ಮ ಮೆದುಳಿನ ನರಮಂಡಲದಲ್ಲಿ ಸಂಚರಿಸುತ್ತದೆ. ಆಗ ಸಾವಿಗಿಂತ ಕೆಟ್ಟದಾದ ಈ ನೆಗೆಟಿವ್ ಯೋಚನೆಗಳು ದೂರವಾಗಿ ಬದುಕಿನ ಹೊಸ ಲೋಕವೊಂದು ನಮ್ಮ ಮುಂದೆ ತೆರೆದಿಡುತ್ತದೆ.