ದೂರದಿಂದಲೇ ತೂರಿಬಂದಿರುವ ಗಾಳಿಗೊಂದು ಗಂಧ
ಪಾರಮಾರ್ಥಿಕವೊ ಸ್ವಾರ್ಥ,ಭಾವುಕವೊ ತಿಳಿಯದಾದ ಬಂಧ.
ಕಳಚಿಬಿದ್ದಿರುವ ಎಳಸು ಬಳ್ಳಿಯಲಿ ಹೊಸದು ಚಿಗುರು ಕಂಡೆ
ಬಳಸಿ ಬದುಕುವುದು ಬದುಕಿ ಅರಳುವುದು ಮಲ್ಲೆಯೊಂದು ಬಂಡೆ!
ನೆರವ ನೀರೆರೆದು ಮೀರಿ ಪೋಷಿಸುವ ದಾರಿಯಿರಲು ಸರಸ
ಮೆರೆವ ಆಸೆಯಲಿ ಪೊರೆವ ಹಮ್ಮಿನಲಿ ತೋರಬಹುದು ಕ್ಲೇಶ
ಫಲವ ಹುಡುಕುತಲಿ ಮಲ್ಲೆ ಬೆಳೆಸಿದರೆ ಮೂಡಬಹುದೆ ಹೀಚು?
ನಿಲದ ಹೂವುಗಳ ಸ್ವಾದ ಬೆಳೆಯದಿರೆ ಬದುಕದೊಂದು ಪೇಚು!
ಉರಿದು ಕುಸಿದು ತನು ತಣ್ಣಗಾಗಲದು ಬೂದಿಯೆಂಬ ಹೆಸರು
ಖಾರವಿಲ್ಲ, ಆಕಾರವಿಲ್ಲ, ಸರಿ ತಪ್ಪು ಉಳಿಸದದಿರು
ನಿಂತ ನಿಲುವಿನಲಿ ಪಡೆದ ಗೆಲುವಿನಲಿ ನೆನಪು ಮಾತ್ರ ಬಳಕೆ
ಸ್ವಂತ ಎನುತಿರುವ ಜಗದ ಬಂಧುಗಳು ಚರ್ಮದಂತೆ ಹೊದಿಕೆ.
ಕಳೆಯಬಲ್ಲೆವೇ ಖುಷಿಯ ದಿನಗಳನು ಹೂವಿನಂತೆ ಬದುಕಿ
ಬೆಳೆಯಬಲ್ಲೆವೇ ಮುರಿದ ಮೇಲೆಯೂ ಬಳ್ಳಿಯಂತೆ ಬಳುಕಿ?
ಉಳಿಸಬಲ್ಲೆವೇ ತೇಲಿಬಂದಿರುವ ಗಂಧದಂತ ನೆನಪು
ಹೊಳೆಸಬಲ್ಲೆವೇ ಬಿಳಿಯ ಚರ್ಯೆಯನು, ಮಲ್ಲೆಯಂತ ಒನಪು?


By : Ishwara Bhat K
 

Leave a Reply

This site uses Akismet to reduce spam. Learn how your comment data is processed.