ನೀ ತೋರಿದ ಚಿಕ್ಕ ನಿರ್ಲಕ್ಷ್ಯ. ಎದೆಯಾಳದಲ್ಲೆಲ್ಲ ಸಣ್ಣಗೆ ನೋವು..ಕಂಗಳಲ್ಲಿ ಕಂಡೂ ಕಾಣದಂತಹ ತಿಳಿ ನೀರು. ಎದುರಿಗೆ ಎಷ್ಟೊಂದು ದಾರಿಗಳು..ಪ್ರತಿ ದಾರಿಯಲ್ಲು ಗಾಢಾಂಧಕಾರದ ಮುಂದೆ ಸಾಗಲು ಭಯ.ಯಾಕೆ ಹೇಳು??
ಆ ದಾರಿಯಲ್ಲಿ ಹೆಜ್ಜೆ ಇಡುವಾಗ ನೀ ಜೊತೆಯಿಲ್ಲ ಎಂಬುದಕ್ಕೆ.
ಹನಿ ಮಳೆಗೆ ನೆನೆದಾಗಲೆಲ್ಲ ಅತೀ ಹೆಚ್ಚು ನೀನೆ ನೆನಪಾಗುತ್ತೀಯ.ಯಾಕೆಂದರೆ ನಿನ್ನ ಉಸಿರ ಘಮ ಮೋಡವಾಗಿ ನನ್ನಲ್ಲಿಗೆ ಬಂದಿತೆಂಬ ಹುಚ್ಚು ಭ್ರಮೆ..
ಕಡಲಿನ ಮರಳ ಮೇಲೆ ತಾಸುಗಟ್ಟಲೆ ಕುಳಿತು ಕರಗುವ ರವಿಯ ನೋಡುವುದೆಂದರೆ ಬಲು ಪ್ರೀತಿ.ನನ್ನಲ್ಲಿ ಕರಗಿದ ನಿನ್ನ ನೆನಪೇ ಅಲ್ಲೆಲ್ಲಾ.
ಜಾತ್ರೆಯಲ್ಲಿ ಅಮ್ಮನ ಕೈ ತಪ್ಪಿಸಿಕೊಂಡ ಮಗುವಿನ ಒದ್ದಾಟ ನನ್ನದು.ಎತ್ತ ತಿರುಗಿದರು ಸದ್ದು ಗದ್ದಲಗಳ ವಿನಃ ಬೇರೇನಿಲ್ಲ.ನಿನ್ನ ಜಾಡು ಹಿಡಿದು ಹೊರಟರೂ ಹಾದಿ ಸಿಗುತ್ತಿಲ್ಲ.
ಮುರಿದ ಸೇತುವೆಯ ಮುಂದೆ ನಿಂತಿದ್ದೇನೆ ಒಂಟಿಯಾಗಿ, ಹಿಂತಿರುಗಿ ನೇೂಡದೆ ನೀ ನಡೆಯುತ್ತಿರುವ ಕನಸು ಬಿದ್ದಾಗ ಹೊರಗೆಲ್ಲ ಬಿಡದೆ ಸುರಿಯುವ ಮಳೆ, ಮಿಂಚು ಗುಡುಗಿನ ಆಭ೯ಟ. ನಿನ್ನ ನೆನಪಲ್ಲಿ ಉಸಿರಾಡುವ ಈ ಉಸಿರು ಆಗಲೇ ನಿಲ್ಲಬಾರದಾ ಎಂಬ ಬಿನ್ನಹ ಕಾಣದ ದೇವರಲ್ಲಿ.
by : ಲವೀನಾ ಡಿ’ಸೋಜ