pexels-photo-378371.jpeg
ಮನಸೆಂಬ ಮಾಯದ ಕನ್ನಡಿ.

ಕನ್ನಡಕದ ಧೂಳು ಮತ್ತೆ ಒರೆಸಿಕೊಂಡು ಪುನಃ ನೋಡಿದಾಗ ಆಶ್ಚರ್ಯದಿಂದ ಎದ್ದು ನಿಂತೆ.ತುಸು ಸಣ್ಣಗೆ ಬೆವರಿದ್ದು ನಿಜ..ಎದುರು ನಿಂತವರ ಗಮನಕ್ಕೆ ಬಾರದ ಹಾಗೇ, ಹಾದು ಬಂದ ಹಳೆಯ ನೆನಪೊಂದನ್ನು ಒಳಗೆ ಬರಮಾಡಿಕೊಂಡೆ.
ಹೊರಗೆ ಬಿಸಿಲು;ವಿಪರೀತ ಸೆಕೆ.ಇವತ್ತು ಸಂಜೆ  ಮಳೆಯಾಗುವ ಲಕ್ಷಣವಿದೆ. ಮಾತಿಗೆ ಒಂದು ವಿಷಯ ಸಿಕ್ಕಿದ್ದು ಕಂಡು ಸಮಾಧಾನದಿಂದ ಕಿಟಕಿಯ ಬಾಗಿಲುಗಳನ್ನು ತೆರೆದಿಟ್ಟು, ಅಡುಗೆ ಮನೆಯ ಕಡೆಗೆ ಹೆಜ್ಜೆ ಇಟ್ಟೆ.ಒಂದಿಷ್ಟು ತಿಂಡಿ ಪಾನಕ ತಂದು ಅವರ ಮುಂದೆ ಕುಳಿತು ಕೊಂಡೆ. ಅಷ್ಟರಲ್ಲಾಗಲೇ ನಮ್ಮ ಮುದ್ದಿನ ನಾಯಿ ಅವರ ಮಡಿಲಲ್ಲಿ ಮಲಗಿತ್ತು.ಸಿಟ್ಟು ಬಂದಿದ್ದು ನಿಜ, ನಾಯಿಯ ಮೇಲೆ. ಅದನ್ನು ತೇೂರ್ಪಡಿಸದೇ ಅಲ್ಲೆ ತಟ್ಟೆಯಲ್ಲಿದ್ದ ಎರಡು ಬಿಸ್ಕತ್ತನ್ನು ದೂರ ಬಿಸಾಕಿದೆ. ಅದರ ಆಸೆಗೆ ಅದು ಇಳಿದು  ಬಿದ್ದಲ್ಲಿಗೆ ಹೇೂದದ್ದು ಇಬ್ಬರೂ ಕಂಡೆವು‌…
ತುಸು ಮೆತ್ತಗಾದ ಹಾಗಿದೆ ಮನಸ್ಸು, ಮೈ..ನೀಟಾಗಿ ಬಣ್ಣ ಹಚ್ಚಿದ ಕೂದಲು, ಬಂಗಾರ ಬಣ್ಣದ ಫ್ರೇಮಿನ ಕನ್ನಡಕದಲ್ಲಿ ಆಗಿನ ಗತ್ತೇ ಇವತ್ತಿಗೂ. ” ತುಂಬಾ ಗಂಭೀರ ಆಗಿ ಬಿಟ್ಟಿದ್ದಿಯಾ” ಅವರೇ ಮಾತು ಮುಂದುವರಿಸಿದರೂ ಉಟ್ಟ ಮೆತ್ತನೆಯ ಹತ್ತಿಯ ಚಿಕ್ಕ ಹೂ ಇರುವ ತಿಳಿ ಗುಲಾಬಿ ಸೀರೆಗಿರಬೇಕು, ಇತ್ತಿಚಿನ ದಿನಗಳಲ್ಲಿ ಕೂದಲಿಗೆ ಬಣ್ಣ ಹಚ್ಚುವುದನ್ನು ಪೂರ್ತಿ ಮರೆತೇ ಬಿಟ್ಟಿದ್ದೇನೆ.ಕನ್ನಡಕ ನನ್ನ ಮುಖವನ್ನು ಆಕ್ರಮಿಸಿಕೊಂಡಿದ್ದು ನೆನಪಾಗಿ ನಕ್ಕೆ.
ಮಗನಿರುವಲ್ಲಿಗೆ ಹೇೂರಟಿದ್ದೇನೆ..ಸ್ವಲ್ಪ ದಿನ ಅಷ್ಟೇ ಊರಲ್ಲಿರುವುದು, ವಿದೇಶದಲ್ಲೆ ಉಳಿಯುವ ಯೇೂಚನೆ ಇದೆ.ಒಂಟಿ ಬದುಕು ಸಾಕಾಗಿ ಹೇೂಗಿದೆ ಎಂದು ಗಡಿಯಾರದತ್ತ ಕಣ್ಣು ಹಾಯಿಸಿದರೂ,ಹೊರಗಿಂದ ಗಾಳಿಯು ಒಳಗೆ ಬೀಸಿ ಬರುತ್ತಿತ್ತು ಕಿಟಕಿಯಿಂದ..ಬನ್ನಿ ತೇೂಟ ಸುತ್ತಾಡಿ ಬರುವ ಚಂದ ಗಾಳಿ ಇದೆ ಎಂದು ಎದ್ದು ನಿಂತೆ. ಅವರು ನನ್ನ ಹಿಂಬಾಲಿಸಿದರೂ ನಮ್ಮಲ್ಲಿ ಮಾತುಗಳು ಮುಗಿದು ಅದೆಷ್ಟೋ ವರ್ಷಗಳು ಕಳೆದು ಹೇೂಗಿದ್ದವೇೂ.
ಇಬ್ಬರೂ ಪ್ರೀತಿಸಿಕೊಂಡ ದಿನಗಳದು. ಒಬ್ಬರನ್ನೊಬ್ಬರು ಬಿಟ್ಟು ಬದುಕಲಾರೆವೇನೇೂ ಎಂದು ಸ್ವಚ್ಛಂದವಾಗಿ ಪಕ್ಷಿಗಳಂತೆ ಹಾರಾಡಿದ ಜೇೂಡಿಯದು.ಜಾತಿಯ ದ್ವೇಷಕ್ಕೆ ಬಲಿಯಾಗಿ ಇಬ್ಬರೂ ಗತಕಾಲದಲ್ಲಿ ಒಂದೊಂದು ದಿಕ್ಕಿಗೆ ಹರಿದು ಮತ್ತೆ ಭೇಟಿಯಾದ ದಿನವಂದು.. ಆಗಲೇ ಊರಿನ ಕೊನೆಯ ಬಸ್ಸು ಹೊರಡುವ ಹೊತ್ತಾಯಿತು. ಅದರಲ್ಲಿ ನನ್ನದೊಂದು ನೆನಪು ಹೊತ್ತೊಯ್ದಿದೆ..ಅದೆಷ್ಟು ಹೊತ್ತು ಹಾಗೆ ಕುಳಿತಿದ್ದೆನೇೂ…
ಕೊಟ್ಟಿಗೆಯ ದನಗಳ ಕೂಗಿಗೆ ಎಚ್ಚರವಾಗಿ ಹಿತ್ತಲಿಗೆ ನಡೆದೆ..
By – ಲವೀನಾ ಡಿ’ಸೋಜ.

Leave a Reply

This site uses Akismet to reduce spam. Learn how your comment data is processed.