ಒಂದೊಳ್ಳೆ ಹಾಡು ಹಾಕಿಕೊಂಡು, ಇಯರ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು ಬೈಕ್ ಸ್ಟಾರ್ಟ್ ಮಾಡಿದ್ದಾಯ್ತು. ಸುಮಾರು ೨೫ ದಿನಗಳ ನಂತರ ಆಫೀಸ್ ಕಡೆ ಸವಾರಿ. ಬೆಂಗಳೂರಿನ ಮುಖ್ಯರಸ್ತೆಗಳು, ಅಡ್ಡರಸ್ತೆಗಳಲ್ಲಿ ಲೀಲಾಜಾಲವಾಗಿ ಓಡಾಡಿ ಅನುಭವ ಇದ್ದ ನನಗೆ ಇದೊಂದು ರೀತಿಯ ವಿಚಿತ್ರ ಅನುಭವ ನೀಡುವ ಕಲ್ಪನೆ ಇರಲಿಲ್ಲ.
ಸುಮಾರು ಎರಡೂವರೆ ವರುಷದ ನಂತರ ನಾನು ಈ ರಸ್ತೆಗಳಲ್ಲಿ ಬೈಕ್ ಮೂಲಕ ಸಾಗುವುದು. ಎಷ್ಟೋ ಬಾರಿ ಓಲಾ ಊಬರ್, ಮೆಟ್ರೋ ಸವಾರಿಯನ್ನು ಮಾಡಿದ್ದೇನಾದರೂ ರಸ್ತೆಯಲ್ಲಿ, ರಸ್ತೆಬದಿಗಳಲ್ಲಿ ಗಮನವಿರಿಸಿ ಸಾಗಿದ್ದು ಇಲ್ಲ. ಓಲಾ/ಊಬರ್ ಗಳಲ್ಲಿ , ಕಾರುಗಳಲ್ಲಿ ಸಂಚರಿಸುವಾಗ ಮೊಬೈಲ್ ನೋಡುವುದು, ಮೆಟ್ರೋದಲ್ಲಿ ಸಂಚರಿಸುವಾಗ ಬೇರೆಯವರ ಮುಖ ನೋಡುವುದು ಸಾಮಾನ್ಯ.
ಮೈಸೂರ್ ರೋಡ್ ಯಾವತ್ತೂ ತಿರುಗಾಟದ ಜಾಗವೇ.. ಏನೂ ಅನ್ನಿಸಲಿಲ್ಲ. ಅದೂ ವೈಟ್ ಟಾಪಿಂಗ್ ಆದಮೇಲೆ ಬಹಳ ಸುಲಭವಾದ ರಸ್ತೆ ಆಗಿದೆ. ಮುಂದೆ ಮಾರ್ಕೆಟ್ಟಿನ ಫ್ಲೈ ಓವರ್ ಪಪ್ಪಾಯದ ಸಿಪ್ಪೆಯಂತೆ ಜಾರುವಷ್ಟು ಚಂದವಾಗಿದೆ. ಅಲ್ಲಿಂದ ಮುಂದೆ ಸಾಗುವ ರಸ್ತೆ ಮೊದಲಿದ್ದಂತೆಯೇ ಇದೆ. ಇನ್ನೇನು ಕಾರ್ಪೋರೇಶನ್ ದಾಟಿ ಹಡ್ಸನ್ ಸರ್ಕಲ್ ಗೆ ಬರಬೇಕು..
ಸುಮಾರು ನಾಲ್ಕೈದು ವರುಷದ ಹಿಂದೆ ಇದೇ ಹಡ್ಸನ್ ಸರ್ಕಲ್ಲಿನ ಬಳಿ ಇರುವ ಪೋಲಿಸ್ ನಿಲ್ಲುವ ಜಾಗದಲ್ಲಿ ಬೈಕ್ ನಿಲ್ಲಿಸಿ ಎದುರಿಗಿದ್ದ ಹಾಪ್ ಕಾಮ್ಸ್ ಗೆ ಹೋಗಿ ದ್ರಾಕ್ಷಿ ಜ್ಯೂಸು, ಮ್ಯಾಂಗೋ ಜ್ಯೂಸ್ ಕುಡಿದು ಬಂದಿದ್ದೆ. ಆ ದಿನ ಸರಿಯಾಗಿ ನೆನಪಿದೆ. ಅಲ್ಲಿ ಬೈಕ್ ನಿಲ್ಲಿಸಬಾರದು ಎಂದು ಅರಿವಿದ್ದರೂ ಯಾವುದೋ ಜ್ಞಾನದಲ್ಲಿ ನಿಲ್ಲಿಸಿ ಹೋಗಿದ್ದೆ. ಜ್ಯೂಸ್ ಕುಡಿಯುತ್ತಲೇ ಈ ಅರಿವಾದ ನನಗೆ, ಬೇಗ ಬೇಗ ವಾಪಸ್ಸು ಬಂದರೆ ಬೈಕಿನ ಜೊತೆಗೆ ಒಬ್ಬರು ಬಿಳಿ ಪೋಲಿಸ್ ಕಾಯುತ್ತಿದ್ದರು. ಅವರಿಗೆ ಸಲ್ಲಿಸಬೇಕಾದದ್ದು ಕೊಟ್ಟು ಬೈಕ್ ಬಿಡಿಸಿಕೊಂಡು ಬಂದೆ.
ಆ ಪೋಲೀಸ್ ನಿಲ್ಲುವ ಜಾಗದಲ್ಲಿ ಕೊಡೆಯಂತೆ ಒಂದು ಇದ್ದಿತ್ತು ಆ ಕಾಲಕ್ಕೆ. ಈಗ ಚಂದವಾದ ಗಾಜಿನ ದೊಡ್ಡ ಕೋಣೆಯನ್ನು ಮಾಡಿದ್ದಾರೆ. ಇಂದು ಪೋಲೀಸ್ ಇರಲಿಲ್ಲ. ಎದುರಿನ ಹಾಪ್ ಕಾಮ್ಸ್ ಕೂಡಾ ಮುಚ್ಚಿತ್ತು.
ಮುಂದೆ ಬಂದರೆ ಎಡಬದಿಗೆ ಕಬ್ಬನ್ ಪಾರ್ಕು, ಬಲಬದಿಗೆ ಕಂಠೀರವ ಕ್ರೀಡಾಂಗಣ. ಎಡಬದಿಯಲ್ಲಿ ಮೊದಲೆಲ್ಲಾ ಬಿದಿರಿನ ಮೆಳೆಗಳು ಬಹಳವಾಗಿ ಬೆಳೆದು ಒಂದು ರೀತಿಯ ಸಮ್ಮೋಹಕವಾದ ಕತ್ತಲು, ತಂಪಿನ ಭಾವ ಸಿಗುತ್ತಿತ್ತು. ಈಗ ಇಲ್ಲ ಅದು. ಮುಂದೆ ಎಂಜಿ ರೋಡಿನ ದಾರಿ. ಅನಿಲ್ ಕುಂಬ್ಳೆ ವೃತ್ತದಿಂದ ಹೋಗುವಾಗ ಮೊದಲಿನ ಸುಖ ಇಲ್ಲ. ಆಗ ಈ ಸಿಗ್ನಲ್ ದಾಟಿ ಮುಂದಿನ ಸಿಗ್ನಲ್ ವರೆಗೆ ಹೋಗುವ ಧಾವಂತ ಇತ್ತಲ್ಲ.. ಅದು ಯಾವ ಬೈಕ್ ರೇಸ್ ಗಿಂತ ಕಡಿಮೆ? ಈಗ ಇಲ್ಲ.. ಮೊದಲಿನಂತೆ ಈ ಸಿಗ್ನಲ್ಲಿನ ಹಸಿರಿಗೂ ಅದಕ್ಕೂ ಸಂಬಂಧ ಇಲ್ಲ. ಹಾಗೇ ಸಿಸಿ ಕ್ಯಾಮೆರಾಗಳೂ ಇವೆ ಬಿಡಿ.
ಮೆಟ್ರೋ ಬರುವ ಮೊದಲಿದ್ದ ಚಂದ ಇಲ್ಲ. ಮುಂದೆ ಹೋದರೆ ಬದಲಾಗದೇ ಉಳಿದ ಹಲಸೂರು. ಮೆಟ್ರೋ ಒಂದು ಬಿಟ್ಟರೆ , ರಸ್ತೆಯ ಬದಿಯ ಲಿಡೋ ಮಾಲ್ ನಿಂದ ಹಿಡಿದು ಸ್ಮಶಾನದ ವರೆಗೆ ಇದ್ದ ಹಾಗೇ ಇದೆ. ಇನ್ನು ಇಂದಿರಾನಗರವೂ ತನ್ನ ಹಸಿರನ್ನು ಕಳೆದುಕೊಂಡಿಲ್ಲ. ಮೊದಲಿದ್ದ ಹಾಗೆಯೇ ಇದೆ. ಹಲಸೂರಿನ ಇಕ್ಕಟ್ಟಿನ ನಡುವೆ ಬಂದಾದಮೇಲೆ ಇಂದಿರಾನಗರದ ನಾಜೂಕು ಒಂದು ರೀತಿಯ ಬೇಸರವನ್ನು ಕೊಡುತ್ತದೆ.
ವಾಪಸ್ಸು ಬರುವಾಗ ಹೀಗೇ ನೆನಪಾಯ್ತು. ಮೊದಲು ಇದ್ದ ನನ್ನಲ್ಲೂ ಏನಾದರೂ ಬದಲಾವಣೆ ಆಗಿ ಈಗ ರಸ್ತೆಗಳೂ ” ಈ ಮನುಷ್ಯ ಮೊದಲಿನ ಹಾಗಿಲ್ಲ” ಅಂದುಕೊಂಡಿರಬಹುದೇ?
ಮಳೆಯಲ್ಲಿ, ಧೂಳಿನಲ್ಲಿ, ಶಾಂತವಾದ ಚಳಿಯಲ್ಲಿ, ಕರೆಗಾಳಿಯಲ್ಲಿ, ಟ್ರಾಫಿಕ್ಕಿನಲ್ಲಿ…ಮರದ ನೆರಳಡಿಗೆ, ಪೋಲೀಸರ ನುಡಿಗೆ, ಕೆಲಸದ ಕನವರಿಕೆಗಳಿಗೆ.. ಟಯರಿನ ಗಾಳಿ ತೆಗೆಯುವ, ಗಾಡಿಗೆ ಮಾರ್ಕ್ ಮಾಡುವ ಜನರಿಗೆ.. ಎಷ್ಟೊಂದು ಕಳೆದುಕೊಂಡೆ ಈ ಮೆಟ್ರೋ / ಓಲಾ/ ಊಬರ್ ಬಂದ ಮೇಲೆ.. ಹುಶ್ಶಪ್ಪ!