ತವರಿನಲಿ ಯಾಗವಿದೆ ಎನುವ ಸುದ್ದಿಯ ಕೇಳಿ
ಓಡಿ ಬಂದಳು ಸತಿಯು ಹೇಳಲೆಂದು
ಕರೆಯು ಇಲ್ಲವದೇಕೆ, ಎನುವ ಯೋಚನೆ ಬೇಕೆ?
ಏಕಾಂಗಿಯಾದರೂ ಪೋಪೆನೆಂದು
ಮೆಲುನುಡಿಯ ಮೆಲ್ಲುತಲಿ ಲಲನೆಯಾಡಿದ ನುಡಿಯು
ಪರಶಿವನ ವರಕಿವಿಗೆ ಬೀಳುತಿತ್ತು
ಹೋಗಿ ಬಾ ಎನ್ನಲೇ, ಸಾಗಿ ಜೊತೆ ನಾ ಬರಲೆ?
ಎದೆಯ ಬೀಗವ ವಿಧಿಯು ಜಡಿಯುತಿತ್ತು
ಒಂದು ದಿನ ತಡೆದುಕೋ, ನಿಲ್ಲು ಸಂಜೆಯವರೆಗೆ,
ಅಲ್ಲದಿರೆ ಅರೆಘಳಿಗೆ ಸುಮ್ಮನುಳಿಯೆ
ಎನುವ ಮಾತುಗಳೆಲ್ಲ ಎದೆಯಲುಳಿಯಿತು ಹೇಗೆ
ಮೌನ ಶಾಂತಿಯದೆಂತು? ಫಲವು ಕಹಿಯೆ
ಅವಳು ಹೋದಳು ಸಾಗಿ, ನಿಂತಳೇ ಬಾಗಿಲಲಿ
ಕರೆದಳೇ ಕಣ್ತುಂಬಿ ಬಂದಳೇ ತಿರುಗಿ?
ಮೊಗವ ತಿರುಗಿಸಿ ಕುಳಿತೆ, ಏಕೆಂದು ತಿಳಿದಿಲ್ಲ
ಕರೆಯಲಾರೆನು ಮತ್ತೆ ಮೋಹಕೆರಗಿ.
1234556.jpg
Photo : Google image.


By : Ishwara Bhat K

2 thoughts on “ಭಾವಯಜ್ಞ”

 1. ಹಳೆಯ ಯಾಗಕ್ಕೊಂದು ನವ ಭಾವಯಾನ ಯಾಗ ,,ಸುಂದರ

 2. ಭಾವಯಜ್ಞವನೋದಿ
  ಭಾರವಾಯಿತು ಮನಸು
  ಕಣ್ಣಲ್ಲಿ ತೆಳುವಾದ ನೀರ ಪಸೆಯು
  ಮೂಡದಾಗಿದೆ ಮಾತು
  ಮೌನವಾದೆನು ನಾನು
  ನೋವೊಂದು ಆವರಿಸೆ ಹೃದಯವನ್ನು
  ಕಿರಣ …… ಸೂಪರ್!!!

Leave a Reply

This site uses Akismet to reduce spam. Learn how your comment data is processed.