ಹೀಗೇ ಒಂದು ದಿನ ನಾನು ನನ್ನ ಸ್ನೇಹಿತೆ ಇಬ್ಬರೂ ಹುಬ್ಬಳ್ಳಿಯಲ್ಲಿ ಶಾಪಿಂಗ್ ಮಾಡೋಣ ಅಂತ ಹೊರಟೆವು. ಒಂದಷ್ಟು ತಿರುಗಾಡಿದ ಮೇಲೆ ಕಡೆಗೆ ಒಂದು ಅಂಗಡಿ ಹೊಕ್ಕೆವು. ಅದು ನಮಗೆ ಬೇಕಾದ ವಿನ್ಯಾಸ ಬಣ್ಣ ಮತ್ತು ಗುಣಮಟ್ಟ ಎಲ್ಲಾ ಇರೋ ಸೀರೆ ಅಂಗಡಿ ಆಗಿತ್ತು. ಎಲ್ಲ ಸೀರೆಗಳನ್ನು ಒಂದಾದ ನಂತರ ಇನ್ನೊಂದು ಮತ್ತೊಂದು ತಗೆಸಿ ನೋಡಿದೆವು. ಹೆಣ್ಣು ಮಕ್ಕಳ ಸೀರೆ ವ್ಯಾಪಾರದ ಬಗ್ಗೆ ಕೇಳಬೇಕಾ.
ಸುಮಾರು ಹೊತ್ತಾದ ಮೇಲೆ ನನ್ನ ಗೆಳತಿ ಎರಡು ಸೀರೆ ಆರಿಸಿದ್ಲು. ಅಂತೂ ಆಯಿತಪ್ಪ ಅಂತ ಎದ್ದು “ಬಿಲ್ ಎಷ್ಟಾಯಿತಪ್ಪ? ” ಅಂದ್ರೆ ಅಂಗಡಿ ಮಾಲೀಕ ರಾಜಸ್ಥಾನಿ ಆಗಿದ್ದರಿಂದ “ದೋ ಹಜಾರ್ ಮ್ಯಾಡಮ್ ಜೀ ” ಅಂತ ಅಂದ. ನಾನು ನನ್ನ ಸ್ನೇಹಿತೆಗೆ ಇಬ್ಬರಿಗೂ ಹಿಂದಿ ಅಂದ್ರೆ ಅಷ್ಟಕ್ಕಷ್ಟೇ. ಸರಿ ಇವಾಗ ಚೌಕಾಸಿ ಅಲ್ಲ ಅಂದ್ರೂ ಸ್ವಲ್ಪ ಡೀಸೆಂಟ್ ಆಗಿ ಹೇಳಬೇಕು ಅಂದ್ರೆ ಡಿಸ್ಕೌಂಟ್ ಕೇಳೋದಿತ್ತು. ಆದ್ರೆ ಹಿಂದಿ ವೀಕು. ಸರಿ ಅಂತ ನನ್ನ ಸ್ನೇಹಿತೆ ಹುಂಬ ಧೈರ್ಯಮಾಡಿ “ದಸ್ ಪರ್ಸೆಂಟ್ ಡಿಸ್ಕೌಂಟ್ ದೇದೋ” ಅಂದ್ಲು. ಅದಕ್ಕೆ ಆ ಅಂಗಡಿ ಮಾಲೀಕ “ನಹಿ ಮ್ಯಾಡಮ್ ಜೀ” ಅಂದ. ಅದಕ್ಕೆ ಈಕೆ “ಕ್ಯಾ ಯಾರ್ ತುಮ್ ದೇದೋ ನಾ” ಅಂದ್ ಬಿಡೋದಾ. ಆಕೆ “ಯಾರ್” ಅಂದ್ರೆ ಅಯ್ಯೊ ಇರ್ಲಿ ಕೊಡಿ ಅಂತೀವಲ್ಲ ಅದು ಅಂದುಕೊಂಡಿದ್ಲು ಪಾಪ. ಯಾರ್ ಅಂದ್ರೆ ಪ್ರೀತಿ ಪೂರ್ವಕ ಸಂಭೋದನೆ ಅಂತ ಅವಳಿಗೆ ತಿಳಿದಿರಲಿಲ್ಲ. ಅದನ್ನ ಕೇಳಿದ ಕೂಡಲೇ ಆ ಮನುಷ್ಯ ಒಂದ್ಸಲ ದಂಗಾಗಿ ನಿಂತ್ಕೊಂಡು ವಿಚಿತ್ರವಾಗಿ ಅವಳನ್ನೇ ನೋಡಿದ.
ಕರುಡುಗಣ್ಣಲ್ಲಿ ಮೆಳ್ಳಗಣ್ಣು ಶ್ರೇಷ್ಠ ಅನ್ನೋ ಹಾಗೆ ನನ್ನ ಹಿಂದಿ ಅವಳಗಿಂತ ಸ್ವಲ್ಪ ಚೆನ್ನಾಗಿದ್ದಿದ್ರಿಂದ ಅದನ್ನ ಅರ್ಥ ಮಾಡಿಕೊಂಡು ಚೌಕಾಸಿ ಮಾಡದೇನೇ ಡೀಲ್ ಮುಗಿಸಿ ಅಲ್ಲಿಂದ ಕಾಲ್ಕಿತ್ತೆವು. ನೋಡಿ ಅಲ್ಲಿ ನಾನು ನಗೋದಕ್ಕೆ ಶುರು ಮಾಡಿದ್ದು ಮನೆ ಮುಟ್ಟೋ ವರೆಗೂ ನಕ್ಕಿದ್ದೆ.
ಈಗಲೂ ನಾನು ನನ್ನ ಸ್ನೇಹಿತೆ ಇಬ್ಬರೂ ಸಿಕ್ಕಾಗ ಇದನ್ನ “ಕ್ಯಾ ಯಾರ್” ಅಂತ ಜ್ಞಾಪಿಸಿಕೊಂಡು ನಗದೇ ಇರಲ್ಲ. 😂😂
😅😅😀👌