ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೇ ಒಂದು ದಿನ
ಕಡಲನೂ ಕೂಡಬಲ್ಲೆನೇ ಒಂದು ದಿನ
ನೀನು ನನ್ನ ಪಾಲಿಗೆ ಕಡಲಿನಂತೆ ಕಣೋ.  ನಾನು ಕಡಲನ್ನು ಸೇರುವ ನದಿಯಂತೆ.
ನಿನ್ನ ಪ್ರೀತಿಯ ಅಲೆಯಲ್ಲಿ ತೇಲಿ ಹೋಗಬೇಕು.. ನಿನ್ನ ಮಾತುಗಳನ್ನು ಕೇಳುತ್ತ ನಾ ಕಳೆದು ಹೋಗಬೇಕು..ನನ್ನ ಆಸೆಗಳು ಕೊನೆ ಇಲ್ಲದವು ಕಣೋ ಹುಡುಗಾ.. ಅದಕ್ಕೆಲ್ಲ ನೀನೇ ಕಾರಣ ಅಂತ ಬೇರೆ ಹೇಳಬೇಕಾ ? ಅದರ ಅರಿವು ನಿನಗಿದೆ ಅಲ್ಲವಾ ?ಆದರೂ ಯಾವುದನ್ನೂ ಅರಿಯದ ಅಮಾಯಕನಂತೆ ನಡೆದುಕೊಳ್ಳುವದಾದರೂ ಯಾಕೆ ನೀನು ?
“ಪ್ರೀತಿ” ಎಂದರೆ ಏನು ಅನ್ನುವದನ್ನು ನಿನ್ನಿಂದಲೇ ಅರಿತಿದ್ದು ಕಣೋ.‌ ಎಲ್ಲವೂ ಅರ್ಥವಾಗಿ ಇನ್ನೇನು ನಿನ್ನ ಪ್ರೀತಿ ನನ್ನದು ಎಂದು ಸಂತಸ ಪಡುವ ಹೊತ್ತಿಗೆ ಅಪರಿಚಿತನಂತೆ ವರ್ತಿಸುತ್ತಿರುವೆಯಲ್ಲ.. ಇದು ನಿನಗೆ ತರವೇ ಗೆಳೆಯಾ?
ನೀನಿಲ್ಲದ ಬದುಕು ಹೂಗಳಿಲ್ಲದ ಹೂದೋಟದಂತೆ ಕಣೋ.. ಅಂದವಿಲ್ಲ, ಆಹ್ಲಾದವಿಲ್ಲ.. ಬದುಕಬೇಕಷ್ಟೇ.. ಮರಳಿ ಬಂದು ನನ್ನ ಬದುಕನ್ನು ಅರಳಿಸಬಾರದೇ ??
ನಿನ್ನ ಜೊತೆ ಮಾತನಾಡುತ್ತಾ ಇದ್ದರೆ ಸಮಯ ಕಳೆದದ್ದೇ ಗೊತ್ತಾಗುವದಿಲ್ಲ ಅನ್ನುತ್ತಿದ್ದವನು ನೀನು.. ಇಂದು ನನ್ನೊಂದಿಗೆ ನಾಲ್ಕು ಮಾತನಾಡಲು ಸಮಯವೇ ಇಲ್ಲದವನಂತೆ ನಡೆದುಕೊಳ್ಳುತ್ತಿರುವೆಯಲ್ಲ.. ನಾ ಮಾಡಿದ್ದಾದರೂ ಏನು ? ಚಿಕ್ಕ ಮಕ್ಕಳಂತೆ ಆಡ್ತೀಯಾ ಕಣೇ, ನಿನ್ನ ಬುದ್ಧಿ ಬೆಳೆಯುವದು ಯಾವಾಗ ಅನ್ನುತ್ತಿದ್ದೆಯಲ್ಲ.. ನಿಂಗೊತ್ತಾ ? ನನಗೆ ನಿನ್ನಲ್ಲಿ ಅಮ್ಮ ಕಾಣ್ತಾ ಇದ್ಲು ಕಣೋ..ನಾನು ಮಗುವಾಗಿಬಿಡುತ್ತಿದ್ದೆ..ಇನ್ನೆಂದೂ ಹಾಗೆ ನಡೆದುಕೊಳ್ಳಲಾರೆ.. ಮರಳಿ ಬಂದು ಬಿಡೋ..
ಸಾಯಿಸುವದಿದ್ದರೆ ಒಮ್ಮೇಲೆ ಸಾಯಿಸಿಬಿಡು.. ಹೀಗೆ ನಿರ್ಲಕ್ಷಿಸಿ ಬದುಕಿದ್ದೂ ಸತ್ತಂತೆ ಮಾಡಬೇಡ.. ನೀನಿಲ್ಲದ ಬದುಕಿಗೆ ಅರ್ಥ ಇಲ್ಲ.. ನೀ ಜೊತೆಯಿದ್ದರೆ ಅದುವೇ ಎಲ್ಲ.. ನೀನಿದ್ದರೆ ಜಗದ ಎಲ್ಲ ಸಿರಿ ಸಿಕ್ಕಂತೆ.. ನೀನಿಲ್ಲದಿದ್ದರೆ ಎಲ್ಲ ಇದ್ದರೂ ಏನೂ ಇಲ್ಲದಂತೆ….
ಕಡಲ ಸೇರದೆ ನಡುವೆಯೇ ಬರಡಾಗುವ ನದಿಯನ್ನಾಗಿ ಮಾಡದೆ, ಜುಳುಜುಳು ಹರಿದು ಸಾಗರ ಸೇರುವಂತೆ ಮಾಡು.. ನಿನಗಾಗಿ ಕಾಯುತ್ತಿರುವೆ,,ಕಾಯುತ್ತಲೇ ಇರುವೆ…
ಇಂತಿ ನಿನ್ನವಳಾಗ ಬಯಸುವ..
pexels-photo-415299.jpeg


By: Vindya Hegde

Leave a Reply

This site uses Akismet to reduce spam. Learn how your comment data is processed.