ಅಪ್ಪ ಕಲಿಸಿದ ಪಾಠ
ಮಳೆಗಾಲದ ಒಂದು ಮಧ್ಯಾಹ್ನ, ಅದೂ ಮಲೆನಾಡು… ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು…. ನನಗೆ ಯಾಕೋ ಊಟದ ಮೇಲೆ ಕೋಪ ಬಂದು ಬಿಟ್ಟಿತ್ತು… ನನಗೆ ಊಟ ಬೇಡ ಎಂದರೆ ಬೇಡ ಎಂದು ಅಮ್ಮನ ಹತ್ತಿರ ನನ್ನ ಹಟ ಜೋರಾಗಿತ್ತು…
“ಮಗಾ ಊಟ ಬೇಡ ಎನ್ನಬಾರದು.. ಚಿಕ್ಕ ಮಕ್ಕಳು ಹಸಿದಿರಬಾರದು..ಸ್ವಲ್ಪ ಆದರೂ ಊಟ ಮಾಡು “ಎಂದು ಅಮ್ಮ ರಮಿಸುತ್ತಿದ್ದರು.. ನನ್ನದೋ ಊಟ ಬೇಡ ಎನ್ನುವ ಹಟ.. ಊಟಕ್ಕೆ ಕುಳಿತ ಅಪ್ಪ ಒಮ್ಮೆದೊಡ್ಡದಾಗಿ ಕಣ್ಣು ಬಿಟ್ಟು ಸುಮ್ಮನೆ ಊಟ ಮಾಡು ಎಂದು ಗದರಿಸಿದರು.. ( ಅಪ್ಪ ಎಂದೂ ಹೊಡೆದವರಲ್ಲ. ಹೆಚ್ಚೆಂದರೆ ದೊಡ್ಡದಾಗಿ ಕಣ್ಣು ಬಿಡುತ್ತಿದ್ದರು. ಅಪ್ಪ ಕಣ್ಣು ಬಿಟ್ಟ ಅಂತ ನಾನು ಮತ್ತೆ ಅಕ್ಕ ಅಳ್ತಾ ಇದ್ವಿ) ಅಪ್ಪನ ಭಯಕ್ಕೆ ಊಟಕ್ಕೆ ಕುಳಿತವಳು ನಾಲ್ಕು ತುತ್ತು ತಿಂದು ಕಲಸಿದ ಅನ್ನವನ್ನು ಬಿಟ್ಟು ಹೊರಬಂದಿದ್ದೆ..
ಅಪ್ಪ ಅದು ಹೇಗೋ ತಮ್ಮ ಕೋಪವನ್ನು ತಡೆದುಕೊಂಡು ಊಟವನ್ನು ಮುಗಿಸಿ ಹೊರಬಂದವರೇ, ” ಅನ್ನವನ್ನು ಬಿಡುತ್ತಿಯಲ್ಲಾ, ಅನ್ನದ ಬೆಲೆ ತಿಳಿಸುತ್ತೇನೆ ಬಾ” ಎಂದು ನನ್ನ ತೋಳನ್ನು ಹಿಡಿದು ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಬಾವಿಯ ಹತ್ತಿರ ಎಳೆದುಕೊಂಡು ಬಂದಿದ್ದರು.. ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಾವಿಯಲ್ಲಿ ಕೆಂಬಣ್ಣದ ನೀರು ತುಂಬಿ ನಿಂತಿತ್ತು.. ನೀರನ್ನು ಕೈಯಿಂದಲೇ ಮೊಗೆಯಬಹುದಿತ್ತು…
ಅಮ್ಮಾ ಎಂದು ನಾನು ಜೋರಾಗಿ ಕೂಗುತ್ತಿದ್ದೆ. ಅಪ್ಪನ ರೌದ್ರಾವತರ ಮತ್ತು ನನ್ನ ಕೂಗಾಟ ಕೇಳಿ ಅಮ್ಮ ಓಡೋಡಿ ಬಂದಿದ್ದರು… ಅಷ್ಟರಲ್ಲಿ ಅಪ್ಪ ಗಡಗಡೆಯಲ್ಲಿನ ಹಗ್ಗ ಎಳೆದು ನನ್ನ ಸೊಂಟಕ್ಕೆ ಬಿಗಿದಿದ್ದರು.. ಮಗಳನ್ನು ಸಾಯಿಸುತ್ತೀರೇನು ಬಿಡಿ ಎಂದು ಅಮ್ಮ ಭಯದಿಂದ ಕೂಗುತ್ತಿದ್ದರೆ ನನ್ನ ಕೂಗಾಟ ಭಯಕ್ಕೆ ನಿಂತೇಹೋಗಿತ್ತು…. ” ಹಟಮಾಡ್ತೀಯಾ?? ಇನ್ನೊಮ್ಮೆ ಮಾಡು.. ಊಟ ಬಿಡ್ತೀಯಾ?? ಅನ್ನಕ್ಕೆ ಅವಮಾನ ಮಾಡ್ತೀಯಾ ??” ಎನ್ನುತ್ತಾ ಎತ್ತಿ ಬಾವಿಗೆ ಬಿಟ್ಟೇ ಬಿಟ್ಟರು.. ಹಗ್ಗ ಹಿಡಿದು ಹಟ ಮಾಡ್ತೀಯಾ ಎಂದು ಬಾವಿಯ ನೀರಿಗೆ ತಲುಪವ ವರೆಗೆ ಬಿಡುವದು ಮತ್ತೆ ಮೇಲೆ ಎತ್ತುವದು ಮಾಡುತ್ತಿದ್ದರು.. ‘ಅಪ್ಪಾ ನೀ ಹೇಳಿದ ಹಾಗೆಕೇಳುತ್ತೇನೆ, ಅನ್ನ ಬಿಡಲ್ಲ, ಹಟ ಮಾಡಲ್ಲ ನನ್ನ ಎತ್ಕೋ’ ಎಂದು ಕೂಗೋಕೆ ಶುರುಮಾಡಿದೆ…
‘ಇನ್ನೊಮ್ಮೆ ಹಟ ಮಾಡುವದೋ ಅನ್ನಕ್ಕೆ ಅವಮಾನ ಮಾಡುವದೋ ಮಾಡಿದರೆ ಮೇಲೆ ಎತ್ಕೊಳಲ್ಲ, ಕೆಳಗೇ ಬಿಟ್ಟುಬಿಡುತ್ತೇನೆ ನೋಡು’ ಎನ್ನುತ್ತಾ ಅಪ್ಪ ನನ್ನನ್ನು ಬಾವಿಯಿಂದ ಮೇಲಕ್ಕೆ ಎತ್ತಿಕೊಂಡರು..
ನಿಮ್ಮ ಬುದ್ಧಿಗೆ ಏನಾಗಿದೆ? ಹಗ್ಗ ತುಂಡಾಗಿ ಬಿದ್ದಿದ್ರೆ ಏನು ಮಾಡೋದು, ಭಯಪಟ್ಟುಕೊಂಡರೆ ಏನು ಗತಿ ಎಂದು ಅಮ್ಮ ಅಪ್ಪನ ಹತ್ತಿರ ಜಗಳಕ್ಕೇ ನಿಂತಿದ್ದರು..
” ನೀನು ಸುಮ್ಮನಿರು, ನನಗೆ ಮಗಳ ಮೇಲೆ ಪ್ರೀತಿ, ಕಾಳಜಿ ಇಲ್ಲವೇನು ? ಅವಳಿಗೆ ಏನಾದರೂ ಆಗಲು ನಾನು ಬಿಡುತ್ತೇನಾ ?? ಹಗ್ಗ ಕಟ್ಟಾಗಿ ಬಿದ್ದರೂ ನಾನು ಅವಳನ್ನು ಕಾಪಾಡಬಲ್ಲೆ,, ( ಅಪ್ಪ ನುರಿತ ಈಜು ಪಟು).. ಅವಳಿಗೆ ಈಗಿನಿಂದಲೇ ಹಟದ ಸ್ವಭಾವ ಬಿಡಿಸಬೇಕು.. ಅನ್ನದ ಬೆಲೆ ಅರಿವಾಗಬೇಕು… ಅನ್ನ ಬಿಡಲು ಹೋದಾಗಲೆಲ್ಲ ಇದು ನೆನಪಾಗಬೇಕು” ಎಂದು ಹೇಳುತ್ತಿದ್ದರು ಅಪ್ಪ..
ಅಂದಿನಿಂದ ಇಂದಿನ ತನಕ ಅನ್ನವನ್ನು ಹಾಳು ಮಾಡುವದು ನನ್ನಿಂದ ಆಗದು.. ಅಪ್ಪ ಕಲಿಸಿದ ಪಾಠ ನಾನು ಕೊನೆತನಕ ಮರೆಯಲಾರೆ.. ಇಂದು ನಾನೂ ನನ್ನ ಮಗನಿಗೆ ಅನ್ನದ ಮಹತ್ವ ತಿಳಿಸುತ್ತಿದ್ದೇನೆ ಅಂದರೆ ಅದಕ್ಕೆ ಅಪ್ಪ ಕಲಿಸಿದ ಪಾಠ ಕಾರಣ.
By: Vindya Hegde
Nice..kaledu konda mele alwa namge bele gott agodu…chanagide