ರೂಮಿಗೆ ಕಾಲಿಟ್ಟ ನಾರಾಯಣರಾಯರು ಒಂದು ಕ್ಷಣ ಅವಾಕ್ಕಾದರು ! ಮಂಚದ ಸುತ್ತ ಹೂವಿನ ಅಲಂಕಾರ, ಸಣ್ಣನೆ ಲೈಟ್, ಊದುಬತ್ತಿಯ ಘಮ ತುಂಬಿರೋ ರೂಮು. ಮಕ್ಕಳ ಕೆಲಸವೇ ಇದು ! ಕೋತಿ ಮುಂಡೇವು ! ನಗುತ್ತಲೇ ಬೈದುಕೊಂಡರು. ಹಾಗೇ ದಿಂಬಿಗೆ ಒರಗಿಕೊಂಡರು. ಅರವತ್ತನೇ ವರ್ಷದ ಶಾಂತಿ ಇವತ್ತು. ಅದೆಷ್ಟು ಸಂಭ್ರಮ ! ಶಾಂತಾ ಅದೆಷ್ಟು ಮುದ್ದಾಗಿ ಕಾಣ್ತಿದ್ದಳು ಇವತ್ತು ! ಮುಖದಲ್ಲಿ ನಸುನಗೆ ಮೂಡಿತು. ಭಗವಂತನ ದಯೆ ನಮ್ಮ ಮೇಲೆ ಸಾಕಷ್ಟಿದೆಯೇನೋ ಅನ್ನುವಂತೆ, ಸಂತೃಪ್ತ ಸಂಸಾರ, ಅನ್ಯೋನ್ಯ ದಾಂಪತ್ಯ ನಮ್ಮದು. ಸೌಮ್ಯ, ಸ್ವಾತಿ ನಂತರ ಕೌಶಿಕ್ ಹುಟ್ಟಿರೋದು. ಎಲ್ಲರೂ ದಡ ಮುಟ್ಟಿದ್ದಾಗಿದೆ. ಪಿತ್ರಾರ್ಜಿತ ಆಸ್ತಿಯಾದ ಮೂರು ಮನೆ ಜೊತೆ, ನನ್ನ ದುಡಿತದ ಉಳಿತಾಯವೂ ಸೇರಿ ಸಾಕಷ್ಟು ಆಸ್ತಿಪಾಸ್ತಿಯೂ ಆಗಿದೆ. ಹೆಣ್ಣುಮಕ್ಕಳಿಗೆ ಒಳ್ಳೆಯ ಕಡೆನೋಡಿ ಮದುವೆಮಾಡಿಕೊಟ್ಟಿದ್ದಾಗಿದೆ, ಜೊತೆಗೆ ಸುಖವಾಗಿ, ಹಿತವಾಗಿಯೂ ಇದ್ದಾರೆ. ಮಗ ಕೌಶಿಕ್ ಹೆಂಡತಿ ಸುಹಾ ಎಷ್ಟು ಒಳ್ಳೆಯ ಹುಡುಗಿ. ಮುದ್ದಾಗಿದ್ದಾಳೆ. ಇವನೂ ಕೈತುಂಬಾ ದುಡಿಯೋದ್ರಿಂದ ಅವಳು ಕೆಲಸಕ್ಕೆ ಹೋಗೋದು ಬೇಡ, ಮನೆ ನೋಡ್ಕೊಂಡು ಆರಾಮಾಗಿ ಇರ್ಲಿ ಅಂದ. ಇವಳೂ ಚೆನ್ನಾಗೇ ಹೊಂದ್ಕೊಂಡಿದ್ದಾಳೆ. ಚಿಟಿ-ಪಿಟಿ ಅಂತ ಮನೆತುಂಬಾ ಒಡಾಡ್ಕೊಂಡಿರೋ ಹುಡುಗಿ. ಮೊಮ್ಮಗ ಅನಿಕೇತ್ ಹುಟ್ಟಿದ ಮೇಲಂತೂ ಮನೆಯಲ್ಲಿ ಯಾರಿಗೂ ಬಿಡುವಿಲ್ಲದಷ್ಟು ಕೆಲಸ. ರಾಯರಿಗೆ ಮುಖದಲ್ಲಿ ಮುಗುಳ್ನಗೆ ಮೂಡಿತು. ಶಾಂತಾಗೆ ತುಂಬಾ ಸುಸ್ತಾಗಿದೆ ಅನ್ಸುತ್ತೆ. ಬೆಳಿಗ್ಗೆಯಿಂದ ಓಡಾಟ. ಒಂದೇ ಸಮ ಕೆಲಸ ಮಾಡ್ತಿಡ್ಡಾಳೆ. ಮಕ್ಕಳೆಲ್ಲ ನಾವು ನೋಡ್ಕೋತೀವಿ ಅಂದ್ರೂ ಕೇಳಿಲ್ಲ. ಅವಳಿಗೂ ಸಂಭ್ರಮ. ಅವಳಿಗೂ ಐವತ್ತೈದಾಯ್ತು. ಸೊಸೆಯೂ ಜಾಸ್ತಿ ಕೆಲಸ ಕೊಡೋಲ್ಲ. ಯಾಕೋ ಇತ್ತೀಚೆಗೆ ಸುಸ್ತು ಅಂತಿದ್ದಾಳೆ. ಸ್ವಲ್ಪ ಕಟ್ಟುನಿಟ್ಟಾಗಿ ರೆಸ್ಟ್ ಮಾಡೋಕೆ ಹೇಳ್ಬೇಕು ಅಂದ್ಕೊಂಡ್ರು.
ಬಾಗಿಲು ಸದ್ದಾಯಿತು. ಬಂದ್ಲು ಅನ್ಸುತ್ತೆ, ಪಾಪ ಸುಸ್ತಾಗಿರಬೇಕು. ಕೂತಲ್ಲಿಂದ ಎದ್ದುನಿಂತರು. ಮುಖದ ಮೇಲೆಲ್ಲ ಬೆವರ ಹನಿ ಮೂಡ್ತಿದೆ ಇವಳಿಗೆ. ಮದುವೆಯಾಗಿದ್ದಾಗ ಹೇಗಿದ್ಳೋ ಈಗ್ಲೂ ಹಾಗೇ ಇದ್ದಾಳೆ ನನ್ನ ಸುಂದರಿ. ಕೈ ಹಿಡಿದುಕೊಂಡರು. ಯಾಕೋ ಎದೆನೋಯ್ತಾ ಇದೇರೀ ಅಂದರು ಶಾಂತಾಬಾಯಿ. ಎದೆ ನೀವಿಕೊಟ್ಟು, ಸ್ವಲ್ಪ ನೀರು ತರೋಕೆ ಹೋದರು, ಯಾಕೋ ಒದ್ದಾಡಿತು ಆ ಜೀವ..! ಮಗನ ಕೂಗಿ, ನೀರು ತೆಗೆದುಕೊಂಡು ಹೋದಾಗ, ಕರೆದರೂ ಮಿಸುಕಾಡಲಿಲ್ಲ ! ಸಂತೃಪ್ತ ಬದುಕಿನ ಸುಖ ಅನುಭವಿಸಿದ ಜಾಸ್ತಿ ಸುಖದ ಅನುಭೂತಿ ತಡೆದುಕೊಳ್ಳದ ಪ್ರಾಣಪಕ್ಷಿ ಹಾರಿಹೋಗಿತ್ತು !

 By: Sangeetha Bhat

Leave a Reply

This site uses Akismet to reduce spam. Learn how your comment data is processed.