ಅಮ್ಮ…
ಶಾಮತ್ತೆ ಬರ್ತಿದ್ದಾರಾ ?
ಚೈತ್ರ ಅಮ್ಮನ ಕೇಳಿದಳು.
ಅದ್ಯಾಕೋ ಚೈತ್ರಂಗೆ ಶ್ಯಾಮಲತ್ತೆ ಅಂದ್ರೆ ಒಂಥರಾ.
ಅಮ್ಮನ ಅಣ್ಣನ ಹೆಂಡತಿ, ಸೋದರತ್ತೆ ಅವರು. ಆ ಕಾಲದಲ್ಲಿ ಅತ್ಯಂತ ಸುಂದರಿ.
ಅಚ್ಚ ಹಾಲು ಬಿಳುಪು ಬಣ್ಣ. ದೊಡ್ಡ ಅನುಕೂಸ್ಥರ ಮನೆಯವರು. ಎಲ್ಲವೂ ಸೇರಿ ಜಂಭವೂ ಹಾಗೇ ಇತ್ತು !
ಚೈತ್ರ ಅವಳ ಅಪ್ಪನ ಥರ ! ಅಮ್ಮನ ಅಚ್ಚ ಬಣ್ಣ ಬಂದಿಲ್ಲ.
ಸ್ವಲ್ಪ ಎಣ್ಣೆಗಪ್ಪು ಬಣ್ಣ. ಆದರೆ ಲಕ್ಷಣವಾದ ಹೆಣ್ಣುಮಗಳು.
ಶ್ಯಾಮಲತ್ತೆಗೆ ಚೈತ್ರಳ ಬಣ್ಣ ಅಂದ್ರೆ ಅಲರ್ಜಿ. ಯಾವಾಗಲೂ ಕೊಂಕು ಮಾತಾಡೋದು !
ಎಲ್ಲೇ ಸಂದರ್ಭ ಸಿಗಲಿ..
ನಮ್ಮ ಲಲಿತಾ ಅತ್ತಿಗೆ ಮಗಳು ಚೈತ್ರ ಸ್ವಲ್ಪ ಕಪ್ಪು. ಜಾಣೆಯೇನೋ ಹೌದು. ಬಣ್ಣವೊಂದು ಚೆನ್ನಾಗಿದ್ರೆ ಹುಡುಗಿ ಲಕ್ಷಣವಾಗಿತ್ತು
ಅಂತ ಸದಾ ಕೊಂಕು ತೆಗೆಯೋರು !
ಚೈತ್ರಂಗೂ ಈ ಕೊಂಕು ಅತ್ತೆ ಅಂದ್ರೆ ಅಷ್ಟಕ್ಕಷ್ಟೇ !
ಈಗ ಚಿಕ್ಕವಳೇನಲ್ಲ ಚೈತ್ರ ! ಮದುವೆ ವಯಸ್ಸಿಗೆ ಬೆಳೆದು ನಿಂತಿದ್ದಾಳೆ.
ಆಗಲೇ, ಬರೋ ಮಾರ್ಚ್ ಗೆ 22 ತುಂಬುತ್ತೆ !
ಇವತ್ತು ಅತ್ತೆ ಬರ್ತೀನಿ ಅಂದಾಗಿಂದ ಆತಂಕ ಪಡ್ತಿದ್ದಾಳೆ.
ಇನ್ನೇನೇನು ಮಂಗಳಾರತಿ ಮಾಡಿಸ್ಕೋಬೇಕೋ ಏನೋ ಅಂತ !
ಲಲಿತಮ್ಮಂಗೆ ಅರ್ಥವಾಗ್ತಿದೆ. ಸುಮ್ಮನಿದ್ದಾರೆ. ಎಲ್ಲಾ ಸರಿಹೋಗುತ್ತೆ ಅನ್ನೋ ಥರ ಸಮಾಧಾನದ ಮುಖ.!
ಆದರೂ ತುಸು ಆತಂಕ !
..
ಅಂತೂ ಬಂದರು ಶಾಮತ್ತೆ !
ಯಾಕೋ ಡಲ್ ಆಗಿದ್ದಾರೆ. ಮಾತೂ ಕಮ್ಮಿಯೇ ಆಗಿದೆ. ಊಟ, ವಿಶ್ರಾಂತಿ, ಎಲ್ಲವೂ ಮುಗೀತು.
ಅಮ್ಮ ನಿಧಾನಕ್ಕೆ ಮಾತಿಗೆ ಶುರುವಿಟ್ಟುಕೊಂಡ್ರು.
ನಮ್ಮ ಚೈತ್ರಾಗೂ ಇಪ್ಪತ್ತೆರಡು ತುಂಬುತ್ತೆ, ಎಲ್ಲಾದ್ರೂ ಒಳ್ಳೇ ಕಡೆ ಸಂಬಂಧ ಸಿಕ್ಕಿದ್ರೆ..
ಈ ಸಾರಿ ವಾಲಗ ಊದಿಸೋಣ ಅಂತಿದ್ದೀವಿ ಅತ್ತಿಗೆ ಅಂತ.. !!
ಯಾಕೋ ಶ್ಯಾಮತ್ತೆ ಸುಮ್ಮನಿದ್ರು. ಆಯ್ತು ಅತ್ತಿಗೆ, ನಮ್ಮಣ್ಣನ ಮಗನೇ ಇದ್ದಾನಲ್ಲ, ಒಳ್ಳೇ ಕೆಲಸನೂ ಇದೆ, ಸಧ್ಯಕ್ಕೆ
ಅಮೇರಿಕಾದಲ್ಲಿದ್ದಾನೆ. ಮುಂದಿನ ತಿಂಗಳು ವಾಪಸ್ ಬರ್ತಿದ್ದಾನೆ, ಬಂದ್ಮೇಲೆ ಮಾತಾಡ್ತೀನಿ ಅಂದ್ರು !!
ಚೈತ್ರಾ ನಿಬ್ಬೆರಗಾದ್ಲು !
ಅರೇ ಅತ್ತೆನಾ ಈ ಥರ ಮಾತಾಡ್ತಿರೋದು !!
..
ಹೌದು, ಶ್ಯಾಮಲತ್ತೆ ಬದಲಾಗಿದ್ದಾರೆ. ಸದಾ ತಮ್ಮ ಬಣ್ಣ, ಸೌಂದರ್ಯದ ಬಗ್ಗೆ ಜಂಭ ಇರೋರಿಗೆ..
ಮೈಮೇಲೆ ಸಾಕಷ್ಟು ಕಡೆ ತೊನ್ನು ರೋಗ ಶುರುವಾಗಿಬಿಟ್ಟಿದೆ. ಅದು ಕಡಿಮೆಯಾಗುವುದೆಂದು ತಿಳಿದರೂ ಡಲ್ಲಾಗಿಬಿಟ್ಟಿದ್ದಾರೆ !


By : Sangeetha Bhat


ಪಾಪ !

2 thoughts on “ಮನಸೆಂಬ ಮಾಯದ ಕನ್ನಡಿ – ಬಿಂಬ ೭”

Leave a Reply

This site uses Akismet to reduce spam. Learn how your comment data is processed.