ಛೇ ಅದೇನು ಟ್ರಾಫಿಕ್, ಸಿಗ್ನಲ್ ಲ್ಲಿ ನಿಂತು ಆಗ್ಲೇ ಹತ್ತು ನಿಮಿಷನೇ ಆಗೋಯ್ತು, ಯಾವಾಗ ಮೂವ್ ಆಗತ್ತೋ ಗೊತ್ತಿಲ್ಲ ಅಂತ ಬೈಕೊಂಡು ಮತ್ತೆ ಯೋಚನೆಯ ಸುಳಿಗೆ ಸಿಲುಕಿಕೊಂಡಳು ಸಹನಾ..
ಶ್ಯಮಂತ್ ಅಸೈನ್ಮೆಂಟ್ ಮುಗ್ಸಿದ್ನೋ ಇಲ್ವೋ.. ರಾಹುಲ್ ಜೊತೆ ಅಷ್ಟೊಂದು ಜಗಳ ಆಡ್ಬಾರ್ದಿತ್ತು, ಶ್ಯಮಂತ್ ಬಗ್ಗೆ ಗಮನ ಕೊಡೋಕಾಗ್ತಿಲ್ಲ.. ನಾನಾದ್ರೂ ಏನ್ಮಾಡ್ಲಿ ? ಚೆನ್ನಾಗಿ ನಡ್ಕೊಂಡು ಹೋಗ್ತಿತ್ತಲ್ಲ ಜೀವನ ?! ರಾಹುಲ್ ಕೆಲಸ ಕಳ್ಕೊಳ್ಳೋವರೆಗೂ ಕಷ್ಟ ಅಂದ್ರೇನು ಅನ್ನೋ ಅರಿವಿಲ್ಲದಂತೆ ಒಳ್ಳೆ ಐಶಾರಾಮಿ ಬದುಕೇ ನಡೀತಿತ್ತಲ್ಲ? ಒಳ್ಳೇ ಸಾಫ್ಟ್ವೇರ್ ಇಂಜಿನಿಯರ್, ಕೈತುಂಬಾ ಸಂಬಳ, ಒಳ್ಳೇ ಮನೆನೂ ಆಯ್ತು, ದೊಡ್ಡ ಕಾರು, ವೀಕೆಂಡ್ಸ್ ತಿರುಗಾಟ ಎಲ್ಲವೂ ಚೆನ್ನಾಗೇ ರೂಢಿ ಆಗಿತ್ತು. ಕೆಲಸ ಕಳ್ಕೊಂಡಮೇಲೆ, ಈ ಎಮ್ ಐ ಕಟ್ಟೋದ್ರಲ್ಲಿ, ದೊಡ್ಡ ಮನೆ ಮಾರಬೇಕಾಗಿ ಬಂತು, ಈಗ ಸಣ್ಣ ಅಪಾರ್ಟ್ಮೆಂಟ್.. ದೊಡ್ಡ ಮನೆ ರೂಢಿಯಾಗಿದೆ, ಹೊಂದ್ಕೊಳ್ಳೋದು ಕಷ್ಟ. ಸಾಲಕ್ಕೆ ಇರೋ ಬರೋ ಆಸ್ತಿ ಕರಗಿಹೋಗ್ತಿದೆ !
ನಾನೂ ದುಡೀಬೇಕಾಗಿರೋ ಪರಿಸ್ಥಿತಿ ! ರಾಹುಲ್ ಡಿಪ್ರೆಶನ್ ಗೆ ಹೋಗ್ತಿದ್ದಾನೆ, ಸಣ್ಣಪುಟ್ಟ ವಿಷ್ಯಕ್ಕೆ ಕೋಪ, ಜಗಳ, ಸಾಕಾಗಿದೆ ! ನಿನ್ನೆಯೂ ಏನೋ ಪುಟ್ಟ ವಿಷಯವೇ ಅಲ್ವೇ ಆಗಿದ್ದು ? ಅದೆಷ್ಟು ಕೋಪ ಮಾಡ್ಕೊಂಡ ! ಆಫೀಸಲ್ಲಿ ಕತ್ತೆ ಥರ ದುಡಿದು ಬರ್ತೀನಿ ನಾನು, ನಂಗೂ ಸಾಕಾಗಿದೆ ! ಮನೆಗೆ ಹೋದ್ಮೇಲೆ ಕನ್ವಿನ್ಸ್ ಮಾಡ್ಬೇಕು ಹೇಗೋ ಶ್ಯಮಂತ್ ಗೆ ಒಂದು ದಾರಿ ಮಾಡ್ಕೊಟ್ರೆ ಸಾಕು ! ಯೋಚನೆ ಮುಗೀತಿಲ್ಲ.. ಟ್ರಾಫಿಕ್ ಮೂವಾಯ್ತಲ್ಲ? ತರಾತುರಿಯಿಂದ ಮನೆಗೆ ಹೋದಳು..
ಮನೆಯ ಮುಂದೆ ತುಂಬಾ ಜನ ಸೇರಿದ್ರು, ಏನಾಗ್ತಿದೆ ? ಎಲ್ಲರನ್ನೂ ಸರಿಸಿ ಎದುರಿನ ದೃಷ್ಯ ನೋಡ್ತಿದ್ದಂಗೆ ಕುಸಿದು ಬಿದ್ದಳು ! ಯಾರೋ ಮಾತಾಡಿಕೊಳ್ತಿದ್ರು.. “ಗಂಡಹೆಂಡತಿ ಜಗಳ, ರೋಸಿಹೋಗಿ ಆತ್ಮಹತ್ಯೆ ಮಾಡ್ಕೊಂಡ್ನಂತೆ”!
By: Sangeetha Bhat