ಶುಭಾ ಗಿರಣಿಮನೆ
ಒಮ್ಮೆ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ನಮ್ಮ ತಲೆಯಲ್ಲಿ ಯಾವೆಲ್ಲ ಚಿತ್ರಗಳು ಓಡುತ್ತವೆ ಎಂದು ವೀಕ್ಷಿಸಿ. ಬೆಳಗ್ಗೆ ಎದ್ದಾಗ ಹಲ್ಲು ತಿಕ್ಕುವುದರಿಂದ ಹಿಡಿದು ತಿಂಡಿ, ಊಟ, ಟಿವಿ ಪರದೆಯಲ್ಲಿಯ ಕಥೆ, ಪ್ರೀತಿಸಿದ ಮಗು, ಜಗಳ ಕಾಯ್ದ ಗೆಳೆಯ, ಉಂಡ ಸಾರಿನ ಪರಿಮಳವೂ ನೆನಪಿನ ಸುಳಿಯಲ್ಲಿ ಸುತ್ತಿ ತಟ್ಟನೆ ಕಣ್ಣುಬಿಡುವಂತೆ ಮಾಡುತ್ತದೆ. ಇದಕ್ಕೆ ಕಾರಣ ನಮ್ಮಲ್ಲಿ ಏಕಾಗ್ರತೆ ಇಲ್ಲದಿರುವುದು.
ಏಕಾಗ್ರತೆಯನ್ನು ಇಂದಿನ ಕಾಲದಲ್ಲಿ ಮಾರಿಬಿಟ್ಟಿದ್ದೇವೆ. ಏಕಾಗ್ರತೆ ನಮ್ಮ ಸ್ವತ್ತು ಎನ್ನುವುದನ್ನು ಮರೆತಿದ್ದೇವೆ. ಈಗ ನಮಗೆಲ್ಲ ಗೌಜು, ಗದ್ದಲವಿರುವ ಜಾಗವೇ ಅತ್ಯಂತ ಪ್ರಿಯ. ಯಾಕೆಂದರೆ ಸಿಟಿ ಲೈಪ್ ಎಂದರೆ ಎಂಜಾಯ್ ಎಂದುಕೊಂಡ ಭ್ರಮೆಯುಳ್ಳವರು ನಾವು. ಸುಖ ಇರುವುದೆಲ್ಲ ತಿಂದುಂಡು ತೊಡುವುದರಲ್ಲಿ ಅಂದುಕೊಂಡವರು ನಾವು. ಮತ್ತಷ್ಟು ನನಗೆ ಬೇಕು, ಅದು ಬೇಕು, ಇದು ಬೇಕು ಎಂದು ಬೊಬ್ಬೆ ಹೊಡೆಯುತ್ತ ಮನಶ್ಯಾಂತಿ ಕಳೆದುಕೊಂಡವರು ನಾವು.
ವಾರದ ಹಿಂದೆ ಸವತೆಕಾಯಿ ಹಾಗೂ ಸಿಹಿಗೆಣಸು ತೆಗೆದುಕೊಂಡು ನನ್ನ ಸ್ನೇಹಿತೆಯ ಮನೆಗೆ ಹೋದೆ. ಮನೆಗೆ ಹೆಜ್ಜೆಯಿಡುತ್ತಲೇ ಬಾಗಿಲು ತಟ್ಟಿಯೋ, ಮನೆಯ ಜನರನ್ನ ಕೂಗುವುದೋ ಮಾಡುತ್ತೇವೆ. ನಾನು ಕೂಡ ಗೆಳತಿಯನ್ನು ಕರೆದೆ. ಆಕೆ ಅಡುಗೆಮನೆಲಿದ್ದಳು. ನನ್ನ ಕೂಗಿಗೆ ಓಗುಟ್ಟು ಹೊರಬಂದಳು. ಇಷ್ಟೆಲ್ಲ ಆಗಲು ಕನಿಷ್ಟ ಐದು ನಿಮಿಷ ಆಗಿರಬಹುದು.
ಈ ಐದು ನಿಮಿಷಗಳ ಕಾಲ ಆಕೆಯ ಮಾವ ಮಂಚದ ಮೇಲೆ ಕಣ್ಣು ಮುಚ್ಚಿ ಕೂತಿದ್ದರು.ನಾನು ಕರೆದರೂ ಕಣ್ಣು ಬಿಟ್ಟು ಸಹ ನೋಡಲಿಲ್ಲ. ನಾನು ಗೆಳತಿಯಲ್ಲಿ ಪ್ರಶ್ನಿಸಿದಾಗ ” ಈಗ ಎರಡು ವರ್ಷಗಳ ಕಾಲವಾಯ್ತು. ನಿತ್ಯವೂ ಇದೇ ರೀತಿ ಧ್ಯಾನಕ್ಕೆ ಕೂರುತ್ತಾರೆ. ಮಾವನ ಸಂಬಂಧಿಯೊಬ್ಬರು ಬಂದಾಗ ಹೀಗೆ ಮಾಡು ಎಂದು ಹೇಳಿದ್ದರು. ಮೊದಲೆಲ್ಲ ಅತೀಯಾದ ಸಿಟ್ಟು ಬರುತಿತ್ತು. ಮಾತು ಮಾತಿಗೂ ಸಿಟ್ಟು. ಅತ್ತೆಯಂತು ಅದೆಷ್ಟು ದಿನ ಹೊಡೆತ ಇಂದಿದ್ದರೇನೋ. ಯಾರಿದ್ದಾರೆ, ತಾನು ಯಾರಿಗೆ ಬೈತಿದ್ದೇನೆ ಅನ್ನದೇ ಕೋಪಿಸಿಕೊಂಡು ಕೂಗ್ತಾ ಇದ್ರು. ಈ ಧ್ಯಾನಕ್ಕೆ ದಿನ ಎರಡು ತಾಸು ಕೂರಲು ಶುರು ಮಾಡಿದ ಮೇಲೆ ಸಿಟ್ಟು ಅಂತ ಬರುವುದೇ ಇಲ್ಲ. ಮಾತು ಕೂಡ ಕಮ್ಮಿಯಾಗಿದೆ. ಲವಲವಿಕೆಯಲ್ಲಿ ಇರ್ತಾರೆ” ಎಂದಳು.
ಮಾವನಿಗೆ ಆದದ್ದು ಇಷ್ಟೆ. ನಿತ್ಯ ಕಣ್ಣು ಮುಚ್ಚಿ ಕೂತಾಗ ತಾನು ಮಾಡಿದ ಕೆಲಸ, ಆಡಿದ ಮಾತು ನೆನಪಾಯ್ತು. ಮನಸ್ಸಿನಲ್ಲಿ ವಿಮರ್ಶೆಗಳು ಪ್ರಾರಂಭವಾದವು. ತಪ್ಪು ಸರಿ ಎನ್ನುವುದರ ಲೆಕ್ಕಾಚಾರ ಹಾಕಿದರು. ಕೊನೆಗೆ ಸಿಕ್ಕಿದ್ದು ತಾನು ಕೋಪಿಸಿಕೊಳ್ಳುವುದರಿಂದ ಸಮಾಜ ತನ್ನನ್ನು ದೂರ ಇಡುತ್ತದೆ ಎನ್ನುವುದು ಒಂದಾದರೆ, ತನ್ನ ಆರೋಗ್ಯ ಕೂಡ ಕೆಡುತ್ತದೆ ಎನ್ನುವುದ ಗ್ರಹಿಸಿದರು. ಧ್ಯಾನಕ್ಕೆ ಕುಳಿತು ಇಷ್ಟೆಲ್ಲ ಯೋಚಿಸುವಾಗ, ಸಿಟ್ಟು ಬಂದಾಗಲೂ ತನ್ನ ನರಗಳ ಉಬ್ಬುವಿಕೆ, ತಲೆಯಲ್ಲಿ ಆಗುವ ವಿಪರೀತ ನೋವು, ದೇಹಗಳ ಬಿಗಿ ಹಿಡಿತಗಳ ಪರಿಚಯ ತಮಗೆ ತಾವು ಮಾಡಿಕೊಳ್ಳತೊಡಗಿದರು. ಅಲ್ಲಿಗೆ ತಾನು ಸಿಟ್ಟು ಮಾಡಿಕೊಳ್ಳಬಾರದು ಎನ್ನುವಂಥಹ ಗಟ್ಟಿ ನಿರ್ಧಾರವೂ ಅವರದಾಗುತ್ತಾ ಸಾಗಿತ್ತು..
ಅಂದರೆ ಮನುಷ್ಯ ಏಕಾಗ್ರತೆಯನ್ನು ಪಡೆದುಬಿಟ್ಟರೆ ಏನನ್ನು ಗೆಲ್ಲಬಲ್ಲ. ಆ ಏಕಾಗ್ರತೆಯ ಸಂಪಾದನೆ ನಾವು ಕಂಡುಕೊಳ್ಳುವುದು ಬಹು ಮುಖ್ಯ ಎನ್ನುವುದು ಅರ್ಥವಾಗುತ್ತದೆ.
ಪ್ರವೇಟ್ ಬಸ್ ಹತ್ತಲು ನಿತ್ತಾಗ ಕೆಲವೊಮ್ಮೆ ಕಾಣುತ್ತೇವೆ. ಬಸ್ಸು ಸ್ವಲ್ಪ ತಡವಾಗಿ ಬಂದು ನಿಂತಾಗ ಅಥವಾ ಡ್ರೈವರ್ ನಮ್ಮ ಸುರಕ್ಷತೆಗಾಗಿ ಏನನ್ನಾದರೂ ಸೂಚಿಸಿದಾಗ ಅಲ್ಲಿಯೇ ಜಗಳ ಶುರುವಾಗುತ್ತದೆ. ಯಾಕೆ ಆ ಜಗಳ? ತಾಳ್ಮೆ ಇಲ್ಲದಿರುವುದಕ್ಕೆ. ಆ ಜಗಳ ಅವಷ್ಯವಿತ್ತೆ? ಖಂಡಿತ ಇಲ್ಲ. ಮೊದಲೇ ತಡವಾಗಿ ಬಂದ ಬಸ್ಸಿನ ಡ್ರೈವರ್ ಜೊತೆ ಕೂಗಾಡಿದರೆ ಮತ್ತಷ್ಟು ಸಮಯ ಪೋಲಾಗುತ್ತದೆಯೇ ಹೊರತು ಕಳೆದ ಸಮಯ ತರಲಾಗದು. ಅನಾವಶ್ಯಕವಾದ ಮಾತುಗಳು ಬಂದು ಮನಸ್ಸುನೋಯಬಹುದು. ಬಯ್ಯುವ ಬದಲು ಸುಮ್ಮನೆ ಹತ್ತಿ ಹೋಗಿ ಕೂತುಬಿಟ್ಟರೆ ಎಲ್ಲವೂ ಸಲೀಸು. ಜೊತೆಗೆ ನಮ್ಮಮನಸ್ಸು ಉದ್ರೆಕದತ್ತ ಹೋಗುವುದು ತಪ್ಪುತ್ತದೆ.
ಉಗ್ರತತ್ವಕ್ಕೆ ಕಾರಣ ನಾನು. ಆ ನಾನುವನ್ನು ಹಿಡಿತಕ್ಕೆ ತರಲು ಬೇಕಾಗಿರುವುದು ತಾಳ್ಮೆ. ಆ ತಾಳ್ಮೆಯನ್ನು ಸಂಪಾದಿಸಿಕೊಳ್ಳುವ ದಾರಿ ಏಕಾಗ್ರತೆಯ ಜಾಗ್ರತಿ. ಏಕಾಗ್ರತೆಯನ್ನು ಯಾವನು ಗಳಿಸಿಕೊಳ್ಳುವನೋ ಅವನು ತನ್ನ ಗುರಿಯತ್ತ ನಡೆಯುತ್ತಾನೆ.ಆ ಗುರಿಯ ಕಡೆ ಯೋಚಿಸುತ್ತಾನೆಯೋ ಹೊರತು ಅನ್ಯ ವಿಚಾರಕ್ಕೆ ತಲೆಕೆಡಿಸಿಕೊಂಡು ಜಗಳವಾಡುತ್ತ ಕಾಲಹರಣ ಮಾಡುವುದೇ ಇಲ್ಲ. ಹಾಗಾಗಿ ಮನುಷ್ಯನಿಗೆ ನಿದ್ರೆಯ ಅವಶ್ಯ ಎಷ್ಟದೆಯೋ ಅಷ್ಟೆ ನಮ್ಮ ನಿತ್ಯದ ಕಾಯಕದ ಮೇಲೆ ನಾವೇ ಕಣ್ಣಿಡಲು ಸಾಧ್ಯವಾಗುವ ಧ್ಯಾನವೂ ಕೂಡ ಮುಖ್ಯ. ಐದು ನಿಮಿಷದ. ಧ್ಯಾನ ಸುಮಾರು ಐದು ಗಂಟೆಗಳ ಕಾಲ ನಮ್ಮ ದೇಹ ಮತ್ತು ಮನಸ್ಸನ್ನು ಹಗೂರವಾಗಿರಿಸುತ್ತದೆ. ಇನ್ನು ದಿನವೂ ಹದಿನೈದೋ, ಅರ್ಥಗಂಟೆಯೋ, ಒತ್ತಡದ ಜೀವನದಲ್ಲಿ ಸಮಯವನ್ನು ಹೊಂದಿಸಿಕೊಂಡು ಧ್ಯಾನಾವಸ್ಥೆಗೆ ಹೋಗಿ ಎಷ್ಟು ನಮ್ಮಲ್ಲಿ ಬದಲಾವಣೆ ಆಗುತ್ತದೆ.
ಧ್ಯಾನ ಮಾಡುತ್ತ ಮೂಗು ಮುಚ್ಚಿ ಕೂರಲು ನಾವೇನು ಸನ್ಯಾಸಿಗಳೆನು ಎಂದು ಅಸಡ್ಡೆ ತೋರಿದರೆ ಅದು ನಮ್ಮ ಆಲಸ್ಯವಷ್ಟೆ. ಧ್ಯಾನ ಸನ್ಯಾಸಿಗಳಿಗೆ ಮಾತ್ರವಲ್ಲ. ಮನುಷ್ಯ ಧ್ಯಾನಸ್ತನಾದರೆ ಬಾಹ್ಯ ಹಾಗೂ ಆಂತರಿಕವಾಗಿ ಶುದ್ಧನಾಗುತ್ತಾ ಸಾಗುತ್ತಾನೆ. ಹಾಗೆ ಶುದ್ಧ ಸ್ಥಿತಿಗೆ ಮುಟ್ಟಿದವನು ಯಾರಿಗೂ ಕೆಡುಕು ಮಾಡಲಾರ. ಸಮಾಜದ ಹಿತವನ್ನೇ ಬಯಸುತ್ತಾನೆ.