
ಇಷ್ಟು ಹೂಗಳ ನಡುವೆ ನನ್ನನೇ ಆಯುವೆಯೆ
ಕೆಂಗುಲಾಬಿಯು ನಿನ್ನ ಕರೆದಳಲ್ಲ!
ನೀಳದಾ ಜಡೆಯವಳ ಮುಂಗುರುಳು ಕಡೆವವಳ
ಕೇದಿಗೆಯ ಹೂವೂ ಹೊರಳಿತಲ್ಲ
ಮೂಗನ್ನೇ ನಾಚಿಸುವ ಸಂಪಿಗೆಯ ಹೂವಿತ್ತು
ರೇಶಿಮೆಯ ನುಣುಪಿರುವ ಕಮಲವಿತ್ತು
ಮಾದಕತೆ ತುಂಬಿದ್ದ ಬಕುಲ ಮಾಲೆಗಳಲ್ಲಿ
ನಿನ್ನ ಕರೆದಂತೇನೋ ಭಾವವಿತ್ತು.
ನನಗೆ ಮಲ್ಲಿಗೆಯೆಂದೆ, ಬಳಿಗೆ ನನ್ನನೆ ಕರೆದೆ
ನನ್ನ ಜಾತಿಯಲೆಷ್ಟು ಮಲ್ಲರಿಹರು!
ಅಷ್ಟೇಕೆ ಕಣ್ಣಿನಲಿ ಕಾಯುವರು ಓ ಗೆಳೆಯ
ಮಲ್ಲಿಗೆಯ ತೋಟಕ್ಕೆ ಬೇಲಿಯವರು.
ನಿನ್ನೊಂದಿಗಿಹೆನೆಂದು ಬಂದೆ ಬಳ್ಳಿಯ ತೊರೆದು
ಬೇರೆ ಹೂಗಳ ಕಡೆಗೆ ನೋಟಬೇಡ
ಅಕ್ಷಮ್ಯವಹುದು ನೀನೆಲ್ಲ ಕಡೆ ಹೊರಳಿದರೆ
ನಿನಗೆ ಮಲ್ಲಿಗೆಯೊಂದೆ; ಬಂಧ ಗಾಢ.