ಮಲ್ಲಿಗೆಯ ಹೂವನ್ನು ದಾರಿಯಲಿ ಕಂಡವರು
ನಿಡಿದಾದ ಉಸಿರೆಳೆದು ಹೋದರಂತೆ;
ಕಣ್ಣು ಹಿರಿದಾಗಿಸುವ ವಿದ್ಯೆಯನು ಕಲಿತವಳು
ಜಾಣತುಟಿಯಲಿ ನಗಲು ಮರೆತು ಚಿಂತೆ!
ಒಂದೆರಡು ಮುಷ್ಟಿಯಲಿ ಹೂವ ಕೊಟ್ಟಳು ಅವಳು
ತೂಕದಲಿ ಹಾಕಿಲ್ಲ, ಏನಕೆಂದೆ?
ಗಂಧವನು ತೂಕದಲಿ ಹಿಡಿಯಲಾಗುವುದಿಲ್ಲ
ಮಲ್ಲಿಗೆಯ ಬೀಳಿಸದೆ ಸಾಗು ಮುಂದೆ.
ಮೊಣಕೈಯ್ಯ ಭಾರದಲಿ ಬಾಗಿಲನು ದೂಡಿದರೆ
ಒಳಗಿದ್ದ ಮನೆಯವಳು ಕೆರಳಿ ಬಂದು;
ಬೇಗ ಬರುವೆನು ಎಂದು ಹೋದವರು ತಡವೇಕೆ?
ಹೂ ಮುಖವ ನೋಡಿದಳು ಕೋಪ ತಿಂದು!
ಹೂವ ಕಟ್ಟುವ ಅವಳ ಕೈಯ್ಯ ನೋಡುವುದೇನು
ಬೆರಳುಗಳ ನಡುವಿರುವ ದಾರವನ್ನೇ;
ಆಗೊಮ್ಮೆ ಈಗೊಮ್ಮೆ ಹಣೆಯ ತುರಿಸುವ ತೋಳು
ಮಾಲೆಯನು ಬಿಡದವಳು ಮೋಹಕನ್ನೆ.
ಒಂದಾಗಿ ಎರಡಾಗಿ ನೆಲದ ಮೇಲಿನ ಹೂವು
ಮಾಲೆಯಾಗುವ ಚಂದ ನೋಡಬೇಕು;
ಒಲುಮೆಯಲಿ ತಲೆಬಾಚಿ ಜಡೆಯ ಸುಮ್ಮನೆ ಬಿಟ್ಟು
ಹೂವು ಹೆರಳೊಳಗಿಟ್ಟು ನಾಚಬೇಕು.
