ಪೂರಕ ಆಹಾರ
ಈ ಮುಂಚಿನ ಲೇಖನದಲ್ಲಿ ಸ್ತನ್ಯಪಾನದ ಮಹತ್ವವನ್ನು ವಿವರಿಸಲಾಗಿತ್ತು. ಈಗ ಅತ್ಯಾವಶ್ಯಕವಾದ ಪೂರಕ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.
ಪೂರಕ ಆಹಾರ ಎಂದರೇನು?
ಮೊದಲ ಆರು ತಿಂಗಳು, ತಾಯಿಯ ಹಾಲು, ಶಿಶುವಿನ ಪೋಷಣೆಯ ಎಲ್ಲಾ ಬೇಡಿಕೆಯನ್ನು ಸಮರ್ಥವಾಗಿ ಪೂರೈಸುತ್ತದೆ. ಶೈಶಾವಸ್ಥೆಯಲ್ಲಿ, ತಿಂಗಳುಗಳು ಕಳೆದಂತೆಲ್ಲ, ಮಗುವಿನ ತೂಕ ಹಾಗೂ ಉದ್ದಳತೆ ಹೆಚ್ಚಾಗಿ, ಪೋಷಕಾಂಶದ ಬೇಡಿಕೆಯು ಹೆಚ್ಚಾಗುತ್ತದೆ. ಆದ್ದರಿಂದ ತಾಯಿಯ ಹಾಲಿನ ಜೊತೆಗೆ ಆರು ತಿಂಗಳ ನಂತರ ಶಿಶುವಿಗೆ ಮೆದುವಾದ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಇದಕ್ಕೆ ಪೂರಕ ಆಹಾರ ಎಂದು ಹೇಳುತ್ತಾರೆ.
ಮೊದಲಿಗೆ ಸ್ವಲ್ಪ ಪ್ರಮಾಣದಲ್ಲಿ ಆಹಾರವನ್ನು ನೀಡುವುದರಿಂದ ಶಿಶುವಿಗೆ ರೂಢಿಸಿಕೊಳ್ಳಲು ಸಹಾಯಕವಾಗುತ್ತದೆ. ಒಂದು ಸಲ ಈ ಆಹಾರವನ್ನು ಸೇವಿಸಲು ಮಕ್ಕಳು ಇಷ್ಟ ಪಡದಿದ್ದಾಗ ಒತ್ತಾಯಿಸದೆ ಅವರಿಗೆ ಇಷ್ಟವಾಗುವಂತ, ಸರಿಹೊಂದುವಂತ ಆಹಾರವನ್ನೇ ಕೊಡಬೇಕು.
ಪೂರಕ ಆಹಾರಗಳನ್ನು ಕೊಡುವ ಬಗೆ:
ಮೊದಲಿಗೆ ರವೆಯ ಗಂಜಿ ಅಥವಾ ಚೆನ್ನಾಗಿ ಹಿಚಿಕಿದ ಬಾಳೆಹಣ್ಣು ಕೊಡಬಹುದು. ಗೋಧಿ, ಅಕ್ಕಿ, ರಾಗಿಯ ಗಂಜಿಯನ್ನು ಮಾಡಿ ಅದಕ್ಕೆ ಸ್ವಲ್ಪ ಹಾಲು, ಸಕ್ಕರೆ ಸೇರಿಸಿ ಶುರುವಿಗೆ ಒಂದು ಅಥವಾ ಎರಡು ಟೀ ಚಮಚದಷ್ಟು ಕೊಡಬೇಕು. ಕ್ರಮೇಣ ಪ್ರಮಾಣವನ್ನು ಹೆಚ್ಚಿಸುತ್ತಾ ಮೂರರಿಂದ ನಾಲ್ಕು ವಾರದ ಹೊತ್ತಿಗೆ ಮಗು ಅರ್ಧ ಅಥವಾ ಸಣ್ಣ ಬಟ್ಟಲು ಅಥವಾ ೫೦-೬೦ಗ್ರಾಂಗಳಷ್ಟು ಗಂಜಿಯನ್ನು ಸೇವಿಸುವಂತಾಗಬೇಕು. ಇದರ ಜೊತೆಗೆ ಇತರ ಹಣ್ಣುಗಳಾದ ಸಪೋಟ, ಪರಂಗಿ ಹಣ್ಣು, ಸೇಬು ಹಣ್ಣುಗಳನ್ನು (ಅವಶ್ಯಕವಿದ್ದಲ್ಲಿ ಬೇಯಿಸಿ) ನುಣ್ಣಗೆ ಮಾಡಿ ಕೊಡಬಹುದು.
ಗಮನಿಸಬೇಕಾದ ಅಂಶಗಳು:

  1. ದೇಹದ ಪೋಷಣೆಗೆ ಎಲ್ಲಾ ಆಹಾರಾಂಶಗಳು ಅಗತ್ಯ, ಐದೂ ಗುಂಪುಗಳಿಂದ (ದವಸ/ಧಾನ್ಯ/ಹಣ್ಣು/ತರಕಾರಿ/ಜಿಡ್ದು ಮತ್ತು ಕೊಬ್ಬಿನಾಂಶ) ಆಯ್ದ ಆಹಾರವನ್ನು ಮಕ್ಕಳಿಗೆ ಕೊಡುವುದು ಸಂಪೂರ್ಣ ಪೋಷಣೆಗೆ ಒಳಿತು. ಆದರೆ ವಯಸ್ಕರಂತೆ ಮಕ್ಕಳು ಒಂದೇ ಬಾರಿಗೆ ಹೆಚ್ಚಿನ ಆಹಾರವನ್ನು ಸೇವಿಸಲಾರರು. ಕನಿಷ್ಠ ಪಕ್ಷ ಈ ಮಕ್ಕಳು ೫೦-೭೫ಗ್ರಾಂ ಆಹಾರವನ್ನು ಒಂದೇ ಬಾರಿಗೆ ತಿನ್ನಲು ಶಕ್ಯರಾಗಿರುತ್ತಾರೆ. ಆದುದರಿಂದ ೨ ಅಥವಾ ೩ ಘಂಟೆಗಳಿಗೊಮ್ಮೆ, ಕಡಿಮೆ ಪ್ರಮಾಣದ ಆಹಾರವನ್ನು ಮಕ್ಕಳಿಗೆ ಉಣಿಸುತ್ತಿರಬೇಕು.
  2. ಪೂರಕ ಆಹಾರವನ್ನು ಪರಿಚಯಿಸಿದ ಶುರುವಿನಲ್ಲಿ ಒಂದೇ ರೀತಿಯಲ್ಲಿ ತಯಾರಾದ ಆಹಾರವನ್ನು ಕೊಡಬೇಕು. ಈ ಆಹಾರವನ್ನು ಮಗು ಸಂಪೂರ್ಣವಾಗಿ ಸ್ವೀಕರಿಸಿದ ನಂತರ ಮತ್ತೊಂದು ಹೊಸ ಆಹಾರವನ್ನು ಕೊಡಬೇಕು.
  3. ಮಗುವಿಗೆ ಕೊಡುವ ಆಹಾರ ಅತಿ ಬಿಸಿ ಅಥವಾ ತಣ್ಣಗಿರಬಾರದು.
  4. ಸಿಪ್ಪೆ ಸಹಿತ ಹಣ್ಣು, ತರಕಾರಿಗಳು, ಧಾನ್ಯಗಳು ಮತ್ತು ಕಾಳುಗಳನ್ನು ಮೊದಲಿಗೆ ಕೊಡಬಾರದು. ಅವುಗಳಲ್ಲಿ ಹೆಚ್ಚು ನಾರಿನಾಂಶ ಇರುವುದರಿಂದ ಅವುಗಳನ್ನು ಮಕ್ಕಳು ಬೇಗನೆ ಜೀರ್ಣಿಸಿಕೊಳ್ಳಲಾರರು.
  5. ಮಕ್ಕಳಿಗೆ ಆಹಾರ ತಯಾರಿಸುವಾಗ ಬಳಸುವ ಪಾತ್ರೆ ಮತ್ತು ಕೈಗಳು ಶುಚಿಯಾಗಿರಬೇಕು. (ಉಪಯೋಗಿಸುವ ಪಾತ್ರೆ, ಬಟ್ಟಲು, ಚಮಚಗಳನ್ನು ಬಿಸಿನೀರಿನಲ್ಲಿ ಕುದಿಸಿ ತೊಳೆದು ಉಪಯೋಗಿಸುವುದು ಉತ್ತಮ)
  6. ಆಹಾರದ ವೇಳಾಪಟ್ಟಿ ತಯಾರಿಸಿ ಅದರಂತೆ ಕೊಡಲಾರಂಭಿಸಿವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ಮಕ್ಕಳ ಆಹಾರ ಪದ್ದತಿಯ ಮೇಲೆ ಗಮನವಿಡಲು ಸುಲಭವಾಗುತ್ತದೆ. ಆದರೆ ಅದನ್ನೆ ಮಕ್ಕಳು ಕಡ್ಡಾಯವಾಗಿ ಪಾಲಿಸಬೇಕೆಂಬ ನಿಯಮವನ್ನು ಮಾಡದೆ, ಕಾಲಕಾಲಕ್ಕೆ, ಮಕ್ಕಳ ಹೊಂದಾಣಿಕೆಗೆ ಸರಿಯಾಗಿ ಬದಲಾವಣೆ ಮಾಡಿಕೊಳ್ಳಬೇಕು.
  7. ಆರು ತಿಂಗಳ ನಂತರ ಆಹಾರದ ಜೊತೆ ಅಂದರೆ ಬೇಯಿಸಿದ ಮಿಶ್ರಣದ ಆಹಾರದೊಡನೆ ಚೆನ್ನಾಗಿ ಬೇಯಿಸಿ ಮೆದುಗೊಳಿಸಿದ ತರಕಾರಿಗಳು, ಹಣ್ಣುಗಳನ್ನು ಕೊಡುವುದರಿಂದ ಹೆಚ್ಚಿನ ಜೀವಸತ್ತ್ವ ‘ಎ’, ‘ಸೀ’ ಮತ್ತು ಖನಿಜಗಳು ದೊರಕುತ್ತದೆ. ಈ ಉಣಿಸನ್ನು ೫ ಅಥವಾ ೬ ಬಾರಿ ಸ್ವಲ್ಪ ಪ್ರಮಾಣದಲ್ಲಿ ಕೊಡುತ್ತಾ ಜೊತೆಗೆ ಎದೆಹಾಲನ್ನು ಕೊಡಬೇಕು.

12.jpg
 


Written By : Chaitra R Rao|Nutritionist

Leave a Reply

This site uses Akismet to reduce spam. Learn how your comment data is processed.