ಕೆಲವೊಂದು ಕಾವ್ಯದ ಭೀಮನನ್ನು ಓದಿಯೂ ಮಹಾಕವಿ ರನ್ನನ ಭೀಮನೇ ಮನಸ್ಸಿನಲ್ಲಿ ಉಳಿಯುತ್ತಾನೆ. ಕುಮಾರವ್ಯಾಸನ ಭೀಮನೂ ಭೀಮನೇ. ಪಾತ್ರವೈಭವದಲ್ಲಿ ಕುಮಾರವ್ಯಾಸನ ಭೀಮನಿಗೆ ಬಹಳವಾದ ಜಾಗ ಸಿಕ್ಕಿದೆ. ಹುಟ್ಟಿನಿಂದ, ಬಾಲಕ್ರೀಡೆಯ ಸಮಯದಲ್ಲಿ, ಹಿಡಿಂಬಾ ಪ್ರಕರಣ, ಬಕಾಸುರ ಪ್ರಕರಣ, ಕೀಚಕ.. ಇತ್ಯಾದಿಯಾಗಿ ಕುಮಾರವ್ಯಾಸನ ಭೀಮ ಬಹಳ ಚೆನ್ನಾಗಿ ಬೆಳೆಯುತ್ತಾನೆ. ಯುದ್ಧದ ಸಂದರ್ಭದಲ್ಲಿ (ಸುಪ್ರತೀಕ- ಆನೆಯನ್ನು ಕೊಲ್ಲುವ ಸಂದರ್ಭದ್ದು) ಮಾತ್ರ ಸೊಗಸಾಗಿದೆ ಅಲ್ಲಿ.

ರನ್ನನ ಭೀಮನು ಪ್ರತಿಜ್ಞೆಗಳಿಂದ, ಮಾತುಗಳಿಂದ ಬಹಳವಾಗಿ ವೀರ. ಸಾಹಸಭೀಮ ವಿಜಯಂ ಎನ್ನುವ ಹೆಸರಿನಿಂದಲೇ ಪ್ರಸಿದ್ಧವಾದ ಗದಾಯುದ್ಧ, ಮೊದಲಿನಿಂದ ಕೊನೆಯವರೆಗೂ ಭೀಮನನ್ನು ಅಸಾಮಾನ್ಯವಾದ ನಾಯಕನಾಗಿ ಚಿತ್ರಿಸಿದೆ. ಕೊನೆಯ ಭಾಗದ ಎರಡು ಪದ್ಯಗಳು ಈ ಕೆಳಗಿರುವಂತಹದ್ದು.

ಬಲದೇವಾದಿಗಳಾಗದಾಗದೊದೆಯಲ್ಕೇಕಾದಶಾಕ್ಷೋಹಿಣೀ
ಬಲಲಕ್ಷ್ಮೀಪತಿಯಂ ಪರಾಭವಿಸದಿರ್ ಚಿಃ ತಕ್ಕುದಲ್ಲೆಂದು ಮಾ
ರ್ಕೊಳೆಯುಂ ಮಾಣದೆ ಭೀಮಸೇನನೊದೆದಂ ವಾಮಾಂಘ್ರಿಯಿಂ ರತ್ನಮಂ
ಡಲರಶ್ಮಿಪ್ರಕಟಜ್ವಲನ್ಮಕುಟಮಂ ಕೌರವರಾಜೇಂದ್ರನಾ

ಬಲದೇವ ಮೊದಲಾದವರು, ಒದೆಯಬೇಡ,ಒದೆಯಬೇಡ. ಹನ್ನೊಂದು ಅಕ್ಷೋಹಿಣೀ ಬಲಕ್ಕೆ ಒಡೆಯನಾಗಿರುವ ಕೌರವೇಶ್ವರನನ್ನು ಈ ರೀತಿ ಅವಮಾನಿಸಬೇಡ. ನಿನ್ನಂಥವನಿಗೆ ಇದು ಯೋಗ್ಯವಲ್ಲ ಎಂದು ತಡೆಯುವ ಪ್ರಯತ್ನದಲ್ಲಿದ್ದರೂ ಕೇಳದೆ, ರತ್ನಗಳ ಸಮೂಹದ ಕಾಂತಿಯಿಂದ ಜಗಜಗಿಸುತ್ತಿದ್ದ ಕೌರವೇಂದ್ರನ ಕಿರೀಟವನ್ನು ಭೀಮಸೇನನು ಎಡಗಾಲಿಂದ ತುಳಿದೇ ಬಿಟ್ಟನು.

ಮುಳಿಸಿಂ ನಂಜಕ್ಕಿಕೊಂದಂದಿನ ಜತುಗೃಹದೊಳ್ ಸುಟ್ಟುಕೊಂದಂದಿನುರ್ವೀ
ತಳಮಂ ಜೂದಾಡಿ ಗೆಲ್ದಂದಿನ ನಿಜಕಬರೀನೀವಿಬಂಧಂಗಳಂ ದೋ-
ರ್ವಳದಿಂದಂ ತಮ್ಮನಿಂದಂ ತೆಗೆಯಿಸಿ ನಡೆದಾ ನೀಚನಾ ದ್ರೋಹನಾ ಸಂ
ಚಳನಾ ಚಂಡಾಲನಾ ಪಾತಕನಿರವನಿದಂ ನೋಡು ಪಂಕೇಜವಕ್ತ್ರೇ

ನನ್ನ ಮೇಲಿನ ದ್ವೇಷದಿಂದ ಅಂದು ವಿಷದ ಲಡ್ಡುಗೆಗಳನ್ನು ತಿನ್ನಿಸಿ ನನ್ನನ್ನು ಕೊಲ್ಲುವುದಕ್ಕೆ ನೋಡಿದವನ, ಅರಗಿನ ಮನೆಗೆ ಬೆಂಕಿ ಹಚ್ಚಿ ನಮ್ಮನ್ನೆಲ್ಲ ಸುಟ್ಟುಹಾಕುವುದಕ್ಕೆ ಯತ್ನಿಸಿದವನ , ಮೋಸದಿಂದ ಜೂಜಾಡಿ ನಮ್ಮ ಅಧೀನವಿದ್ದ ಭೂಭಾಗವನ್ನು ಅಪಹರಿಸಿದವನ, ನಿನ್ನ ಸಿರಿಮುಡಿಗೆ ಕೈಯಿಕ್ಕಿ ಸೆಳೆಯುವಂತೆ ಬಾಹುಬಲದಿಂದ ತಮ್ಮನನ್ನು ಪ್ರೇರೇಪಿಸಿದವನ , ನಿನ್ನ ಉಡಿಗಂಟನ್ನು ಸೆಳೆಯಿಸಿದವನ, ನೀಚನ, ದ್ರೋಹಿಯ, ಸಂಚಳ (ಚಂಚಲ)ನ, ಚಂಡಾಲನ, ಪಾತಕನ ಈ ಅವಸ್ಥೆಯನ್ನು ಕಣ್ಣಾರೆ ನೋಡು ನೋಡು ಕಮಲಮುಖಿ!

ದ್ರೌಪದಿಯ ಮುಖದಲ್ಲಿ ನಗು ಬಂದಿರಬೇಕು. ತಾವರೆ ಅರಳಿದಂತಹ ಬೆಳಗು!

Leave a Reply

This site uses Akismet to reduce spam. Learn how your comment data is processed.