ಅರಳಿಮರದಲಿ ಹೀಗೆ ಪಲ್ಲವಿಸಿ ಹೊಸ ಚಿಗುರು
ಎಲ್ಲೆಡೆಯು ತೋರುವುದು ರಾಗವನ್ನ;
ಮರವನೇರಿದೆಯೇನೆ ಓ ನನ್ನ ಸೊಗಸವಳೆ
ನಿನ್ನ ಪಾದಕೆ ಹೀಗೆ ಬಂತೆ ಬಣ್ಣ?

ಮರಿಗಿಳಿಯು ಹಾ-ಯೆಂದು ಬಾಯ್ತೆರದು ಕುಳಿತಿಹುದು
ತಾಯ್ ತರುವ ಕುಕ್ಕಿನಲಿ ಇರಿಸಿ ಮನಸು
ಗಿಳಿಯ ಮುದ್ದಿಸಿ ಬಂದೆಯೇ ನನ್ನ ಅರಗಿಣಿಯೆ?
ಮೈ ಕೆಂಪಗೆಂತಾಯ್ತು ಎಂದು ತಿಳಿಸು

ಹಗಲಿನಾಟವ ಮುಗಿಸಿ ತೆರಳಿದನು ದಿನಕರನು
ಪಶ್ಚಿಮದ ಬೆಟ್ಟದಲಿ ಅಡಗುತಿಹನು;
ಕಣ್ಣು ಮುಚ್ಚಾಲೆಯಲಿ ನಿನ್ನ ಪಾಲಿಹುದೇನೆ?
ಆ ಬಣ್ಣ ಸೋಕಿದುದೆ ಹೇಳು ನೀನು!

ಚಂದ್ರ ತಂಪೆರೆದಾನು ಎಂದೆನುವ ಆಸೆಯಲಿ
ಕಳೆದ ನಿನ್ನೆಯ ನೆನಪು ಹೆಚ್ಚಿತೇನೆ!
ಆ ನೆನಪು ರಂಗೇರಿ ಮೈಮನವು ಕೆಂಪಾಯ್ತೆ
ಅದನು ಕಂಡೆನೆ ಹೀಗೆ ಹೇಳು ಜಾಣೆ.


೨೯/೦೪/೨೦೨೦

Leave a Reply

This site uses Akismet to reduce spam. Learn how your comment data is processed.