ಇತ್ತೀಚೆಗೆ ಒಮ್ಮೆ ಯಾವುದೋ ಉದ್ಯಾನದಲ್ಲಿ ನಡೆಯುವಾಗ ಒಂದು ವಿಲಕ್ಷಣವಾದ ಘಮಲು ಮೂಗಿಗೆ ಬಡಿಯಿತು. ಬಹಳವಾಗಿ ಪರಿಚಯವಿರುವ ಆದರೆ ಹೆಸರನ್ನು ಮರೆತಂತಿರುವ ಹಳೇ ಮಿತ್ರರನ್ನು ನೋಡಿದಂತಹಾ ಭಾವ. ಬೇರೇನೂ ತಲೆಯೊಳಗೆ ಹೋಗಲಿಲ್ಲ, ನೇರ ಗಂಧವನ್ನು ಹಿಡಿದುಕೊಂಡು ಅನ್ವೇಷಣೆಗೆ ಹೊರಟೆ.

ಪಾರಿಜಾತದ ಹೂವು ಅಸಲಿಗೆ ಹೂವೇ ಅಲ್ಲ. ಇಡೀ ಗಂಧವನ್ನೇ ಮುದ್ದೆಗಟ್ಟಿ ಎಸಳುಗಳಂತೆ ಮಾಡಿದ್ದು ಅದು. ಬೇರೆ ಇದ್ಯಾವುದೋ ಹೂವು ನಾನು ಹುಡುಕಿದ ಈ ಪರಿಮಳವಲ್ಲ. ಇದ್ಯಾವುದೋ ಮರ, ಈ ಸೊಗಸಲ್ಲ. ನಡೆವಷ್ಟು ನಡೆದು ನಿತ್ರಾಣವಾದಾಗ ಕುಳಿತು ದೀರ್ಘ ಉಸಿರಾಡಿದಾಗ ಸಿಕ್ಕಿದ ಗಂಧ.

ಹೌದು. ಇದು ರೆಂಜೆ ಹೂವಿನ ಘಮ. ಇದು ದೊಡ್ಡ ಮರವಲ್ಲ, ಸಣ್ಣದು. ಹೂವು ಮಾತ್ರ ಒಂದು ನೂರು ಮೀಟರ್ ದಾಟಿ ಗಂಧ ಹರಡುವಂತಹದ್ದು. ಮಾದಕವಾದ ಹೂಗಂಧ. ಒಣಗಿದಮೇಲೂ ಗಂಧವನ್ನು ಹರಡುವ ಈ ಹೂವು ಅತ್ಯಂತ ಸೊಗಸು. ಇದನ್ನು ಮಾಲೆ ಮಾಡಿ, ಒಣಗಿಸಿ ಮದುವೆಯ ಸಂದರ್ಭಗಳಲ್ಲಿ ಬಳಸುತ್ತಾರೆ. ಒಂದು ತಿಂಗಳಾದರೂ ಈ ಹೂವಿನ ಘಮ ಇರುವುದರಿಂದಲೋ ಏನೋ. ನಿಮ್ಮಲ್ಲೂ ಕೆಲವರು ಹೂಗಳ ಪರಿಮಳವನ್ನು ಆಘ್ರಾಣಿಸುವ ಜನರಿದ್ದಾರು.

ಶಾಲೆಗೆ ಹೋಗುವ ದಿನಗಳಲ್ಲಿ ಈ ಹೂವುಗಳನ್ನು ಹೆಕ್ಕಿ ಅದನ್ನು ಅಂಗಿಯ ಜೇಬೊಳಗಿಳಿಸಿ ನಡೆಯುತ್ತಿದ್ದೆ ನಾನು. ವಿರಾಮದಲ್ಲೊಮ್ಮೆ ಅಂಗಿಯನ್ನು ಎತ್ತಿ ಜೇಬನ್ನು ಆಘ್ರಾಣಿಸಿದರೆ ಅದೆಂತಹ ಪರಿಮಳ. ಬಿಳಿ ಅಂಗಿಯಲ್ಲಿ ಅದೇ ರೆಂಜೆಯ ನಕ್ಷತ್ರಾಕಾರದ ಗುರುತು. ಒಟ್ಟಲ್ಲಿ ರೆಂಜೆ ಅವಿಸ್ಮರಣೀಯ.

ಹೂವುಗಳಲ್ಲಿ ಕೆಲವೊಂದು ಮೋಹಕ. ಮಲ್ಲಿಗೆ, ಜಾಜಿ, ಪಾರಿಜಾತಗಳೆಲ್ಲ ಮೋಹಕವಾದ ಹೂವುಗಳು. ಇನ್ನೂ ಕೆಲವೊಂದು ಮಾದಕವಾದ ಹೂವುಗಳು. ಅದರಲ್ಲೂ ರೆಂಜೆ, ಸಂಪಿಗೆಗಳು ಅದರ ಗಂಧಗಳಿಂದ ಮಾದಕ.

ಕಾಡಲ್ಲಿ ಬೆಳೆದು ಮಳೆನೀರ ಕುಡಿದು
ಬೆಳೆದಂತ ಗಿಡವು ರೆಂಜೆ
ಹದಿನಾರು ಕಳೆದು ಮೈಯ್ಯೆಲ್ಲ ಹೂವು
ಈ ಕಾಲವಲ್ಲ ಬಂಜೆ.

ಮುಟ್ಟಿದರೆ ನೂರು ತಟ್ಟಿದರೆ ನೂರು
ಜಗವೆಲ್ಲ ಹೂವ ತೇರು
ದಿಟ್ಟಿಸಿದ ಕಣ್ಗೆ ನಕ್ಷತ್ರ ಸುರಿವೆ
ಮನೆಮನಕೆ ಗಂಧ ಸಾರು
photo : Google – Bakula /Renje.

Leave a Reply

This site uses Akismet to reduce spam. Learn how your comment data is processed.