ಹೀಗೇ ಒಂದಿನ ಸಂಜೆ ವೇಳೆ ಕಟ್ಟೆ ಮೇಲೆ ಕೂತು ಹರಟುತ್ತಿದ್ದ ವೆಂಕಣ್ಣನ್ನ ಕಂಡು ಹಿಂದಿನ ಬೀದಿಯ ಸ್ನೇಹಿತರಾದ ಅನಂತಣ್ಣ ಅವರ ಹತ್ತಿರ ಬಂದರು.
” ಲೋ ವೆಂಕ… ನಾಳೆ ನಮ್ಮನೇಲಿ ಚಂಪಾ ಷಷ್ಠಿ ಹಬ್ಬ ಮಾಡ್ತಿದೀವಿ, ನೀನೇ ನಮ್ಮನೆಗೆ ಬಂದು ಬಿಡು, ಬ್ರಾಹ್ಮಣನಾಗಿ ಊಟಕ್ಕೆ ” ಅಂತ ಅಂದ್ರು.
ಹೇಗೂ ವೆಂಕಣ್ಣನ ಮನೇಲಿ ಆ ಹಬ್ಬದ ಪದ್ಧತಿ ಇರದ ಕಾರಣಕ್ಕೆ ಸರಿ ಅಂತ ಒಪ್ಪಿದ್ರು.
ವೆಂಕಣ್ಣನಿಗೋ ಬೆಲ್ಲದ ಹೂರಣದ ಅಡುಗೆ ಅಂದ್ರೆ ಅತೀ ಪ್ರೀತಿ. ಅದಕ್ಕೆ ಕೇಳೋ ಮುಂಚೆನೇ ಅನಂತಣ್ಣ ” ನೀನ್ ಊಟಕ್ಕ್ ಬಾ ಮಾರಾಯ, ನನ್ನ ಹೆಂಡ್ತಿ ಕೈಯಲ್ಲಿ ಬೇಳೆ ಹೂರಣದ ಹೋಳಿಗೆ ಮಾವಿನ ಹಣ್ಣಿನ ಸೀಕರಣೆ ಮಾಡ್ಸ್ತೀನಿ” ಅಂದ್ರು…

ವೆಂಕಣ್ಣನ ಮನೇಲಿ ಪ್ರತಿ ಹಬ್ಬಕ್ಕೂ ಹೂರಣದ ಅಡುಗೆ ಆಗಲೇ ಬೇಕು. ಆದ್ರೂ ವೆಂಕಣ್ಣನಿಗೆ ಹೋಳಿಗೆ ಸೀಕರಣಿ ಅಂತ ಕೇಳಿದ ಕೂಡಲೇ ಎಲ್ಲಿಲ್ಲದ ಖುಷಿ..!
ಹೀಗೇ ರಾತ್ರಿ ಕಳೆದು ಬೆಳಗಾಯಿತು. ಮನೆಯಲ್ಲಿ ತಮ್ಮ ಆಹ್ನಿಕ, ಪೂಜೆ ಪುನಸ್ಕಾರ ಮುಗಿಸಿ ವೆಂಕಣ್ಣ ಶಿಸ್ತಾಗಿ ಮಡಿ ಉಟ್ಟು ಗಂಧಾಕ್ಷತೆ ಹಚ್ಚಿ ತಯಾರಾದ್ರು. ಒಳಗಿಂದ ಹೆಂಡ್ತಿ “ಏನ್ರೀ… ಅಲ್ಲಿ ಊಟ ತಡ ಆದೀತು.. ಹಬ್ಬ ಬೇರೆ.. ಯಾವುದಕ್ಕೂ ಎರಡು ಮುಕ್ಕು ಅವಲಕ್ಕಿ ಬಾಯಿಗೆ ಹಾಕ್ಕೊಂಡ್ ಹೋಗಿ” ಅಂತ ಹೇಳಿದಳು.
ಸರಿ ಅಂತ ಒಂದಷ್ಟು ಅವಲಕ್ಕಿ ತಿಂದು ಚಹಾ ಕುಡಿದರು. ಅಲ್ಲಿಗೇ ಮುಕ್ಕಾಲು ಹೊಟ್ಟೆ ತುಂಬಿದ ಹಾಗಾಗಿತ್ತು. ಸರಿ ಊಟ ಖಂಡಿತ ತಡ ಆಗತ್ತೆ ಮತ್ತೆ ಹೋಳಿಗೆ ಬೇರೆ ಇರತ್ತೆ ಅಂತ ನೆನಪು ಮಾಡ್ಕೊಂಡು ಸಮಾಧಾನ ಮಾಡ್ಕೊಂಡು ಖುಷಿಯಿಂದ ಹೊರಟರು.
ಅನಂತಣ್ಣನ ಮನೆಗೆ ಹೋಗಿ ಇನ್ನೂ ಮುಂಬಾಗ್ಲಲ್ಲೇ ಇದ್ದಾಗ ಒಳಗಿಂದ ಅಡುಗೆ ಮಾಡ್ತಿದ್ದ ಅವರ ಹೆಂಡತಿ ಧ್ವನಿ ಕಿವಿಗ್ ಬಿತ್ತು ” ಏನ್ರೀ… ವೆಂಕಣ್ಣ ಪಾಪ ಹಸಿದಿರ್ತಾರೆ ತಡ ಮಾಡಿ ಬ್ರಾಹ್ಮಣನನ್ನ ಕಾಯ್ಸೋದು ಬೇಡ ಬೇಗ ಎಲೆ ಹಾಕ್ಬಿಡಿ. ನಾನು ಎಲ್ಲ ಬಡಿಸ್ತೀನಿ” ಅಂದ್ರು.

ಅದಾಗಲೇ ಅವಲಕ್ಕಿ ಹೊಟ್ಟೆಯಲ್ಲಿ ಗಟ್ಟಿಯಾಗಿ ಕೂತಿತ್ತು. ಆದರೂ ಹೋಳಿಗೆ ಸೀಕರಣೆ ನೆನಪಾಗಿ ಮತ್ತೆ ಹುರುಪಿನಿಂದ ಹೋದ ತಕ್ಷಣ ಹಾಕಿದ ಮಣೆ ಮೇಲೆ ಕೂತು ಊಟ ಮಾಡ್ಲಿಕ್ಕೆ ಶುರು ಮಾಡಿದ್ರು.
ಕಟ್ಟಿನ ಸಾರು, ಪಲ್ಯ ,ಕೋಸಂಬರಿ, ಎಲೆ ತುದಿಗೆ ಶಾಸ್ತ್ರಕ್ಕೆ ಹಾಕಿದ್ದ ಪಾಯಸ ಎಲ್ಲ ಒಂದೂ ಬಿಡದೇ ಎಲೆ ಝಳ ಝಳ ಮಾಡಿಟ್ಟು ಹೋಳಿಗೆ ಸೀಕರಣೆಗೆ ಕಾಯ್ತಾ ಕೂತಿದ್ರು. ಆ ಕಡೆ ಇಂದ ಅನಂತಣ್ಣನ ಶ್ರೀಮತಿಯವರು ಎರಡು ಬಿಸಿ ಹೋಳಿಗೆ ಮೇಲೆ ತುಸು ದೊಡ್ಡ ಸೌಟಿನಿಂದ ಕರಗಿಸಿದ ತುಪ್ಪ ಹಾಕಿ ದೊಡ್ಡ ದೊನ್ನೆಯ ತುಂಬ ರುಚಿಯಾದ ಮಾವಿನ ಹಣ್ಣಿನ ಸೀಕರಣಿ ಹಾಕಿದರು.

ಮೊದಲಿಂದಲೂ ವೆಂಕಣ್ಣದು ಒಂದು ಪದ್ಧತಿ ಎಲೆ ಮೇಲೆ ಹಾಕಿದ ಯಾವ ವ್ಯಂಜನನೂ ಬಿಡಬಾರದು ಅನ್ನೋದು. ಹಾಗಾಗಿ ಮೊದಲು ಹಾಕಿದ್ದೆಲ್ಲ ಖಾಲಿ ಮಾಡಿ, ಹಾಕಿರೋ ಹೋಳಿಗೆನೂ ಖಾಲಿ ಮಾಡಿದರು. ಅಷ್ಟರಲ್ಲಿ ಮತ್ತೆ ಎರಡು ಬಿಸಿ ಹೋಳಿಗೆ ಒಳಗಿಂದ ತಂದು ಹಾಕೇ ಬಿಟ್ರು. ಅಷ್ಟ್ರಲ್ಲೇ ಹಾಕೇ ಬಿಟ್ರಲ್ಲ ಏನ್ ಮಾಡೋದು ಅಂತ ಯೋಚನೆ ಮಾಡ್ತಾ ಅದನ್ನ ಹಂಗೂ ಹಿಂಗೂ ಕಷ್ಟಪಟ್ಟು ಮಾಡಿ ಖಾಲಿ ಮಾಡಿದ್ರು.
ಮತ್ತೆ ಖಾಲಿಯಾಗೋದೇ ತಡ ಇನ್ನೊಂದ್ ಬಿಸಿ ಹೋಳಿಗೆ ಕಣ್ಣು ಮುಚ್ಚಿ ಕಣ್ಣು ಬಿಡೋದ್ರಲ್ಲಿ ಎಲೇಲಿ ಇತ್ತು. ವೆಂಕಣ್ಣ ಮನಸಲ್ಲೇ ಪೇಚಾಡ್ತಾ ಹೊಟ್ಟಿ ಬಿರಿದು ಹೋಗೊ ಅಷ್ಟು ತಿಂದು ಮಜ್ಜಿಗೆ ಅನ್ನ ಕೂಡ ಊಟ ಮಾಡದೆ ಎದ್ದು ಬಿಡೋಣ ಅಂತ ಲೆಕ್ಕ ಹಾಕ್ತಿದ್ದಾಗ ಮತ್ತೊಂದು ಹೋಳಿಗೆ ಅನಂತಣ್ಣನ ಕೈಯಲ್ಲಿ..! ಅದನ್ನೂ ಹಾಕೇ ಬಿಟ್ಟರು ಬಲವಂತದಿಂದ‌.

ಚಂಪಾ ಷಷ್ಠೀ ದಿನ ಬಂದ ಬ್ರಾಹ್ಮಣ ಸಂತೃಪ್ತಿಯಾಗಿ ಉಂಡು ಸಾಕಾಯಿತು ಅಂತ ಒಂದು ಚೂರು ಎಲೆ ಅಲ್ಲಿ ಬಿಟ್ಟು ಎದ್ದೇಳೋವರೆಗೂ ಬಡಿಸಿ ಊಟಕ್ಕೆ ಹಾಕ್ಬೇಕು ಅನ್ನೋದು ಅನಂತಣ್ಣನ ಮನೆಯ ಪದ್ಧತಿ ಆಗಿತ್ತಂತೆ ಅದು ವೆಂಕಣ್ಣನಿಗೆ ಗೊತ್ತಿರಲಿಲ್ಲ. ಬಡಸಿದ್ದನ್ನೆಲ್ಲ ತಪ್ಪದೇ ಖಾಲಿ ಮಾಡಿ ಏಳೋ ಖಯಾಲಿಯಲ್ಲಿ ಇನ್ನೊಂದು ಮತ್ತೊಂದು ಮಗದೊಂದು ಈ ಕಡೆ ಇಂದ ಹೋಳಿಗೆ ಮತ್ತೆ ಆ ಕಡೆ ಇಂದ ದೊನ್ನೆಯಲ್ಲಿ ಸೀಕರಣಿ ಎಲೆ ಮೇಲೆ ಬೀಳ್ತಾನೇ ಹೊಯ್ತು. ಇನ್ನೇನು ಸಾಧ್ಯನೇ ಇಲ್ಲ ಅಂದಾಗ ಕುತ್ತಿಗೆ ಮಟ್ಟಕ್ಕೆ ಬಂತು ಅಂತ ಅರ್ಧ ಹೋಳಿಗೆ ಎಲೆಯಲ್ಲಿ ಬಿಟ್ಟು ಮೇಲೆದ್ದಾಗ ಅನಂತಣ್ಣ ದಂಪತಿಗಳಿಗೆ ಎಲ್ಲಿಲ್ಲದ ಸಾರ್ಥಕ ಭಾವ ಮುಖದಲ್ಲಿ. ಈ ಕಡೆ ವೆಂಕಣ್ಣ ಸಾಕಾಗಿ ಎಲೆ ಅಡಕೆನೂ ಹಿಡಸೋ ಅಷ್ಟು ಜಾಗ ಹೊಟ್ಟೆಯಲ್ಲಿ ಇರದೆ ಅಲ್ಲೇ ಇದ್ದ ಗೋಪಾಲ ಕೃಷ್ಣ ನ ಗುಡಿಯಲ್ಲಿ ತಣ್ಣನೆ ಗಾಳಿ ಬೀಸ್ತಿತ್ತು ಅಂತ ಗೋಡೆಗೆ ವರಗಿ ಉಸ್ಸ್ ಅಂತ ತಲೆ ಇಟ್ಟರು.

ಆಗ ಕಿವಿಗೆ ಬಿದ್ದಿದ್ದೇ ಮಾವಿನ ಹಣ್ಣು ಮಾರುವವನ ಧ್ವನಿ. ಮೊದಲೇ ಸೀಕರಣಿ ಊಟ ಮಿತಿ ಮೀರಿ ಹೋಗಿತ್ತು. ಮಾವಿನ ಹಣ್ಣು ಅಂತ ಹೆಸರು ಕೇಳಿದರೇ ವಾಕರಿಕೆ ಹುಟ್ತಾ ಇತ್ತು. ಪಾಪ ಕರ್ಮಕ್ಕೆ ಅವನು ಸೀದಾ ಅಲ್ಲಿಗೇ ಬಂದು ವೆಂಕಣ್ಣನ ಹತ್ರ ಮಾವಿನ ಹಣ್ಣು ತೋರಿಸಿ ಅದರ ವರ್ಣನೆ ಮಾಡ್ತಾ ಖರೀದಿ ಮಾಡ್ಲಿಕ್ಕೆ ದುಂಬಾಲು ಬಿದ್ದ. ವೆಂಕಣ್ಣ “ಬೇಡಪ್ಪ ಬೇಡ ಬಿಟ್ಟು ಬಿಡು … ಮುಂದೆ ಯಾರಾದ್ರೂ ತೊಗೊಳ್ತಾರೆ ” ಅಂತ ಅಂದರೂ ಸೀದಾ ಮೂಗಿಗೇ ಹಿಡಿದು “ಮಾವಿನಹಣ್ಣಿನ ವಾಸನೆ ನೋಡಿದ್ರೆ ನೀವು ಬಿಡೋದೇ ಇಲ್ಲ ಬುದ್ಧಿ” ಅಂತ ಗೋಗರೆಕ್ಕೆ ಶುರು ಇಟ್ಟ. ಈ ಕಡೆ ಅವರ ಅಸಹಾಯಕತೆ ಅವನಿಗೆ ಅರ್ಥ ಆಗ್ತಾ ಇಲ್ಲ. ಹೇಳಿದ್ರೂ ಬಿಡ್ತಾ ಇಲ್ಲ. ಕಡೆಗೆ ರೇಗಿ ಕೂಗಾಡಿ ವೆಂಕಣ್ಣ ಕಣ್ಣೀರು ಹಾಕ್ತಾ “ಲೇ…ನಿನ್ನ ಹಣ್ಣು ತಿಂದು ನನ್ನ ಜೀವಕ್ಕೇನಾದ್ರು ಆದ್ರೆ ಪೋಲಿಸ್ ನಿನ್ನ ಹುಡ್ಕೊಂಡ್ ಬಂದು ಒದ್ದು ಒಳಗಾಕ್ತಾರೆ ಹುಷಾರ್ ಅಂತ ಅಂದ್ಬಿಟ್ರು.”

ಯಾವ ವಿಷಯದ ಬಗ್ಗೆನೂ ತಿಳೀದೇ ಇರೋ ಆ ಮಾವಿನ ಹಣ್ಣು ಮಾರುವವ ಮಾತ್ರ ಇವರಿಗೇನಾದ್ರೂ ತಲೆ ಕೆಟ್ಟಿರಬಹುದು ಅಂತ ಹೆದರಿ ಅಲ್ಲಿಂದ ಓಟಕಿತ್ತ…
ವೆಂಕಣ್ಣನವ್ರಿಗೆ ಈಗಲೂ ಹೋಳಿಗೆ ಸೀಕರಣೆ ಅಂತ ಹೆಸರು ಕೇಳಿದ್ರೆ ಹೆದರಿ ಬೆಚ್ಚಿ ಬಿದ್ದು ಬೆವತು ಹೋಗ್ತಾರೆ …!

One thought on “ವೆಂಕಣ್ಣನ ಪಚೀತಿ!”

Leave a Reply

This site uses Akismet to reduce spam. Learn how your comment data is processed.