ಶುಭಾ ಗಿರಣಿಮನೆ

ಮನುಷ್ಯ ಬುದ್ದಿವಂತ ಜೀವಿ. ಅವನಿಗೆ ಬುದ್ಧಿಶಕ್ತಿ ಎಲ್ಲ ಪ್ರಾಣಿ ವರ್ಗಕ್ಕಿಂತ ಹೆಚ್ಚಿಗೆ ಹೇಗಿದೆಯೋ ಹಾಗೆ ಮನಸ್ಸು ಎನ್ನುವ ಭಾವನಾ ಲೋಕವೂ ಅವನಲ್ಲಿ ಅಗಾಧವಾಗಿ ತುಂಬಿಕೊಂಡಿದೆ. ಮನಸ್ಸಿಗೆ ಸಿಗುವ ಖುಷಿ ಹಾಗು ದುಃಖವೇ ಜೀವನ ಎಂದುಕೊಂಡು ಮನುಷ್ಯ ಬದುಕುವವನಾಗಿದ್ದಾನೆ. ಆ ಮನಸ್ಸು ತನ್ನಲ್ಲಿ ಎಷ್ಟು ಸದೃಢವಾಗಿದೆ ಎಂದು ಒಂದು ಕ್ಷಣ ಯೋಚಿಸುವ ಪ್ರಯತ್ನವೊಂದನ್ನು ಬಿಟ್ಟು ಉಳಿದೆಲ್ಲಕಡೆ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿಕೊಳ್ಳುತ್ತಾ ಸಾಗುತ್ತಾನೆ.

ನನ್ನ ಗೆಳೆಯ ಇಂದು ಕಾರಣವಿಲ್ಲದೆ ತನ್ನ ದೋಸ್ತಿ ಬಿಟ್ಟು ಮತ್ತೊಬ್ಬನ ಜೊತೆ ಹೋಗಿದ್ದಾನೆ ಎನ್ನುವದು ಗೊತ್ತಾದಕೂಡಲೇ ಆ ವ್ಯಕ್ತಿಯ ಮನಸ್ಸು ದುಃಖ, ಅಸಹನೆ ತುಂಬಿ ಅಸಹಜ ಸ್ಥಿತಿಗೆ ಬಂದು ತಲುಪಿಬಿಡುತ್ತದೆ. ಅದು ಅವನ ಗುಣ ಎನ್ನೋಣವೆ. ಹೇಗೆ ಅದು ಅವನ ಗುಣವಾಗುವುದು? ಮನಸ್ಸಿನಲ್ಲಿ ಉತ್ಪತ್ತಿಯಾದ ಆ ಅಸಹಜತೆಯ ಸ್ಥಿತಿಯನ್ನು ಗುಣಕ್ಕೆ ಹೋಲಿಸಲು ಸಾಧ್ಯವಾಗುವುದೇ ಇಲ್ಲ. ಹಾಗಾದರೆ ಆ ಸ್ಥಿತಿಯನ್ನು ಮನುಷ್ಯ ಯಾಕಾಗಿ ತೋರ್ಪಡಿಸುತ್ತಾನೆ ಎನ್ನುವ ಚಿಂತನೆ ಹುಟ್ಟಿಕೊಳ್ಳುತ್ತದೆ.

ಗೆಳೆಯ ದೋಸ್ತಿಯನ್ನು ಬಿಟ್ಟು ಹೋದರೆ ಹೋಗಲಿ ಬಿಡಿ. ಅವನು ಹೋದ ಮಾತ್ರಕ್ಕೆ ಜೀವನದ ಗತಿಯಲ್ಲಿ ಯಾವುದೇ ಏರುಪೇರು ಆಗುವುದಿಲ್ಲವಲ್ಲ. ಅವನಿಲ್ಲದಿದ್ದರೆ ನಾಳೆ ಮತ್ತೊಬ್ಬ ಗೆಳೆಯ ಸಿಗಬಹುದು. ಅವನು ನನ್ನ ಬಿಟ್ಟು ಹೋದ ಎಂದು ಕೊರಗುವುದಕ್ಕಿಂತ ನನ್ನಂಥಹ ಉತ್ತಮ ಗೆಳೆಯನ ಜೊತೆ ಅವನಿಗೆ ಇರಲು ಅದೃಷ್ಟವಿಲ್ಲ ಎಂದುಕೊಂಡರೆ ಹೇಗಿರುತ್ತದೆ. ಒಮ್ಮೆ ಯೋಚಿಸಿ.

ಮನಸ್ಸು ನೋವಿನ ಪರದೆಯಲ್ಲಿ ಸಿಕ್ಕಿಹಾಕಿಕೊಳ್ಳುವುದೇ ಇಲ್ಲ. ಯಾಕೆಂದರೆ ಈ ಮನಸ್ಸಿಗೆ ಅವನ ಅವಷ್ಯಕತೆ ಇಲ್ಲವೆಂದು ಅರ್ಥವಾಗಿಬಿಟ್ಟಿದೆ. ಹಾಗಾದರೆ ನೋವಾಗುವುದು, ದುಃಖವಾಗುವುದು ಯಾಕೆ?

ನಮ್ಮ ಮನಸ್ಸು ಅತಿಯಾಗಿ ಅವನನ್ನು ನಂಬಿರುವುದು. ಅಂದರೆ ಆ ಗೆಳೆಯನಿದ್ದರೆ ನಾಳೆಯ ದಿನದ ಬಸ್ಟಾಂಡ್‍ನಲ್ಲಿ ಜೊತೆಯಾಗುತ್ತಾನೆ. ತಾನು ಕಾಲೇಜ್‍ನಲ್ಲಿ ಇಲ್ಲದಾಗ ಬರೆಸಿದ ನೋಟ್ಸ್ ಅವನಿಂದ ಸಿಗುವುದಿಲ್ಲ. ಮುಂದೆ ಹೇಗೆ ಮಾಡುವುದು? ಅವನು ನಿನ್ನ ಗೆಳೆಯನಾಗಿದ್ದ, ಈಗ ಯಾಕೆ ಬಿಟ್ಟು ಹೋದ ಎಂದು ಈ ಸಮಾಜ ಕೇಳುತ್ತದೆ. ಆಗ ತಾನು ಏನೆಂದು ಉತ್ತರಿಸಲಿ? ಹೀಗೆ ಬೇಕು ಬೇಡವಾದ ಪ್ರಶ್ನೆಗಳು ನಮ್ಮಲ್ಲಿಯೇ ಉದ್ಬವಿಸಿಬಿಡುತ್ತದೆ. ಆಗ ಅದೊಂದು ವಿಷಯ ದೊಡ್ಡ ಗುಡ್ಡವಾಗಿ ಕಾಣಿಸುತ್ತದೆ. ನಮ್ಮ ಮನಸ್ಸು ಆ ಎಲ್ಲ ರೀತಿಯ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ನೋವು ಪಡೆಯುತ್ತದೆ.

ಅಕ್ಕಪಕ್ಕ ಮನೆಯಲ್ಲಿ ಎರಡು ದಂಪತಿಗಳು. ಆ ಎರಡು ಮನೆಯವರು ಅನ್ಯೋನ್ಯವಾಗಿ ಬದುಕಿದ್ದವರು. ಎರಡು ದಂಪತಿಗಳಿಗೂ ಒಂದೊಂದು ಹೆಣ್ಣು ಮಗು. ಒಂದನೇ ಮನೆಯ ಹೆಣ್ಣು ಮಗು ಓದಿನಲ್ಲಿ ತುಂಬಾ ಜಾಣೆ. ಆದರೆ ಓದು ಬಿಟ್ಟು ಬೇರೆ ಯಾವ ಕೆಲಸವೂ ಬರುವುದಿಲ್ಲ. ಎರಡನೇ ಮನೆಯ ಮಗುವು ಓದಿನಲ್ಲಿ ಅತೀ ದಡ್ಡ. ಆದರೆ ರಂಗೋಲಿ, ಹಾಡು, ಕಸೂತಿ, ಚಿತ್ರಕಲೆ, ಭರತನಾಟ್ಯ ಹೀಗೆ ವಿವಿಧ ಕಲೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಳು. ಅಲ್ಲದೇ ಅದರಲ್ಲಿ ವಯಸ್ಸಿಗೆ ತಕ್ಕನಾಗಿ ಬಂದ ಅವಕಾಶ ಉಪಯೋಗಿಸಿಕೊಂಡು ಹಲವು ಕಡೆ ಗೆದ್ದಿದ್ದಳು. ಆದರೆ ಹತ್ತನೇ ತರಗತಿಯಲ್ಲಿ ಒಂದನೇ ಮನೆಯ ಹುಡುಗಿ ಉತ್ತಮ ಅಂಕ ಪಡೆದು ತಾಲೂಕಿಗೆ ಮೊದಲ ರ‍್ಯಾಂಕ್‌ ಬಂದಳು. ಆದರೆ ಎರಡನೇ ಮನೆಯ ಹುಡುಗಿ ಫೇಲ್ ಆದಳು.

ಇದರಿಂದ ಎರಡು ಮನೆಯ ಹೆತ್ತವರಲ್ಲಿ ಭಿನ್ನವಾದ ಮನಸ್ಸಿನ ಭಾವ ವ್ಯಕ್ತ ಪಡಿಸಿದರು. ತಮ್ಮ ಮಗಳು ಪರೀಕ್ಷೆಯಲ್ಲಿ ಗೆದ್ದಿದ್ದಾಳೆ ಎಂದು ಬೀಗುವುದರ ಜೊತೆ ಮತ್ತೊಂದು ಹುಡುಗಿ ಸಾಧಿಸಿಲ್ಲ ಎನ್ನುವ ಚುಚ್ಚು ಮಾತು ಆಡಿದರು. ಮನಸ್ಸಿನಲ್ಲಿಯ ಸಂತೋಷವನ್ನು ವ್ಯಕ್ತ ಪಡಿಸಿದರೆ ಸಾಕಿತ್ತು. ಆದರೆ ತಮ್ಮದು ಹೆಚ್ಚು ಎಂದು ತೋರಿಸಲು ಮತ್ತೊಂದನ್ನು ಟೀಕಿಸುವುದು ಎಷ್ಟರಮಟ್ಟಿಗೆ ಸಮ ಎಂದು ಅರಿತುಕೊಳ್ಳಲಿಲ್ಲ. ಇನ್ನು ಎರಡನೇ ಮನೆಯ ಹುಡುಗಿಯ ಕಡೆಯವರು ಕುಗ್ಗಿ ಹೋದರು. ಶಾಲೆಯ ಕಲಿಯೆಯೇ ಹೆಚ್ಚು ಎನ್ನುವ ಭಾವ ಈ ನಿರಾಶೆಗೆ ದೂಡಿತ್ತು. ಉಳಿದ ಎಲ್ಲ ಕಲಿಕೆಯನ್ನು ಗೌಣವಾಗಿಸಿಬಿಟ್ಟಿತ್ತು.

ಗೆದ್ದ ಮಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರೆ ಸಾಕಾಗಿತ್ತು. ಬೀಗುತ್ತ ಮತ್ತೊಬ್ಬಳನ್ನು ಹಂಗಿಸುವ ಪರಿ ಅವಶ್ಯ ಇರಲಿಲ್ಲ. ಇದರಿಂದ ಮನಸ್ಸಲ್ಲಿ ಒಂದು ವಿಷ ಭಾವ ಹುಟ್ಟಿಕೊಳ್ಳುವುದು. ಸಂತೋಷ ಮುಚ್ಚಿ ಹೋಗುವುದು. ಇತ್ತ ಮಗಳ ಇನ್ನಿತರ ಸಾಧನೆ ನೆನೆಸಿಕೊಂಡರೆ ಸಂತೋಷ ಕಂಡುಕೊಳ್ಳಬಹುದಿತ್ತು. ಬದುಕು ಕಟ್ಟಿಕೊಳ್ಳುವ ಕಲೆ ಮಗಳಿಗೆ ಗೊತ್ತು ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದರೆ ಸಂತೋಷ ಮನಸ್ಸಲ್ಲಿ ಮೂಡಿರುತಿತ್ತು. ಶಾಲಾ ಪರೀಕ್ಷೆಯೇ ಸಾಧನೆ ಎಂದುಕೊಂಡಿದ್ದರಿಂದಲೇ ಮನಸ್ಸು ನೋವುಂಡಿತು.

ಮನುಷ್ಯನ ಗುಣದಲ್ಲಿಯ ಒಂದು ಲಕ್ಷಣ ಮನಸ್ಸಿಗೆ ನೋವು ಮಾಡಿಕೊಳ್ಳುವುದು. ಅವನ ಗುಣವೇ ನೋವು ಎಂದು ಹೇಳಲಾಗುವುದಿಲ್ಲ. ಮಾನಸಿಕವಾಗಿ ಸ್ಥಿರತೆ ಎಲ್ಲಿರುತ್ತದೆಯೋ ಅಲ್ಲಿ ಬಂದ ಕಷ್ಟ, ನೋವುಗಳು ಅಷ್ಟೆ ಬೇಗ, ಸಲೀಸಾಗಿ ದೂರ ಸರಿದುಬಿಡುತ್ತವೆ. ಅಥವಾ ಯೋಚನಾ ಶಕ್ತಿಯನ್ನು ಬಲಪಡಿಸಿಕೊಂಡರೂ ಸಹ ಅನ್ಯ ವಿಷಯಕ್ಕಾಗಿ ದುಃಖಿಸುವುದು ತಪ್ಪುತ್ತದೆ. ಮನಸ್ಸು ನಮ್ಮನ್ನು ಆಳಬಾರದು. ಮನಸ್ಸಿನ ಹಿಡಿತ ನಮ್ಮಲ್ಲಿ ಇರಬೇಕು.

Leave a Reply

This site uses Akismet to reduce spam. Learn how your comment data is processed.