ಪುಟ-೫
ಕೆಲವೊಂದು ಸಲ ಎರಡು ಆಯ್ಕೆಗಳೂ ತಪ್ಪಲ್ಲವೆನ್ನುವಾಗ ಯಾವುದಾದರೂ ಒಂದು ಆಯ್ಕೆ ಮಾಡಿ ಮತ್ತೊಂದನ್ನ ಆಯ್ಕೆ ಮಾಡಬಹುದಿತ್ತು ಎನ್ನುವ ಪರಿತಾಪ ಉಂಟಾಗುತ್ತದೆ. ಅಂತಹ ಒಂದು ಪರಿತಾಪ, ಗೊಂದಲದ ನಡುವೆ ಮಲ್ಲಪ್ಪನವರು ಆಗಲಿ, ನೋಡೋಣ ಎಂದು ಟೊಂಯ್ಕರನ್ನು ಕಳಿಸಿದರು.
ಅಂತಿರ್ಪೊಡೆ, ಇದೆಲ್ಲ ಸಮಾಚಾರವೂ ಡಿಲೈಟಾನಂದರ ಕಿವಿಗಳಿಗೆ, ಕಣ್ಣುಗಳಿಗೆ ತಿಳಿಯಲಿಲ್ಲ. ಒಂದು ದಿನ ಶ್ರೀಮಾನ್ ಮಲ್ಲಪ್ಪನವರ ಸಂಸಾರ ಸಮೇತವಾದ ಸವಾರಿ ಗುರುಗಳಿದ್ದಲ್ಲಿಗೆ ಬಂದಾಗ ಡಿಲೈಟಾನಂದರಿಗೆ ವಿಷಯವನ್ನು ಹೇಳಿದರು. ಯಾವುದೋ ಬಿಸಿಲಿನಲ್ಲಿ ಹಪ್ಪಳ ಒಣಗಿಸುತ್ತಿದ್ದಾಗ ಬಂದ ಮಳೆಯಂತೆ ಈ ಸುದ್ಧಿ ಗುರುಗಳಿಗೆ.
ಸಮಾಧಾನದಿಂದಿದ್ದ ಪ್ರಾಕೃತಿಕ ಶಾಂತಿಗೆ ಭಂಗವಾಗುವ ಈ ಕಟ್ಟಡ, ವಸತಿಗಳಿಗೆ ಸಂತೋಷ ಪಡುವುದೋ ಬೇಸರ ಪಡುವುದೋ ತಿಳಿಯದೇ ಮೌನದ ಹುತ್ತಕ್ಕೇ ಶರಣು ಹೋದರು. ಅಲ್ಲೇ ಇದ್ದ ಟೊಂಯ್ಕರು ಯಾವುದೇ ಕಸಿವಿಸಿಯಿಲ್ಲದೇ ಆಗಲಿ ಮಲ್ಲಪ್ಪನವರೇ, ಈ ಜಾಗದಲ್ಲಿ ಹೀಗೆ, ಆ ಜಾಗದಲ್ಲಿ ಹಾಗಿದ್ದರೆ ಒಳ್ಳೆಯದು ಎಂದೂ ಹೇಳಿದರು. ಡಿಲೈಟಾನಂದರ ಹುಬ್ಬುಗಳು ಯಾವುದೋ ಶಬ್ಧಕ್ಕೆ ಮರದಿಂದ ಹಾರಿದ ಹಕ್ಕಿಗಳಂತೆ ಒಮ್ಮೆ ಹಾರಿ ಮತ್ತೆ ಕುಳಿತವು.
ಮಲ್ಲಪ್ಪನವರ ನಿಷ್ಠೆಗೆ, ಹಣಕ್ಕೆ ನೆಲವೇನು ಜನವೇನು? ಎಲ್ಲವೂ ಸಣ್ಣ ಕಾಲದ ಪರಿಧಿಯಲ್ಲಿ ಕಟ್ಟಿ ಮುಗಿಯಿತು. ಒಂದು ಸಣ್ಣ ಚಾವಡಿಯಂತಹ ಜಾಗ, ಶೌಚಾದಿ ಕ್ರಿಯೆಗಳಿಗೆ ಸ್ವಲ್ಪ ದೂರದಲ್ಲಿ ಎರಡು ಕೋಣೆಗಳು. ಮಲ್ಲಪ್ಪನವರ ಗದ್ದೆಯ ಪಂಪಿನಿಂದ ನೀರನ್ನು ಕೊಳವೆಯ ಮೂಲಕ ತಂದು ತುಂಬಿಸಬಹುದಾದಂತ ಒಂದು ಟ್ಯಾಂಕು, ಅದಕ್ಕೆ ನಲ್ಲಿಗಳ ವ್ಯವಸ್ಥೆ.
ಇಷ್ಟಾದ ಮೇಲೆ ಆ ಸ್ಥಳವು ಒಂದು ಸಣ್ಣ ಮಗು ಬಿಡಿಸಿದ ಚಿತ್ರದಂತೆ ದೂರಕ್ಕೆ ಕಾಣುತ್ತಿತ್ತು. ಯಾರೋ ತಂದಿಟ್ಟ ನಾಲ್ಕು ಹಳೇ ಪುಸ್ತಕಗಳು, ಅದ್ಯಾರೋ ತಂದು ಬಿಟ್ಟು ಹೋದ ವಿಭೂತಿಯ ಗಟ್ಟಿಯನ್ನು ತುಂಬಿದ್ದ ಬಟ್ಟಲುಗಳು ಚಾವಡಿಯ ಮೂಲೆಯಲ್ಲಿ ಪೇರಿಸಲ್ಪಟ್ಟವು. ಗುರುಗಳ ಪಾದಧೂಳಿಯನ್ನು ಪಡೆಯಬಂದವರು ತಮ್ಮ ಪಾದದ ಧೂಳನ್ನು ಚಾವಡಿಗೆ ಸೇರಿಸಬಾರದು ಎನ್ನುವ ಕಾರಣಕ್ಕೆ ಮಲ್ಲಪ್ಪನವರ ಮನೆಯಿಂದ ಹಿಂಡಿಯ ಗೋಣಿಗಳೂ ಬಂದು ಬಾಗಿಲಿಗೆ ಬಿದ್ದವು. ನಂತರ ಮಲ್ಲಪ್ಪನವರ ಮಡದಿಯ ಆರೋಪದ ಮೇರೆಗೆ ಒಳ್ಳೆಯ ಕಾಲೊರಸುಗಳೂ ಅಲ್ಲಲ್ಲಿ ರಾಜಿಸಿದವು.
ಡಿಲೈಟಾನಂದರು ಗುಹೆಯಂತ ಜಾಗದಲ್ಲಿ ತಮ್ಮ ನಂಟು ಬಿಡಲಿಲ್ಲ. ಟೊಂಯ್ಕರು ಸಂಪೂರ್ಣವಾಗಿ ಉಸ್ತುವಾರಿ ಸಚಿವರಾದರು. ಮಲ್ಲಪ್ಪನವರಂತೂ ತಮ್ಮ ಸ್ಥಳದ ಆಶೆಗೋ ಅಲ್ಲ ಭಕ್ತಿಯಿಂದಲೋ ಆಗಾಗ ಬರುವ ಮುಖ್ಯರಾದರು. ಮಲ್ಲಪ್ಪನವರೇ ಬಂದ ಮೇಲೆ ಅವರ ಸಂಬಂಧಿಕರು, ಪಟಾಲಮ್ಮುಗಳು ಬರದೇ ಇರುತ್ತಾರೆಯೇ?
ಅಲ್ಲಿ ಪೂಜೆಯಿಲ್ಲ, ಗುರುಗಳು ಮಾತನ್ನಾಡುವುದಿಲ್ಲ, ಟೊಂಯ್ಕರು ಉಪದೇಶ ಕೊಡುವ ಹಾಗಿಲ್ಲ. ನೋಡುವುದಕ್ಕೆ ಒಂದು ಚಾವಡಿ, ಎರಡು ಕೋಣೆ ಬಿಟ್ಟರೆ ಏನೂ ಇಲ್ಲ ಎನ್ನುವ ಕೆಲವು ವಿಷಯಗಳಿಂದ ದೂರದಿಂದ ಬರುವ ಜನರು ಮತ್ತೆ ಬರುತ್ತಿರಲಿಲ್ಲ. ಮೊದಮೊದಲಿಗೆ ಬಹಳಷ್ಟು ಜನ ಬಂದರೆ ನಂತರ ಜನರು ಕಡಿಮೆಯಾಗುತ್ತಿದ್ದುದು ಟೊಂಯ್ಕರಿಗೆ ಒಳಗಿಂದ ಅಸಮಾಧಾನವಾದರೆ ಡಿಲೈಟಾನಂದರಿಗೆ ಸ್ವಲ್ಪ ಖುಷಿಯೆನ್ನಿಸಿತ್ತು.
ಮಲ್ಲಪ್ಪನವರೂ ಹೊಸದಾಗಿ ಕೈಗೊಂಡ ಗ್ರಾನೈಟ್ ಬ್ಯುಸಿನೆಸ್ಸ್ ಸಲುವಾಗಿ ಈ ಗುರುಗಳನ್ನು, ಟೊಂಯ್ಕರನ್ನು ಮರೆತೇ ಬಿಟ್ಟರು. ಟೊಂಯ್ಕಾನಂದರು ಏನಾದರೂ ಮಾಡದಿದ್ದರೆ ಈಗ ಮತ್ತೆ ಎದ್ದು ಹೊರ ಜಗತ್ತಿಗೆ ಹತ್ತಿರವಾಗಲೇ ಬೇಕಾಯಿತು.
ಪುಟ-೬
ಮಳೆಗಾಲ ಮುಗಿಯುವಂತಿತ್ತು. ಆಕಾಶವು ನೀಲಿಯಾಗಿ ಅಲ್ಲಲ್ಲಿ ಈ ಸಂವತ್ಸರಕ್ಕೆ ತೇರ್ಗಡೆಯಾಗದ ಮೋಡಗಳನ್ನು ಉಳಿಸಿಕೊಂಡು ಅಲ್ಲಲ್ಲಿ ನೀಲಿಯನ್ನು ಕೆಡಿಸಿತ್ತು. ಒಳ್ಳೆಯ ಕೆಂಪಾದ ಮಾವಿನ ಹಣ್ಣನ್ನು ಅಳಿಲು ಕಚ್ಚಿ ಅಲ್ಲಲ್ಲಿ ಮಾವಿನ ತಿರುಳನ್ನು ಹೊರಚೆಲ್ಲಿದಂತೆ ಒಂದು ಸಂಜೆಯಾಯಿತು.
ಬೆಳಕು ಬರುವುದಕ್ಕೆ ಜಾಗ ಬೇಕು, ಕತ್ತಲೆಗೆ ಹೇಳಬೇಕೇ? ಬೆಳಕಿನಿಂದ ಕತ್ತಲೆಯ ಕಡೆಗೆ ನಡೆಯುವುದೇ ಸರಿ ಎನ್ನುವಂತೆ ಎಲ್ಲರೂ ತಮ್ಮ ಮನೆಗೆ ಬರುವ ಸಮಯ. ಅಲ್ಲಲ್ಲಿ ಹಕ್ಕಿಗಳ ಮಂಗಳ ಪದ್ಯಗಳು, ಮತ್ತೆಲ್ಲೋ ಯಾರನ್ನೋ ಕರೆದ ದನಿ. ಇದನ್ನೆಲ್ಲ ಕೇಳುವಾಗ ಡಿಲೈಟಾನಂದರಿಗೆ ಮತ್ತು ಟೊಂಯ್ಕರಿಗೆ ಒಂದು ದಿವ್ಯ ಅನುಭೂತಿ.
ಟೊಂಯ್ಕರು ಜೀವನದಲ್ಲಿ ಬಹಳ ಗುರುಗಳನ್ನು, ಯತಿಗಳನ್ನು ನೋಡಿದ್ದರು. ಅವರ ಪೂಜೆ, ಅವರ ಪ್ರವಚನ ಎಲ್ಲವನ್ನೂ ಕೇಳಿಯೂ ಇದ್ದರು. ಹೀಗಾಗಿ ಅವರೊಂದಿಗೆ ಡಿಲೈಟರನ್ನು ಹೋಲಿಸುವಾಗ ಯಾವುದೇ ರೀತಿಯ ಸಾಮ್ಯತೆ ಇರಲಿಲ್ಲವಾದುದರಿಂದ ಸ್ವಾಮೀಜಿ ಎನ್ನಲು ಆಗಲಿಲ್ಲ. ಗುರುವೇ, ಗುರುಗಳೇ ಎಂದು ಕರೆಯುತ್ತಿದ್ದರಿಂದ ದೊಡ್ಡ ಸಮಸ್ಯೆ ಆಗದಿದ್ದರೂ ಮನಸಿನಲ್ಲಿ ಒಂದು ಕೊರಗಿದ್ದಿತು.
ಈ ಕತ್ತಲು ನುಗ್ಗುವುದೂ ಹೀಗೆಯೇ, ಮೊದಲು ಬಾವಿಯೊಳಗಿಂದ, ನಂತರ ಕಾಡಿಗೆ ಮತ್ತೆ ಬಯಲಿಗೆ ಮತ್ತೆ ಬೆಟ್ಟಕ್ಕೆ. ಬೆಳಕು ಇದಕ್ಕೆ ವ್ಯತಿರಿಕ್ತವಾಗಿ ಮೊದಲು ಬೆಟ್ಟಕ್ಕೆ. ಬೆಳಕಿನ ಮೂಲಕವಾಗಿ ಬರುವ ಜ್ಞಾನ ಮೊದಲು ಈ ಬೆಟ್ಟವಾಸಿಗಳಿಗೆ ಬರಬೇಕು ಮೊದಲಿಗೆ ಎನ್ನುವುದು ಇದರಿಂದಲಾಗಿಯಾದರೂ ಸತ್ಯ.
ಸಂಜೆಯ ಸೊಬಗಿಗೆ ಡಿಲೈಟಾನಂದರು ಗುಹೆಯ ಬದಿಯಿಂದ ಬರುತ್ತಿದ್ದಂತೆಯೇ ಯಾವತ್ತೂ ಟೊಂಯ್ಕರು ನಮಸ್ಕರಿಸಿ ಆಶೀರ್ವಾದವನ್ನು ಪಡೆಯುವುದು ವಾಡಿಕೆ. ಆದರೆ ಈ ದಿನ ಟೊಂಯ್ಕರು ಕಾಣದಾದರು. ಏನಾಯ್ತು ಎನ್ನುವ ದುಗುಡ ಮೊದಲಬಾರಿಗೆ ಜೀವನದಲ್ಲಿ ಡಿಲೈಟಾನಂದರಿಗೆ ಬಂತು. ಹೇಗೂ ಸ್ವಲ್ಪ ಬೆಳಕಿದೆ, ಬೆಟ್ಟಕ್ಕೆ ಸುತ್ತಿ ಬರೋಣ ಎಂದು ನಡೆಯಲಾರಂಬಿಸಿದರು.
ಎಂತಹ ರಮಣೀಯ ಸಂಜೆಯದು. ಆ ಸೂರ್ಯನ ಕಿರಣಗಳು ಆಗಸದಲ್ಲಿ ಚಿತ್ತಾರಗಳನ್ನು ಮೂಡಿಸಿದ್ದವು, ಹಕ್ಕಿಗಳು ಕಪ್ಪಿನ ಗೆರೆಗಳಾಗಿ ಮೂಡಿ ಮರೆಯಾಗುತ್ತಿದ್ದವು. ಗಾಳಿ ಅದೆಲ್ಲಿಂದಲೋ ಬಂದು ಬಂದು ದೇಹವನ್ನು ಮುತ್ತಿಕ್ಕುತ್ತಿದ್ದವು. ಯಾವುದೋ ಮನೆಯ ಬಿಸಿನೀರೊಲೆಯ ಬೆಂಕಿಯಿಂದ ಬಂದ ಧೂಮರಾಶಿ ಇನ್ನೊಂದು ಮೋಡವಾಗುವತ್ತ ಸಾಗುತ್ತಿತ್ತು. ಇದನ್ನೆಲ್ಲ ನೋಡುತ್ತಾ ಮುಂದೆ ಬಂದ ಡಿಲೈಟರಿಗೆ ದೂರದಲ್ಲಿ ಟೊಂಯ್ಕರು ಕಂಡರು.
ನುಣುಪಲ್ಲದ ಬಂಡೆಯ ಮೇಲೆ ಹಾಗೇ ಬಿದ್ದಂತೆ ಮಲಗಿದ್ದರು ಟೊಂಯ್ಕರು. ಗುರುಗಳು ಬಳಿ ನಿಂದು ಕರೆದರು, ಕಿವಿಯಲ್ಲಿ ಹೆಸರನ್ನೇ ಹೇಳಿದರು. ಟೊಂಯ್ಕರು ಅಂತೂ ಎದ್ದರು. ಎದ್ದಕೂಡಲೇ ಪಶ್ಚಿಮಾಭಿಮುಖವಾಗಿ ನೋಡಿ ಕೈಮುಗಿದರು ಆಕಾಶಕ್ಕೆ. ಕಪ್ಪು ಇನ್ನಷ್ಟು ಕಪ್ಪಾಗುವ ವರೆಗೆ ಒಂದೂ ಮಾತುಕತೆಯಿರದೆ ಇಬ್ಬರೂ ಅಲ್ಲಿಯೇ ಇದ್ದರು.
ಸಂಜೆ ಹಾಗೇ ತಿರುಗುತ್ತಾ ಬಂದ ಟೊಂಯ್ಕರಿಗೆ ಬೆಟ್ಟದ ಇನ್ನೊಂದು ತಪ್ಪಲಿನಲ್ಲಿ ಜನರಿದ್ದಾರೆ ಎನ್ನುವುದು ಅರಿವಾಯಿತು. ಯಾರು? ಏನು ಎನ್ನುವ ಕುತೂಹಲ ಹೆಚ್ಚಾಗಿ ಗುಡ್ಡದ ಕಲ್ಲಿನ ಮೇಲೆ ಹತ್ತಿ ನೋಡಲು ಮುಂದಾದರು. ಯಾರೋ ಇಬ್ಬರು ಅರ್ಥಾತ್ ಒಂದು ಹೆಣ್ಣು ಮತ್ತೆ ಒಂದು ಗಂಡು ಸರಸವಾಡುವ ದೃಶ್ಯವನ್ನು ಕಂಡು ಟೊಂಯ್ಕರಿಗೆ ಒಂದು ಕ್ಷಣ ಮನಸ್ಸು ಅಲ್ಲೋಲಕಲ್ಲೋಲವಾಯಿತು.
ವಿಕಾರಗೊಂಡ ನೀಲ ಆಕಾಶದಲ್ಲಿ ಸಂಜೆಯ ಬಣ್ಣಗಳೆಲ್ಲ ಮುಗಿದು ಕಪ್ಪುಗಟ್ಟುತ್ತಿರುವ ದೃಶ್ಯವನ್ನು ಕಂಡು ಒಂದು ರೀತಿಯ ಆತ್ಮಾನುಸಂಧಾನಕ್ಕೆ ತೊಡಗಿದರು ಟೊಂಯ್ಕರು. ಈ ಧ್ಯಾನದಲ್ಲಿ, ಈ ಚಿಂತನೆಯಲ್ಲಿ ಮುಳುಗಿ ಅಲ್ಲಿಯೇ ಕುಸಿದು ಬಿದ್ದು ಬಿಟ್ಟರು. ಕತ್ತಲು ಎಂತಹದ್ದನ್ನೂ ಕಲಿಸುತ್ತದೆ. ಹಾಗಾಗಿ ಎದ್ದ ಕೂಡಲೇ ತಮ್ಮ ಮನಸ್ಸಿನ ಕಪ್ಪು ಈ ಜಗತ್ತಿನ ತಾತ್ಕಾಲಿಕ ಕಪ್ಪು ಎಲ್ಲವನ್ನೂ ತೊಡೆಯುವ ಸೂರ್ಯನ ಬೆನ್ನಿಗೆ ನಮಸ್ಕರಿಸಿದರು.
ಪುಟ-೭
ಊಟಕ್ಕೆ ಬಹಳ ತರನಾದ ಪದಾರ್ಥಗಳಿದ್ದಾಗ ಕೆಲವೊಂದು ರುಚಿಸಲಾರದು. ಒಂದೇ ತಂಬುಳಿಯೋ, ಒಂದೇ ಸಾಂಬಾರೋ ಇದ್ದಾಗ ಅದೇ ಪರಮಾನ್ನವಾಗುತ್ತದೆ. ಅಂತೆಯೇ ಕೆಲವೊಂದು ಬಾರಿ ಒಬ್ಬರ ಮಹಾತ್ಮ್ಯದ ಎಲ್ಲಾ ಅಂಶಗಳೂ ರಸಮಯವಾಗಿರುತ್ತದೆ ಎನ್ನುವ ಹಾಗಿಲ್ಲ.
ಜಾತ್ರೆಯ ಉಪನ್ಯಾಸದಿಂದ ಡಿಲೈಟಾನಂದರಿಗೆ ಸ್ವಲ್ಪ ಜನರ ಪರಿಚಯವೂ ಆಯ್ತು, ಕೆಲವು ಭಕ್ತರೂ ಹುಟ್ಟಿಕೊಂಡರು. ಅದಕ್ಕಿಂತ ಹೆಚ್ಚಾಗಿ ಶಿಷ್ಯ ಟೊಂಯ್ಕರ ಮೇಲೆ ಬಹಳವಾದ ಊಹಾಪೋಹವಾದ ಕತೆಗಳೂ, ಪವಾಡಗಳೂ ಹುಟ್ಟಿಕೊಂಡವು.
ಕೆಲವರ ಮಲಗಿದ ಕೂಡಲೇ ಬರುವ ಕನಸಾಗಿ, ಕೆಲವರ ಮಧ್ಯನಿದ್ರೆಯ ಕನಸಾಗಿ, ಕೆಲವರ ಬೆಳಗಿನ ಜಾವದ ಕನಸಾಗಿ ಟೊಂಯ್ಕರು ಕಾಣಿಸಿಕೊಂಡರು. ಕಳೆದು ಹೋದ ಎಮ್ಮೆ, ದನಗಳನ್ನು ಹುಡುಕುವಾಗ, ಉತ್ತೀರ್ಣರಾಗದ ಪರೀಕ್ಷೆಗಳನ್ನು ಮಕ್ಕಳು ಬರೆದು ಪಾಸ್ ಆಗುವಾಗೆಲ್ಲ ಟೊಂಯ್ಕರು ಬರುತ್ತಿದ್ದರು.
ಸದಾ ಮೌನಿಯಾಗಿರುತ್ತಿದ್ದ ಡಿಲೈಟಾನಂದರು ಮಾತುಗಳು ಟೊಂಯ್ಕರ ಮಹಾಮಳೆಯ ನಡುವಿನ ಆಲಿಕಲ್ಲುಗಳಂತಿರುತ್ತಿತ್ತು. ಜನರಿಗೆ ಅರ್ಥವಾಗುತ್ತಿರಲಿಲ್ಲ, ಜಾಸ್ತಿ ಸಮಯ ಉಳಿಯುತ್ತಲೂ ಇರಲಿಲ್ಲ. ಹೀಗಾಗಿ ಟೊಂಯ್ಕರಿಗೆ ಅಭಿಮಾನಿಗಳು ಜಾಸ್ತಿಯಾದರು. ಗುರುಗಳು ಮಾತನ್ನಾಡುತ್ತಿರುವಾಗಲೇ ಮಾತನ್ನಾಡುವ ಟೊಂಯ್ಕರಿಗೆ ಮೌನದಲ್ಲಿದ್ದಾಗ ಕೇಳಬೇಕೇ?
ಗುರು ಡಿಲೈಟಾನಂದರಿಗೆ ಮನಸ್ಸಿನಲ್ಲಿ ಕೋಲಾಹಲವಾಗಿರಬಹುದೇ ಎನ್ನುವ ಸಂಶಯವು ದಿನಾ ಟೊಂಯ್ಕರಲ್ಲಿ ಕೊರೆಯುತ್ತಿತ್ತು. ಈ ವಿದ್ಯಮಾನಗಳಿಂದ ಗುರುಗಳ ಮನಸ್ಸು ಏನಾಗಿರಬಹುದು? ಅವರಿಗೆ ನನ್ನ ಮೇಲೆ ಅಸಮಾಧಾನ ಇರಬಹುದು ಎನ್ನುವುದು ಹುಣ್ಣಾಗಿ ಪರಿಣಮಿಸಿತ್ತು.
ತಿನ್ನುವುದಕ್ಕೆ ಬಾಳೆಹಣ್ಣು ಮಾತ್ರ ಇರೋರು ದೇವರಿಗೆ ನೈವೇದ್ಯಕ್ಕೇನು ಕೊಡೋದು?. ಸಂಶಯಕ್ಕೆ ಅತೃಪ್ತಿಗೆ ಎಲ್ಲದಕ್ಕೂ ಗುರುಗಳನ್ನೇ ಕೇಳಬೇಕು ಎಂದುಕೊಂಡು ಟೊಂಯ್ಕರು ಒಂದು ಸೊಬಗಿನ ಸಂಜೆ ಕೇಳಿದರು.
ಉತ್ತರ ಗೊತ್ತಿರುವ ಪ್ರಶ್ನೆಯನ್ನು ಕೇಳುವುದು ಮೊಡವೆಯನ್ನು ಒಡೆದುಕೊಂಡಂತೆ. ಆ ನೋವು, ಕೀವು, ರಕ್ತದ ಪ್ರಮಾಣ ಎಲ್ಲ ಗೊತ್ತಿರುತ್ತದೆ. ಆದರೆ ಈ ರೀತಿಯ ಪ್ರಶ್ನೆ ಕೇಳುವುದು ಬೇರೆಯವರ ಮೊಡವೆ ಒಡೆದಂತೆ ಎನ್ನುವುದು ಟೊಂಯ್ಕರಿಗೆ ಗೊತ್ತಿತ್ತು. ಆದರೂ ಕೇಳಿದರು.
ಗುರುವರ್ಯಾ, ಈಗಿನ ವಿದ್ಯಮಾನಗಳು ಅರ್ಥಾತ್ ಜನರು ಹೆಚ್ಚಾಗಿ ನನ್ನನ್ನು ಮಾತನಾಡಿಸುವುದು, ಸಮಸ್ಯೆಗಳನ್ನು ಹೇಳಿಕೊಳ್ಳುವುದು ನಿಮಗೆ ದುಃಖವನ್ನು ಕೊಡುತ್ತಿಲ್ಲವೇ? ನನ್ನ ಬಗೆಗೆ ಅಸಮಾಧಾನವನ್ನು ಕೊಡುವುದಿಲ್ಲವೇ?
ಶಿಷ್ಯೋತ್ತಮ. ನಿನ್ನ ಈ ಒಂದು ಪ್ರಶ್ನೆಯಲ್ಲಿಯೇ ನೀನು ನನ್ನ ಬಗೆಗೆ ಇರಿಸಿಕೊಂಡ ಗೌರವ ಪ್ರೀತಿಗಳು ವ್ಯಕ್ತವಾಗುತ್ತದೆ. ಯಾವಾಗ ನಾವು ಏನನ್ನಾದರೂ ಅಪೇಕ್ಷಿಸುತ್ತೇವೆಯೋ ಆಗ ಮಾತ್ರ ದುಃಖ ಉಂಟಾಗುತ್ತದೆ. ನಾನು ಎಲ್ಲವನ್ನೂ ತ್ಯಜಿಸಿದ್ದೇನೆ ಅಂದರೆ ಇದ್ಯಾವುದೂ ನನ್ನ ಹತ್ತಿರವೇ ಬರಕೂಡದು. ಆದರೆ ಎಲ್ಲಿಯೋ ಒಳಗಿನಿಂದ ಒಂದು ಸೂಜಿ ಚುಚ್ಚಿದಂತಾಗುವ ಅಸಮಾಧಾನಕ್ಕೆ ಪರಿಹಾರವೆಂದರೆ ನಾಯಿ ಎಷ್ಟು ಬೊಗಳಿದರೂ ಅದರ ಕೊರಳಿಗೆ ಕಟ್ಟಿದ ಸಂಕಲೆಯ ಇನ್ನೊಂದು ತುದಿಯು ನನ್ನ ಕೈಯ್ಯಲ್ಲಿದೆ ಎನ್ನುವುದು.
ಹಾಗಾಗಿ…
ಟೊಂಯ್ಕಾನಂದರು ಸಮಾಧಿಗೆ ಸಂದರು.
ಮುಂದುವರೆಯುವುದು….
ಹಕ್ಕುಗಳು © Ishwara Bhat K|ಈಶ್ವರ ಭಟ್ ಕೆ.
ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೧
ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೨