ಪುಟ-೮
ಬದಲಾವಣೆಗೆ ಭಾವಗಳು ಸಾಕು. ಯಾರೂ ಹೇಳಬೇಕಿಲ್ಲ, ಯಾರೂ ಒಪ್ಪಿಸಬೇಕಿಲ್ಲ. ಕೆಲವೊಂದು ಕಾರ್ಯಕಾರಣವಿಲ್ಲದೇ ಬಹಳವಾಗಿ ಜೀವನಶೈಲಿ, ವಿಚಾರಗಳು ಹೆಚ್ಚೇಕೆ ನಡೆ ನುಡಿಗಳೂ ಬದಲಾವಣೆಯಾಗುತ್ತದೆ. ಇಂತಹ ಒಂದು ಜೀವನದ ತಿರುವು ಬಂದಿತ್ತು ಟೊಂಯ್ಕಾನಂದರಿಗೆ.
ಅದೊಂದು ರಾತ್ರಿ ಹೊಂಚು ಹಾಕಿ ಬಂದ ಬೆಕ್ಕಿನಂತೆ ಬಂತು. ಯಾವುದೋ ಸುಟ್ಟ ಭಾವಗಳಿಗೆ ರೂಪು ಕೊಡುತ್ತಾ ಟೊಂಯ್ಕಾನಂದರು ಮಲಗಿದ್ದರೆ, ಡಿಲೈಟಾನಂದರು ಗೋಡೆಗೆ ಒರಗಿ ಕುಳಿತಿದ್ದರು. ಒಮ್ಮೆಲೇ ಎದ್ದ ಟೊಂಯ್ಕರು ಗುರುಗಳಲ್ಲಿ ಪ್ರಶ್ನೆಗಳ ಬಾಣಗಳನ್ನು ಎಸೆದರು.
ಗುರುಗಳೇ, ತನ್ನನ್ನು ತಾನು ಅರಿಯುವುದು ಎಂದರೇನು? ನಾನು ಎನ್ನುವ ಭಾವ ಒಂದು ವೇಳೆ ನನ್ನದೇ ಸಹಜವಲ್ಲದ ವ್ಯಕ್ತಿತ್ವವಾಗಿರದಿದ್ದರೆ ಅದು ಬೇರೆಯಾಗಿ ನಮ್ಮನ್ನು ಹಿಂಸಿಸುತ್ತದೆಯೇ?
ಪ್ರಿಯನೇ, ತಾನು ಎನ್ನುವುದು ಬಾಲ್ಯಕಾಲದಲ್ಲಿ ಸಿಗುತ್ತಿದ್ದ ಅಜ್ಜನ ಗಡ್ಡದಂತೆ ( ಅದೊಂದು ಹೂವೋ, ಕಾಯಿಯೋ!). ಅದನ್ನು ಗಿಡದಿಂದಲೇ ಕೊಯ್ದು ಹಾರಿಸುವುದು ಒಂದು ರೀತಿ. ಅದೇನು ಅಷ್ಟೊಂದು ಸ್ವಾರಸ್ಯವಲ್ಲ. ಆದರೆ ಗಾಳಿಗೆ ತಂತಾನೇ ಹಾರುವದನ್ನು ಹಿಡಿಯಲು ಯತ್ನಿಸುವುದು, ಆ ಯತ್ನದಲ್ಲಿ ಅದು ಇನ್ನೂ ಮೇಲಕ್ಕೆ ನೆಗೆಯುವುದು, ಇಲ್ಲವೇ ಹಿಡಿದಾಗ ಅದು ಚೂರಾಗಿ ಪೂರ್ಣವಲ್ಲದ ಒಂದು ಸಿಗುವುದು. ಹೀಗೆ ನಾನು ಎನ್ನುವ ಒಂದು ಅಹಂಕಾರವೋ, ಚಿತ್ತವೋ. ಇಷ್ಟು ಹೇಳಿದರೂ ನಾನು ಎನ್ನುವುದು ಹಾಗೇ ಇರುತ್ತದೆ. ಅದರ ಇರವನ್ನು ಬಹಳವಾಗಿ ಹೇಳಬಹುದು, ಆದರೆ ಆ ಇರುವನ್ನು ಇಲ್ಲ ಎನ್ನುವಂತೆ ಮಾಡುವುದು ಬಹಳ ಕಷ್ಟ.
ಓಹ್ಹೊ. ಇದಕ್ಕೆ ಏನನ್ನು ಓದಬೇಕು? ಏನನ್ನು ಧ್ಯಾನಿಸಬೇಕು? ಮತ್ತು ಇದರಿಂದ ಆಗುವ ಲಾಭವೇನು ಗುರುವೇ?
ಏನನ್ನು ಓದಬೇಕು, ಅಧ್ಯಯನ ಮಾಡಬೇಕು ಅಂತೇನೂ ಇಲ್ಲ. ಜೀವನಾನುಭವವೇ ಎಲ್ಲದಕ್ಕೂ ಮೂಲ. ಹಾಗೆಯೇ ಅದು ಸುಮ್ಮನೇ ತಪಸ್ಸು ಮಾಡಿದರೂ ಬರುವಂತಹದ್ದಾಗಿರಬಹುದು. ಲಾಭ ಆನಂದ ಮಾತ್ರ. ಅದು ಸುಮ್ಮನೇ ಬರುವ ಆನಂದವಲ್ಲ. ಅಜ್ಜನ ಗಡ್ಡವನ್ನು ಎರಡೂ ಕೈಯ್ಯೊಳಗೆ ನಿರ್ವಾತ ಗೊಳಿಸಿ ಅದನ್ನು ಇದ್ದಹಾಗೇ ನೋಡುವಂತಹ ಆನಂದ. ನಮ್ಮ ಮಿತಿಯೊಳಗೆ ಹಾರಿಸಿ, ಏರಿಸಿ, ಇಳಿಸಿ ನೋಡುವ ಸ್ವಾತಂತ್ರ್ಯದ ಆನಂದ.
ಪುಟ-೯
ಸಂಜೆಯ ಘಟನೆ ಮತ್ತು ರಾತ್ರಿಯ ಮಾತುಕತೆಗಳಿಂದ ಟೊಂಯ್ಕರು ಬಹಳವಾಗಿ ಬದಲಾದರು. ಯಾವುದು ಬೇಕು ಯಾವುದು ಬೇಡ ಎನ್ನುವುದನ್ನ ಸುಲಭವಾಗಿ ಕಂಡುಕೊಳ್ಳುವ ಬುದ್ಧಿ ಬಂತು.
ಜಗತ್ತಿನಲ್ಲಿ ಬದಲಾವಣೆಗಳು ಬಹಳ ಸಹಜ. ಅವು ಕ್ಷಣಕ್ಕೆ, ದಿನಕ್ಕೆ, ಋತುಗಳಿಗೆ, ಭಾವಗಳಿಗೆ ಬದಲಾಗುತ್ತಾ ಸಾಗುತ್ತವೆ. ಹೀಗಾಗಿ ಇವತ್ತಿನದ್ದು ನಾಳೆಗಿಲ್ಲ, ನಾಳೆಯದ್ದು ನಾಡಿದ್ದಿಗಿಂತ ಭಿನ್ನ. ಒಳ್ಳೆಯ ಬದಲಾವಣೆ ಅಥವಾ ಕೆಟ್ಟ ಬದಲಾವಣೆ ಹೇಳುವುದು ವ್ಯಕ್ತಿಗತ.
ಟೊಂಯ್ಕಾನಂದರು ಪೂರ್ಣವಾಗಿ ಮೌನವಾದರು. ಮಳೆಗಾಲದ ಅಬ್ಬರವು ಅಡಗಿ ಮಂಜು ಕವಿದ ಕುಳಿರ್ಗಾಲ ಬಂದಂತೆ. ನೋಡುವ ಹೂವಿನಲ್ಲೆಲ್ಲಾ ಜೇನಿಗಿಂತ ಮೊದಲು ತುಂಬಿಕೊಂಡಿರುವ ಮಂಜಿನ ಹನಿಗಳಂತೆ ಟೊಂಯ್ಕರು ಡಿಲೈಟರ ಜೇನಿನ ಮಾತುಗಳಿಗೆ ಮಂಜಾದರು.
ಊರಿನ ಕೆಲವು ಜನರು ಯಾವುದೋ ಕಾರಣಗಳಿಗಾಗಿ ಬೆಟ್ಟ ಹತ್ತುವಾಗ ಗುರುಗಳ ದರ್ಶನ ಮಾಡಿ ಹೋಗುತ್ತಿದ್ದರು. ಏನಿದೆ ಅಲ್ಲಿ? ಊಟವೇ? ಪ್ರಸಾದವೇ? ಮಾತುಗಳೇ? ಏನೂ ಇಲ್ಲ. ಹಾಗಾಗಿ ಭ್ರಮನಿರಸನಗೊಂಡು ಹೋಗುತ್ತಿದ್ದವರೇ ಜಾಸ್ತಿ. ಇದರಿಂದ ಡಿಲೈಟರಿಗೆ ಮತ್ತು ಟೊಂಯ್ಕರಿಗೆ ಸಮಸ್ಯೆ ಇರಲಿಲ್ಲವಾದರೂ ಕೆಲವೊಂದು ಬಾರಿ ನಾವು ಕಂಡುಕೊಂಡಿದ್ದನ್ನ ಹೇಳದೇ ಇರುವುದರಿಂದ ಸಮಾಜಕ್ಕೆ ಏನು ಲಾಭ ಎನ್ನುವ ಜಿಜ್ಞಾಸೆ ಬರುತ್ತಿತ್ತು. ಅದೂ ಹೆಚ್ಚಾಗಿ ಟೊಂಯ್ಕರಿಗೆ.
ಒಂದು ದಿನ ಗಟ್ಟಿ ಮನಸ್ಸು ಮಾಡಿ ಟೊಂಯ್ಕರು ಅಲ್ಲಿಂದ ಹೊರಡುವ ತೀರ್ಮಾನ ಮಾಡಿದರು. ಡಿಲೈಟರ ಆಶೀರ್ವಾದವನ್ನು ಪಡೆದು, ಲೋಕ ಸುತ್ತಿ ಬರುವ ತಮ್ಮ ತೀರ್ಮಾನವನ್ನು ಹೇಳಿ ಹೊರಟರು. ಹೋಗುವಾಗ ಡಿಲೈಟರು ಕೊಟ್ಟಿದ್ದ ಶಾಲನ್ನು ಹೊದೆದು, ಒಂದು ಪಂಚೆಯನ್ನು ಕೇಳಿ ಪಡೆದುಕೊಂಡರು.
ಅವರ ಪ್ರಯಾಣದ ಒಂದನೇ ದಿನ ಊರಿನಾಚೆಗೆ ಇದ್ದ ಕಾಡಿನೊಳಗೇ ಕಳೆಯಿತು. ಸಹಜಾರಣ್ಯವಲ್ಲದ ಅಭಯಾರಣ್ಯದಲ್ಲಿ ಏನೂ ಸ್ವಾರಸ್ಯವಿಲ್ಲದ ಒಂದು ದಿನದ ನಡಿಗೆ.
ಇತ್ತ, ಟೊಂಯ್ಕರಿಲ್ಲದ ಜಾಗ ಮಂಗನಿಲ್ಲದ ಬೆಟ್ಟದ ಮರದಂತಾಗಿ ಸ್ತಬ್ಧವಾಗಿತ್ತು. ಡಿಲೈಟಾನಂದರು ಎಲ್ಲವನ್ನೂ ಉಪೇಕ್ಷಿಸುತ್ತಾ ಕೊನೆಗೆ ನೀರಿನ ಅವಶ್ಯಕತೆಗೂ ಕಾಲುವೆಯ ಬಳಿಗೆ ಹೋಗುವಂತಾಯ್ತು. ಊಟಕ್ಕೆ ಇದ್ದ ತೆಂಗಿನಕಾಯಿ, ಅಕ್ಕಿ ಹಾಳಾಯಿತು. ಊರಿನ ಒಳಗೆ ಭಿಕ್ಷಕ್ಕೆ ಹೋಗುವ ಪರಿಸ್ಥಿತಿಯೂ ಬಂತು. ಅಂತೂ ಡಿಲೈಟಾನಂದರಿಗಿದ್ದ ಪ್ರಭಾವಳಿಯೂ ಕಡಿಮೆಯಾಗಿ ಆ ಬೆಟ್ಟದ ಜಾಗವನ್ನು ಬಿಟ್ಟು ಊರಿನ ಪಾಳುಬಿದ್ದ ಒಂದು ಆವರಣದಲ್ಲಿ ಬಂದು ಇದ್ದರು.
ದಾರಿ ಗೊತ್ತಿಲ್ಲದಿದ್ದರೆ ಕೇಳಬಹುದು, ಗಮ್ಯ ಗೊತ್ತಿಲ್ಲದಿದ್ದರೆ ದಾರಿ ಕೇಳಿ ಏನು ಮಾಡುವುದು?
ಪುಟ-೧೦
ಯಾವುದೋ ಕಾರಣವಿಲ್ಲದೆ, ಏನೂ ಉಂಟಾಗುವುದಿಲ್ಲವಂತೆ. ಒಂದು ನೋಟದಿಂದ ಟೊಂಯ್ಕಾನಂದರು ಹೀಗೇ ಪರ್ಯಟನೆಗೆ ಹೊರಟರು. ಡಿಲೈಟರು ತಾನು ಆವರಿಸಿಕೊಂಡಿದ್ದ ಬೆಟ್ಟವನ್ನು ಬಿಟ್ಟು ಊರಿನ ಭಿಕ್ಷಾನ್ನಕ್ಕೆ ಮುಂದಾದರು. ಮತ್ತೇನೋ ಬದಲಾವಣೆಗಳೂ ಆಯಿತು.
ಹೀಗೆ ಒಂದಿಡೀ ದಿನ ನಡೆದು ಬಳಲಿದ ಟೊಂಯ್ಕರು ಯಾವುದೋ ಕೆರೆಯ ನೀರಿನಲ್ಲಿ ಮಿಂದು, ಸಿಕ್ಕಿದ ಹಣ್ಣುಗಳನ್ನು ತಿಂದು ಮುಂದೆ ಸಾಗುತ್ತಿದ್ದರು. ಬಹಳಷ್ಟು ನಡೆದಾದ ಮೇಲೆ ಇನ್ನು ದೇಹಕ್ಕೆ ವಿಶ್ರಾಂತಿ ಬೇಕು ಎಂದೆನಿಸಿದಾಗ ಒಂದು ಒಳ್ಳೆಯ ಮರದ ಬುಡವನ್ನು ಅರಸಿದರು.
~
ಸುಮಾರು ಏಳುನೂರು ವರುಷಗಳ ಹಿಂದೆ ಶಿವಪುರದ ವರ್ತಕನೊಬ್ಬ ತನ್ನ ವ್ಯಾಪಾರವನ್ನು ಮುಗಿಸಿ ತಾನು ಖರೀದಿಸಿದ ವಸ್ತುಗಳನ್ನು ತನ್ನ ಎತ್ತಿನ ಬಂಡಿಯಲ್ಲಿ ಹೇರಿ ಬರುತ್ತಿದ್ದನು. ಅವನ ಬಂಡಿಯ ಎತ್ತುಗಳು ಬಹಳವಾಗಿ ಬಳಲಿದ್ದುದರಿಂದ ,ಮುಂದೆ ಸಿಕ್ಕಿದ ಊರಿನಲ್ಲಿ ವಿಶ್ರಾಂತಿಗೆಂದು ಒಂದು ದಿನದ ಕಾಲ ಅಲ್ಲಿಯೇ ತಂಗಿದನು.
ಒಳ್ಳೆಯ ಧಾನ್ಯಗಳನ್ನು, ಜೋಳದ ಹುಲ್ಲನ್ನು ಯಥೇಚ್ಛವಾಗಿ ಕೊಂಡು ಎತ್ತುಗಳಿಗೆ ತಿನ್ನಿಸಿ, ಪಾವನವಾದ ನದಿಯ ನೀರಿನಲ್ಲಿ ಮೀಯಿಸಿ, ಅದೇ ನೀರನ್ನು ಕುಡಿಸಿ ಎತ್ತುಗಳ ಬಗೆಗಿನ ತನ್ನ ಪ್ರೀತಿಯನ್ನು ತೋರಿದನು. ಹೀಗಾಗಿ ಒಂದು ದಿನದಲ್ಲಿಯೇ ಎತ್ತುಗಳು ತಮ್ಮ ಮೊದಲಿನ ಉತ್ಸಾಹವನ್ನು ಪಡೆದವು.
ಬೆಳಗೆದ್ದು ಇನ್ನೇನು ಹೊರಡಬೇಕು, ಅಷ್ಟರಲ್ಲಿ ಸೋಮ ಎನ್ನುವ ಎತ್ತು ಹಗ್ಗದಿಂದ ತಪ್ಪಿಸಿಕೊಂಡು ಓಡಿಹೋಯಿತು. ತಪ್ಪಿಸಿಕೊಂಡ ಎತ್ತಿಗೆ ಏನೂ ಕೆಲಸವಿರಲಿಲ್ಲ. ಹೊಟ್ಟೆ ತುಂಬುವಷ್ಟು ಆಹಾರ, ನೀರು ಇದ್ದರೂ ಸ್ವಾತಂತ್ರ್ಯ ಎನ್ನುವ ಅಭಿಲಾಷೆಯಿಂದ ಓಡಿದ್ದಿರಬೇಕು. ವರ್ತಕನು ಎತ್ತನ್ನು ಹುಡುಕುತ್ತಾ ಸಾಗಿದ.
ಸೋಮ ಎತ್ತು, ಊರಿನ ದೇವರ ಗುಡಿಯ ಹತ್ತಿರವಿದ್ದ ಅರಳೀಕಟ್ಟೆಯ ಬಳಿ ನಿಂದು, ಬಿದ್ದಿದ್ದ ಅರಳೀ ಹಣ್ಣು, ಎಲೆಗಳನ್ನು ತಿಂದಿತು. ಅಷ್ಟರಲ್ಲಿ ವರ್ತಕನು ಬಂದು ಎತ್ತನ್ನು ಎಳೆದೊಯ್ದ.
ಎತ್ತನ್ನು ಬಂಡಿಗೆ ಕಟ್ಟಿ ಸವಾರಿ ಹೊರಟನು. ಕಾಡುದಾರಿಯಲ್ಲಿ ಸಾಗುವಾಗ ಎತ್ತಿನ ಹೊಟ್ಟೆಯ ಪದಾರ್ಥಗಳು ಕರಗಿ ಭೂಮಿಗೆ ವಿಸರ್ಜನೆಯಾದವು. ಆ ಸಗಣಿಯಲ್ಲಿ ಅರಳೀಮರದ ಕಾಣದ ಬೀಜವೂ ಅಡಗಿತ್ತು.
ನಾಲ್ಕೈದು ಬಿಸಿಲಿಗೆ ಒಣಗಿದ ಸಗಣಿಯ ಮೇಲೆ ಒಳ್ಳೆಯ ಮಳೆಯಾದಾಗ ಅರಳೀ ಗಿಡ ಹುಟ್ಟಿಕೊಂಡು ಸಮೀಪದ ಒಣಗಿದ ಮರದ ಬುಡದಿಂದ ಪಲ್ಲವಿಸಿತು. ಹೀಗೇ ನೂರಾರು ವರ್ಷಗಳ ನಂತರ ಬಹಳ ದೊಡ್ಡ ವೃಕ್ಷವಾಗಿ ಲಕ್ಷೋಪಲಕ್ಷ ಪಕ್ಷಿ ಸಂತತಿಗಳಿಗೆ, ಉರಗ, ಕೀಟಗಳಿಗೆ, ಮಂಗ ಅಳಿಲುಗಳಿಗೆ ತಾಣವಾಗಿ, ಆಹಾರವಾಗಿ, ಮನೆಯಾಗಿ ಪರಿಣಮಿಸಿತು.
ಯಾರೂ ಕಟ್ಟೆಯನ್ನು ಕಟ್ಟಲಿಲ್ಲ, ನೀರೆಯರಲಿಲ್ಲ. ದಾರಿಹೋಕರು ಬಂದಾಗ ಸುಂಕವನ್ನು ಪಡೆಯಲಿಲ್ಲ. ನೆರಳನ್ನು ಕೊಟ್ಟಿತು, ಕಾಲಕಾಲಕ್ಕೆ ಮಳೆಯಾಗುವಂತೆ ನೋಡಿತು. ಅಷ್ಟೇಕೆ, ತನ್ನ ಹತ್ತಿರದಲ್ಲಿದ್ದ ಸಮಸ್ತ ಪ್ರಾಣಿ-ಪಕ್ಷಿ-ಸಸ್ಯ ಪರಂಪರೆ ಉಳಿಯುವುದಕ್ಕೆ ಸಹಾಯ ಮಾಡಿತು.
ಇಂತಹಾ ಅರಳೀಮರ ಯಕಶ್ಚಿತ್ ಟೊಂಯ್ಕಾನಂದರಿಗೆ ನೆರಳು ನೀಡದೇ? ಮಲಗಿಕೊಳ್ಳಲು ತಂಪಾದ ಗಾಳಿ ನೀಡದೇ? ಟೊಂಯ್ಕಾನಂದರು ಮರವನ್ನು ನೋಡಿದ ಕೂಡಲೇ ಬಾ ಎಂದು ಕರೆವ ಅಮ್ಮನನ್ನು ನೆನಪಿಸಿಕೊಂಡರು. ಬಿಗಿದಪ್ಪುವಂತೆ ಹೋಗಿ ಮರದ ಬಿಳಲುಗಳ ಮಧ್ಯದ ಜಾಗದಲ್ಲಿ ಮಲಗಿದರು.
ಅಮರವಾಗುವುದು ಮರಗಳು ಮತ್ತು ಮರೆವು. ಅರ್ಥಾತ್ ಲೋಕದ ಮರೆವು.
 
-ಮುಂದುವರೆಯುವುದು..
 


By:Ishwara Bhat K

One thought on “ಶ್ರೀ ಟೊಂಯ್ಕಾನಂದ ಚರಿತೆ. ಭಾಗ 4”

Leave a Reply

This site uses Akismet to reduce spam. Learn how your comment data is processed.